ಸತತ 5 ತಿಂಗಳು ಷೇರುಪೇಟೆ ಕುಸಿತ; 29 ವರ್ಷಗಳಲ್ಲಿ ಇಷ್ಟು ಸುದೀರ್ಘ ಹಿನ್ನಡೆ ಇದೇ ಮೊದಲು

Nifty longest losing streak after 1996: ಷೇರು ಮಾರುಕಟ್ಟೆ ಅಕ್ಟೋಬರ್​ನಿಂದ ಸತತವಾಗಿ ಕುಸಿಯುತ್ತಾ ಬಂದಿದೆ. ಫೆಬ್ರುವರಿಯೂ ಕೂಡ ನಷ್ಟದಲ್ಲೇ ಅಂತ್ಯಗೊಂಡರೆ ಸತತ ಐದು ತಿಂಗಳು ಮಾರುಕಟ್ಟೆ ಬಿದ್ದಂತಾಗುತ್ತದೆ. 1996ರಲ್ಲಿ ಜುಲೈನಿಂದ ನವೆಂಬರ್​ವರೆಗೆ ಸತತ ಐದು ತಿಂಗಳು ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಂಡಿದ್ದವು. ಆ ಬಳಿಕ ಅಷ್ಟು ಸುದೀರ್ಘ ಹಿನ್ನಡೆ ಇದೇ ಮೊದಲ ಬಾರಿಗೆ ಕಂಡುಬರುತ್ತಿದೆ.

ಸತತ 5 ತಿಂಗಳು ಷೇರುಪೇಟೆ ಕುಸಿತ; 29 ವರ್ಷಗಳಲ್ಲಿ ಇಷ್ಟು ಸುದೀರ್ಘ ಹಿನ್ನಡೆ ಇದೇ ಮೊದಲು
ಷೇರು ಮಾರುಕಟ್ಟೆ

Updated on: Feb 24, 2025 | 3:52 PM

ನವದೆಹಲಿ, ಫೆಬ್ರುವರಿ 24: ಷೇರು ಮಾರುಕಟ್ಟೆಯ ಕುಸಿತದ ಪರ್ವ ಇಲ್ಲಿಗೇ ಮುಗಿಯುತ್ತಿಲ್ಲ. ಇವತ್ತೂ ಕೂಡ ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳೆಲ್ಲವೂ ಹಿನ್ನಡೆ ಕಂಡಿವೆ. ಈ ತಿಂಗಳೂ ಕೂಡ ಷೇರುಪೇಟೆ ಒಟ್ಟಾರೆ ಋಣಾತ್ಮಕ ಬೆಳವಣಿಗೆಯೊಂದಿಗೆ ಅಂತ್ಯವಾಗಲಿದೆ. ಕಳೆದ ಐದು ತಿಂಗಳಿಂದಲೂ ಅದು ಸತತವಾಗಿ ಕುಸಿಯುತ್ತಿದೆ. 1996ರ ಬಳಿಕ ಒಂದು ವರ್ಷದಲ್ಲಿ ಇಷ್ಟು ಸುದೀರ್ಘ ಹಿನ್ನಡೆ ಆಗಿದ್ದು ಇದೇ ಮೊದಲು. ಅಕ್ಟೋಬರ್​ನಿಂದ ಹಿಡಿದು ಫೆಬ್ರುವರಿಯವರೆಗೆ ಐದು ತಿಂಗಳು ಮಾರುಕಟ್ಟೆ ಕುಸಿತ ನಿರಂತರವಾಗಿ ನಡೆದಿದೆ.

1996ರ ವರ್ಷದಲ್ಲಿ ಜುಲೈನಿಂದ ನವೆಂಬರ್​ವರೆಗೆ ಎಲ್ಲಾ ತಿಂಗಳಲ್ಲೂ ನಿಫ್ಟಿ ನಷ್ಟ ಕಂಡಿತ್ತು. ಅದು ಈಗ ಮರುಕಳಿಸಿದೆ. 2024ರ ಅಕ್ಟೋಬರ್​ನಿಂದ 2025ರ ಫೆಬ್ರುವರಿವರೆಗೆ ನಿಫ್ಟಿ ನಷ್ಟ ಕಂಡಿದೆ. ನಿಫ್ಟಿ ಮಾತ್ರವಲ್ಲ ಸೆನ್ಸೆಕ್ಸ್​ನ ಕಥೆಯೂ ಇದೇ ಆಗಿದೆ.

2024ರ ಸೆಪ್ಟೆಂಬರ್ 27ರಂದು ನಿಫ್ಟಿ ಸೂಚ್ಯಂಕ 26,277.35 ಅಂಕಗಳ ಮಟ್ಟ ಮುಟ್ಟಿತ್ತು. ಅದು ಸದ್ಯ ನಿಫ್ಟಿ50 ಗರಿಷ್ಠ ಮಟ್ಟವೆನಿಸಿದೆ. ಅದಾದ ಬಳಿಕ ಕುಸಿತದ ಪರ್ವ ಆರಂಭವಾಗಿದೆ. ಇದೀಗ 22,550 ಅಂಕಗಳಿಗೆ ಇಳಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ನಿಫ್ಟಿ50 ಗಳಿಸಿರುವುದು ಶೇ. 2ಕ್ಕಿಂತಲೂ ಕಡಿಮೆಯೇ. ಆ ಮಟ್ಟಿಗೆ ಕಳೆದ ಕೆಲ ತಿಂಗಳು ಮಾರುಕಟ್ಟೆ ಕುಸಿತವಾಗಿದೆ.

ಇದನ್ನೂ ಓದಿ: ಷೇರು ಮಾರುಕಟ್ಟೆ ಸದ್ಯದಲ್ಲೇ ಮತ್ತೆ ಗರಿಗೆದರುತ್ತೆ ಅನ್ನೋದಕ್ಕೆ ಇಲ್ಲಿವೆ ಪ್ರಬಲ ಸಾಕ್ಷ್ಯಗಳು

ಸೆಪ್ಟೆಂಬರ್ 27ರ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಎನ್​ಎಸ್​ಇ ನಿಫ್ಟಿ ಈಗ ಶೇ. 14ರಷ್ಟು ಕುಸಿತ ಕಂಡಿದೆ. ಕಳೆದ 6 ತಿಂಗಳಲ್ಲಿ ಇದರ ಕುಸಿತ ಶೇ. 10ರ ಸಮೀಪ ಇದೆ. ಫೆಬ್ರುವರಿ ತಿಂಗಳ ಆರಂಭದಲ್ಲಿ ನಿಫ್ಟಿ 23,508 ಅಂಕಗಳಲ್ಲಿ ಇತ್ತು. ಈ ತಿಂಗಳು ಅಂತ್ಯವಾಗಲು ಇನ್ನೂ ನಾಲ್ಕು ದಿನಗಳಿವೆ. ಈ ನಾಲ್ಕು ದಿನಗಳಲ್ಲಿ ನಿಫ್ಟಿ 1,000 ಅಂಕಗಳನ್ನು ಗಳಿಸದೇ ಹೋದರೆ ಸತತ ಐದು ತಿಂಗಳು ನಿಫ್ಟಿ ಕುಸಿದಂತಾಗುತ್ತದೆ.

ಸೆನ್ಸೆಕ್ಸ್ ಹಣೆಬರಹವೂ ಇದೆಯೇ…

ನಿಫ್ಟಿಯಂತೆ ಬಿಎಸ್​ಇ ಸೆನ್ಸೆಕ್ಸ್ ಕೂಡ ಸೆಪ್ಟೆಂಬರ್ 27ರಂದು ಉಚ್ಚ ಮಟ್ಟ ಮುಟ್ಟಿತ್ತು. ಅಂದು ಸೆನ್ಸೆಕ್ಸ್ 85,978.25 ಅಂಕಗಳಿಗೆ ಏರಿತ್ತು. ಈಗ (ಫೆ. 24) ಅದು 74,456 ಅಂಕಗಳಿಗೆ ಇಳಿಕೆ ಆಗಿದೆ. ಗರಿಷ್ಠ ಮಟ್ಟದಿಂದ ಅದು ಶೇ. 13.40ಯಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ: ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ

ಸೆನ್ಸೆಕ್ಸ್ ಕೂಡ ಸತತ ಐದನೇ ತಿಂಗಳು ಕುಸಿತ ಕಾಣುವ ಹಾದಿಯಲ್ಲಿದೆ. 1996ರ ಬಳಿಕ ಇಂಥ ಹೀನಾಯ ಪ್ರದರ್ಶನ ಅಥವಾ ಸುದೀರ್ಘ ಹಿನ್ನಡೆ ಇದೇ ಮೊದಲು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ