
ಬೆಂಗಳೂರು, ಮೇ 21: ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಬೆಳೆಯುತ್ತಾ ಹೋದಂತೆ ಬ್ರಹ್ಮರಾಕ್ಷಸನಂತೆ ಡಾಟಾ ಆಹಾರ ಬಯಸುತ್ತಲೇ ಇರುತ್ತದೆ. ಎಲ್ಲಾ ರೀತಿಯ ದತ್ತಾಂಶಗಳನ್ನು ಅದು ಬಯಸುತ್ತದೆ. ಮನುಷ್ಯರ ವರ್ತನೆ, ಮಾತುಕತೆ, ನಗರಗಳ ವಾತಾವರಣ ಇವೆಲ್ಲವೂ ತುಂಬಾ ಸೂಕ್ಷ್ಮ ರೂಪದಲ್ಲಿ ಎಐಗೆ ಫೀಡ್ ಮಾಡಲಾಗುತ್ತದೆ. ಈ ರೀತಿ ಡಾಟಾ ಕಲೆಹಾಕಲೆಂದೇ ನಾನಾ ಏಜೆನ್ಸಿಗಳಿವೆ. ಇವು ಜನಸಾಮಾನ್ಯರ ಮೂಲಕ ದತ್ತಾಂಶ ಕಲೆಹಾಕುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಬಳಕೆದಾರ ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ಬೆಂಗಳೂರಿನ ಬೀದಿಬದಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಹುಡುಗ (Street vendor) ತಲೆಗೆ ಎಐ ಪರಿಕರಣಗಳನ್ನು ಸಿಕ್ಕಿಸಿಕೊಂಡಿರುವ ದೃಶ್ಯ ಕಾಣುತ್ತದೆ. ಆ ಹುಡುಗ ತರಕಾರಿ ವ್ಯಾಪಾರ ಮಾಡಿ ಹಣ ಮಾಡುವುದರ ಜೊತೆಗೆ, ಎಐ ಪರಿಕರ ಸಿಕ್ಕಿಸಿಕೊಂಡು ಗಂಟೆಗೆ 350 ರೂ ಹೆಚ್ಚುವರಿ ಆದಾಯ ಗಳಿಸುತ್ತಾನಂತೆ.
ವೈಭವ್ ಎನ್ನುವ ಇನ್ಸ್ಟಾ ಯೂಸರ್ ಈ ಪೋಸ್ಟ್ ಹಾಕಿದ್ದಾರೆ. ರಸ್ತೆಯಲ್ಲಿ ವಾಹನದಲ್ಲಿ ಹೋಗುವಾಗ ತಲೆಗೆ ಎಐ ಪರಿಕರವನ್ನು ಸಿಕ್ಕಿಸಿಕೊಂಡಿರುವ ತರಕಾರಿ ವ್ಯಾಪಾರಿಯೊಬ್ಬನನ್ನು ನೋಡಿದೆ ಎಂದು ವಿವರಿಸಿದ್ದಾರೆ. ಗಾಡಿ ನಿಲ್ಲಿ ಅದು ಏನೆಂದು ವಿಚಾರಿಸಿದೆ ಎಂದು ತಿಳಿಸಿರುವ ವೈಭವ್, ಆ ಯುವಕನಿಗೆ ಗಂಟೆಗೆ 350 ರೂ ಕೊಡಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ
ಗಂಟೆಗೆ 350 ರೂ ಸಿಕ್ಕರೆ ಒಂದು ದಿನದಲ್ಲಿ 10 ಗಂಟೆಯಲ್ಲಿ ಆತ 3,500 ರೂ ಗಳಿಸುತ್ತಾನೆ. ತಿಂಗಳಿಗೆ 1,05,000 ರೂ ಆಗುತ್ತದೆ. ಅರ್ಧದಷ್ಟು ಕಾರ್ಪೊರೇಟ್ ಉದ್ಯೋಗಿಗಳ ಸಂಬಳವನ್ನು ಈತ ಮೀರಿಸುತ್ತಾನೆ ಎಂದು ವೈಭವ್ ಅವರು ಚರ್ಚೆ ಹುಟ್ಟುಹಾಕಿದ್ದಾರೆ.
ಇನ್ಸ್ಟಾದಲ್ಲಿ ಹಾಕಲಾದ ಪೋಸ್ಟ್
ಈ ಪೋಸ್ಟ್ ಸಾಕಷ್ಟು ವೀಕ್ಷಣೆ ಪಡೆದಿದೆ. ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಇದೇ ರೀತಿಯ ಎಐ ಗ್ಯಾಜೆಟ್ಗಳ ಸೆಟಪ್ ಅನ್ನು ತಮ್ಮ ಕಾಲೊನಿಯ ಎಲ್ಲಾ ಗೃಹಿಣಿಯರಿಗೂ ಕೊಡಲಾಗಿತ್ತು. ಅದಾದ ಬಳಿಕ ಎಲ್ಲಾ ಮನೆಗಳು ಎಂದಿಗಿಂತ ಹೆಚ್ಚು ಸ್ವಚ್ಛವಾಗತೊಡಗಿದವು. ಒಂದು ತಿಂಗಳವರೆಗೆ ನಡೆದು ಈಗ ಅದು ನಿಂತಿದೆ ಎಂದು ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.
ಈ ರೀತಿಯ ಡಾಟಾ ಸಂಗ್ರಹಣೆ ನಿರಂತರವಾಗಿ ನಡೆಯುವುದಿಲ್ಲ. ಆ ಹುಡುಗ ಒಂದು ತಿಂಗಳಲ್ಲಿ ಕೆಲ ಗಂಟೆ ಮಾತ್ರ ಈ ಪರಿಕರ ಬಳಸಲು ಅವಕಾಶ ಕೊಡಲಾಗುತ್ತದೆ. ಇಡೀ ಪ್ರಾಜೆಕ್ಟ್ ಅವಧಿಯಲ್ಲಿ ಆ ಹುಡುಗ 10-20 ಗಂಟೆ ಕೆಲಸ ಮಾತ್ರವೇ ಪಡೆಯಬಹುದು ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Thu, 21 May 26