AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಬ್ಯಾಂಕ್ ಮುಷ್ಕರ: ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಸರ್ಕಾರ ಖಾಸಗೀಕರಣವನ್ನು ನಿಲ್ಲಿಸಬೇಕು, ಉದ್ಯೋಗ ಖಾತ್ರಿ ವೇತನ ಹೆಚ್ಚಿಸಬೇಕು ಮತ್ತು ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ನೌಕರ ಸಂಘಟನೆಗಳು ಆಗ್ರಹಿಸಿವೆ.

ಇಂದಿನಿಂದ ಬ್ಯಾಂಕ್ ಮುಷ್ಕರ: ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 28, 2022 | 9:17 AM

ಬೆಂಗಳೂರು: ದೇಶಾದ್ಯಂತ ಇಂದು ಮತ್ತು ನಾಳೆ (ಮಾರ್ಚ್ 28-29) ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರದಲ್ಲಿ ಬ್ಯಾಂಕ್​ ಸಿಬ್ಬಂದಿಯೂ ಪಾಲ್ಗೊಳ್ಳಲಿದ್ದು ದೇಶದ ಅತಿದೊಡ್ಡ ಬ್ಯಾಂಕರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಸೇರಿದಂತೆ ಹಲವು ಬ್ಯಾಂಕ್​ಗಳಲ್ಲಿ ವಹಿವಾಟಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬ್ಯಾಂಕ್​ಗಳ ನೌಕರರು ಒತ್ತಾಯಿಸುತ್ತಿದ್ದಾರೆ. ಇತರ ಸಂಘಟನೆಗಳೂ ಮುಷ್ಕರ ಕರೆಗೆ ಓಗೊಟ್ಟಿದ್ದು, ಸರ್ಕಾರ ಖಾಸಗೀಕರಣವನ್ನು ನಿಲ್ಲಿಸಬೇಕು, ಉದ್ಯೋಗ ಖಾತ್ರಿ ವೇತನ ಹೆಚ್ಚಿಸಬೇಕು ಮತ್ತು ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿವೆ.

ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳನ್ನು ಪ್ರತಿಭಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಎಸ್ಮಾ ಬೆದರಿಕೆಯ ನಡುವೆಯೂ ರಸ್ತೆ ಸಾರಿಗೆ ನೌಕರರು ಮತ್ತು ವಿದ್ಯುತ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಹಣಕಾಸು ವಲಯಗಳು ಮುಷ್ಕರಕ್ಕೆ ಸೇರುತ್ತಿವೆ ಎಂದು ಅದು ಹೇಳಿದೆ.

ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ಬ್ಯಾಂಕ್‌ಗಳು, ವಿಮೆ ಮುಂತಾದ ವಲಯಗಳ ಒಕ್ಕೂಟಗಳು ಮುಷ್ಕರ ನಡೆಸಲು ತಮ್ಮ ಕಾರ್ಮಿಕರಿಗೆ ಸೂಚನೆ ನೀಡಿವೆ. ರೈಲ್ವೆ ಮತ್ತು ರಕ್ಷಣಾ ವಲಯದ ಒಕ್ಕೂಟಗಳು ನೂರಾರು ಸ್ಥಳಗಳಲ್ಲಿ ಮುಷ್ಕರವನ್ನು ಬೆಂಬಲಿಸಲು ಮುಂದಾಗಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಮುಷ್ಕರಕ್ಕೆ ಕರೆ ನೀಡಿವೆ.

ಆರ್​ಬಿಎಲ್ ಸೇರಿದಂತೆ ಕೆಲ ಖಾಸಗಿ ಬ್ಯಾಂಕ್​ಗಳ ನೌಕರ ಸಂಘಟನೆಗಳೂ ಈ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಶಾಖೆಗಳ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಆದರೂ ವಹಿವಾಟು ಸುಸೂತ್ರವಾಗಿ ನಡೆಯುವುದು ಕಷ್ಟವಾಗಬಹುದು ಎಂದು ಎಸ್​ಬಿಐ, ಕೆನರಾ ಬ್ಯಾಂಕ್, ಪಿಎನ್​ಬಿ ಸೇರಿದಂತೆ ಹಲವು ಬ್ಯಾಂಕ್​ಗಳು ತಿಳಿಸಿವೆ.

ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು ಕ್ಷೇತ್ರದಲ್ಲಿರುವ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ನ್ಯಾಷನಲ್ ಗ್ರಿಡ್​ ಕುಸಿಯದಂತೆ ಗಮನಹರಿಸಬೇಕು. ಎಲ್ಲ ರಾಜ್ಯಗಳು, ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳ ವಿದ್ಯುತ್ ಗ್ರಿಡ್ ವಿಚಾರದಲ್ಲಿ ಎಚ್ಚರದಿಂದ ಕಾರ್ಯನಿರ್ವಹಸಬೇಕು ಎಂದು ಸೂಚನೆ ನೀಡಿದೆ.

ರಾಷ್ಟ್ರೀಯ ಭದ್ರತೆ, ಪೊಲೀಸ್​ ವ್ಯವಸ್ಥೆ, ಆಸ್ಪತ್ರೆಗಳು, ರೈಲ್ವೆ ಸೇರಿದಂತೆ ಅತ್ಯಗತ್ಯ ಸೇವೆಗಳಿಗೆ ವಿದ್ಯುತ್ ಸರಬರಾಜು ಕಲ್ಪಿಸುವಲ್ಲಿ ಯಾವುದೇ ಲೋಪಗಳು ಆಗಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: Bharat Bandh ಮಾರ್ಚ್ 28-29ರಂದು ಭಾರತ್ ಬಂದ್: ಮುಷ್ಕರಕ್ಕೆ ಯಾವ ಸಂಘಟನೆಗಳ ಬೆಂಬಲ? ಯಾವ ಸೇವೆಯಲ್ಲಿ ವ್ಯತ್ಯಯ?

ಇದನ್ನೂ ಓದಿ: ಹಿಜಾಬ್ ಧರಿಸಿಕೊಂಡು ಬಂದ್ರೆ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಇಲ್ಲ ಎಂಟ್ರಿ; ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ