ಸಂಬಳ ₹15,000 ಇದ್ದರೂ ಸಾಲವಿಲ್ಲದೆ ಬದುಕಬಹುದೇ? ಹೌದು ಎನ್ನುತ್ತದೆ ಈ ಸರಳ ಬಜೆಟ್ ಸೂತ್ರ

Budgeting on ₹15,000 Salary: ಇಂದಿನ ದುಬಾರಿ ಕಾಲದಲ್ಲಿ ₹15,000 ಸಂಬಳದಲ್ಲಿ ಬದುಕು ನಡೆಸುವುದು ದೊಡ್ಡ ಸವಾಲು. 50-30-20 ಬಜೆಟ್ ಸೂತ್ರ ಬಳಸಿ, ಅಗತ್ಯತೆಗಳು, ವೈಯಕ್ತಿಕ ಇಚ್ಛೆಗಳು ಮತ್ತು ಉಳಿತಾಯಕ್ಕೆ ಹಣವನ್ನು ಹಂಚಿಕೆ ಮಾಡುವ ಮೂಲಕ ಸಾಲಮುಕ್ತ ಜೀವನ ನಡೆಸಲು ಸರಿಯಾದ ಹಣಕಾಸು ಯೋಜನೆ ಮತ್ತು ಶಿಸ್ತಿನ ಮಹತ್ವ ತಿಳಿದಿರಬೇಕು. ಸಾಲ ತಪ್ಪಿಸಲು, ವೆಚ್ಚಗಳನ್ನು ಪತ್ತೆಹಚ್ಚಲು ಮತ್ತು ಸಣ್ಣ ಹೂಡಿಕೆಗಳನ್ನು ಪ್ರಾರಂಭಿಸಲು ಪ್ರಾಯೋಗಿಕ ಸಲಹೆಗಳು ಇಲ್ಲಿವೆ.

ಸಂಬಳ ₹15,000 ಇದ್ದರೂ ಸಾಲವಿಲ್ಲದೆ ಬದುಕಬಹುದೇ? ಹೌದು ಎನ್ನುತ್ತದೆ ಈ ಸರಳ ಬಜೆಟ್ ಸೂತ್ರ
ಹಣ
Image Credit source: Shutterstock

Updated on: Jun 15, 2026 | 4:18 PM

ಇಂದಿನ ದುಬಾರಿ ಕಾಲದಲ್ಲಿ ₹15,000 ಸಂಬಳದಲ್ಲಿ ಬದುಕು ನಡೆಸುವುದು ದೊಡ್ಡ ಸವಾಲಿನ ಕೆಲಸ. ಅದರಲ್ಲೂ ಬೆಂಗಳೂರಿನಂಥ ದುಬಾರಿ ಜೀವನ ವೆಚ್ಚದ (lifestyle expense) ನಗರದಲ್ಲಿ ಲಕ್ಷಾಂತರ ಸಂಬಳ ತೆಗೆಯುವ ಟೆಕ್ಕಿಗಳೇ ಹಣ ಉಳಿಸಲಾಗದೆ ಪರದಾಡುತ್ತಿರುತ್ತಾರೆ. ಅಂಥದ್ದರಲ್ಲಿ ಬಹಳ ಅಲ್ಪ ಸಂಬಳದಲ್ಲಿ ಬದುಕು ನಡೆಸುವುದೆಂದರೆ ಖಂಡಿತ ಸುಮ್ಮನೆ ಅಲ್ಲ. ಆದರೆ, ಸರಿಯಾದ ಹಣಕಾಸಿನ ಯೋಜನೆ ಮತ್ತು ಕಟ್ಟುನಿಟ್ಟಾದ ಶಿಸ್ತು ಇದ್ದರೆ ಸಾಲದ ಸುಳಿಗೆ ಸಿಲುಕದೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ. ಅದಕ್ಕಾಗಿ ಹಣಕಾಸು ತಜ್ಞರು 50-30-20, 60-30-10 ಇತ್ಯಾದಿ ಬಜೆಟ್ ಸೂತ್ರಗಳನ್ನು ಬಳಸಲು ಸಲಹೆ ನೀಡುತ್ತಾರೆ.

ನಿಮ್ಮ ₹15,000 ಸಂಬಳವನ್ನು 50-30-20 ಸೂತ್ರದ ಪ್ರಕಾರ ಹೇಗೆ ವಿಂಗಡಿಸಬಹುದು ಎನ್ನುವ ವಿವರ ಇಲ್ಲಿದೆ. ಶೇ. 50 ಅಗತ್ಯ ವೆಚ್ಚಗಳಿಗೆ ನಿಗದಿ ಮಾಡಿಕೊಳ್ಳಿ. ಶೇ. 30 ಸಂಬಳವನ್ನು ವೈಯಕ್ತಿಕ ಅಭೀಷ್ಟೆಗಳಿಗೆ ಬಳಸಿ. ಶೇ. 20ರಷ್ಟನ್ನು ಕಟ್ಟುನಿಟ್ಟಾಗಿ ಉಳಿತಾಯ ಮಾಡಿ ಹೂಡಿಕೆಗೆ ಬಳಸಿ. ಆಗ ಹಣಕಾಸು ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.

ಅಗತ್ಯಗಳ ವೆಚ್ಚಗಳೆಂದರೆ ಯಾವುವು?

ಜೀವನ ನಿರ್ವಹಣೆಗೆ ಬಹಳ ಅವಶ್ಯಕತೆ ಇರುವ ವೆಚ್ಚಗಳಿವು. ಮನೆ ಬಾಡಿಗೆ, ದಿನಸಿ ಸಾಮಾನು, ವಿದ್ಯುತ್ ಮತ್ತು ನೀರಿನ ಬಿಲ್, ಮೊಬೈಲ್ ರೀಚಾರ್ಜ್ ಮತ್ತು ದಿನನಿತ್ಯದ ಪ್ರಯಾಣದ ವೆಚ್ಚ ಇತ್ಯಾದಿ ಇವೆ.

ಗಮನಿಸಬೇಕಾದ ಸಂಗತಿ ಎಂದರೆ, ಮನೆ ಬಾಡಿಗೆ, ಸಾರಿಗೆ ಇವೆಲ್ಲವುಗಳ ಬಗ್ಗೆ ನಿಗಾ ಇರಬೇಕು. ಬ್ಯಾಚಲರ್ ಆಗಿದ್ದರೆ ಸ್ನೇಹಿತರ ಜೊತೆ ಸೇರಿ ಮನೆ ಮಾಡಿಕೊಂಡರೆ ಬಾಡಿಗೆ ಉಳಿಸಬಹುದು. ಹೋಟೆಲ್​ನಲ್ಲಿ ಊಟಕ್ಕೆ ವೆಚ್ಚ ಕಡಿಮೆ ಮಾಡಬಹುದು. ಬಸ್ಸು, ರೈಲು ಇತ್ಯಾದಿ ಸಾರ್ವಜನಿಕ ಸಾರಿಗೆ ಬಳಸುವುದು ಇತ್ಯಾದಿ ಮೂಲಕ ಅಗತ್ಯ ವೆಚ್ಚಗಳನ್ನೂ ಕಡಿಮೆ ಮಾಡಬಹುದು.

ಇದನ್ನೂ ಓದಿ: ಹಳೆಯ ಕಾರಿಗೆ ಇ20 ಪೆಟ್ರೋಲ್ ಹಾಕಿಸಿದ್ರೆ ಇನ್ಷೂರೆನ್ಸ್ ಸಿಗಲ್ಲವಾ? ವಿಮಾ ಕಂಪನಿ ಹೇಳಿದ್ದಿದು

ವೈಯಕ್ತಿಕ ಇಚ್ಛೆಗಳಿಗೆ ಒಂದಷ್ಟು ಮಿತಿ ಹಾಕಿ

ಜೀವನ ಕೇವಲ ಅಗತ್ಯಗಳನ್ನು ಪೂರೈಸುವುದಷ್ಟೇ ಅಲ್ಲ, ಸ್ವಲ್ಪ ಮನರಂಜನೆಯೂ ಬೇಕು. ಅದಕ್ಕಾಗಿ ಶೇ 30 ರಷ್ಟು ಹಣವನ್ನು ಬಳಸಬಹುದು. ಒಮ್ಮೊಮ್ಮೆ ಹೊರಗಡೆ ಊಟ ಮಾಡುವುದು, ಸಿನಿಮಾ ನೋಡುವುದು, ಬಟ್ಟೆ ಖರೀದಿ ಅಥವಾ ಒಟ್ಟಾರೆ ಲೈಫ್‌ಸ್ಟೈಲ್ ವೆಚ್ಚಗಳು.

ಇದು ನಿಮ್ಮ ಇಷ್ಟದ ವೆಚ್ಚವಾಗಿದ್ದರೂ, ತಿಂಗಳ ಕೊನೆಯಲ್ಲಿ ಹಣದ ಕೊರತೆಯಾದರೆ ಈ ವಿಭಾಗದ ವೆಚ್ಚವನ್ನು ಕಡಿತಗೊಳಿಸಿ ಅಗತ್ಯತೆಗಳಿಗೆ ಬಳಸಬೇಕಾಗುತ್ತದೆ.

ಶೇ. 20 ಉಳಿತಾಯ ಮತ್ತು ಹೂಡಿಕೆ

ಸಾಲ ಮುಕ್ತವಾಗಿರಲು ಅತ್ಯಂತ ಪ್ರಮುಖವಾದ ಹಂತವೇ ಈ ಉಳಿತಾಯ. ನಿಮ್ಮ ತಿಂಗಳ ಆದಾಯ 15,000 ರೂದ್ದರೆ ತಿಂಗಳಿಗೆ ಕನಿಷ್ಠ ₹3,000 ಅನ್ನು ಭವಿಷ್ಯಕ್ಕಾಗಿ ಕಾಯ್ದಿರಿಸಬೇಕು. ಪ್ರತಿ ತಿಂಗಳು ಆರ್‌ಡಿ (Recurring Deposit) ಅಥವಾ ಸಣ್ಣ ಮೊತ್ತದ ಎಸ್‌ಐಪಿ (SIP) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಈ ಉಳಿತಾಯದ ಒಂದು ಭಾಗವನ್ನು ತುರ್ತು ವೈದ್ಯಕೀಯ ವೆಚ್ಚಗಳು ಅಥವಾ ಹಠಾತ್ ಖರ್ಚುಗಳಿಗಾಗಿ ಬ್ಯಾಂಕ್ ಖಾತೆಯಲ್ಲೇ ಇಡಬೇಕು. ಇದು ಎಮರ್ಜೆನ್ಸಿ ಫಂಡ್ ಆಗಿರುತ್ತದೆ. ಇದು ನಿಮ್ಮನ್ನು ಸಾಲ ಮಾಡುವುದರಿಂದ ರಕ್ಷಿಸುತ್ತದೆ. ನಿಮಗೆ ತುರ್ತು ಅಗತ್ಯ ಬಿದ್ದಾಗ ಈ ಹಣ ಬಳಸಿ, ನಂತರದ ತಿಂಗಳುಗಳಲ್ಲಿ ಅದನ್ನು ಮತ್ತೆ ಕೂಡಿಡುವ ಜವಾಬ್ದಾರಿ ಇರಬೇಕು.

ಸಾಲ ಮುಕ್ತವಾಗಿರಲು ಟಿಪ್ಸ್‌

  • ಕ್ರೆಡಿಟ್ ಕಾರ್ಡ್ ಬೇಡ: ಕ್ರೆಡಿಟ್ ಕಾರ್ಡ್‌ಗಳು ಮತ್ತು ‘Buy Now, Pay Later’ ಆಫರ್‌ಗಳಿಂದ ಸಂಪೂರ್ಣವಾಗಿ ದೂರವಿರಿ. ಇವು ಸಣ್ಣ ಸಂಬಳದವರನ್ನು ಸುಲಭವಾಗಿ ಸಾಲದ ಸುಳಿಗೆ ಸಿಲುಕಿಸುತ್ತವೆ.
  • ಬಜೆಟ್ ಟ್ರ್ಯಾಕ್ ಮಾಡಿ: ಮೊಬೈಲ್ ಆಪ್‌ಗಳು ಅಥವಾ ಸರಳವಾದ ಡೈರಿಯಲ್ಲಿ ನಿಮ್ಮ ದಿನನಿತ್ಯದ ಪ್ರತಿಯೊಂದು ರೂಪಾಯಿಯ ಖರ್ಚನ್ನು ಬರೆದಿಡುವ ಅಭ್ಯಾಸ ಮಾಡಿಕೊಳ್ಳಿ.
  • ಸಣ್ಣದಾಗಿ ಹೂಡಿಕೆ ಆರಂಭಿಸಿ: ₹500 ಅಥವಾ ₹1000 ದಿಂದಲೂ ಇಂದಿನ ದಿನಗಳಲ್ಲಿ ಮ್ಯೂಚುವಲ್ ಫಂಡ್ ಎಸ್‌ಐಪಿ ಆರಂಭಿಸಬಹುದು. ದೀರ್ಘಾವಧಿಯಲ್ಲಿ ಇದು ದೊಡ್ಡ ಮೊತ್ತವಾಗಿ ಬೆಳೆಯುತ್ತದೆ.
  • ಇನ್ಷೂರೆನ್ಸ್ ಇರಲಿ: ಒಂದು ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸುವುದು ನಿಮ್ಮ ಸೇವಿಂಗ್ಸ್​ಗೆ ವಿಮೆ ಮಾಡಿಸಿದಂತೆ. ಪೂರ್ತಿ ಆರೋಗ್ಯವಂತರಾಗಿದ್ದೀರಿ ಎಂದಾದರೂ ಹೆಲ್ತ್ ಇನ್ಷೂರೆನ್ಸ್ ಮಾಡಿಸಿ. ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ ಕಾಯಿಲೆ ಬರಬಹುದು ಜಾಗ್ರತೆ. ಹೆಲ್ತ್ ಇನ್ಷೂರೆನ್ಸ್ ಇದ್ದರೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ನಿಶ್ಚಿಂತೆ ಇಲ್ಲದೆ ಚಿಕಿತ್ಸೆ ಪಡೆಯಬಹುದು.

ಇದನ್ನೂ ಓದಿ: ಇರಾನ್-ಅಮೆರಿಕ ಒಪ್ಪಂದದ ಎಫೆಕ್ಟ್; ತೈಲ ಬೆಲೆ ಇಳಿಕೆ; ರೂಪಾಯಿಗೆ ಜೀವ; ಚಿನ್ನ, ಷೇರುಗಳ ಜಿಗಿತ

ಕಡಿಮೆ ಸಂಬಳವಿದ್ದಾಗ ಹಣದ ಮೌಲ್ಯ ಅರಿತು, ಇಷ್ಟಗಳಿಗಿಂತ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಿದರೆ ಯಾವುದೇ ಸಾಲವಿಲ್ಲದೆ ನಿಶ್ಚಿಂತೆಯಾಗಿ ಬದುಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Mon, 15 June 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us