ಸಾಲಕ್ಕೆ ಬಡ್ಡಿ ಕಟ್ಟಲೇ ಶೇ. 76ರಷ್ಟು ಆದಾಯ ತೆರಿಗೆ ಸಂಗ್ರಹ ಬಳಕೆ; ದಿವಾಳಿಯಾಗಲಿದೆ ಎಂದ ಇಲಾನ್ ಮಸ್ಕ್

|

Updated on: Jul 25, 2024 | 3:17 PM

America going bankrupt, warns Elon Musk: ಅಮೆರಿಕ ತನ್ನ ಸಾಲಕ್ಕೆ ಕಟ್ಟಬೇಕಿರುವ ಬಡ್ಡಿ ಹಣ ಒಂದು ವರ್ಷದಲ್ಲಿ ಸಂಗ್ರಹವಾಗುವ ಶೇ. 76ರಷ್ಟು ಆದಾಯ ತೆರಿಗೆ ಮೊತ್ತಕ್ಕೆ ಸಮ ಎಂದು ವರದಿಯೊಂದು ಹೇಳುತ್ತಿದೆ. ಉದ್ಯಮಿ ಮತ್ತು ಎಕ್ಸ್ ಮಾಲೀಕ ಇಲಾನ್ ಮಸ್ಕ್ ಅವರು ಅಮೆರಿಕ ದಿವಾಳಿಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಆರ್ಥಿಕ ತಜ್ಞ ಇ.ಜೆ. ಆಂಟೊನಿ ಇತ್ತೀಚೆಗೆ ಬರೆದ ವರದಿಯೊಂದಕ್ಕೆ ಮಸ್ಕ್ ಪ್ರತಿಕ್ರಿಯಿಸುತ್ತಿದ್ದರು.

ಸಾಲಕ್ಕೆ ಬಡ್ಡಿ ಕಟ್ಟಲೇ ಶೇ. 76ರಷ್ಟು ಆದಾಯ ತೆರಿಗೆ ಸಂಗ್ರಹ ಬಳಕೆ; ದಿವಾಳಿಯಾಗಲಿದೆ ಎಂದ ಇಲಾನ್ ಮಸ್ಕ್
ಇಲಾನ್ ಮಸ್ಕ್
Follow us on

ವಾಷಿಂಗ್ಟನ್, ಜುಲೈ 25: ಅಮೆರಿಕ ಎಂದರೆ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂದೇ ಗುರುತಾಗಿದೆ. ಆದರೆ, ಜಗತ್ತಿನಲ್ಲಿ ಅತಿ ಹೆಚ್ಚು ಸಾಲಗಾರ ದೇಶ ಯಾವುದಾದರೂ ಇದ್ದರೆ ಅದು ಅಮೆರಿಕವೇ. ಸಾಲಗಳ ಮೇಲೆ ನಿಂತಿರುವ ಅಮೆರಿಕದ ಆರ್ಥಿಕತೆ ಯಾವಾಗ ಬೇಕಾದರೂ ಕುಸಿಯಬಹುದು ಎಂದು ಕೆಲ ಆರ್ಥಿಕ ತಜ್ಞರು ಹೇಳುವುದಿದೆ. ಎಕ್ಸ್ ಪ್ಲಾಟ್​ಫಾರ್ಮ್​ನ ಮಾಲಕ, ಉದ್ಯಮಿ ಇಲಾನ್ ಮಸ್ಕ್ ಅವರು ಅಮೆರಿಕ ಈಗ ದಿವಾಳಿ ಆಗುತ್ತಿದೆ ಎಂದು ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಅಮೆರಿಕದ ಸಾಲಕ್ಕೆ ಕಟ್ಟಬೇಕಿರುವ ಹಣಕ್ಕೆ ಶೇ. 76ರಷ್ಟು ಆದಾಯ ತೆರಿಗೆ ಸಂಗ್ರಹ ಬೇಕಾಗುತ್ತದೆ ಎನ್ನುವ ಪೋಸ್ಟ್​ವೊಂದಕ್ಕೆ ಮಸ್ಕ್ ಪ್ರತಿಕ್ರಿಯಿಸುತ್ತಾ, ಅಮೆರಿಕ ದಿವಾಳಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಅಮೆರಿಕ ಸಾಲದ ಬಗ್ಗೆ ಆರ್ಥಿಕ ತಜ್ಞ ಇ.ಜೆ. ಆಂಟೋನಿ ಲೇಖನ…

The Daily Hodl ಎಂಬ ಪತ್ರಿಕೆಯಲ್ಲಿ ಕೆಲ ದಿನಗಳ ಹಿಂದೆ ಆರ್ಥಿಕ ತಜ್ಞ ಇ.ಜೆ. ಆಂಟೋನಿ ಅವರ ಲೇಖನ ಪ್ರಕಟವಾಗಿತ್ತು. ಅಮೆರಿಕದ ಸೆಂಟ್ರಲ್ ಬ್ಯಾಂಕ್​ನ ಜೂನ್ ತಿಂಗಳ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಅವರು ಅಮೆರಿಕದ ಸಾಲ ಎಷ್ಟಿದೆ ಎನ್ನುವುದನ್ನು ತುಲನೆ ಮಾಡಿ ಬರೆದಿದ್ದಾರೆ. ಸರ್ಕಾರ ಒಂದು ವರ್ಷದಲ್ಲಿ ಕಲೆಹಾಕುವ ಆದಾಯ ತೆರಿಗೆ ಹಣದಲ್ಲಿ ಶೇ. 76ರಷ್ಟು ಮೊತ್ತವು ಅಮೆರಿಕದ ರಾಷ್ಟ್ರೀಯ ಸಾಲಕ್ಕೆ ಬಡ್ಡಿ ಕಟ್ಟಲು ಮಾತ್ರ ಸಾಕಾಗುತ್ತದಂತೆ.

ಇದನ್ನೂ ಓದಿ: ಬೆಂಗಳೂರಿನ ಸ್ಟಾರ್ಟಪ್ ಬ್ಲೂಲರ್ನ್ ಅಂತ್ಯ; ಹೂಡಿಕೆದಾರರಿಗೆ ಶೇ. 70 ಹಣ ಮರಳಿಸಿದ ಸಂಸ್ಥಾಪಕರು; ಕಂಪನಿ ಮುಚ್ಚಿದರೂ ಯುವಕರಿಗೆ ಕುಂದದ ಉತ್ಸಾಹ

ವೈಯಕ್ತಿಕ ಆದಾಯ ತೆರಿಗೆಯು ಅಮೆರಿಕ ಸರ್ಕಾರದ ಅತಿದೊಡ್ಡ ಆದಾಯ ಮೂಲವಾಗಿದೆ. ಇದರ ಮುಕ್ಕಾಲು ಪಾಲು ಆದಾಯವು ಬಡ್ಡಿಕಟ್ಟುವುದರಲ್ಲೇ ಮುಗಿದುಹೋಗುತ್ತದೆ. ಸಂಸತ್​ಗೆ ಇದು ಗೊತ್ತಿದೆಯಾ? ಗೊತ್ತಿದ್ದರೂ ಅವರಿಗೆ ಏನಾದರೂ ಅನಿಸುತ್ತದಾ ಎಂದು ಆಂಟೋನಿ ತಮ್ಮ ಲೇಖನದಲ್ಲಿ ಪ್ರಶ್ನಿಸಿದ್ದರು.

ಈ ವರದಿ ಪ್ರಕಾರ ಅಮೆರಿಕದ ರಾಷ್ಟ್ರೀಯ ಸಾಲಕ್ಕೆ ಕಟ್ಟಬೇಕಾದ ಬಡ್ಡಿ ಹಣ ಈ ವರ್ಷ 1.14 ಟ್ರಿಲಿಯನ್ ಡಾಲರ್​ನಷ್ಟಾಗಬಹುದು. ಅಂದರೆ 95 ಲಕ್ಷ ಕೋಟಿ ರುಪಾಯಿಯಷ್ಟು ಹಣ ಅದು. ಅಂದರೆ ಭಾರತದ ಬಜೆಟ್​ನ ಎರಡು ಪಟ್ಟು ಹಣವು ಅಮೆರಿಕ ತನ್ನ ಸಾಲಕ್ಕೆ ಬಡ್ಡಿ ಕಟ್ಟಲು ಬಳಸುತ್ತದೆ ಎಂದರೆ ಊಹಿಸಿ ನೋಡಿ.

ದಿ ಡೈಲಿ ಹೋಡಲ್ ಪತ್ರಿಕೆಯಲ್ಲಿ ಬಂದ ಈ ವರದಿಯ ಹೆಡ್​ಲೈನ್​ನ ಸ್ಕ್ರೀನ್​ಶಾಟ್ ಅನ್ನು ಡೋಜೆಕಾಯಿನ್ ಸ್ಥಾಪಕ ಬಿಲ್ಲಿ ಮಾರ್ಕಸ್ (ಶಿಬೆತೋಶಿ ನಕಮೋಟೋ) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇಲಾನ್ ಮಸ್ಕ್ ಇದಕ್ಕೆ ಪ್ರತಿಕ್ರಿಯಿಸುತ್ತಾ, ‘ಅಮೆರಿಕ ದಿವಾಳಿಯಾಗುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ: ಭಾರತ ಬಿಟ್ಟುಹೋಗ್ತೀರಾ? ಟ್ಯಾಕ್ಸ್ ಕಟ್ಟಿ ಹೋಗಿ; ಟಿಸಿ ಸರ್ಟಿಫಿಕೇಟ್ ಕಡ್ಡಾಯ; ಅ. 1ರಿಂದ ಕಾನೂನು ಜಾರಿ

ಬಡ್ಡಿಯೇ ಅಷ್ಟು, ಸಾಲ ಇನ್ನೆಷ್ಟು?

ಅಮೆರಿಕದಲ್ಲಿ ಸಾಲಕ್ಕೆ ಕಟ್ಟಬೇಕಾದ ಬಡ್ಡಿಹಣವೇ 1.14 ಟ್ರಿಲಿಯನ್ ಡಾಲರ್ ಎಂದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಅಮೆರಿಕದ ರಾಷ್ಟ್ರೀಯ ಸಾಲ ಬರೋಬ್ಬರಿ 35 ಟ್ರಿಲಿಯನ್ ಡಾಲರ್ ಹತ್ತಿರವಿದೆ. ಭಾರತದ ಜಿಡಿಪಿಗಿಂತ ಇದು ಹತ್ತು ಪಟ್ಟು ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ