ಬೆಂಗಳೂರಿನಲ್ಲಿ ಬ್ಯುಸಿನೆಸ್ ಔಟ್​ಪೋಸ್ಟ್ ಸ್ಥಾಪಿಸಲಿರುವ ಜರ್ಮನಿಯ ಬರ್ಲಿನ್; ನ್ಯೂಯಾರ್ಕ್, ಬೀಜಿಂಗ್ ನಂತರ ಸಿಲಿಕಾನ್ ಸಿಟಿಗೆ ಈ ಗೌರವ

Berlin plans to setup business outpost in Bangalore: ಬೆಂಗಳೂರಿನಲ್ಲಿ ಮುಂದಿನ ವರ್ಷದೊಳಗೆ ಬರ್ಲಿನ್​​ನ ಬ್ಯುಸಿನೆಸ್ ಲಿಯಾಯಿಸನ್ ಸೆಂಟರ್ ಸ್ಥಾಪನೆಯಾಗಲಿದೆ. ಸದ್ಯ ನ್ಯೂಯಾರ್ಕ್ ಮತ್ತು ಬೀಜಿಂಗ್ ನಗರಗಳಲ್ಲಿ ಮಾತ್ರ ಬರ್ಲಿನ್ ಈ ಬ್ಯುಸಿನೆಸ್ ಔಟ್​​ಪೋಸ್ಟ್ ಹೊಂದಿದೆ. ಬರ್ಲಿನ್ ಮತ್ತು ಕರ್ನಾಟಕ ಸರ್ಕಾರದ ಮಧ್ಯೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬ್ಯುಸಿನೆಸ್ ಔಟ್​ಪೋಸ್ಟ್ ಸ್ಥಾಪಿಸಲಿರುವ ಜರ್ಮನಿಯ ಬರ್ಲಿನ್; ನ್ಯೂಯಾರ್ಕ್, ಬೀಜಿಂಗ್ ನಂತರ ಸಿಲಿಕಾನ್ ಸಿಟಿಗೆ ಈ ಗೌರವ
ಬರ್ಲಿನ್ ಮೇಯರ್ ಫ್ರಾನ್ಸಿಸ್ಕಾ ಜೊತೆ ಸಚಿವ ಪ್ರಿಯಾಂಕ್ ಖರ್ಗೆ

Updated on: Jul 09, 2025 | 4:08 PM

ನವದೆಹಲಿ, ಜುಲೈ 9: ಸಿಲಿಕಾನ್ ಸಿಟಿ, ಸ್ಟಾರ್ಟಪ್ ನಗರಿ ಮುಂತಾದೆಲ್ಲಾ ಗೌರವ ಪಡೆದಿರುವ ಬೆಂಗಳೂರು ನಗರಕ್ಕೆ ಈಗ ಮತ್ತೊಂದು ಮನ್ನಣೆ ಸಿಕ್ಕಿದೆ. ಜರ್ಮನಿಯ ಬರ್ಲಿನ್ ರಾಜ್ಯವು ಬೆಂಗಳೂರಿನಲ್ಲಿ ಬ್ಯುಸಿನೆಸ್ ಔಟ್​ಪೋಸ್ಟ್​ವೊಂದನ್ನು ಸ್ಥಾಪಿಸಲಿದೆ. ಮುಂದಿನ ವರ್ಷದೊಳಗೆ ಬರ್ಲಿನ್​​ನ ಈ ಬ್ಯುಸಿನೆಸ್ ಸಂಪರ್ಕ ಕೇಂದ್ರವು (Berlin Business Liaison Office) ಬೆಂಗಳೂರಿನಲ್ಲಿ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಇದರೊಂದಿಗೆ ಬೆಂಗಳೂರಿಗೆ ಹೊಸ ಅಂತರ ಖಂಡೀಯ ಸಹಭಾಗಿತ್ವ ಸಿಕ್ಕಂತಾಗಿದೆ.

ನ್ಯೂಯಾರ್ಕ್, ಬೀಜಿಂಗ್ ನಂತರ ಕರ್ನಾಟಕದಲ್ಲಿ ಬರ್ಲಿನ್ ಬ್ಯುಸಿನೆಸ್ ಔಟ್​ಪೋಸ್ಟ್

ಜರ್ಮನಿಯ ರಾಜಧಾನಿ ನಗರಿಯೂ ಆದ ಬರ್ಲಿನ್ ರಾಜ್ಯವು ಅಮೆರಿಕದ ನ್ಯೂಯಾರ್ಕ್, ಹಾಗೂ ಚೀನಾದ ಬೀಜಿಂಗ್​​ನಲ್ಲಿ ಬ್ಯುಸಿನೆಸ್ ಔಟ್​ಪೋಸ್ಟ್ ಹೊಂದಿದೆ. ಬೆಂಗಳೂರಿನದ್ದು ಅದರ ಮೂರನೇ ಜಾಗತಿಕ ಸಂಪರ್ಕ ಕೇಂದ್ರ ಎನಿಸಲಿದೆ.

ಇದನ್ನೂ ಓದಿ
ತಾಮ್ರ, ಫಾರ್ಮಾಗೆ ಟ್ರಂಪ್ ಟ್ಯಾರಿಫ್ ಹಾಕಿದರೆ ಭಾರತಕ್ಕೆಷ್ಟು ನಷ್ಟ?
ವಿರಳ ಭೂಖನಿಜಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ
ಟ್ರಂಪ್ ಟ್ಯಾರಿಫ್​​ನಿಂದ ಬಾಂಗ್ಲಾ ತತ್ತರ; ಭಾರತಕ್ಕೆ ಲಾಭ
ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಭಾರತಕ್ಕೆ 4ನೇ ಸ್ಥಾನ

ಬರ್ಲಿನ್ ರಾಜ್ಯ ಹಾಗೂ ಕರ್ನಾಟಕ ಸರ್ಕಾರಗಳು ಈ ನಿಟ್ಟಿನಲ್ಲಿ ಅಧಿಕೃತ ಘೋಷಣಾ ಪತ್ರಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ವಿಚಾರವನ್ನು ಕರ್ನಾಟಕದ ಐಟಿ, ಬಯೋಟೆಕ್ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ಪೋಸ್ಟ್​​ನಲ್ಲಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಮುಂದುವರಿದ ಟ್ರಂಪ್ ಬೆದರಿಕೆ; ತಾಮ್ರಕ್ಕೆ ಶೇ. 50, ಫಾರ್ಮಾಗೆ ಶೇ. 200; ಬ್ರಿಕ್ಸ್ ರಾಷ್ಟ್ರಗಳಿಗೆ ಹೆಚ್ಚುವರಿ ಶೇ. 10 ಸುಂಕದ ಎಚ್ಚರಿಕೆ

ಈ ಬೆಳವಣಿಗೆಯು ಬೆಂಗಳೂರಿನ ಜಾಗತಿಕ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ.

ಬೆಂಗಳೂರಿನಲ್ಲಿ ಬರ್ಲಿನ್ ಬ್ಯುಸಿನೆಸ್ ಔಟ್​ಪೋಸ್ಟ್​​ನಿಂದ ಏನು ಉಪಯೋಗ?

ಬರ್ಲಿನ್ ಮತ್ತು ಬೆಂಗಳೂರು ನಗರಗಳಲ್ಲಿರುವ ಸ್ಟಾರ್ಟಪ್​​ಗಳ ಮಧ್ಯೆ ಸಹಭಾಗಿತ್ವ ಹೆಚ್ಚಿಸಲು ಈ ವೇದಿಕೆ ಉಪಯುಕ್ತವಾಗಲಿದೆ. ತಂತ್ರಜ್ಞಾನ ಆವಿಷ್ಕಾರ, ಸಂಶೋಧನೆ, ಡೀಪ್ ಟೆಕ್ ಇತ್ಯಾದಿ ಕ್ಷೇತ್ರಗಳಲ್ಲಿ ಎರಡೂ ನಗರಗಳ ಸ್ಟಾರ್ಟಪ್​​ಗಳ ಮಧ್ಯೆ ಇದು ಕೊಂಡಿಯಾಗಿರುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಫಿನ್​ಟೆಕ್, ಲೈಫ್ ಸೈನ್ಸಸ್, ಡಿಜಿಟಲೈಸೇಶನ್​ನಂತಹ ಅಧಿಕ ಬೆಳವಣಿಗೆ ಸಾಧ್ಯತೆಯ ವಲಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತದೆ ಈ ಬ್ಯುಸಿನೆಸ್ ಕೇಂದ್ರ.

ಬರ್ಲಿನ್ ಮೇಯರ್ ಫ್ರಾನ್ಸಿಸ್ಕಾ ಜಿಫ್ಫೀ ನೇತೃತ್ವದಲ್ಲಿ 25 ಮಂದಿ ವ್ಯಾಪಾರ ನಿಯೋಗವೊಂದು ಬೆಂಗಳೂರಿಗೆ ಆಗಮಿಸಿದೆ. ಬರ್ಲಿನ್ ಮತ್ತು ಕರ್ನಾಟಕ ಸರ್ಕಾರದ ಮಧ್ಯೆ ಒಪ್ಪಂದ ಆಗಿರುವುದನ್ನು ಮತ್ತು ಬೆಂಗಳೂರು ನಗರವು ದಕ್ಷಿಣ ಏಷ್ಯಾದಲ್ಲಿ ಜರ್ಮನಿಗೆ ಪ್ರಮುಖ ಪಾಲುದಾರ ನಗರ ಎನಿಸಿರುವುದನ್ನು ಫ್ರಾನ್ಸಿಸ್ಕಾ ತಿಳಿಸಿದ್ದಾರೆ.

ಎರಡು ದಿನ ಬೆಂಗಳೂರಿನಲ್ಲಿ ಇರುವ ಈ ಜರ್ಮನಿ ನಿಯೋಗವು ಇನ್ಫೋಸಿಸ್, ಆರ್​ವಿ ಎಂಜಿನಿಯರಿಂಗ್ ಕಾಲೇಜು, ಐಐಎಂ ಇತ್ಯಾದಿ ಪ್ರಮುಖ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್​​ಗೆ ಭೇಟಿ ನೀಡಲಿದೆ. ನಾಸ್​ಕಾಂ ಇತ್ಯಾದಿ ಕೈಗಾರಿಕಾ ಸಂಘಟನೆಗಳೊಂದಿಗೆ ಮಾತನಾಡಲಿದೆ.

ಇದನ್ನೂ ಓದಿ: ಚೀನಾದ ಗೊಡವೆ ಸಾಕು; ವಿರಳ ಭೂಖನಿಜಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ

ಡೆನ್ಮಾರ್ಕ್ ಜೊತೆ ಕರ್ನಾಟಕದ ಬ್ಯುಸಿನೆಸ್ ಸಂಬಂಧ

ಬೆಂಗಳೂರಿನಲ್ಲಿರುವ ಡೆನ್ಮಾರ್ಕ್ ಕಾನ್ಸುಲ್ ಜನರಲ್ ಎಸ್ಕೆ ಬೋ ರೋಸನ್​ಬರ್ಗ್ ಅವರನ್ನು ಭೇಟಿ ಮಾಡಿದ್ದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಡೆನ್ಮಾರ್ಕ್​ನ ಕೋಪೆನ್​ಹೇಗನ್ ನಗರದಲ್ಲಿ ಟೆಕ್ ಬಿಬಿಕ್ಯೂ ಮತ್ತು ನಾರ್ಡಿಕ್ ಇಂಡಿಯಾ ಸ್ಟಾರ್ಟಪ್ ಸಮಿಟ್ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಸಚಿವರು ತಿಳಿಸಿದ್ದಾರೆ.

ಈ ಶೃಂಗಸಭೆಯಲ್ಲಿ ಕರ್ನಾಟಕವೂ ಪಾಲ್ಗೊಳ್ಳಲಿದೆ. ಬೆಂಗಳೂರಿನಲ್ಲಿ ನಡೆದ ಟೆಕ್ ಸಮಿಟ್​​ನಲ್ಲಿ ಡೆನ್ಮಾರ್ಟ್ ಪಾಲ್ಗೊಂಡಿತ್ತು. ಆ ದೇಶದ ಹಲವು ಪ್ರಮುಖ ಕಂಪನಿಗಳು ಮತ್ತು ಸ್ಟಾರ್ಟಪ್​​ಗಳು ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದ್ದವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ