ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ

Bharat Innovates 2026: ಪ್ರಧಾನಿ ಮೋದಿ 'ಭಾರತ್ ಇನ್ನೋವೇಟ್ಸ್ 2026' ಸಮಾವೇಶದಲ್ಲಿ ಭಾರತ-ಫ್ರಾನ್ಸ್ ತಾಂತ್ರಿಕ ಪಾಲುದಾರಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಜಾಗತಿಕ ಸವಾಲುಗಳಾದ AI, ಹವಾಮಾನ ವೈಪರೀತ್ಯ, ಆರೋಗ್ಯ ರಕ್ಷಣೆಗೆ ನಾವೀನ್ಯತೆಯ ಮೂಲಕ ಪರಿಹಾರ ಹುಡುಕುವಲ್ಲಿ ಉಭಯ ದೇಶಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತ ಈಗ ಜಾಗತಿಕ ನಿರ್ಧಾರಗಳಲ್ಲಿ ಪಾಲುದಾರನಾಗಿದ್ದು, 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್' ಮಂತ್ರದೊಂದಿಗೆ ಜಗತ್ತಿಗೆ ತಂತ್ರಜ್ಞಾನ ಒದಗಿಸುತ್ತಿದೆ.

ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ
ನೀಸ್ ನಗರದಲ್ಲಿ ಮೋದಿ ಮತ್ತು ಮ್ಯಾಕ್ರಾನ್
Image Credit source: PTI

Updated on: Jun 14, 2026 | 5:43 PM

ನೀಸ್ (ಫ್ರಾನ್ಸ್), ಜೂನ್ 14: ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಮತ್ತು ಫ್ರಾನ್ಸ್ ದೇಶಗಳ ತಾಂತ್ರಿಕ ಪಾಲುದಾರಿಕೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ. ಫ್ರಾನ್ಸ್‌ನ ನೀಸ್ ನಗರದಲ್ಲಿ (Nice city) ಜಂಟಿಯಾಗಿ ಹಮ್ಮಿಕೊಳ್ಳಲಾಗಿರುವ ‘ಭಾರತ್ ಇನ್ನೋವೇಟ್ಸ್ 2026’ (Bharat Innovates 2026) ಜಾಗತಿಕ ಡೀಪ್-ಟೆಕ್ (Deep Tech) ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಜಂಟಿಯಾಗಿ ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಉಭಯ ದೇಶಗಳ ಸ್ನೇಹವು ಕೇವಲ ರಾಜತಾಂತ್ರಿಕತೆಗೆ ಸೀಮಿತವಾಗಿರದೆ, ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿದರು.

ಮಾನವಕುಲದ ಸವಾಲುಗಳಿಗೆ ಪರಿಹಾರ: ಮೋದಿ

“ಇಂದು ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯ, ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯ (AI) ಸುರಕ್ಷಿತ ಬಳಕೆಯಂತಹ ಬೃಹತ್ ಸವಾಲುಗಳಿಗೆ ಭಾರತ ಮತ್ತು ಫ್ರಾನ್ಸ್ ಒಟ್ಟಾಗಿ ನಾವೀನ್ಯತೆಯ (Innovation) ಮೂಲಕ ಉತ್ತರಗಳನ್ನು ಹುಡುಕುತ್ತಿವೆ,” ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಮೋದಿ 5 ದಿನಗಳ ಐರೋಪ್ಯ ಪ್ರವಾಸದಲ್ಲಿ ‘ಭಾರತ್ ಇನ್ನೋವೇಟ್ಸ್’; ಹೂಡಿಕೆದಾರರೊಂದಿಗೆ ಪ್ರಧಾನಿ ಸಂವಾದ

ಹಿಂದಿನ ಕೈಗಾರಿಕಾ ಕ್ರಾಂತಿಗಳಲ್ಲಿ ಭಾರತ ಮತ್ತು ಅಭಿವೃದ್ಧಿಶೀಲ (Global South) ದೇಶಗಳು ಕೇವಲ ಅನುಯಾಯಿಗಳಾಗಿದ್ದವು. ಆದರೆ ಇಂದಿನ ಎಐ ಮತ್ತು ಡೀಪ್-ಟೆಕ್ ಯುಗದಲ್ಲಿ ಭಾರತವು ಕೇವಲ ವೀಕ್ಷಕನಲ್ಲ, ಬದಲಿಗೆ ಜಾಗತಿಕ ನಿರ್ಧಾರಗಳನ್ನು ರೂಪಿಸುವ ಪ್ರಮುಖ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ಅವರು ಒತ್ತಿ ಹೇಳಿದರು.

ಸ್ಟಾರ್ಟ್‌ಅಪ್ ಶಕ್ತಿ: ಭಾರತದ ಯುವ ಪೀಳಿಗೆಯು ಬಾಹ್ಯಾಕಾಶ (Space Tech), ಸೆಮಿಕಂಡಕ್ಟರ್ ಮತ್ತು ಗ್ರೀನ್ ಹೈಡ್ರೋಜನ್ ವಲಯಗಳಲ್ಲಿ ಅದ್ಭುತ ಕ್ರಾಂತಿ ಮಾಡುತ್ತಿದೆ. ಭಾರತದಲ್ಲಿ ಸೃಷ್ಟಿಯಾಗುತ್ತಿರುವ ತಂತ್ರಜ್ಞಾನಗಳು ಕೇವಲ ದೇಶಕ್ಕಷ್ಟೇ ಅಲ್ಲ, ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್’ (ಭಾರತದಲ್ಲಿ ನಿರ್ಮಿಸಿ, ಜಗತ್ತಿಗಾಗಿ ನೀಡಿ) ಎಂಬ ಮಂತ್ರದೊಂದಿಗೆ ಜಗತ್ತಿಗೆ ಉಪಯುಕ್ತವಾಗಲಿವೆ ಎಂದರು.

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಶ್ಲಾಘನೆ

ಇದೇ ಸಂದರ್ಭದಲ್ಲಿ ಮಾತನಾಡಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ತಾಂತ್ರಿಕ ಬೆಳವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ತಂತ್ರಜ್ಞಾನ ವಲಯದಲ್ಲಿ ಭಾರತದೊಂದಿಗೆ ಕೈಜೋಡಿಸಲು ಫ್ರಾನ್ಸ್ ಯುವ ಉದ್ಯಮಿಗಳು ಉತ್ಸುಕರಾಗಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ?

ಈ ಮೂರು ದಿನಗಳ ಜಾಗತಿಕ ಸಮಾವೇಶದಲ್ಲಿ ಭಾರತದ 120 ಕ್ಕೂ ಹೆಚ್ಚು ಅತ್ಯಾಧುನಿಕ ದೀಪ್-ಟೆಕ್ ಸ್ಟಾರ್ಟ್‌ಅಪ್‌ಗಳು ಹಾಗೂ ಐಐಟಿಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದು, ಜಾಗತಿಕ ಹೂಡಿಕೆದಾರರ ಗಮನ ಸೆಳೆಯುತ್ತಿವೆ. 2047ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಸಮಾವೇಶವು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us