AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊರಹೋದ ಭಾರೀ ಹಣ; ಬಜೆಟ್ ನಂತರ ಷೇರು ಮಾರುಕಟ್ಟೆ ಸತತವಾಗಿ ಕುಸಿಯಲು ಇದು ಕಾರಣವಾ?

Stock market crash details: ಬಜೆಟ್ ಬಳಿಕ ಸತತ ಮೂರು ದಿನ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ವಿವಿಧ ತೆರಿಗೆಗಳ ಹೆಚ್ಚಳ ಇದಕ್ಕೆ ಒಂದು ಕಾರಣ. ಹಾಗೆಯೇ, ವಿದೇಶೀ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಮತ್ತು ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು (ಎಫ್​ಪಿಐ) ಸಾಕಷ್ಟು ಬಂಡವಾಳ ಹೊರತೆಗೆದಿರುವುದು ಗೊತ್ತಾಗಿದೆ. ಜುಲೈ 23 ಮತ್ತು 24ರಂದು ಎರಡು ದಿನದಲ್ಲಿ ಹೊರಹೋದ ನಿವ್ವಳ ಬಂಡವಾಳ 8,000 ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

ಹೊರಹೋದ ಭಾರೀ ಹಣ; ಬಜೆಟ್ ನಂತರ ಷೇರು ಮಾರುಕಟ್ಟೆ ಸತತವಾಗಿ ಕುಸಿಯಲು ಇದು ಕಾರಣವಾ?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2024 | 5:35 PM

Share

ನವದೆಹಲಿ, ಜುಲೈ 25: ಬಜೆಟ್ ಬಳಿಕ ಷೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ. ಅದರಲ್ಲೂ ಮಧ್ಯಮ ಮತ್ತು ಅಲ್ಪ ಮಾರುಕಟ್ಟೆ ಬಂಡವಾಳದ ಷೇರುಗಳು ತೀವ್ರವಾಗಿ ಕುಸಿದಿವೆ. ಬಜೆಟ್​ನಲ್ಲಿ ಕ್ಯಾಪಿಟಲ್ ಗೇನ್ ತೆರಿಗೆಗಳು ಮತ್ತು ಸೆಕ್ಯೂರಿಟಿ ಟ್ರಾನ್ಸಾಕ್ಷನ್ ತೆರಿಗೆಯನ್ನು ಏರಿಸಿದ್ದು ಪ್ರಮುಖ ಕಾರಣ. ಇದರ ಮಧ್ಯೆ ಕುತೂಹಲಕಾರಿ ಮಾಹಿತಿ ಎಂದರೆ, ಬಜೆಟ್ ಬಳಿಕ ವಿದೇಶೀ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆಯುತ್ತಿರುವುದು ಹೆಚ್ಚಾಗಿದೆ. ಕಳೆದ ಮೂರು ದಿನಗಳಲ್ಲಿ 10,000 ಕೋಟಿ ರೂನಷ್ಟು ವಿದೇಶೀ ಹೂಡಿಕೆ ಹಣ ಹೊರಹೋಗಿರುವುದು ತಿಳಿದುಬಂದಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಮಾಹಿತಿ ಪ್ರಕಾರ ನಿನ್ನೆ ಮತ್ತು ಮೊನ್ನೆ (ಜುಲೈ 23, 24) ಎಫ್​ಪಿಐಗಳು ಭಾರತದಲ್ಲಿ ಖರೀದಿಸಿದ ಷೇರಿಗಿಂತಲೂ ಮಾರಿದ ಷೇರುಗಳ ಸಂಖ್ಯೆ ಹೆಚ್ಚು. ಈ ನಿವ್ವಳ ಮಾರಾಟ ಎರಡು ದಿನದಲ್ಲಿ 8,106 ಕೋಟಿ ರೂ ಆಗಿದೆ.

ನಿನ್ನೆ ಜುಲೈ 24ರಂದು ವಿದೇಶೀ ಹೂಡಿಕೆದಾರರು 16,121.97 ಕೋಟಿ ರೂ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ, 21,252.87 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿದ್ದಾರೆ. ಅಂದರೆ ಬುಧವಾರದಂದು ಆದ ನಿವ್ವಳ ಮಾರಾಟ 5,130.90 ಕೋಟಿ ರೂ.

ಇದನ್ನೂ ಓದಿ: ಬದಲಾಗುತ್ತಿದೆ ಆರ್​​ಬಿಐ ನಿಯಮ… ಬ್ಯಾಂಕ್​ಗೆ ಹೋಗಿ ಕ್ಯಾಷ್ ವಿತ್​ಡ್ರಾ ಮಾಡುವ ಮುನ್ನ ಇದು ತಿಳಿದಿರಿ…

ಅದೇ ದಿನ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಿದ್ದಕ್ಕಿಂತ ಖರೀದಿ ಹೆಚ್ಚಿದೆ. ಅವರ ನಿವ್ವಳ ಖರೀದಿ 3,137.30 ಕೋಟಿ ರೂ ಇದೆ.

ಗುರುವಾರವೂ ಪೇಟೆ ಕುಸಿತ ಕುಸಿತ…

ಇವತ್ತೂ ಕೂಡ ಬಿಎಸ್​ಇ ಮತ್ತು ಎನ್​ಎಸ್​ಇಯ ಪ್ರಮುಖ ಸೂಚ್ಯಂಕಗಳು ಕುಸಿತ ಕಂಡಿವೆ. ಬಿಎಸ್​ಇ ಸೆನ್ಸೆಕ್ಸ್, ಬಿಎಸ್​ಇ 500, ಮಿಡ್​ಕ್ಯಾಪ್, ಬ್ಯಾಂಕೆಕ್ಸ್ ಸೂಚ್ಯಂಕಗಳು ಕುಸಿದಿವೆ. ಅದರಲ್ಲೂ ಬಿಎಸ್​ಇ ಬ್ಯಾಂಕ್ ಸ್ಟಾಕ್​ಗಳ ಸೂಚ್ಯಂಕವಂತೂ ಶೇ. 1.10ರಷ್ಟು ಇಳಿಕೆ ಆಗಿದೆ.

ಎನ್​​ಎಸ್​ಇನ ನಿಫ್ಟಿ50 ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿವೆ. ನಿಫ್ಟಿ ನೆಕ್ಸ್ಟ್50, ನಿಫ್ಟಿ100, ನಿಫ್ಟಿ200 ಇತ್ಯಾದಿ ಕೆಲವಷ್ಟೇ ಹೊರತುಪಡಿಸಿ ಉಳಿದ ಸೂಚ್ಯಂಕಗಳು ನಷ್ಟ ಕಂಡಿವೆ. ಮೆಟಲ್ ಸ್ಟಾಕ್​ಗಳ ಸೂಚ್ಯಂಕವಂತೂ ಗರಿಷ್ಠ ಶೇ. 1.29ರಷ್ಟು ಹಾನಿ ಮಾಡಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರಿನ ಸ್ಟಾರ್ಟಪ್ ಬ್ಲೂಲರ್ನ್ ಅಂತ್ಯ; ಹೂಡಿಕೆದಾರರಿಗೆ ಶೇ. 70 ಹಣ ಮರಳಿಸಿದ ಸಂಸ್ಥಾಪಕರು; ಕಂಪನಿ ಮುಚ್ಚಿದರೂ ಯುವಕರಿಗೆ ಕುಂದದ ಉತ್ಸಾಹ

ಇದೀಗ ನಿಫ್ಟಿ50 ಸೂಚ್ಯಂಕ ಗುರುವಾರ ದಿನಾಂತ್ಯದಲ್ಲಿ 24,406.10 ಅಂಕಗಳಲ್ಲಿದೆ. ಒಂದು ಹಂತದಲ್ಲಿ ಅದು 24,210 ಅಂಕಗಳ ಮಟ್ಟಕ್ಕೆ ಕುಸಿದು ಹೋಗಿತ್ತು.

ಸೆನ್ಸೆಕ್ಸ್ ಸೂಚ್ಯಂಕ ಗುರುವಾರ ಒಂದು ಹಂತದಲ್ಲಿ 80,000 ಅಂಕಗಳ ಮಟ್ಟಕ್ಕಿಂತ ಕೆಳಗಿಳಿದು, ದಿನಾಂತ್ಯದಲ್ಲಿ 80,039.80 ಅಂಕಗಳಲ್ಲಿ ಇತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ