ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಭಾರತೀಯ ಮಜ್ದೂರ್ ಸಂಘ ಆಗ್ರಹ; ಆಗಸ್ಟ್ 17ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ

Bharatiya Mazdoor Sangh calls for nationwide demonstrations on August 17th: ಆರೆಸ್ಸೆಸ್​ನ ಕಾರ್ಮಿಕ ವಿಭಾಗವಾದ ಭಾರತೀಯ ಮಜ್ದೂರ್ ಸಂಘವು ಆಗಸ್ಟ್ 17ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಈ ಪ್ರತಿಭಟನೆ ಆಯೋಜಿಸಲಾಗಿದೆ. ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ಏರಿಸುವುದು, ಸ್ಕೀಮ್ ವರ್ಕ್ಸ್​ಗೆ ಗೌರವಧನ ಹೆಚ್ಚಿಸುವುದು, ಹಳೆಯ ಪಿಂಚಣಿ ಸ್ಕೀಮ್ ಮರಳಿ ತರುವುದು ಇತ್ಯಾದಿ ವಿವಿಧ ಬೇಡಿಕೆಗಳನ್ನು ಮುಂದಿಡಲಾಗಿದೆ.

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಭಾರತೀಯ ಮಜ್ದೂರ್ ಸಂಘ ಆಗ್ರಹ; ಆಗಸ್ಟ್ 17ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ
ಭಾರತೀಯ ಮಜ್ದೂರ್ ಸಂಘದ ವತಿಯಿಂದ ಎರಡು ವರ್ಷದ ಹಿಂದೆ ನಡೆದ ಕಾರ್ಮಿಕರ ಪ್ರತಿಭಟನೆಯ ಸಾಂದರ್ಭಿಕ ಚಿತ್ರ
Image Credit source: PTI

Updated on: Aug 13, 2026 | 4:56 PM

ನವದೆಹಲಿ, ಆಗಸ್ಟ್ 13: ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ದೇಶಾದ್ಯಂತ ಆಗಸ್ಟ್ 17, ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಲು ಆರೆಸ್ಸೆಸ್​ನ ಕಾರ್ಮಿಕ ವಿಭಾಗವಾದ ಭಾರತೀಯ ಮಜ್ದೂರ್ ಸಂಘ (BMS) ಕರೆ ನೀಡಿದೆ. ಬಿಎಂಎಸ್ ಕೇಂದ್ರ ಕಾರ್ಯಕಾರಿ ಸಮಿತಿ (KKS) ನಿರ್ಧಾರದಂತೆ, ದೇಶದ 28 ರಾಜ್ಯ ಘಟಕಗಳು ಹಾಗೂ 42 ಕೈಗಾರಿಕಾ ಫೆಡರೇಶನ್‌ಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಮತ್ತು ರ‍್ಯಾಲಿಗಳನ್ನು ಆಯೋಜಿಸಲಿವೆ. ಈ ಮೂಲಕ ಪ್ರಧಾನಮಂತ್ರಿ, ಹಣಕಾಸು ಸಚಿವರು ಹಾಗೂ ಕಾರ್ಮಿಕ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಬಿಎಂಎಸ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಮಜ್ದೂರ್ ಸಂಘ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು

  1. ಪಿಂಚಣಿ ಹಾಗೂ ಇಎಸ್‍ಐ ಸೌಲಭ್ಯ: EPS-95 ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು ₹7,500 ಕ್ಕೆ ಏರಿಕೆ ಮಾಡಬೇಕು ಮತ್ತು ಆಯುಷ್ಮಾನ್ ಭಾರತ್ ಯೋಜನೆಗೆ ಜೋಡಿಸಬೇಕು. ESI ಗರಿಷ್ಠ ವೇತನ ಮಿತಿಯನ್ನು ₹21,000 ರಿಂದ ₹42,000 ಕ್ಕೆ ಹಾಗೂ EPF ಮಿತಿಯನ್ನು ₹15,000 ರಿಂದ ₹30,000 ಕ್ಕೆ ಹೆಚ್ಚಿಸಬೇಕು.
  2. ವೇತನ ಮತ್ತು ಗ್ರಾಚ್ಯುಟಿ: ಗ್ರಾಚ್ಯುಟಿ ಲೆಕ್ಕಾಚಾರವನ್ನು 15 ದಿನಗಳ ವೇತನದಿಂದ 30 ದಿನಗಳಿಗೆ ಹೆಚ್ಚಿಸಬೇಕು. ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿಪಡಿಸಬೇಕು.
  3. ಸ್ಕೀಮ್ ವರ್ಕರ್ಸ್‌ಗೆ ಗೌರವಧನ: ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ನೌಕರರ ಮಾಸಿಕ ಗೌರವಧನವನ್ನು ಹೆಚ್ಚಿಸಬೇಕು.
  4. ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ: ಹಳೆಯ ಪಿಂಚಣಿ ಯೋಜನೆಯನ್ನು (OPS) ತಕ್ಷಣವೇ ಮರುಸ್ಥಾಪಿಸಬೇಕು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
  5. ಬ್ಯಾಂಕಿಂಗ್ ವ್ಯವಸ್ಥೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ದಿನಗಳ ಕೆಲಸದ ಅವಧಿಯನ್ನು ಜಾರಿಗೊಳಿಸಬೇಕು.
  6. ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ವೇತನ ವಂಚನೆ ಮಾಡುವ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ: ಸರ್ಕಾರದ ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ಕಾರ್ಡ್ ಅಗತ್ಯ, ಹೀಗೆ ಅರ್ಜಿ ಸಲ್ಲಿಸಿ

ಕಾರ್ಮಿಕ ಕಾಯ್ದೆಗಳಿಗೆ ವಿರೋಧ

ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಸಂಹಿತೆಗಳಲ್ಲಿರುವ (IR Code ಮತ್ತು OSH&WC Code) ಕಾರ್ಮಿಕ ವಿರೋಧಿ ಅಂಶಗಳನ್ನು ಬಿಎಂಎಸ್ ತೀವ್ರವಾಗಿ ವಿರೋಧಿಸಿದೆ. ಕೇಂದ್ರ ಸರ್ಕಾರವು ತಕ್ಷಣವೇ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಈ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರಬೇಕು ಹಾಗೂ ಶೀಘ್ರವೇ ‘ಭಾರತೀಯ ಕಾರ್ಮಿಕ ಸಮ್ಮೇಳನ’ (Indian Labour Conference) ಕರೆಯಬೇಕು ಎಂದು ಆಗ್ರಹಿಸಿದೆ.

ದೇಶದಲ್ಲಿ 1 ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿರುವ ಸ್ಕೀಮ್ ವರ್ಕರ್ಸ್‌ಗಳನ್ನು ಕಾರ್ಮಿಕರೆಂದು ಗುರುತಿಸಿ, ಅವರಿಗಾಗಿ ಪ್ರತ್ಯೇಕ ಸಮಗ್ರ ನೀತಿಯನ್ನು ರೂಪಿಸುವಂತೆ ಸರ್ಕಾರವನ್ನು ಬಿಎಂಎಸ್ ಒತ್ತಾಯಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us