ATM Charges: ಜನವರಿ 1, 2022ರಿಂದ ಎಟಿಎಂ ಶುಲ್ಕಗಳಲ್ಲಿ ಬದಲಾವಣೆ; ಎಷ್ಟು ಎಂಬ ಮಾಹಿತಿ ಇಲ್ಲಿದೆ
ಜನವರಿ 1, 2022ರಿಂದ ಬ್ಯಾಂಕ್ಗಳ ಎಟಿಎಂ ಶುಲ್ಕಗಳ ಏರಿಕೆ ಆಗಲಿದ್ದು ಪರಿಷ್ಕೃತ ದರ ಎಷ್ಟಿದೆ ಎಂಬುದರ ವಿವರ ಈ ಲೇಖನದಲ್ಲಿ ಇದೆ.
ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂಗಳಿಂದ ಹಣ ವಿಥ್ಡ್ರಾ ಮಾಡುವವರಿಗೆ 2022ರ ಜನವರಿಯಿಂದ ದುಬಾರಿ ಆಗಲಿದೆ. ಈ ವರ್ಷದ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಅಧಿಸೂಚನೆ ಹೊರಡಿಸಿ, ಬ್ಯಾಂಕ್ಗಳ ಎಟಿಎಂನಿಂದ ನಿಗದಿತ ಸಂಖ್ಯೆಯ ನಗದು ವಿಥ್ಡ್ರಾ ಮಿತಿ ಮುಗಿದ ನಂತರ ದೇಶದಾದ್ಯಂತ ಈ ವಹಿವಾಟು ದುಬಾರಿ ಆಗುತ್ತದೆ. ಎಟಿಎಂನಲ್ಲಿನ ನಗದು ವಿಥ್ಡ್ರಾ ಮಿತಿ ದಾಟಿದ ನಂತರ 2022ರ ಜನವರಿಯಿಂದ ಗ್ರಾಹಕರು ಹೆಚ್ಚು ಶುಲ್ಕ ತೆರಬೇಕಾಗುತ್ತದೆ. ದಿನಾಂಕ ಹತ್ತಿರವಾಗುತ್ತಿದ್ದಂತೆ ಬ್ಯಾಂಕ್ಗಳು ಗ್ರಾಹಕರಿಗೆ ಎಟಿಎಂ ನಿಯಮ ಬದಲಾವಣೆಗಳ ಬಗ್ಗೆ ಈಗಾಗಲೇ ತಿಳಿಸುತ್ತಿದೆ. ಜನವರಿ 1, 2022ರಿಂದ ಈ ನಿಯಮ ಜಾರಿ ಆಗಲಿದೆ. ಆರ್ಬಿಐ ಅಧಿಸೂಚನೆಯ ಪ್ರಕಾರ, ನಗದು ವಿಥ್ಡ್ರಾ ಮಿತಿ ಮೀರಿದ ಮೇಲೆ ಪ್ರತಿ ವಹಿವಾಟಿಗೆ 21 ರೂಪಾಯಿ ಪಾವತಿಸಬೇಕು. ಇಂಥದ್ದೇ ಸನ್ನಿವೇಶ ಉದ್ಭವಿಸಿದಲ್ಲಿ ಸದ್ಯಕ್ಕೆ ಪ್ರತಿ ವಹಿವಾಟಿಗೆ ರೂ. 20 ಇದೆ.
ಯಾವ ಬ್ಯಾಂಕ್ನಲ್ಲಿ ಖಾತೆ ಇದೆಯೋ ಆ ಬ್ಯಾಂಕ್ನ ಎಟಿಎಂನಿಂದ ಉಚಿತವಾಗಿ 5 ವಹಿವಾಟುಗಳನ್ನು ಮಾಡುವುದಕ್ಕೆ ಆರ್ಬಿಐ ಅವಕಾಶ ನೀಡುತ್ತದೆ. ಆ ನಂತರ ಈ ಶುಲ್ಕ ಅನ್ವಯ ಆಗುತ್ತದೆ. ಖಾತೆ ಇರುವ ಬ್ಯಾಂಕ್ಗಳದೇ ಎಟಿಎಂಗಳಿಂದ ನಗದು ಹಾಗೂ ನಗದುಯೇತರ ಎರಡೂ ಸೇರಿ ಗರಿಷ್ಠ 5 ವಹಿವಾಟುಗಳನ್ನು ನಡೆಸಬಹುದು. ಇದನ್ನು ಹೊರತುಪಡಿಸಿ ಮೆಟ್ರೋ ನಗರಗಳಲ್ಲಿ (ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ ಮತ್ತು ಹೈದರಾಬಾದ್) ಇತರ ಬ್ಯಾಂಕ್ಗಳಲ್ಲಿ ಮೂರು ವಹಿವಾಟು ಉಚಿತ ಇದೆ. ಇನ್ನು ಮೆಟ್ರೋಯೇತರ ನಗರಗಳಲ್ಲಿ 5 ವಹಿವಾಟು ಉಚಿತವಿದೆ. ಈ ದರ ಏರಿಕೆ ಬಗ್ಗೆ 2021ರ ಜೂನ್ನಲ್ಲಿ ಆರ್ಬಿಐ ಅಧಿಸೂಚನೆ ಹೊರಡಿಸಿತ್ತು.
ನಿಯಮ ಬದಲಾವಣೆ ಬಗ್ಗೆ ಬ್ಯಾಂಕ್ಗಳು ವೆಬ್ಸೈಟ್ಗಳಲ್ಲಿ ಅಧಿಸೂಚನೆ ಹೊರಡಿಸಿವೆ. “ಜನವರಿ 1, 2022ರಿಂದ ಜಾರಿಯಾಗುವಂತೆ ಉಚಿತ ಮಿತಿಯ ನಂತರದಲ್ಲಿ ಎಟಿಎಂ ವಹಿವಾಟುಗಳ ಶುಲ್ಕವು ರೂ. 20+ ತೆರಿಗೆಗಳು ಇರುವುದು ಇನ್ನು ಮುಂದೆ ರೂ. 21+ ತೆರಿಗೆ ಎಲ್ಲಿ ಅನ್ವಯಿಸುತ್ತದೋ ಅಲ್ಲಿಗೆ ಆನ್ವಯಿಸುತ್ತದೆ,” ಎಂದು ಎಚ್ಡಿಎಫ್ಸಿ ಬ್ಯಾಂಕ್ ವೆಬ್ಸೈಟ್ ತಿಳಿಸಿದೆ.
“ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್ಗಳ ಎಟಿಎಂಗಳ ಮಿತಿಯನ್ನು ದಾಟಿದಲ್ಲಿ ಜನವರಿ 1, 2022ರಿಂದ ರೂ. 21+ ಜಿಎಸ್ಟಿ ಅನ್ವಯಿಸುತ್ತದೆ,” ಆಕ್ಸಿಸ್ ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ಹೇಳಿದೆ.
ಈ ಬದಲಾವಣೆ ಏಕಾಗುತ್ತಿದೆ? ಬದಲಾವಣೆಗಳನ್ನು ತರುವ ಉದ್ದೇಶದಿಂದ 2019ನೇ ಇಸವಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಮಿತಿಯೊಂದನ್ನು ರಚಿಸಿತ್ತು. ಎಟಿಎಂ ಶುಲ್ಕಗಳು ಮತ್ತು ಫೀ ಬದಲಾವಣೆ, ಅದರಲ್ಲೂ ಬೇರೆ ಎಟಿಎಂಗಳಲ್ಲಿ ವಿಥ್ಡ್ರಾ ಮಾಡುವುದಿದ್ದಲ್ಲಿ ಆ ಶುಲ್ಕದ ಬಗ್ಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮುಖ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2019ರ ಜೂನ್ನಲ್ಲಿ ಸಮಿತಿ ರಚಿಸಲಾಗಿತ್ತು.
ಇದನ್ನೂ ಓದಿ: ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು 1300 ಕೋಟಿ ರೂಪಾಯಿ ಪಿಎಲ್ಐ ಯೋಜನೆಗೆ ಕೇಂದ್ರ ಅನುಮೋದನೆ