ಎಟಿಎಂನಿಂದ ಹಣ ಬಂದಿಲ್ಲ, ಆದರೆ ಅಕೌಂಟ್​ನಿಂದ ಹಣ ಕಡಿತವಾಗಿದೆಯಾ? ಆರ್​ಬಿಐ ನಿಯಮಗಳನ್ನು ತಿಳಿದಿರಿ

ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡುವಾಗ ಅಕೌಂಟ್​ನಿಂದ ಡೆಬಿಟ್ ಆದರೂ ಹಣ ಬರದೇ ಹೋದಾಗ ಏನು ಮಾಡಬೇಕು? ಎಟಿಎಂನ ಬ್ಯಾಂಕ್​ನಲ್ಲಿ ದೂರು ನೀಡಬೇಕಾ? ನಿಮ್ಮ ಅಕೌಂಟ್ ಇರುವ ಬ್ಯಾಂಕ್​ನಲ್ಲಿ ದೂರು ನೀಡಬೇಕಾ? ಹಣ ಬರದೇ ಹೋದಾಗ ತತ್​ಕ್ಷಣ ಕೈಗೊಳ್ಳಬೇಕಾದ ಕ್ರಮಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ.

ಎಟಿಎಂನಿಂದ ಹಣ ಬಂದಿಲ್ಲ, ಆದರೆ ಅಕೌಂಟ್​ನಿಂದ ಹಣ ಕಡಿತವಾಗಿದೆಯಾ? ಆರ್​ಬಿಐ ನಿಯಮಗಳನ್ನು ತಿಳಿದಿರಿ
ಎಟಿಎಂ
Image Credit source: Getty Images

Updated on: Sep 23, 2026 | 4:59 PM

ಎಟಿಎಂನಿಂದ ಹಣ ತೆಗೆಯುವಾಗ ಕೆಲವೊಮ್ಮೆ ಹಣ ಬರುವುದಿಲ್ಲ. ಆದರೆ, ಬ್ಯಾಂಕ್ ಖಾತೆಯಿಂದ ಡೆಬಿಟ್ ಮೆಸೇಜ್ ಬಂದುಬಿಡಬಹುದು. ಇಂಥ ಸಂದರ್ಭಗಳು ವಿರಳವಾದರೂ ಬರುವುದುಂಟು. ಈ ಸಂರ್ಭದಲ್ಲಿ ಏನು ಮಾಡಬೇಕು ಎಂಬ ಗೊಂದಲ ಸಹಜ. ಬ್ಯಾಂಕ್ ಅಕೌಂಟ್​ನಿಂದ ಡೆಬಿಟ್ ಆದ ಹಣ ಮರಳಿ ಬರುತ್ತಾ? ಬ್ಯಾಂಕ್ ಕಚೇರಿಗೆ ಹೋಗಿ ಹೇಗೆ ದೂರು ನೀಡುವುದು? ಎಟಿಎಂನಿಂದ ಹಣ ಬರದೆಯೇ ಅಕೌಂಟ್​ನಿಂದ ಹಣ ಕಡಿತಗೊಂಡಿದ್ದರೆ ಅದನ್ನು ಫೇಲ್ಡ್ ಎಟಿಎಂ ಟ್ರಾನ್ಸಾಕ್ಷನ್ ಎಂದು ಪರಿಗಣಿಸಲಾಗುತ್ತದೆ.

ಈ ಸಂದರ್ಭದಲ್ಲಿ ಭಯಪಡುವ ಅಗತ್ಯ ಇರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಹಣವು ಬ್ಯಾಂಕ್ ಖಾತೆಗೆ ಮರಳುತ್ತದೆ. ಒಂದು ವೇಳೆ, ಹಣ ಬರದೇ ಹೋದಲ್ಲಿ ಗ್ರಾಹಕರು ಬ್ಯಾಂಕಿಗೆ ಹೋಗಿ ದೂರು ಸಲ್ಲಿಸಬಹುದು.

ಘಟನೆ ಆದ ತಕ್ಷಣವೇ ಮಾಡಬೇಕಾದ ಕಾರ್ಯವೇನು?

ರಸೀದಿ ಮತ್ತು ಎಸ್‌ಎಮ್‌ಎಸ್ ಉಳಿಸಿಕೊಳ್ಳಬೇಕು. ಅದಕ್ಕಾಗಿ ಎಟಿಎಂ ನಿಂದ ಬಂದ ಟ್ರಾನ್ಸಾಕ್ಷನ್ ಸ್ಲಿಪ್ (Receipt) ಮತ್ತು ಮೊಬೈಲ್‌ಗೆ ಬಂದ ಎಸ್‌ಎಮ್‌ಎಸ್ ಸಂದೇಶವನ್ನು ಭದ್ರವಾಗಿಟ್ಟುಕೊಳ್ಳಿ. ಇದರಲ್ಲಿ Transaction ID, ATM ID, ದಿನಾಂಕ ಮತ್ತು ಸಮಯದ ವಿವರಗಳಿರುತ್ತವೆ.

ಇದನ್ನೂ ಓದಿ: ಮೂರು ದಿನಗಳ ಮುಷ್ಕರ: ಭಾನುವಾರ ಬ್ಯಾಂಕ್​ಗಳನ್ನು ತೆರೆಯಲು ಸರ್ಕಾರ ಅನುಮತಿ; ಗ್ರಾಹಕರ ಹಿತದೃಷ್ಟಿಯಿಂದ ಈ ಕ್ರಮ

ಆಟೋ-ರಿವರ್ಸಲ್​ಗೆ ಎಷ್ಟು ಹೊತ್ತಾಗುತ್ತದೆ?

ಸಾಮಾನ್ಯವಾಗಿ ಹೆಚ್ಚಿನ ಬ್ಯಾಂಕ್‌ಗಳು ತಾಂತ್ರಿಕ ದೋಷವನ್ನು ತಾವೇ ಗುರುತಿಸಿ 24 ಗಂಟೆಗಳ ಒಳಗೆ ಹಣವನ್ನು ಖಾತೆಗೆ ಮರು ಜಮೆ (Auto-reverse) ಮಾಡುತ್ತವೆ.

ಹಣ ಆಟೊ ರಿವರ್ಸಲ್ ಆಗದಿದ್ದಾಗ ಏನು ಮಾಡಬೇಕು?

24 ಗಂಟೆಗಳ ನಂತರವೂ ಹಣ ಜಮೆಯಾಗದಿದ್ದರೆ, ಬ್ಯಾಂಕ್​ಗೆ ಹೋಗಿ ದೂರು ಸಲ್ಲಿಸಬೇಕು. ಇಲ್ಲಿ ಎಟಿಎಂಗೆ ಸೇರಿದ ಬ್ಯಾಂಕ್ ಬದಲು, ಡೆಬಿಟ್ ಆದ ಅಕೌಂಟ್​ನ ಬ್ಯಾಂಕ್​ಗೆ (Home Bank) ಹೋಗಿ ದೂರು ಸಲ್ಲಿಸಬೇಕು.

ಬ್ಯಾಂಕ್​ಗೆ ದೂರು ದಾಖಲಿಸುವ ಮೂರು ವಿಧಾನಗಳು:

  • ಕಸ್ಟಮರ್ ಕೇರ್: ನಿಮ್ಮ ಡೆಬಿಟ್ ಕಾರ್ಡ್ ಹಿಂಭಾಗದಲ್ಲಿರುವ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.
  • ನೆಟ್ ಬ್ಯಾಂಕಿಂಗ್/ಆಪ್: ಬ್ಯಾಂಕ್ ಆಪ್ ಅಥವಾ ನೆಟ್ ಬ್ಯಾಂಕಿಂಗ್‌ನಲ್ಲಿ “Dispute Transaction” ವಿಭಾಗದಲ್ಲಿ ದೂರು ದಾಖಲಿಸಿ.
  • ಬ್ಯಾಂಕ್ ಶಾಖೆಗೆ ಭೇಟಿ: ನಿಮ್ಮ ಬ್ಯಾಂಕ್ ಶಾಖೆಗೆ ತೆರಳಿ ATM Transaction Dispute Form (Chargeback Form) ಭರ್ತಿ ಮಾಡಿ ನೀಡಿ.

ನೀವು ಎತ್ತಿಟ್ಟುಕೊಂಡ ಮತ್ತು ಸೇವ್ ಮಾಡಿದ ರಸೀದಿ ಮತ್ತು ಮೆಸೇಜ್​ಗಳು ಅವಶ್ಯಕವಾಗಿ ಬೇಕಾಗಬಹುದು.

ಇದನ್ನೂ ಓದಿ: ಬ್ಯಾಂಕ್‌ಗೆ ಯಾವುದೇ ಕೆಲಸಕ್ಕೆ ಹೋದರೂ ಈ 3 ದಾಖಲೆಗಳು ನಿಮ್ಮ ಕೈಯಲ್ಲಿರಲಿ: ಕೆಲಸ ಕಾರ್ಯ ಸುಲಭ

ಆರ್‌ಬಿಐ ನಿಯಮಗಳು ಏನು ಹೇಳುತ್ತವೆ?

ದೂರು ದಾಖಲಾದ ದಿನದಿಂದ ಗರಿಷ್ಠ 5 ಕೆಲಸದ ದಿನಗಳ ಒಳಗೆ ಬ್ಯಾಂಕ್ ಹಣವನ್ನು ನಿಮ್ಮ ಖಾತೆಗೆ ಮರು ಜಮೆ ಮಾಡಬೇಕು. ಬ್ಯಾಂಕ್ 5 ದಿನಗಳ ಒಳಗೆ ಹಣ ಜಮೆ ಮಾಡದಿದ್ದರೆ, ವಿಳಂಬವಾದ ಪ್ರತಿಯೊಂದು ದಿನಕ್ಕೂ ಬ್ಯಾಂಕ್ ನಿಮಗೆ ದಿನಕ್ಕೆ ₹100 ರಂತೆ ನಷ್ಟಪರಿಹಾರ (Penalty) ನೀಡಬೇಕಾಗುತ್ತದೆ. ಆದರೆ ನೀವು ವಹಿವಾಟು ನಡೆದ 30 ದಿನಗಳ ಒಳಗೆ ದೂರು ನೀಡಿರಬೇಕು.

30 ದಿನವಾದರೂ ಬ್ಯಾಂಕ್ ನಿಮ್ಮ ದೂರಿಗೆ ಪರಿಹಾರ ನೀಡದಿದ್ದರೆ?

  • ಪ್ರಿನ್ಸಿಪಲ್ ನೋಡಲ್ ಆಫೀಸರ್ (PNO): ಬ್ಯಾಂಕ್‌ನ ಹಿರಿಯ ನೋಡಲ್ ಅಧಿಕಾರಿಗೆ ಇಮೇಲ್ ಮೂಲಕ ದೂರು ಕೊಂಡೊಯ್ಯಿರಿ (Escalate).
  • ಆರ್‌ಬಿಐ ಒಂಬುಡ್ಸ್‌ಮನ್ (RBI Ombudsman): ಆರ್‌ಬಿಐನ ಅಧಿಕೃತ ಪೋರ್ಟಲ್ cms.rbi.org.in ನಲ್ಲಿ ಆನ್‌ಲೈನ್ ದೂರು ದಾಖಲಿಸಬಹುದು ಅಥವಾ 14448 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us