ತೈಲದಿಂದ ಟೆಲಿಕಾಂ ತನಕ ಉದ್ಯಮದ ಸಮೂಹ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ದೇಶದ 500 ಅತ್ಯಮೂಲ್ಯ ಕಂಪೆನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದನ್ನು ಸಂಶೋಧನಾ ಸಂಸ್ಥೆ ಹ್ಯುರನ್ ಇಂಡಿಯಾ ಡಿಸೆಂಬರ್ 9ರಂದು ಆಕ್ಸಿಸ್ ಬ್ಯಾಂಕ್‌ನ ಖಾಸಗಿ ಬ್ಯಾಂಕಿಂಗ್ ವ್ಯವಹಾರ ಬರ್ಗಂಡಿ ಪ್ರೈವೇಟ್‌ನ ಸಹಯೋಗದಲ್ಲಿ ಬಿಡುಗಡೆ ಮಾಡಿದೆ. 16.65 ಲಕ್ಷ ಕೋಟಿ ಮೌಲ್ಯದ ರಿಲಯನ್ಸ್ ಇಂಡಸ್ಟ್ರೀಸ್ ‘ಬರ್ಗಂಡಿ ಪ್ರೈವೇಟ್ ಹ್ಯುರನ್ ಇಂಡಿಯಾ 500’ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಮತ್ತು HDFC ಬ್ಯಾಂಕ್ ಕ್ರಮವಾಗಿ 13.09 ಲಕ್ಷ ಕೋಟಿ ರೂಪಾಯಿ ಮತ್ತು 9.05 ಲಕ್ಷ ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿವೆ. ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
ಇನ್ಫೋಸಿಸ್ ನಾಲ್ಕನೇ ಸ್ಥಾನ, ಐಸಿಐಸಿಐ ಬ್ಯಾಂಕ್ ಐದನೇ, ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಆರನೇ ಮತ್ತು ಬಜಾಜ್ ಫೈನಾನ್ಸ್ ಏಳನೇ ಸ್ಥಾನದಲ್ಲಿವೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಎಂಟನೇ ಸ್ಥಾನದಲ್ಲಿದ್ದರೆ, ಭಾರ್ತಿ ಏರ್‌ಟೆಲ್ ಒಂಬತ್ತನೇ ಮತ್ತು ವಿಪ್ರೋ ಹತ್ತನೇ ಸ್ಥಾನದಲ್ಲಿದೆ. ಈ ಟಾಪ್ 10 ಕಂಪೆನಿಗಳ ಒಟ್ಟು ಮೌಲ್ಯವು ಶೇ 47ರಷ್ಟು ಬೆಳೆದು, ರೂ. 72.7 ಲಕ್ಷ ಕೋಟಿಗೆ (ಯುಎಸ್ಡಿ 970 ಬಿಲಿಯನ್) ತಲುಪಿದ್ದು, ಇದು ಭಾರತದ ಜಿಡಿಪಿಯ ಶೇ 37ಕ್ಕೆ ಸಮನಾಗಿದೆ ಮತ್ತು ‘2021 ಬರ್ಗಂಡಿ ಪ್ರೈವೇಟ್ ಹ್ಯುರನ್ ಇಂಡಿಯಾ 500’ ಪಟ್ಟಿಯ ಒಟ್ಟು ಮೌಲ್ಯದ ಶೇ 32ಕ್ಕೆ ಸಮನಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದಹಾಗೆ, ಟಾಪ್ 10 ಕಂಪೆನಿಗಳಲ್ಲಿ ಆರು ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿವೆ. “ಭಾರತದ ಅತ್ಯಮೂಲ್ಯ ಕಂಪೆನಿಗಳು ಹೆಚ್ಚು ಮೌಲ್ಯಯುತ ಆಗುತ್ತಿವೆ. ಕಳೆದ ದಶಕದಲ್ಲಿ 10 ಅತ್ಯಮೂಲ್ಯ ಕಂಪೆನಿಗಳ ಒಟ್ಟು ಮೌಲ್ಯವು ಐದು ಪಟ್ಟು ಹೆಚ್ಚಾಗಿದೆ,” ಎಂದು ಹ್ಯುರನ್ ಇಂಡಿಯಾ ಎಂ.ಡಿ. ಮತ್ತು ಮುಖ್ಯ ಸಂಶೋಧಕ ಅನಾಸ್ ರೆಹಮಾನ್ ಜುನೈದ್ ಹೇಳಿದ್ದಾರೆ. 500 ಅತ್ಯಮೂಲ್ಯ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾದ ಕಂಪೆನಿಗಳು ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಸ್ಥಾನ ಪಡೆದಿವೆ. ಪಟ್ಟಿ ಮಾಡಲಾದ ಕಂಪೆನಿಗಳಿಗೆ ಮಾರುಕಟ್ಟೆ ಬಂಡವಾಳ ಮತ್ತು ಪಟ್ಟಿ ಮಾಡದ ಕಂಪೆನಿಗಳಿಗೆ ಮೌಲ್ಯಮಾಪನ ಎಂದು ವ್ಯಾಖ್ಯಾನಿಸಲಾಗಿದೆ. ಈ ಪಟ್ಟಿಗೆ ಬರುವ ಕಟ್-ಆಫ್ ದಿನಾಂಕ ಅಕ್ಟೋಬರ್ 30, 2021 ಆಗಿತ್ತು.
ಈ ಪಟ್ಟಿಯು ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪೆನಿಗಳನ್ನು ಮಾತ್ರ ಉಲ್ಲೇಖಿಸುತ್ತದೆ; ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಮತ್ತು ವಿದೇಶಿ ಕಂಪೆನಿಗಳ ಅಂಗಸಂಸ್ಥೆಗಳನ್ನು ಸೇರಿಸಿಲ್ಲ. ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಂಪೆನಿಗಳು ಕನಿಷ್ಠ 5,600 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿರಬೇಕು. ಇದು 750 ಮಿಲಿಯನ್ ಅಮೆರಿಕನ್ ಡಾಲರ್ಗೆ ಸಮನಾಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಸರಾಸರಿಯಾಗಿ ಈ ಪಟ್ಟಿಯಲ್ಲಿನ ಕಂಪೆನಿಗಳು 1982ರಲ್ಲಿ ಸ್ಥಾಪಿಸಲ್ಪಟ್ಟವು ಮತ್ತು ಒಟ್ಟು ರೂ. 228 ಲಕ್ಷ ಕೋಟಿ (USD 3 ಟ್ರಿಲಿಯನ್) ಮೌಲ್ಯದ್ದಾಗಿದೆ.
ವರ್ಷದಿಂದ ವರ್ಷಕ್ಕೆ ಶೇ 68ರಷ್ಟು ಹೆಚ್ಚಾಗಿದೆ. “ಆಶ್ಚರ್ಯಕರವಾಗಿ, ಕೊವಿಡ್-19 ಪ್ರಾಬಲ್ಯ ಹೊಂದಿರುವ ವರ್ಷದಲ್ಲಿ ಯಾವುದೇ ನಿಧಾನಗತಿಯಿಲ್ಲ. ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಎರಡೂ ವರ್ಷಗಳಲ್ಲಿ ಶೇ 50ರಷ್ಟು ಏರಿಕೆಯಾಗಿವೆ. ಆದರೆ S&P BSE 500 ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 69 ಏರಿಕೆಯಾಗಿದೆ,” ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. 2021 ಬರ್ಗಂಡಿ ಪ್ರೈವೇಟ್ ಹ್ಯುರನ್ ಇಂಡಿಯಾ 500 ಕಂಪೆನಿಗಳ ಒಟ್ಟು ಮೌಲ್ಯವು 228 ಲಕ್ಷ ಕೋಟಿ ರೂಪಾಯಿಗೆ (USD 3 ಟ್ರಿಲಿಯನ್) ಹತ್ತಿರದಲ್ಲಿದೆ. ಇದು FY21ಕ್ಕಾಗಿ ಭಾರತದ GDPಗಿಂತ ಹೆಚ್ಚಾಗಿದೆ ಎಂದು ಆಕ್ಸಿಸ್ ಬ್ಯಾಂಕ್ ಎಂ.ಡಿ. ಮತ್ತು ಸಿಇಒ ಅಮಿತಾಭ್ ಚೌಧರಿ ಹೇಳಿದ್ದಾರೆ. ಈ ಕಂಪೆನಿಗಳಲ್ಲಿ ಸುಮಾರು ಶೇ 10ರಷ್ಟು ಕಂಪೆನಿಗಳು 10 ವರ್ಷದಿಂದ ಈಚೆಗೆ ಸ್ಥಾಪನೆಯಾದವು ಎಂದು ಸೇರಿಸಿದ್ದಾರೆ.
ಇದನ್ನೂ ಓದಿ: Blockchain Technology: ಬ್ಲಾಕ್‌ಚೈನ್ ತಂತ್ರಜ್ಞಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ