ಭಾರತ ಮುಂದಿನ 20 ವರ್ಷದಲ್ಲಿ 38 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ: ಅಜಿತ್ ದೋವಲ್

ಪ್ರಸಕ್ತ 4.015 ಇರುವ ಭಾರತದ ಜಿಡಿಪಿ 2047ರಲ್ಲಿ 38 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಉತ್ತರಾಖಂಡ್​ನ ಐಐಟಿ ರೂರ್ಕೀಯ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮುಂದಿನ 20 ವರ್ಷ ಭಾರತಕ್ಕೆ ಅಮೃತ ಕಾಲ ಎಂದಿದ್ದಾರೆ. ಸಿಕ್ಕಿಂನಲ್ಲಿದ್ದಾಗ ಅಲ್ಲಿಯ ಶೆರ್ಪಾಗಳಿಂದ ತಾವು ಕಲಿತ ಮೂರು ಜೀವನ ಪಾಠಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

ಭಾರತ ಮುಂದಿನ 20 ವರ್ಷದಲ್ಲಿ 38 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ: ಅಜಿತ್ ದೋವಲ್
ಅಜಿತ್ ದೋವಲ್
Image Credit source: PTI

Updated on: Sep 20, 2026 | 11:36 AM

ರೂರ್ಕೀ, ಉ.ಖಂ., ಸೆಪ್ಟೆಂಬರ್ 20: ಭಾರತದ ಆರ್ಥಿಕತೆ ಮುಂದಿನ ಇಪ್ಪತ್ತು ವರ್ಷದಲ್ಲಿ ಅಗಾಧವಾಗಿ ಬೆಳೆಯಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಇಲ್ಲಿಯ ಐಐಟಿಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಆರ್ಥಿಕತೆ ಅಗಾಧವಾಗಿ ಬೆಳೆಯುತ್ತಿರುವ ಈ ಪರಿವರ್ತನಾತ್ಮಕ ಘಟ್ಟದಲ್ಲಿ ವಿದ್ಯಾರ್ಥಿಗಳು ಇರುವುದು ಅವರ ಅದೃಷ್ಟ ಎಂದಿದ್ದಾರೆ. ದೇಶದ ಜಿಡಿಪಿ ಮುಂದಿನ 20 ವರ್ಷದಲ್ಲಿ 4.015 ಟ್ರಿಲಿಯನ್ ಡಾಲರ್​ನಿಂದ 38 ಟ್ರಿಲಿಯನ್ ಡಾಲರ್​ಗೆ ಏರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ವಿದ್ಯಾರ್ಥಿಗಳಿಗೆ ದಿಟ್ಟತನದ ಮನೋಭಾವ ಹೊಂದುವಂತೆ ಸಲಹೆ ನೀಡಿದರು. ಶ್ರೀ ರಾಮನ ಧೈರ್ಯಶಾಲಿತನ ಕಂಡು ವಿಶ್ವಾಮಿತ್ರರು ರಾಕ್ಷಸರನ್ನು ಸದೆಬಡಿಯುವ ಜವಾಬ್ದಾರಿಯನ್ನು ರಾಮನಿಗೆ ವಹಿಸಿದ್ದ ಉದಾಹರಣೆಯನ್ನು ಅಜಿತ್ ದೋವಲ್ ಉಲ್ಲೇಖಿಸಿದರು.

ಇದನ್ನೂ ಓದಿ: 96ರ ವಯಸ್ಸಲ್ಲಿ ಅಧಿಕಾರ ಬಿಟ್ಟ ವಾರನ್ ಬಫೆಟ್; ಅಪ್ಪ ಶ್ರೀಮಂತನೆಂದು ತಿಳಿಯದೆ ಬೆಳೆದ ಮಕ್ಕಳಿಗೆ ಈಗ ದೊಡ್ಡ ಜವಾಬ್ದಾರಿ

‘ಭಾರತದಲ್ಲಿ ಬಹಳ ದೊಡ್ಡ ಬದಲಾವಣೆಗಳು ಆಗುತ್ತಿವೆ. ಉಜ್ವಲವಾದ ಭವಿಷ್ಯದತ್ತ ದೇಶ ಮುನ್ನಡೆಯುತ್ತಿದೆ’ ಎಂದರು.

‘ಪ್ರಧಾನಿಗಳು ಹೇಳಿದಂತೆ 2047ರವರೆಗಿನ ಅವಧಿಯು ಅಮೃತ ಕಾಲವಾಗಿದೆ. ಪ್ರಸಕ್ತ ಜಿಡಿಪಿ 4.015 ಟ್ರಿಲಿಯನ್ ಡಾಲರ್ ಇದೆ. 2047ಕ್ಕೆ ಅದು 38 ಟ್ರಿಲಿಯನ್ ಡಾಲರ್ ಆಗುತ್ತದೆ’ ಎಂದು ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಅಭಿಪ್ರಾಯಪಟ್ಟರು.

ಶೆರ್ಪಾಗಳಿಂದ ಅಜಿತ್ ದೋವಲ್ ಕಲಿತ ಮೂರು ಜೀವನ ಮಂತ್ರಗಳು

ಐಐಟಿ ರೂರ್ಕಿಯ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅಜಿತ್ ದೋವಲ್, ತಮ್ಮ ಸಿಕ್ಕಿಂ ದಿನಗಳನ್ನು ಸ್ಮರಿಸುತ್ತಾ ಅಲ್ಲಿನ ಶೆರ್ಪಾಗಳಿಂದ ಜೀವನ ಯಶಸ್ಸಿಗೆ ಕಲಿತ ಮೂರು ಮಂತ್ರಗಳನ್ನು ಉಲ್ಲೇಖಿಸಿದರು.

ಇದನ್ನೂ ಓದಿ: 2026-27ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 6ರಿಂದ ಶೇ. 7ಕ್ಕೆ ಏರಿಸಿದ ಮೂಡೀಸ್

ನಕ್ಷೆಯಲ್ಲಿ ನಾವು ಎಲ್ಲಿ ನಿಂತಿದ್ದೇವೆ ಎಂಬುದು ತಿಳಿದಿರುವುದು ಮೊದಲ ಮಂತ್ರ; ಎಲ್ಲಿಗೆ ಹೋಗಬೇಕು ಎಂಬುದು ಗೊತ್ತಿರುವುದು ಎರಡನೆಯದು; ಗುರಿ ಮುಟ್ಟಿ ವಾಪಸ್ ಬರಲು ಯಾವ ದಾರಿ ಎಂಬುದು ಗೊತ್ತಿರುವುದು ಮೂರನೇ ಮಂತ್ರ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅವರು ವಿವರಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us