ರಕ್ಷಣಾ ಶಸ್ತ್ರಾಸ್ತ್ರಗಳ ಎರಡನೇ ಅತಿ ದೊಡ್ಡ ಆಮದುದಾರ ದೇಶ ಭಾರತ, ಮೊದಲ ಸ್ಥಾನದಲ್ಲಿ ಸೌದಿ ಅರೇಬಿಯಾ
ಭಾರತ ಈಗ ರಕ್ಷಣಾ ಸಾಮಗ್ರಿಗಳ ಆಮದು ಮಾಡಿಕೊಳ್ಳುವ ವಿಶ್ವದ ದೊಡ್ಡ ಆಮದುದಾರ ದೇಶ ಆಗಿದೆ ಎಂಬುದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ ವರದಿಯಿಂದ ತಿಳಿದುಬಂದಿದೆ.
ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ (ಎಸ್‌ಐಪಿಆರ್‌ಐ) ಬಿಡುಗಡೆ ಮಾಡಿರುವ ಅಂತರಾಷ್ಟ್ರೀಯ ಶಸ್ತ್ರಾಸ್ತ್ರ ವರ್ಗಾವಣೆಯ ದತ್ತಾಂಶದ ಪ್ರಕಾರ, ಭಾರತವು ಈಗ ಅತಿದೊಡ್ಡ ರಕ್ಷಣಾ ವಸ್ತುಗಳ ಆಮದುದಾರ ದೇಶ ಆಗಿದೆ. ಇದರೊಂದಿಗೆ ಸೌದಿ ಅರೇಬಿಯಾದ ನಂತರದಲ್ಲಿ ಎರಡನೇ ಅತಿ ದೊಡ್ಡ ಆಮದುದಾರ ದೇಶ ಎಂಬ ಸ್ಥಾನದಲ್ಲಿ ನಿಂತಿದೆ. SIPRI ಡೇಟಾದ ಪ್ರಕಾರ, 2016-2020ರಿಂದ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದುಗಳಲ್ಲಿ ಭಾರತವು ಶೇ 9.5 ಹೊಂದಿದೆ. 2011-2015 ಮತ್ತು 2016-2020ರ ನಡುವೆ ಆಮದು ಶೇಕಡಾ 33ರಷ್ಟು ಕಡಿಮೆಯಾಗಿದೆ ಎಂದು ಇದೇ ವರದಿ ಬಹಿರಂಗಪಡಿಸಿದೆ ಎಂಬುದಾಗಿ ಇಂಡೋ- ಜರ್ಮನ್ ಕಂಪೆನಿಯಾದ ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಕಾರ್ಯ ನಿರ್ವಾಹಕ ನಿರ್ದೇಶಕರಾದ ಲಿಂಗಣ್ಣ ತಿಳಿಸಿದ್ದಾರೆ.
ದೇಶವು ನಿಧಾನವಾಗಿ ಮತ್ತು ಸ್ಥಿರವಾಗಿ ಆತ್ಮನಿರ್ಭರ (ಸ್ವಾವಲಂಬಿ) ಆಗುವತ್ತ ಸಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ- ಸದ್ಯಕ್ಕೆ ಸರ್ಕಾರವು ದೇಶದೊಳಗೆ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವಿಶ್ವದ ಅಗ್ರ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಹಾರ್ಡ್‌ವೇರ್ ತಯಾರಕರಾದ ಹಲವು ರಾಷ್ಟ್ರಗಳೊಂದಿಗೆ ಜಂಟಿ ಉದ್ಯಮಗಳನ್ನು ಉತ್ತೇಜಿಸುವ ಉಪಕ್ರಮ ಕೈಗೊಂಡಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ, ರಕ್ಷಣಾ ಸಂಗ್ರಹದಲ್ಲಿ ಶೇ 70ರಷ್ಟು ಸ್ವಾವಲಂಬನೆಯ ಭಾರತದ ಗುರಿಯನ್ನು ಇನ್ನೂ ಸಾಧಿಸಲು ಆಗಿಲ್ಲ. ಸದ್ಯಕ್ಕೆ, ಭಾರತದ ಸ್ವಾವಲಂಬನೆಯು ಸುಮಾರು ಶೇ 35ರಿಂದ 40ರ ಮಧ್ಯೆ ಹೊಯ್ದಾಡುತ್ತಿದೆ ಎಂದಿದ್ದಾರೆ.
2400 ಕೋಟಿ ರೂಪಾಯಿ ಮೌಲ್ಯದ LCA ತೇಜಸ್ ತಯಾರಿಕೆಗೆ ಬಿಡಿ ಭಾಗಗಳನ್ನು ಪೂರೈಸುವ HAL ಒಪ್ಪಂದವು ಡಿಸೆಂಬರ್ 16ರಂದು ಸಹಿ ಮಾಡಿದ್ದು, ಶೇ 70ರಷ್ಟು ಸ್ವಾವಲಂಬನೆಗಾಗಿ ಇರಿಸಿಕೊಂಡಿರುವ ಭಾರತೀಯರ ಗುರಿಯತ್ತ ಮೊದಲ ಹೆಜ್ಜೆಯಾಗಿದೆ. ನಿಧಾನಗತಿಯ ಆತ್ಮನಿರ್ಭರ ಭಾರತ್ ಈಗ ವೇಗದ ಪಥದಲ್ಲಿ ಸಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ; ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
Published On - 3:07 pm, Thu, 16 December 21