ನವದೆಹಲಿ, ಮಾರ್ಚ್ 21: ಅನಿಲ್ ಅಂಬಾನಿ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದಾರೆ. ಒಂದು ಕಾಲದಲ್ಲಿ 1.83 ಲಕ್ಷ ಕೋಟಿ ರೂ ಸಂಪತ್ತು ಹೊಂದಿ ವಿಶ್ವದ ಆರನೇ ಅತಿದೊಡ್ಡ ಶ್ರೀಮಂತ ಎನಿಸಿದ್ದ ಅನಿಲ್ ಅಂಬಾನಿ (Anil Ambani) ತೀರಾ ಇತ್ತೀಚಿನವರೆಗೂ ದಯನೀಯ ಸ್ಥಿತಿಯಲ್ಲಿ ಇದ್ದದ್ದೇ ಎಲ್ಲರಿಗೂ ಗೊತ್ತಿರುವಂಥದ್ದು. ಮುಕೇಶ್ ಅಂಬಾನಿಯ ಕಿರಿಯ ಸಹೋದರ ಅನಿಲ್ ಅಂಬಾನಿ ಸದ್ದಿಲ್ಲದೇ ಪುಟಿದೆದ್ದಿದ್ದಾರೆ. ದಿವಾಳಿಯಾಗಿದ್ದ ಅವರು ಈಗ ಹಂತ ಹಂತವಾಗಿ ಬಿಸಿನೆಸ್ ಸಾಮ್ರಾಜ್ಯ ಗಟ್ಟಿಗೊಳಿಸುತ್ತಿದ್ದಾರೆ. ರಿಲಾಯನ್ಸ್ ಪವರ್ (Reliance Power) ಷೇರುಬೆಲೆ ಗುರುವಾರದ ಬೆಳಗಿನ ವಹಿವಾಟಿನಲ್ಲೇ ಗರಿಷ್ಠ ಏರಿಕೆ ಮಟ್ಟವಾದ ಶೇ. 5ರಷ್ಟು ಹೆಚ್ಚಿದೆ. ಇದಕ್ಕೆ ಕಾರಣ ಅನಿಲ್ ಅಂಬಾನಿಯ ಮಾಲಕತ್ವದ ಕಂಪನಿಗಳು ಸಾಲಗಳಿಂದ ಹಂತ ಹಂತವಾಗಿ ಮುಕ್ತಿಗೊಳ್ಳುತ್ತಿರುವುದು.
ಅನಿಲ್ ಅಂಬಾನಿ ಉದ್ಯಮ ಸಾಮ್ರಾಜ್ಯ ವಿಪರೀತ ಸಾಲದ ಹೊರೆಯಿಂದ ಮುರುಟಿಹೋಗಿತ್ತು. ಇದೀಗ ಐಸಿಐಸಿಐ, ಎಕ್ಸಿಸ್ ಬ್ಯಾಂಕ್ ಮತ್ತು ಡಿಬಿಎಸ್ ಬ್ಯಾಂಕುಗಳಿಗೆ ನೀಡಬೇಕಿದ್ದ ಸಾಲವನ್ನು ರಿಲಾಯನ್ಸ್ ಪವರ್ ತೀರಿಸಿರುವುದು ತಿಳಿದುಬಂದಿದೆ.
ಹಾಗೆಯೇ, ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಜೆಸಿ ಫ್ಲವರ್ಸ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿಗೆ ಪಾವತಿಸಬೇಕಿರುವ 2,100 ಕೋಟಿ ರೂ ಹಣವನ್ನು ತೀರಿಸುತ್ತಿದೆ ಎನ್ನುವ ಸುದ್ದಿಯೂ ಇದೆ.
ಇದನ್ನೂ ಓದಿ: ಕೇವಲ ಒಂದು ಲಕ್ಷ ಇನ್ವೆಸ್ಟ್ಮೆಂಟ್ಗೆ 35 ಕೋಟಿ ಲಾಭ ಸಿಗುತ್ತಿತ್ತು; ಇದು ಎನ್ವಿಡಿಯಾ ಮ್ಯಾಜಿಕ್
‘ಈ ಹಣಕಾಸು ವರ್ಷದಲ್ಲಿ ರಿಲಾಯನ್ಸ್ ಪವರ್ ಸಾಲ ಮುಕ್ತ ಕಂಪನಿ ಆಗುವ ಗುರಿ ಇಟ್ಟುಕೊಂಡಿದೆ. ಐಡಿಬಿಐನ ಸಾಲ ಮಾತ್ರವೇ ಈ ವರ್ಷಾಂತ್ಯದಲ್ಲಿ ಉಳಿಯಬಹುದು,’ ಎಂದು ಕಮರ್ಷಿಲ್ ಬ್ಯಾಂಕ್ವವೊಂದರ ಹಿರಿಯ ಅಧಿಕಾರಿ ಹೇಳಿದರೆಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಡಿಬಿಎಸ್ ಬ್ಯಾಂಕುಗಳಿಗೆ ರಿಲಾಯನ್ಸ್ ಪವರ್ 400 ಕೋಟಿ ರೂ ಸಾಲ ತೀರಿಸುವುದು ಬಾಕಿ ಇತ್ತು. ಇದರಲ್ಲಿ ಬಡ್ಡಿ ಕಳೆದು ಶೇ. 35ರಷ್ಟು ಸಾಲ ತೀರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಜೆಸಿ ಫ್ಲವರ್ಸ್ ಎಆರ್ಸಿಗೆ ಸಾಲ ಮರುಪಾವತಿಸಲು ಮಾರ್ಚ್ 31ರವರೆಗೂ ಕಾಲಾವಕಾಶ ಹೊಂದಿದೆ. ಅಷ್ಟರಲ್ಲಿ ಸಾಲ ತೀರಿಸಬಹುದು ಎಂದು ವರದಿಗಳು ಹೇಳುತ್ತಿವೆ. ಈ ಎರಡು ಸಂಸ್ಥೆಗಳ ನಡುವೆ ಜನವರಿ 7ರಂದು ಆದ ಒಪ್ಪಂದದ ಪ್ರಕಾರ ಮಾರ್ಚ್ 31ರೊಳಗೆ ಸಾಲ ತೀರಿಸದಿದ್ದರೆ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ವಿರುದ್ಧ ಜೆಸಿ ಫ್ಲವರ್ಸ್ನವರು ಕಾನೂನು ಕ್ರಮ ಜರುಗಿಸಬಹುದು.
ಇದನ್ನೂ ಓದಿ: ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರೂ ಮೌಲ್ಯದ ಷೇರುಗಳನ್ನು ಗಿಫ್ಟ್ ಆಗಿ ಕೊಟ್ಟ ಇನ್ಫೋಸಿಸ್ ನಾರಾಯಣಮೂರ್ತಿ
ಕುತುಹಲವೆಂದರೆ, ಅನಿಲ್ ಅಂಬಾನಿ ಅವರ ಕಂಪನಿಗಳಿಗೆ ಜೆಸಿ ಫ್ಲವರ್ಸ್ನಿಂದ ಸಾಲ ಕೊಟ್ಟಿರಲಿಲ್ಲ. ಇದು ಯೆಸ್ ಬ್ಯಾಂಕ್ ಕೊಟ್ಟಿದ್ದ ಸಾಲ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ತಾವು ನೀಡಿದ್ದ ಕೆಲ ಸಾಲವನ್ನು ವಸೂಲು ಮಾಡಲು ಆಗಿದ್ದಾಗ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿಗಳಿಗೆ ಅದನ್ನು ವಹಿಸುತ್ತವೆ. ಈ ಎಆರ್ಸಿಗಳು ಕಡಿಮೆ ಮೊತ್ತಕ್ಕೆ ಈ ಸಾಲವನ್ನು ಖರೀದಿಸಿ, ಆ ಬಳಿಕ ಸಾಲ ವಸೂಲಾತಿ ಮಾಡಿ ಲಾಭ ಮಾಡಿಕೊಳ್ಳುತ್ತವೆ.
ಯೆಸ್ ಬ್ಯಾಂಕ್ 48,000 ಕೋಟಿ ರೂ ಸಾಲವನ್ನು ಅನಿಲ್ ಅಂಬಾನಿ ಕಂಪನಿಗಳಿಗೆ ಕೊಟ್ಟಿತ್ತು. ಈಗ ಜೆಸಿ ಫ್ಲವರ್ಸ್ ಇದನ್ನು ವಹಿಸಿಕೊಂಡಿದೆ. ಮೊದಲ ಪಾವತಿಯಾಗಿ ಜನವರಿ 31ರೊಳಗೆ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ 2,100 ಕೋಟಿ ರೂ ಕಟ್ಟಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ