ಸೆಮಿಕಂಡಕ್ಟರ್ ಉದ್ಯಮಕ್ಕೆ ಭಾರತ್ ಫೋರ್ಜ್ ಎಂಟ್ರಿ; ಮೂರು ವರ್ಷಗಳ ಸತತ ಪ್ರಯತ್ನ, ಶ್ರಮಕ್ಕೆ ಸಿಕ್ಕ ಫಲ
Bharat Forge Enters Chip Manufacturing: ಭಾರತ್ ಫೋರ್ಜ್, ಆಟೋ ಬಿಡಿಭಾಗಗಳಿಂದ ಜಾಗತಿಕ ಸೆಮಿಕಂಡಕ್ಟರ್ ಉದ್ಯಮಕ್ಕೆ ಪ್ರವೇಶಿಸಿದೆ. ಮೂರು ವರ್ಷಗಳ ಪರಿಶ್ರಮದ ನಂತರ, ಕಂಪನಿಯು ವಿಶ್ವದ ಪ್ರಮುಖ ಚಿಪ್ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಭವಿಷ್ಯದ ತಂತ್ರಜ್ಞಾನಕ್ಕೆ ಬೇಕಾದ ನಿಖರ ಯಂತ್ರೋಪಕರಣಗಳ ಬಿಡಿಭಾಗಗಳನ್ನು ಪೂರೈಸಲಿದೆ. ಬಾಬಾ ಕಲ್ಯಾಣಿ ಪ್ರಕಾರ, ಇದು ಕಂಪನಿಯ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲು, ಭಾರತವನ್ನು ಜಾಗತಿಕ ಚಿಪ್ ಹಬ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ನವದೆಹಲಿ, ಜೂನ್ 10: ಭಾರತದ ಪ್ರಮುಖ ವಾಹನ ಬಿಡಿಭಾಗಗಳು (Auto Components), ಯಂತ್ರ ಬಿಡಿಭಾಗಗಳ ಪ್ರಮುಖ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾದ ಭಾರತ್ ಫೋರ್ಜ್ (Bharat Forge), ಈಗ ಜಾಗತಿಕ ಮಟ್ಟದ ಬಿಲಿಯನ್ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ (ಚಿಪ್ ತಯಾರಿಕೆ) ಉದ್ಯಮಕ್ಕೆ ಅಧಿಕೃತವಾಗಿ ಹೆಜ್ಜೆ ಇಟ್ಟಿದೆ. ಭಾರತ್ ಫೋರ್ಜ್ನ ಛೇರ್ಮನ್ ಮತ್ತು ಎಂಡಿಯಾದ ಬಾಬಾ ಕಲ್ಯಾಣಿ (Baba Kalyani) ಈ ಬಗ್ಗೆ ಮಾಹಿತಿ ಹೊರಗೆಡವಿದ್ದು, ವಿಶ್ವದ ಐದು ಪ್ರಮುಖ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳ ಪೈಕಿ ಮೂರು ಕಂಪನಿಗಳ ಜೊತೆ ಭಾರತ್ ಫೋರ್ಜ್ ಒಪ್ಪಂದ ಕುದುರಿಸಿದೆ ಎಂದಿದ್ದಾರೆ.
ಕೇವಲ ಆಟೋಮೊಬೈಲ್ (Auto sector) ಮತ್ತು ರಕ್ಷಣಾ (Defense) ವಲಯಕ್ಕೆ ಸೀಮಿತವಾಗಿದ್ದ ಭಾರತ್ ಫೋರ್ಜ್, ಈಗ ಭವಿಷ್ಯದ ತಂತ್ರಜ್ಞಾನವಾದ ಸೆಮಿಕಂಡಕ್ಟರ್ ವಲಯಕ್ಕೆ ಕಾಲಿಟ್ಟಂತಾಗುತ್ತದೆ. ಸೆಮಿಕಂಡಕ್ಟರ್ ಚಿಪ್‌ಗಳನ್ನು ತಯಾರಿಸಲು ಬಳಸಲಾಗುವ ಬೃಹತ್ ಮತ್ತು ಅತ್ಯಂತ ನಿಖರವಾದ ಯಂತ್ರೋಪಕರಣಗಳಿಗೆ (Lithography machine) ಅಗತ್ಯವಿರುವ ಹೈ-ಟೆಕ್ ಬಿಡಿಭಾಗಗಳನ್ನು ಭಾರತ್ ಫೋರ್ಜ್ ಪೂರೈಸಲಿದೆ. ಈ ಉದ್ಯಮಕ್ಕಾಗಿ ಕಂಪನಿಯು ಅತ್ಯಂತ ಕಟ್ಟುನಿಟ್ಟಾದ ಸ್ವಚ್ಛತೆ ಮತ್ತು ತಂತ್ರಜ್ಞಾನ ಹೊಂದಿರುವ ವಿಶಿಷ್ಟ ಉತ್ಪಾದನಾ ಕೇಂದ್ರಗಳನ್ನು (Cleanrooms & Precision Engineering facilities) ಸ್ಥಾಪಿಸಿದೆ.
ಇದನ್ನೂ ಓದಿ: ಟಿಸಿಎಸ್ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ
ಮೂರು ವರ್ಷಗಳ ಕಠಿಣ ಪರಿಶ್ರಮ
ಬಾಬಾ ಕಲ್ಯಾಣಿ ಅವರ ಪ್ರಕಾರ, ಈ ಉದ್ಯಮಕ್ಕೆ ಪ್ರವೇಶಿಸುವುದು ಸುಲಭವಾಗಿರಲಿಲ್ಲ. ಚಿಪ್ ತಯಾರಿಕಾ ವಲಯದ ಕಟ್ಟುನಿಟ್ಟಾದ ಗುಣಮಟ್ಟದ ನಿಯಮಗಳನ್ನು ಪಾಸ್ ಮಾಡಲು ಮತ್ತು ಈ ಜಾಗತಿಕ ಕಂಪನಿಗಳ ನಂಬಿಕೆ ಗಳಿಸಲು ಭಾರತ್ ಫೋರ್ಜ್ ತಂಡವು ಕಳೆದ 3 ವರ್ಷಗಳಿಂದ ನಿರಂತರವಾಗಿ ಶ್ರಮಿಸಿದೆ.
ಮುಂದಿನ 3 ರಿಂದ 5 ವರ್ಷಗಳಲ್ಲಿ ಭಾರತ್ ಫೋರ್ಜ್ ಸಂಸ್ಥೆಯ ಒಟ್ಟು ಆದಾಯದಲ್ಲಿ ಈ ಸೆಮಿಕಂಡಕ್ಟರ್ ಬಿಡಿಭಾಗಗಳ ಪೂರೈಕೆ ವಲಯವು ಬಹುದೊಡ್ಡ ಪಾಲನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ಭಾರತೀಯ ಕಂಪನಿಯೊಂದು ಜಾಗತಿಕ ಚಿಪ್ ಮಾರುಕಟ್ಟೆಯ ಪೂರೈಕೆ ಸರಪಳಿಯಲ್ಲಿ (Supply Chain) ಪ್ರಮುಖ ಸ್ಥಾನ ಪಡೆದಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.
ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ
“ಇದು ಭಾರತ್ ಫೋರ್ಜ್ ಸಂಸ್ಥೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲು. ಆಟೋಮೊಬೈಲ್ ಬಿಡಿಭಾಗಗಳ ಕಂಪನಿಯಿಂದ ನಾವು ಜಾಗತಿಕ ಹೈ-ಟೆಕ್ ಇಂಜಿನಿಯರಿಂಗ್ ಸಂಸ್ಥೆಯಾಗಿ ರೂಪಾಂತರಗೊಳ್ಳುತ್ತಿದ್ದೇವೆ. ಸೆಮಿಕಂಡಕ್ಟರ್ ಉದ್ಯಮವು ಅತ್ಯಂತ ನಿಖರತೆಯನ್ನು ಬಯಸುತ್ತದೆ ಮತ್ತು ನಮ್ಮ ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ಸಿಕ್ಕ ಜಾಗತಿಕ ಮನ್ನಣೆ ಇದಾಗಿದೆ” ಎಂದು ಭಾರತ್ ಫೋರ್ಜ್ನ ಚೇರ್ಮನ್ ಬಾಬಾ ಕಲ್ಯಾಣಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




