Job Credit Score: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಬ್ಯಾಂಕ್ನಲ್ಲಿ ಕೆಲಸ ಸಿಕ್ಕೋದಿಲ್ಲ; ಕನಿಷ್ಠ ಸಿಬಿಲ್ ಸ್ಕೋರ್ ಎಷ್ಟಿರಬೇಕು?
CIBIL Score: ಸರ್ಕಾರಿ ಬ್ಯಾಂಕ್ನಲ್ಲಿ ನೀವು ಕೆಲಸಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂದು ಪರಿಶೀಲಿಸಬೇಕಾಗುತ್ತದೆ. ಬ್ಯಾಂಕ್ ಉದ್ಯೋಗಾಕಾಂಕ್ಷಿಗಳು ಕನಿಷ್ಠ 650 ಸಿಬಿಲ್ ಸ್ಕೋರ್ ಇರಬೇಕು ಎನ್ನುವ ಹೊಸ ನಿಯಮವನ್ನು ಐಬಿಪಿಎಸ್ ಮಾಡಿದೆ. ಕ್ರೆಡಿಟ್ ಕಾರ್ಡ್, ಲೋನ್ ಇತ್ಯಾದಿ ಸಾಲದ ನಿರ್ವಹಣೆಯ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಬದಲಾಗುತ್ತದೆ. ಕ್ರೆಡಿಟ್ ಸ್ಕೋರ್ 300ರಿಂದ 900 ಅಂಕಗಳವರೆಗೆ ಇರುತ್ತದೆ.
ಬ್ಯಾಂಕಿಂಗ್ ವಲಯದಲ್ಲಿ ನೀವು ಕೆಲಸ ಗಿಟ್ಟಿಸಬೇಕಾದರೆ ವಿದ್ಯಾರ್ಹತೆ, ಚಾಣಾಕ್ಷತೆ ಜೊತೆಗೆ ಹಣಕಾಸು ಶಿಸ್ತು ಕೂಡ ಇರಬೇಕು. ಅಂಥದ್ದೊಂದು ಹೊಸ ನಿಯಮವನ್ನು ಐಬಿಪಿಎಸ್ ಮಾಡಿದೆ. ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಉದ್ಯೋಗ ನೇಮಕಾತಿ (employee recruitment) ಮಾಡುವ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್ (IBPS- Institute of Banking Personnel Selection) ಸಂಸ್ಥೆ ಅಭ್ಯರ್ಥಿಗಳ ಕ್ರೆಡಿಟ್ ಹಿಸ್ಟರಿ ಪರಿಶೀಲನೆ ನಡೆಸುವ ನಿಯಮವನ್ನು ತಂದಿದೆ.
ಅಭ್ಯರ್ಥಿಗಳು ಉತ್ತಮ ಕ್ರೆಡಿಟ್ ಹಿಸ್ಟರಿ ಹೊಂದಿರಬೇಕು. ಕೆಲಸಕ್ಕೆ ಸೇರುವಾಗ ಕನಿಷ್ಠ 650 ಹಾಗೂ ಅದಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಹೊಂದಿರಬೇಕು ಎಂಬುದು ಐಬಿಪಿಎಸ್ ಹಾಕಿರುವ ಹೊಸ ನಿಯಮ.
ಕ್ರೆಡಿಟ್ ಸ್ಕೋರ್ vs ಸಿಬಿಲ್ ಸ್ಕೋರ್
ಕ್ರೆಡಿಟ್ ಸ್ಕೋರ್ ಒದಗಿಸುವ ಕೆಲವು ಕಂಪನಿಗಳಲ್ಲಿ ಸಿಬಿಲ್ ಒಂದು. ಈಕ್ವಿಫ್ಯಾಕ್ಸ್, ಎಕ್ಸ್ಪೀರಿಯನ್, ಸಿಆರ್ಐಎಫ್ ಸಂಸ್ಥೆಗಳೂ ಕೂಡ ಕ್ರೆಡಿಟ್ ಸ್ಕೋರ್ ನೀಡುತ್ತವೆ. ಸಿಬಿಲ್ ಸ್ಕೋರ್ ಸಾಮಾನ್ಯವಾಗಿ ಬಳಕೆಯಲ್ಲಿರುವುದರಿಂದ ಕ್ರೆಡಿಟ್ ಸ್ಕೋರ್ಗೆ ಅನ್ವರ್ಥವಾಗಿ ಸಿಬಿಲ್ ಸ್ಕೋರ್ ಬಳಕೆ ಆಗುತ್ತದೆ.
ಇದನ್ನೂ ಓದಿ: Robert Kiyosaki: ಶ್ರೀಮಂತನಾಗುವುದು ಹೇಗೆಂದು ಪುಸ್ತಕ ಬರೆದ ಲೇಖಕನ ಬಳಿ 10,000 ಕೋಟಿ ರೂ ಸಾಲ; ಆದರೆ, ಬೇರೆ ಇದೆ ಟ್ವಿಸ್ಟ್
ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು?
ಕ್ರೆಡಿಟ್ ಸ್ಕೋರ್ನಲ್ಲಿ 300ರಿಂದ 900 ವರೆಗಿನ ಅಂಕಗಳ ಸ್ಕೋರ್ ಇರುತ್ತದೆ. 300 ಕನಿಷ್ಠ ಮಟ್ಟದ್ದು. 900 ಗರಿಷ್ಠ ಮಟ್ಟದ್ದು. 650ಕ್ಕಿಂತ ಹೆಚ್ಚು ಅಂಕಗಳಿದ್ದರೆ ಅದು ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.
ನಮ್ಮ ಸಾಲಗಳ ನಿರ್ವಹಣೆ, ಕ್ರೆಡಿಟ್ ಕಾರ್ಡ್ ನಿರ್ವಹಣೆ ಎಲ್ಲವೂ ಸಮರ್ಪಕವಾಗಿದ್ದರೆ ಸಿಬಿಲ್ ಸ್ಕೋರ್ ಚೆನ್ನಾಗಿರುತ್ತದೆ. ಸಾಲದ ಕಂತುಗಳನ್ನು ಸಕಾಲಕ್ಕೆ ಕಟ್ಟದೇ ಹೋದರೆ, ಅಥವಾ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಸರಿಯಾಗಿ ಕಟ್ಟದೇ ಹೋದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ.
ಬಹಳ ಮುಖ್ಯವಾದುದು ಕ್ರೆಡಿಟ್ ಸ್ಕೋರ್
ಬ್ಯಾಂಕುಗಳಲ್ಲಿ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ. ಅದರಲ್ಲೂ ಪರ್ಸನಲ್ ಲೋನ್ ಪಡೆಯುವಾಗ ಬ್ಯಾಂಕುಗಳು ಅರ್ಜಿದಾರರ ಕ್ರೆಡಿಟ್ ಸ್ಕೋರ್ ಅನ್ನು ತಪ್ಪದೇ ಪರಿಶೀಲಿಸುತ್ತವೆ. ಒಳ್ಳೆಯ ಸ್ಕೋರ್ ಇದ್ದರೆ ಸಾಲ ಸುಲಭವಾಗಿ ಸಿಗುವುದರ ಜೊತೆಗೆ ಬಡ್ಡಿದರವೂ ಕನಿಷ್ಠ ಇರುತ್ತದೆ. ಹೀಗಾಗಿ, ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ