
ನವದೆಹಲಿ, ಆಗಸ್ಟ್ 5: ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ (Air India) ಸಂಸ್ಥೆಯು ತನ್ನ ನೂತನ ಸಿಇಒ (CEO) ಮತ್ತು ಎಂಡಿಯಾಗಿ ತೆವೊಲ್ಡೆ ಗೆಬ್ರೆಮರಿಯಮ್ (Tewolde Gebremariam) ಅವರನ್ನು ನೇಮಕ ಮಾಡಿದೆ ಎಂದು ವರದಿಯಾಗಿದೆ. ಅವರು ಎಥಿಯೋಪಿಯನ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥರಾಗಿದ್ದು, ವಿಮಾನಯಾನ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ.
ತೆವೊಲ್ಡೆ ಗೆಬ್ರೆಮರಿಯಮ್ ಅವರು ಎಥಿಯೋಪಿಯನ್ ಏರ್ಲೈನ್ಸ್ ಅನ್ನು ಆಫ್ರಿಕಾದ ಅತ್ಯಂತ ಯಶಸ್ವಿ ಮತ್ತು ಲಾಭದಾಯಕ ವಿಮಾನಯಾನ ಸಂಸ್ಥೆಯಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹತ್ತಕ್ಕೂ ಹೆಚ್ಚು ವರ್ಷ ಕಾಲ ಎಥಿಯೋಪಿಯನ್ ಏರ್‌ಲೈನ್ಸ್‌ನ ಸಿಇಒ ಆಗಿದ್ದರು. ಅವರು ಸಿಇಒ ಆಗುವ ಮುನ್ನ ಆ ಏರ್ಲೈನ್ಸ್ ಸಂಸ್ಥೆ ಒಂದು ಸಾಧಾರಣ ಏರ್ಲೈನ್ ಕಂಪನಿಯಾಗಿತ್ತು. ತೆವೊಲ್ಡೆ ಅವರು ಸಿಇಒ ಆದ ಬಳಿಕ ಎಥಿಯೋಪಿಯಾದ ಅತಿದೊಡ್ಡ ಏರ್ಲೈನ್ಸ್ ಅಷ್ಟೇ ಅಲ್ಲ, ಆಫ್ರಿಕಾ ಖಂಡದಲ್ಲೇ ಅತಿದೊಡ್ಡದಾಗಿ ಬೆಳೆದಿತ್ತು.
ಟಾಟಾ ಗ್ರೂಪ್ ವಹಿಸಿಕೊಂಡ ಬಳಿಕ ಏರ್ ಇಂಡಿಯಾ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ರೂಪಿಸಲು ಮತ್ತು ಕಾರ್ಯಾಚರಣೆಯನ್ನು ಸುಧಾರಿಸಲು ಈ ನೇಮಕಾತಿ ಮಹತ್ವದ್ದಾಗಿದೆ. ವಿಮಾನಗಳ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದು, ಹೊಸ ವಿಮಾನಗಳ ಸೇರ್ಪಡೆ ಹಾಗೂ ಪ್ರಯಾಣಿಕರ ಅನುಭವವನ್ನು ಉತ್ತಮಪಡಿಸುವುದು ಇವರ ಮುಂದಿರುವ ಪ್ರಮುಖ ಜವಾಬ್ದಾರಿಗಳಾಗಿವೆ.
ಇದನ್ನೂ ಓದಿ: ಯುಪಿಐ ಪೇಮೆಂಟ್ಗೆ ಎಂಡಿಆರ್ ಶುಲ್ಕ ಇದ್ದರೆ ಯಾರು ಭರಿಸಬೇಕು? ಆರ್ಬಿಐ ಗವರ್ನರ್ ಹೇಳಿದ್ದಿದು
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಕಷ್ಟದಲ್ಲಿ ಮುನ್ನಡೆಯುತ್ತಿದೆ. ಕ್ಯಾಂಪೆಲ್ ವಿಲ್ಸನ್ ಅವರು 2022ರಿಂದ ಏರ್ ಇಂಡಿಯಾವನ್ನು ಮುನ್ನಡೆಸುತ್ತಿದ್ದರು. 2027ರವರೆಗೂ ಅವರ ನೇಮಕಾತಿ ಅವಧಿ ಇತ್ತಾದರೂ 2026ರಲ್ಲಿ ನಿವೃತ್ತರಾಗುವುದಾಗಿ ಮುಂಚಿತವಾಗಿ ಟಾಟಾ ಛೇರ್ಮನ್ಗೆ ತಿಳಿಸಿದ್ದರು. ಹೊಸ ನೇಮಕಾತಿ ಆದ ಬಳಿಕ ಅವರು ಸಂಸ್ಥೆಯಿಂದ ನಿರ್ಗಮಿಸಲಿದ್ದಾರೆ.
ತೆವೊಲ್ಡೆ ಗೆಬ್ರೆಮರಿಯಮ್ ಅವರು ಮೂಲತಃ ಎಥಿಯೋಪಿಯನ್ನರೇ. ಇವರಿಗೆ ಭಾರತದ ನಂಟಿರುವುದು ಬ್ಯುಸಿನೆಸ್ ಮೂಲಕವಷ್ಟೇ. ಎಥಿಯೋಪಿಯನ್ ಏರ್ಲೈನ್ಸ್ನಲ್ಲಿದ್ದಾಗ ಬಹಳ ವರ್ಷಗಳ ಹಿಂದೆ ಮ್ಯಾನೇಜರ್ ಮತ್ತು ರೀಜನಲ್ ಡೈರೆಕ್ಟರ್ ಆಗಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಸಿಇಒ ಆದ ಬಳಿಕ ಎಥಿಯೋಪಿಯನ್ ಏರ್‌ಲೈನ್ಸ್‌ನ ವಿಮಾನಗಳು ಬೆಂಗಳೂರು, ಮುಂಬೈ, ದೆಹಲಿ ಮೊದಲಾದ ನಗರಗಳಿಗೆ ಹಾರಾಟ ನಡೆಸುವುದನ್ನು ಸಾಧ್ಯವಾಗಿಸಿದ್ದರು.
ಇದನ್ನೂ ಓದಿ: ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು
ಎಥಿಯೋಪಿಯನ್ ಏರ್ಲೈನ್ಸ್ಗೆ ಹೊಸ ಬಲ ಕೊಟ್ಟಿದ್ದ ತೆವೊಲ್ಡೆ ಗೆಬ್ರೆಮರಿಯಮ್ ಅವರನ್ನು ಪಡೆಯಲು ವಿಶ್ವದ ಹಲವು ಏರ್ಲೈನ್ಸ್ ಕಂಪನಿಗಳು ಇಚ್ಛಿಸಿದ್ದವು. ವರದಿಗಳ ಪ್ರಕಾರ, ಪಾಕಿಸ್ತಾನ್ ಏರ್ಲೈನ್ಸ್ ಕೂಡ ತೆವೊಲ್ಡೆಗೆ ಆಹ್ವಾನ ಕೊಡಲು ಸಿದ್ಧವಾಗಿತ್ತು. ಅಷ್ಟರಲ್ಲಿ ಏರ್ ಇಂಡಿಯಾ ಸಂಸ್ಥೆಯು ತೆವೊಲ್ಡೆ ಅವರನ್ನು ಸೆಳೆದುಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ