Pandora Papers: ಪಂಡೋರಾ ಪೇಪರ್ಸ್​ನಲ್ಲಿ ರಾಜರು, ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು, ಸಿನಿತಾರೆಗಳು, ಪಾಪ್​ ತಾರೆ, ಕ್ರೀಡಾ ದಂತಕಥೆ…

| Updated By: preethi shettigar

Updated on: Oct 05, 2021 | 9:54 AM

ಪಂಡೋರಾ ಪೇಪರ್ಸ್ ಹೊರ ಬಿದ್ದ ಮೇಲೆ ಇಡೀ ಜಗತ್ತಿನಲ್ಲೇ ತಲ್ಲಣ ಎಬ್ಬಿಸಿದೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಸೆಲೆಬ್ರಿಟಿಗಳ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿದೆ. ಪ್ರಧಾನಿ, ರಾಷ್ಟ್ರಪತಿ, ಸಿನಿತಾರೆಯರು, ಸಚಿನ್ ತೆಂಡೂಲ್ಕರ್​ರಂಥ ಜೀವಂತ ದಂತಕಥೆಯಾಗಿರುವವರ ಹೆಸರಿದೆ.

Pandora Papers: ಪಂಡೋರಾ ಪೇಪರ್ಸ್​ನಲ್ಲಿ ರಾಜರು, ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು, ಸಿನಿತಾರೆಗಳು, ಪಾಪ್​ ತಾರೆ, ಕ್ರೀಡಾ ದಂತಕಥೆ...
ಎಡಕ್ಕೆ ಸಚಿನ್ ತೆಂಡೂಲ್ಕರ್, ಬಲಕ್ಕೆ ಅನಿಲ್ ಅಂಬಾನಿ (ಸಂಗ್ರಹ ಚಿತ್ರ)
Follow us on

ಪಂಡೋರಾ ಪೇಪರ್ಸ್ ಎಂಬುದು ಅಕ್ಷರಶಃ ದೊಡ್ಡ ಬಾಂಬ್​ನಂತೆ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಸದ್ದು ಮಾಡಿದೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಹಲವು ದೇಶಗಳ ನಾಯಕರು, ರಾಜರು, ರಾಜಕಾರಣಿಗಳು, ಕ್ರೀಡಾ ತಾರೆಗಳು, ಉದ್ಯಮಿಗಳೂ ಸೇರಿದಂತೆ ನಾನಾ ಕ್ಷೇತ್ರದವರು ಲಕ್ಷಾಂತರ ಕೋಟಿ ಡಾಲರ್​ ಮೌಲ್ಯದ ಆಸ್ತಿಯನ್ನು ವಿದೇಶಗಳಲ್ಲಿ ಅಕ್ರಮವಾಗಿ ಮುಚ್ಚಿಟ್ಟಿರುವ ಆರೋಪದ ಬಗ್ಗೆ ಹೊರಬಿದ್ದಿರುವ ತನಿಖಾ ವರದಿ ಇದು. ಭಾನುವಾರದಂದು ಬಯಲಿಗೆ ಬಿದ್ದಿರುವ ಈ ಪಂಡೋರಾ ಪೇಪರ್ಸ್ ನಿಜಕ್ಕೂ ಒಂದು ಮೈಲುಗಲ್ಲು. ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟ (ICIJ) ನಡೆದ ಈ ತನಿಖೆಯಲ್ಲಿ ಒಟ್ಟು 117 ದೇಶಗಳು, 150 ಮಾಧ್ಯಮ ಸಂಸ್ಥೆಗಳ, 600 ಪತ್ರಕರ್ತರು ಭಾಗವಹಿಸಿದ್ದರು. 14 ವಿದೇಶೀ ಹಣಕಾಸು ಸೇವಾ ಸಂಸ್ಥೆಗಳ 1.19 ಕೋಟಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಅದರಲ್ಲಿ ಐಸಿಐಜೆಗೆ ಗೊತ್ತಾಗಿರುವುದೇನೆಂದರೆ, ರಾಜ್ಯ ಹಾಗೂ ಸರ್ಕಾರಗಳ 35 ಮುಖ್ಯಸ್ಥರು, 300ಕ್ಕೂ ಹೆಚ್ಚು ರಾಜಕಾರಣಿಗಳು ವಿದೇಶಗಳಲ್ಲಿ ಸಮಸ್ಥೆಗಳು, ಟ್ರಸ್ಟ್​ಗಳನ್ನು ಮಾಡಿಕೊಂಡಿದ್ದಾರೆ. ಈ ತೆರಿಗೆ ಸ್ವರ್ಗಗಳು ಬ್ರಿಟಿಷ್ ವರ್ಜಿನ್ ದ್ವೀಪಗಳಿಂದ ಸೀಷೆಲ್ಸ್​ ತನಕ, ಹಾಂಕಾಂಗ್ ಮತ್ತು ಬೆಲಿಜ್​ ತನಕ ವ್ಯಾಪಿಸಿದೆ.

ರಾಜಕಾರಣಿಗಳ ಜತೆಗೆ, ಸರ್ಕಾರಗಳ ಮುಖ್ಯಸ್ಥರು, ಗಾಯಕಿ ಶಕೀರಾ, ಕ್ರಿಕೆಟ್ ದಂತಕಥೆ ಸಚಿನ್​ ತೆಂಡೂಲ್ಕರ್​ ಸೇರಿ ಇತರ ಸೆಲೆಬ್ರಿಟಿಗಳು, ಕ್ರೀಡಾ ತಾರೆಗಳ ಹೆಸರುಗಳು ತನಿಖೆಯಲ್ಲಿ ಉಲ್ಲೇಖವಾಗಿವೆ. ಆ ಪೈಕಿ ಕೆಲವು ದೇಶಗಳಲ್ಲಿನ ಹೆಸರುಗಳು ಇಲ್ಲಿ ಪ್ರಸ್ತಾವ ಮಾಡಲಾಗುವುದು.

ಭಾರತ
ಇನ್ನು ಭಾರತದ ವಿಷಯಕ್ಕೆ ಬಂದಲ್ಲಿ ಅನಿಲ್ ಅಂಬಾನಿ, ಸಚಿನ್​ ತೆಂಡೂಲ್ಕರ್, ನೀರವ್ ಮೋದಿ, ನೀರಾ ರಾಡಿಯಾ, ಗಾಂಧೀ ಕುಟುಂಬದ ಸ್ನೇಹಿತರಾದ ಸತೀಶ್ ಶರ್ಮಾ, ಕಾಕ್ಸ್ ಅಂಡ್ ಕಿಂಗ್ಸ್​ನ ಅಜಿತ್ ಕೇರ್ಕರ್, ಕಿರಣ್​ ಮಜುಂದಾರ್ ಶಾ, ಬಾಲಿವುಡ್​ ನಟ ಜಾಕಿಶ್ರಾಫ್ ಮತ್ತಿತರರ ಹೆಸರು ಕೇಳಿಬಂದಿದೆ.

ಜೋರ್ಡಾನ್
ಜೋರ್ಡಾನ್​ನ ರಾಜ ಅಬ್ದುಲ್ಲಾ II 10 ಕೋಟಿ ಡಾಲರ್ ಮೌಲ್ಯದ ಆಸ್ತಿಯನ್ನು ರಹಸ್ಯ ಕಂಪೆನಿಗಳ ಮೂಲಕ ಅಮೆರಿಕ ಮತ್ತು ಯುನೈಟೆಡ್​ ಕಿಂಗ್​ಡಮ್​ನಲ್ಲಿ ಮಾಡಿದ್ದಾರೆ. ಅವುಗಳನ್ನು 2003ರಿಂದ 2007ರ ಮಧ್ಯೆ ತೆರಿಗೆ ಸ್ವರ್ಗಗಳು ಎನಿಸಿಕೊಂಡಿರುವ ಕಡೆ ನೋಂದಣಿ ಆಗಿರುವ ಸಂಸ್ಥೆಗಳ ಮೂಲಕ ಖರೀದಿಸಲಾಗಿದೆ. ಅದರಲ್ಲಿ ಮಲಿಬು, ದಕ್ಷಿಣ ಕ್ಯಾಲಿಫೋರ್ನಿಯಾ, ವಾಷಿಂಗ್ಟನ್ ಮತ್ತು ಲಂಡನ್​ನ ಆಸ್ತಿಗಳು ಒಳಗೊಂಡಿವೆ. ಡಿಎಲ್​ಎ ಪೈಪರ್ ಎಂಬ ಅಬ್ದುಲ್ಲಾ ಅವರನ್ನು ಪ್ರತಿನಿಧಿಸುವ ಲಂಡನ್​ನ ಕಾನೂನು ಸಂಸ್ಥೆಯು ಐಸಿಐಜೆಗೆ ತಿಳಿಸಿರುವಂತೆ, ಅಬ್ದುಲ್ಲಾ ಯಾವುದೇ ಸಾರ್ವಜನಿಕ ಹಣದ ದುರುಪಯೋಗ ಮಾಡಿಲ್ಲ ಅಥವಾ ಸಾರ್ವಜನಿಕ ಬಳಕೆಗಾಗಿ ಮೀಸಲಿಟ್ಟಿದ್ದ ಅಥವಾ ಮೀಸಲಿಡಲು ಉದ್ದೇಶಿಸಿದ್ದ ಹಣವನ್ನು ಬಳಸಿಲ್ಲ. ಅರಮನೆ ಮೂಲಗಳು ತಿಳಿಸಿರುವಂತೆ, ದೊರೆಯ ಮಾಲೀಕತ್ವದಲ್ಲಿ ಯುನೈಟೆಡ್​ ಕಿಂಗ್​ಡಮ್ ಮತ್ತು ಅಮೆರಿಕದಲ್ಲಿ ಆಸ್ತಿ ಇರುವುದು ರಹಸ್ಯ ಏನಲ್ಲ. ಖಾಸಗಿತನ ಮತ್ತು ಭದ್ರತೆಯ ಕಾರಣಗಳಿಗಾಗಿ ಅವುಗಳ ಮಾಹಿತಿ ಬಹಿರಂಗ ಮಾಡಿರಲಿಲ್ಲ, ಅಷ್ಟೇ ಎಂದು ಹೇಳಿಕೆ ನೀಡಲಾಗಿದೆ.

ಲೆಬನಾನ್
ಇನ್ನು ಲೆಬನಾನ್​ನಲ್ಲಿ ಪ್ರಧಾನಿ ನಜಿಬ್ ಮಿಕಾಟಿ ಮತ್ತು ಅವರಿಗೂ ಮುಂಚೆ ಪ್ರಧಾನಿಗಳಾಗಿದ್ದ ಹಸನ್ ದಿಯಾಬ್, ಲೆಬನಾನ್ ಕೇಂದ್ರ ಬ್ಯಾಂಕ್ ಗವರ್ನರ್ ರಿಯಾದ್ ಸಲಮೆಹ್, ಸದ್ಯಕ್ಕೆ ಫ್ರಾನ್ಸ್​ನಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ಎದುರಿಸುತ್ತಿರುವ ಮತ್ತು ಮಾಜಿ ರಾಜ್ಯ ಸಚಿವ ಹಾಗೂ ಅಲ್ ಮವರಿದ್ ಬ್ಯಾಂಕ್​ನ ಮರ್ವನ್ ಖೈರ್​ದ್ದಿನ್ ಹೆಸರುಗಳಿವೆ. ಪತ್ರಕರ್ತರ ಒಕ್ಕೂಟ ತಿಳಿಸಿರುವ ಪ್ರಕಾರ, ಖೈರ್​ದ್ದಿನ್​ ಮತ್ತು ದಿಯಾಬ್​ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಸಲಮೆಹ್​ ತಾವು ಆಸ್ತಿಯನ್ನು ಘೋಷಿಸಿರುವುದಾಗಿ ಹೇಳಿದ್ದಾರೆ. ಮಿಕಾಟಿ ಅವರ ಮಗ ಮಹೆರ್ ಮಾತನಾಡಿ, ವಿದೇಶಗಳಲ್ಲಿ ಇರುವ ರಿಯಲ್ ಎಸ್ಟೇಟ್​ ಬಾಡಿಗೆ, ಉತ್ತರದಾಯಿತ್ವ ಯೋಜನೆ ಹಾಗೂ ತೆರಿಗೆ ಅನುಕೂಲಗಳನ್ನು ಹೆಚ್ಚಾಗಿ ನೀಡುತ್ತವೆ ಎಂದಿದ್ದಾರೆ. ಅಲ್​ಜಝೀರಾ ಜತೆ ಮಾತನಾಡಿರುವ ಅವರು, ವಿದೇಶೀ ಸಂಸ್ಥೆಗಳನ್ನು ಬಳಸಿಕೊಳ್ಳುವುದನ್ನು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಾಗರಿಕರ ವಿಚಾರದಲ್ಲಿ ತೆರಿಗೆ ಕಳ್ಳತನ ಎಂದು ಭಾವಿಸಲಾಗುತ್ತದೆ. ಆದರೆ ಇದು ಲೆಬನೀಸ್ ನಾಗರಿಕರಿಗೆ ಅನ್ವಯಿಸಲ್ಲ ಎಂದಿದ್ದಾರೆ.

ರಾಜಕಾರಣಿಗಳ ಹೆಸರು ಕೇಳಿಬಂದಿರುವುದು ದೇಶಗಳ ಪ್ರಕಾರ ಹೀಗಿದೆ:
ಉಕ್ರೇನ್- 38, ರಷ್ಯಾ- 19, ಕಜಕ್​ಸ್ತಾನ್​-8, ಪಾಕಿಸ್ತಾನ- 7, ಭಾರತ- 6, ಯುನೈಟೆಡ್​ ಕಿಂಗ್​ಡಮ್- 9, ಸ್ಪೇನ್- 5, ಲೆಬನಾನ್- 6, ಮೆಕ್ಸಿಕೋ- 7, ಹೊಂಡುರಸ್- 11, ಪನಾಮ- 5, ಡೊಮಿನಿಕನ್ ರಿಪಬ್ಲಿಕ್- 7, ವೆನಿಜುವೆಲಾ- 8, ಯುಎಇ- 11, ಸೌದಿ ಅರೇಬಿಯಾ- 5, ಐವರಿ ಕೋಸ್ಟ್- 5, ನೈಜೀರಿಯಾ- 10, ಅಂಗೋಲಾ-9, ಈಕ್ವೆಡಾರ್- 8, ಕೊಲಂಬಿಯಾ-11, ಬ್ರೆಜಿಲ್- 9.

ಪಾಕಿಸ್ತಾನ
ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಸರ್ಕಾರದ ಪ್ರಮುಖರ ಹೆಸರೇ ಕೇಳಿಬಂದಿದೆ. ಇಮ್ರಾನ್​ ಖಾನ್ ಪಕ್ಷಕ್ಕೆ ಹಣವನ್ನು ದೇಣಿಗೆ ನೀಡಿರುವವರು, ದೇಶದ ಪ್ರಬಲ ಮಿಲಿಟರಿ ಜನರಲ್​ಗಳ ಕುಟುಂಬ ಸದಸ್ಯರು ವಿದೇಶೀ ಕಂಪೆನಿಗಳ ಮೂಲಕ ಹತ್ತಾರು ಲಕ್ಷ ಡಾಲರ್ ಸಂಪತ್ತನ್ನು ಸಾಗಿಸಿದ್ದಾರೆ. ಇಮ್ರಾನ್​ ಖಾನ್ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿರುವ ಎಲಾಹಿ ಮತ್ತು ಹಣಕಾಸು ಸಚಿವರಾಗಿರುವ ಶೌಕತ್ ತರೀನ್ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಇದರ ಜತೆಗೆ 700ಕ್ಕೂ ಹೆಚ್ಚು ಇತರ ಪಾಕಿಸ್ತಾನಿ ನಾಗರಿಕರ ಹೆಸರುಗಳಿವೆ.

ಜೆಕ್​ ರಿಪಬ್ಲಿಕ್
ಜೆಕ್​ ರಿಪಬ್ಲಿಕ್​ನ ಪ್ರಧಾನಿ ಆಂಡ್ರೆಜ್​ ಬಬಿಸ್ 2.2 ಕೋಟಿ ಅಮೆರಿಕನ್​ ಡಾಲರ್​ ಅನ್ನು ವಿದೇಶೀ ಕಂಪೆನಿಗಳ ಮೂಲಕವಾಗಿ 200ರಲ್ಲಿ ಫ್ರೆಂಚ್ ರಿವಿರಾದಲ್ಲಿ ಎಸ್ಟೇಟ್​ ಖರೀದಿಸಲು ಸಾಗಿಸಿದ್ದಾರೆ. ಈ ವಿಚಾರವನ್ನು ರಹಸ್ಯವಾಗಿ ಇರಿಸುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಅಕ್ಟೋಬರ್ 8-9ರಂದು ನಡೆಯುವ ಚುನಾವಣೆಗೆ ಪೂರ್ವವಾಗಿ ಭಾನುವಾರ ಟೀವಿ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಜೆಕ್​ ಬ್ಯಾಂಕ್​ನಿಂದ ಹೊರಹೋದ ಆ ಹಣಕ್ಕೆ ತೆರಿಗೆ ಹಾಕಲಾಗಿದೆ. ಅದು ನನ್ನ ಹಣ ಮತ್ತು ಜೆಕ್​ ಬ್ಯಾಂಕ್​ಗೆ ವಾಪಸ್​ ಬಂದಿದೆ ಎಂದಿದ್ದಾರೆ.

ಅಜರ್​ಬೈಜಾನ್
ಬಿಬಿಸಿಯ ಪ್ರಕಾರ, ಅಜರ್​ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಮತ್ತು ಅವರ ಕುಟುಂಬ ರಹಸ್ಯವಾಗಿ ಬ್ರಿಟಿಷ್ ಆಸ್ತಿ ವ್ಯವಹಾರದಲ್ಲಿ ಪಾಲ್ಗೊಂಡಿದೆ. ಅದರ ಮೌಲ್ಯ 40 ಕೋಟಿ ಪೌಂಡ್ಸ್​ಗೂ ಹೆಚ್ಚು ಎನ್ನಲಾಗಿದೆ. ಆ ಫೈಲ್​ಗಳಲ್ಲಿ ಕುಟುಂಬವು ಹೇಗೆ 17 ಆಸ್ತಿಗಳನ್ನು ಖರೀದಿಸಿದೆ ಎಂಬುದನ್ನು ತೋರಿಸಲಾಗಿದೆ. ಅದರಲ್ಲಿ ಅಧ್ಯಕ್ಷರ 11 ವರ್ಷದ ಮಗನಿಗೆ 3.3 ಕೋಟಿ ಪೌಂಡ್​ ವೆಚ್ಚದ ಲಂಡನ್​ನ ಕಚೇರಿ ಬ್ಲಾಕ್​ ಕೂಡ ಇದೆ.

ಸೌಥ್ ಡಕೋಟ
ಯುರೋಪ್ ಮತ್ತು ಕೆರಿಬಿಯನ್‌ನಲ್ಲಿನ ಪಾರದರ್ಶಕ ಅಲ್ಲದ ನ್ಯಾಯಾಂಗ ವ್ಯಾಪ್ತಿಗಳಿಗೆ ಅಮೆರಿಕದ ದಕ್ಷಿಣ ಡಕೋಟಾ ರಾಜ್ಯವು ಹಣಕಾಸು ರಹಸ್ಯಕ್ಕೆ ಹೇಗೆ ಪ್ರತಿಸ್ಪರ್ಧಿಯಾಗಿದೆ ಎಂಬುದಕ್ಕೆ ಈ ಕಡತಗಳು ಸಾಕ್ಷಿಯನ್ನು ಒದಗಿಸಿವೆ ಎಂದು ಗಾರ್ಡಿಯನ್ ಪತ್ರಿಕೆ ಹೇಳಿದೆ. ದಾಖಲೆಗಳು ದಕ್ಷಿಣ ಡಕೋಟಾದ ಟ್ರಸ್ಟ್‌ಗಳಲ್ಲಿ ಸುಮಾರು 360 ಬಿಲಿಯನ್ ಡಾಲರ್ ಗ್ರಾಹಕರ ಆಸ್ತಿಗಳನ್ನು ಹೊಂದಿರುವುದನ್ನು ಬಹಿರಂಗಪಡಿಸುತ್ತದೆ. ಅದರಲ್ಲಿ ಕೆಲವು ವಿದೇಶಿ ವ್ಯಕ್ತಿಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಇತರ ತಪ್ಪುಗಳ ಆರೋಪ ಹೊಂದಿರುವ ಕಂಪೆನಿಗಳೊಂದಿಗೆ ಸಂಬಂಧ ಹೊಂದಿವೆ ಎಂದು ಅದು ಹೇಳಿದೆ.

ಕೀನ್ಯಾ
ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯಟ್ಟ ಮತ್ತು ಅವರ ಕುಟುಂಬದ ಆರು ಮಂದಿ ವಿದೇಶದಲ್ಲಿನ 13 ಕಂಪೆನಿಗಳೊಂದಿಗೆ ನಂಟು ಹೊಂದಿದ್ದಾರೆ. ಕೆನ್ಯಟ್ಟ ಅವರ ವಿದೇಶೀ ಹೂಡಿಕೆಯಲ್ಲಿ 3 ಕೋಟಿ ಅಮೆರಿಕನ್ ಡಾಲರ್​ ಮೌಲ್ಯದ ಸ್ಟಾಕ್ಸ್ ಮತ್ತ ಬಾಂಡ್ಸ್​ಗಳು ಒಳಗೊಂಡಿವೆ.

ಯುನೈಟೆಡ್ ಕಿಂಗ್​ಡಮ್​
1997ರಿಂದ 2007ರವರೆಗೆ ಯುನೈಟೆಡ್ ಕಿಂಗ್​ಡಮ್​ನ ಪ್ರಧಾನ ಮಂತ್ರಿಯಾಗಿದ್ದ ಟೋನಿ ಬ್ಲೇರ್ ಅವರು ಆಸ್ತಿಯನ್ನು ಹೊಂದಿರುವ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಕಂಪೆನಿಯನ್ನು ಖರೀದಿಸುವ ಮೂಲಕ 2017ರಲ್ಲಿ 8.8 ಮಿಲಿಯನ್ ಡಾಲರ್ ವಿಕ್ಟೋರಿಯನ್ ಕಟ್ಟಡದ ಮಾಲೀಕರಾದರು. ಮತ್ತು ಈ ಕಟ್ಟಡವು ಈಗ ಅವರ ಪತ್ನಿ ಚೆರಿ ಬ್ಲೇರ್ ಅವರ ಕಾನೂನು ಸಂಸ್ಥೆಯನ್ನು ನಡೆಸುತ್ತಿದೆ ಎಂದು ತನಿಖೆಯು ತಿಳಿಸಿದೆ.

ಬಹ್ರೇನ್‌ನ ಉದ್ಯಮ ಮತ್ತು ಪ್ರವಾಸೋದ್ಯಮ ಸಚಿವ ಜಾಯೆದ್ ಬಿನ್ ರಶೀದ್ ಅಲ್-ಜಯಾನಿ ಅವರ ಕುಟುಂಬದಿಂದ ಇಬ್ಬರೂ ಕಂಪೆನಿಯನ್ನು ಖರೀದಿಸಿದ್ದಾರೆ.

ಲಂಡನ್ ಕಟ್ಟಡದ ಬದಲಾಗಿ ಕಂಪೆನಿಯ ಷೇರುಗಳನ್ನು ಖರೀದಿಸುವುದರಿಂದ ಬ್ಲೇರ್‌ಗೆ 4,00,000 ಯುಎಸ್​ಡಿಗಿಂತ ಹೆಚ್ಚು ಆಸ್ತಿ ತೆರಿಗೆಯನ್ನು ಉಳಿಸಲು ನೆರವಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಬ್ಲೇರ್‌ ಮತ್ತು ಅಲ್-ಜಯಾನಿ ಇಬ್ಬರೂ ಇತರರು ಒಪ್ಪಂದದಲ್ಲಿ ಭಾಗಿಯಾಗಿದ್ದಾರೆಂದು ಆರಂಭದಲ್ಲಿ ತಿಳಿದಿರಲಿಲ್ಲ ಎಂದು ತನಿಖೆ ಹೇಳಿದೆ. ಅಲ್-ಜಯಾನಿಸ್ ಪರ ವಕೀಲರು ಯು.ಕೆ. ಕಾನೂನುಗಳನ್ನು ಅನುಸರಿಸಲಾಗಿದೆ ಎಂದು ಹೇಳಿದ್ದಾರೆ.

ರಷ್ಯಾ
ವಾಷಿಂಗ್ಟನ್ ಪೋಸ್ಟ್ ತಿಳಿಸಿರುವಂತೆ, ರಷ್ಯನ್ ಮಹಿಳೆ ಸ್ವೆಟ್ಲಾನಾ ಕ್ರಿವೊನೋಗಿಕ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ವಾರಗಳ ನಂತರ, ಏಪ್ರಿಲ್ 2003ರಲ್ಲಿ ಕೆರಿಬಿಯನ್ ದ್ವೀಪವಾದ ಟೋರ್ಟೋಲಾದಲ್ಲಿ ಇನ್​ಕಾರ್ಪೊರೇಟ್​ ಆದ ವಿದೇಶೀ ಕಂಪೆನಿಯ ಮೂಲಕ ಮೊನಾಕೊ ಅಪಾರ್ಟ್​ಮೆಂಟ್ ಮಾಲೀಕರಾದರು ಎನ್ನಲಾಗಿದೆ. ಆ ಸಮಯದಲ್ಲಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವರ್ಷಗಳ ಸುದೀರ್ಘ ರಹಸ್ಯ ಸಂಬಂಧದಲ್ಲಿದ್ದರು ಎಂದು ರಷ್ಯಾದ ತನಿಖಾ ಸಂಸ್ಥೆ ಪ್ರೊಕ್ಟ್ ಅನ್ನು ಉಲ್ಲೇಖಿಸಿ ಪೋಸ್ಟ್ ಹೇಳಿದೆ.

2014ರ ಚಳಿಗಾಲದ ಒಲಿಂಪಿಕ್ಸ್ ಅನ್ನು ಸೋಚಿಯಲ್ಲಿ ನಿರ್ದೇಶಿಸಿದ ನಂತರ ಮಾಸ್ಕೋದಲ್ಲಿ ಸೋವಿಯತ್ ಸಮಯದ ಚಿತ್ರಮಂದಿರಗಳು ಮತ್ತು ಸುತ್ತಮುತ್ತಲಿನ ಆಸ್ತಿಯನ್ನು ಖರೀದಿಸಲು ಮತ್ತು ಅಭಿವೃದ್ಧಿಪಡಿಸಲು ಪುಟಿನ್ ಅವರ ಚಿತ್ರ ತಯಾರಕ ಮತ್ತು ರಷ್ಯಾದ ಪ್ರಮುಖ ಟಿವಿ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಕಾನ್​ಸ್ಟಾಂಟಿನ್ ಅರ್ನೆಸ್ಟ್ ರಿಯಾಯಿತಿ ಪಡೆದರು ಎಂದು ವರದಿಯು ಬಹಿರಂಗಪಡಿಸಿದೆ. ಅರ್ನೆಸ್ಟ್ ಹೇಳಿರುವಂತೆ, ಸಂಸ್ಥೆಯ ಒಪ್ಪಂದವು ರಹಸ್ಯವಲ್ಲ ಮತ್ತು ಅವರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ಮಾಹಿತಿ: ಅಲ್​ಜಝೀರಾ

ಇದನ್ನೂ ಓದಿ: Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್?

Pandora Papers: ಕೇಂದ್ರೀಯ ನೇರ ತೆರಿಗೆ ಮಂಡಳಿ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ