Gold: ಅಮೆರಿಕದ ಫೆಡ್ ರಿಸರ್ವ್ ಸಭೆ ಬಳಿಕ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ

Gold Rates Surge to Record Level: ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷ 75 ಬೇಸಿಸ್ ಪಾಯಿಂಟ್​ಗಳಷ್ಟು ಬಡ್ಡಿದರ ಕಡಿತ ಮಾಡುವ ಸುಳಿವು ಕೊಟ್ಟಿರುವುದು ಬಹಳಷ್ಟು ಹೂಡಿಕೆದಾರರನ್ನು ಚಿನ್ನದತ್ತ ಆಕರ್ಷಿಸಿದೆ. ಫೆಡ್ ರಿಸರ್ವ್ ಸಭೆ ಬಳಿಕ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಹೋಗಿದೆ. ಒಂದು ಔನ್ಸ್ ಚಿನ್ನಕ್ಕೆ 2,222 ರೂಗೆ ಹೋಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಲ್ಡ್ ಫ್ಯೂಚರ್ಸ್ ಶೇ. 2ರಷ್ಟು ಹೆಚ್ಚಾಗಿದೆ. ಚಿನ್ನ ಮಾತ್ರವಲ್ಲ, ಬೆಳ್ಳಿ, ತಾಮ್ರ ಇತ್ಯಾದಿ ಅಮೂಲ್ಯ ಲೋಹಗಳಿಗೂ ಬೇಡಿಕೆ ಬಂದಿದೆ.

Gold: ಅಮೆರಿಕದ ಫೆಡ್ ರಿಸರ್ವ್ ಸಭೆ ಬಳಿಕ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 21, 2024 | 10:54 AM

ನವದೆಹಲಿ, ಮಾರ್ಚ್ 21: ಅಮೆರಿಕದ ಫೆಡರಲ್ ರಿಸರ್ವ್​ನ ಸಭೆ (US fed reserve meeting) ಬಳಿಕ ಏಷ್ಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು ಗುರುವಾರ ದಾಖಲೆ ಮಟ್ಟಕ್ಕೆ ಏರಿದೆ. ಚಿನ್ನ ಮಾತ್ರವಲ್ಲ, ಇತರ ಅಮೂಲ್ಯ ಲೋಹಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಫೆಡರಲ್ ರಿಸರ್ವ್ ಈ ಬಾರಿ ಬಡ್ಡಿ ದರ ಹೆಚ್ಚಿಸದಿದ್ದರೂ ಡಿಸೆಂಬರ್​ನೊಳಗೆ ಮೂರು ಬಾರಿ ಬಡ್ಡಿದರ (US lending rates) ಕಡಿಮೆ ಮಾಡುವ ಸುಳಿವನ್ನು ನೀಡಿರುವುದು ಹೂಡಿಕೆದಾರರನ್ನು ಅಮೂಲ್ಯ ಲೋಹಗಳ ಸಂಗ್ರಹದತ್ತ ಆಕರ್ಷಿಸುತ್ತಿದೆ. ಅದರಲ್ಲೂ ಹೆಚ್ಚಾಗಿ ಚಿನ್ನದತ್ತ ಹಣದ ಹರಿವು ಹೋಗುತ್ತಿದೆ. ಸ್ಪಾಟ್ ಗೋಲ್ಡ್ ಗುರುವಾರ ಬೆಳಗ್ಗೆ ಶೇ. 1.2ರಷ್ಟು ಹೆಚ್ಚಾಗಿದೆ. ಗೋಲ್ಡ್ ಫ್ಯೂಚರ್ಸ್ ಕೂಡ ಶೇ. 2ಕ್ಕಿಂತಲೂ ಹೆಚ್ಚಿನ ಬೆಲೆ ವೃದ್ದಿಸಿಕೊಂಡಿದೆ.

ಸ್ಪಾಟ್ ಗೋಲ್ಡ್ ಒಂದು ಔನ್ಸ್​ಗೆ 2,222.14 ಡಾಲರ್ ಬೆಲೆ ಪಡೆದಿದೆ. ಒಂದು ಔನ್ಸ್ ಎಂದರೆ 28.3495 ಗ್ರಾಮ್. ಅಂದರೆ 10 ಗ್ರಾಮ್ ಚಿನ್ನದ ಬೆಲೆ 783.8 ಡಾಲರ್ ಆಗಿದೆ. ಗುರುವಾರ ಬೆಳಗಿನ 10 ಗಂಟೆಯಲ್ಲಿ ಭಾರತೀಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,420 ರೂ ಆಗಿದೆ. ಆಭರಣ ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 100 ರೂನಷ್ಟು ಹೆಚ್ಚಾಗಿದೆ. 10 ಗ್ರಾಮ್ ಆಭರಣ ಚಿನ್ನ 61,800 ರೂ ಆಗಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ ಬರೋಬ್ಬರಿ ಒಂದೂವರೆ ರೂನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಸದ್ಯಕ್ಕಿಲ್ಲ ಬಡ್ಡಿದರ ಕಡಿತ; ಈ ವರ್ಷ ಮೂರು ಇಳಿಕೆಯ ಸುಳಿವು ನೀಡಿದ ಸೆಂಟ್ರಲ್ ಬ್ಯಾಂಕ್

ಗೋಲ್ಡ್ ಫ್ಯೂಚರ್ ಮತ್ತು ಸ್ಪಾಟ್ ಗೋಲ್ಡ್ ಎಂದರೇನು?

ಚಿನಿವಾರ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಎಂದರೆ ಈಗಲೇ ವ್ಯವಹಾರ ಈಗಲೇ ಖರೀದಿ. ಅಂದರೆ, ಚಿನ್ನವನ್ನು ಖರೀದಿಸಿ, ತತ್​ಕ್ಷಣವೇ ಅದನ್ನು ಪಡೆಯಬಹುದು. ಗೋಲ್ಡ್ ಫ್ಯೂಚರ್ ಎಂದರೆ ಈಗ ಚಿನ್ನವನ್ನು ಒಂದು ದರಕ್ಕೆ ಖರೀದಿಸಿ, ಎರಡು ಅಥವಾ ಮೂರು ತಿಂಗಳ ಬಳಿಕ ಪಡೆಯುವುದು. ಅಂತೆಯೇ ಗೋಲ್ಡ್ ಫ್ಯೂಚರ್ ದರ ಹೆಚ್ಚಿರುತ್ತದೆ. ಮುಂಬರುವ ಚಿನ್ನದ ಬೆಲೆಯ ಟ್ರೆಂಡ್ ಹೇಗಿರಬಹುದು ಎಂಬುದನ್ನು ಗೋಲ್ಡ್ ಫ್ಯೂಚರ್ಸ್ ಒಂದು ಮಟ್ಟಕ್ಕೆ ಸುಳಿವು ನೀಡುತ್ತದೆ.

ಬೆಳ್ಳಿ, ತಾಮ್ರ ಇತ್ಯಾದಿ ಲೋಹಗಳೂ ಕೂಡ ಇವತ್ತು ಒಳ್ಳೆಯ ಬೆಲೆ ಪಡೆದಿವೆ. ತಾಮ್ರ ಅಥವಾ ಕಾಪರ್ ಬೆಲೆ 11 ತಿಂಗಳ ಗರಿಷ್ಠ ಮಟ್ಟಕ್ಕೆ ಹೋಗಿದೆ. ಲಂಡನ್ ಮೆಟಲ್ ಎಕ್ಸ್​ಚೇಂಜ್​ನಲ್ಲಿ ಮೂರು ತಿಂಗಳ ಕಾಪರ್ ಫ್ಯೂಚರ್ಸ್ ಬೆಲೆ ಶೇ. 0.6ರಷ್ಟು ಏರಿದೆ. ಒಂದು ತಿಂಗಳ ಅಮೆರಿಕನ್ ಕಾಪರ್ ಫ್ಯೂಚರ್ಸ್ ಶೇ. 0.4ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಕೇವಲ ಒಂದು ಲಕ್ಷ ಇನ್ವೆಸ್ಟ್​​ಮೆಂಟ್​ಗೆ 35 ಕೋಟಿ ಲಾಭ ಸಿಗುತ್ತಿತ್ತು; ಇದು ಎನ್​ವಿಡಿಯಾ ಮ್ಯಾಜಿಕ್

ಪ್ಲಾಟಿನಮ್ ಫ್ಯೂಚರ್ಸ್ ಶೇ. 0.9ರಷ್ಟು ಹೆಚ್ಚಾದರೆ, ಸಿಲ್ವರ್ ಫ್ಯೂಚರ್ಸ್ ಬರೋಬ್ಬರಿ ಶೇ. 3.3ರಷ್ಟು ಏರಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ