ನವದೆಹಲಿ: ವಾರದಲ್ಲಿ ಐದು ದಿನ ಮಾತ್ರ ಕೆಲಸ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಒಕ್ಕೂಟಗಳ ಸಂಘಟನೆ ‘ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU)’ ಇದೇ ತಿಂಗಳ 30 ಮತ್ತು 31ರಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರಕ್ಕೆ (Bank strike) ಕರೆ ನೀಡಿದೆ. ನಮ್ಮ ಬೇಡಿಕೆಗಳಿಗೆ ಸಂಬಂದಿಸಿದ ಪತ್ರಗಳಿಗೆ ‘ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್ನಿಂದ (Indian Banks’ Association) ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಜನವರಿ 30 ಮತ್ತು 31ರಂದು ಮುಷ್ಕರ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಕಟಾಚಲಂ ತಿಳಿಸಿದ್ದಾರೆ. ಮುಂಬೈಯಲ್ಲಿ ನಡೆದ ಸಭೆಯ ಬಳಿಕ ಮುಷ್ಕರ ನಡೆಸುವ ತೀರ್ಮಾನಕ್ಕೆ ಬರಲಾಯಿತು ಎಂದು ಅವರು ಹೇಳಿದ್ದಾರೆ.
ವಾರಕ್ಕೆ ಐದೇ ದಿನ ಕೆಲಸ, ಬ್ಯಾಂಕ್ ನೌಕರರ ಪಿಂಚಣಿ ವ್ಯವಸ್ಥೆ ನವೀಕರಣ, ವೇತನ ಪರಿಷ್ಕರಣೆ, ಎನ್ಪಿಎಸ್ ರದ್ದತಿ ಸೇರಿದಂತೆ ಹಲವು ಬೇಡಿಕೆಗಳನ್ನು ಬ್ಯಾಂಕ್ ನೌಕರರು ಮುಂದಿಟ್ಟಿದ್ದಾರೆ.
ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ತಿಂಗಳ ಕೊನೆಯಲ್ಲಿ ಬ್ಯಾಂಕಿಂಗ್ ವಹಿವಾಟುಗಳಿಗೆ ತೊಡಕು ಉಂಟಾಗುವ ಸಾಧ್ಯತೆ ಇದೆ. ಜನವರಿ 28 ನಾಲ್ಕನೇ ಶನಿವಾರ ಆಗಿರುವುದರಿಂದ ಬ್ಯಾಂಕ್ ರಜೆ ಇರುತ್ತದೆ. ಮರುದಿನ ಭಾನುವಾರ ಹೇಗೂ ರಜೆ. 30 ಮತ್ತು 31ರಂದು ಮುಷ್ಕರ ನಡೆದರೆ ಒಟ್ಟು ನಾಲ್ಕು ದಿನ ಬ್ಯಾಂಕಿಂಗ್ ವಹಿವಾಟು ಸ್ಥಗಿತಗೊಳ್ಳಲಿದೆ. ಪರಿಣಾಮವಾಗಿ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯಗೊಳ್ಳಳಿದೆ. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಇತ್ಯಾದಿ ಆನ್ಲೈನ್ ವಹಿವಾಟುಗಳ ಮೇಲೆ ದೊಡ್ಡ ಪರಿಣಾಮವಾಗದು.
ಈ ಹಿಂದೆ 2022ರ ನವೆಂಬರ್ 19ರಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘವು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಬಳಿಕ ಮುಷ್ಕರ ನಿರ್ಧಾರವನ್ನು ಹಿಂಪಡೆದಿತ್ತು. ಕೈಗಾರಿಕಾ ವಿವಾದ ಕಾಯ್ದೆ ಉಲ್ಲಂಘನೆ, ವರ್ಗಾವಣೆ ಮೂಲಕ ನೌಕರರಿಗೆ ಕಿರುಕುಳ, ಕಾರ್ಮಿಕ ಸಂಘಟನೆಗಳ ಮೇಲೆ ದಾಳಿ ಹೆಚ್ಚಳ ಮತ್ತು ಸಿಎಸ್‌ಬಿ ಬ್ಯಾಂಕ್‌ನಲ್ಲಿ ವೇತನ ಪರಿಷ್ಕರಣೆ ನಿರಾಕರಣೆ ಸೇರಿದಂತೆ ಹಲವು ವಿಷಯಗಳ ಕುರಿತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಗಿಗತ್ತು. ಬ್ಯಾಂಕ್ ಉದ್ಯೋಗಿಗಳ ಸಂಘ ಮತ್ತು ಬ್ಯಾಂಕ್‌ಗಳು ದ್ವಿಪಕ್ಷೀಯವಾಗಿ ಸಮಸ್ಯೆಗಳನ್ನು ಪರಿಹರಿಸಲು ಒಪ್ಪಿಕೊಂಡಿದ್ದರಿಂದ ಮುಷ್ಕರ ಹಿಂಪಡೆಯಲಾಗಿತ್ತು. ಇದೀಗ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಬ್ಯಾಂಕ್ ನೌಕರರು ಪಟ್ಟುಹಿಡಿದಿದ್ದಾರೆ.