Pandora Papers: ಕೇಂದ್ರೀಯ ನೇರ ತೆರಿಗೆ ಮಂಡಳಿ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ
ಪಂಡೋರಾ ಪೇಪರ್ಸ್ ಬಹಿರಂಗಪಡಿಸಿರುವ ವ್ಯಕ್ತಿಗಳ ಹಣಕಾಸು ವ್ಯವಹಾರದ ಬಗ್ಗೆ ತನಿಖಾಧಿಕಾರಿಗಳು ಗಮನ ಕೇಂದ್ರೀಕರಿಸಲಿದ್ದಾರೆ.
ದೆಹಲಿ: ಬಹುಚರ್ಚಿತ ಪಂಡೋರಾ ಪೇಪರ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ (Central Board of Direct Taxes – CBDT) ಮುಖ್ಯಸ್ಥರ ನೇತೃತ್ವದಲ್ಲಿ ಬಹು ಇಲಾಖೆಯ ತಂಡದಿಂದ ತನಿಖೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪಂಡೋರಾ ಪೇಪರ್ಸ್ ಬಹಿರಂಗಪಡಿಸಿರುವ ವ್ಯಕ್ತಿಗಳ ಹಣಕಾಸು ವ್ಯವಹಾರದ ಬಗ್ಗೆ ತನಿಖಾಧಿಕಾರಿಗಳು ಗಮನ ಕೇಂದ್ರೀಕರಿಸಲಿದ್ದಾರೆ.
ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ ವಿದೇಶದಲ್ಲಿ ಕಂಪನಿ ತೆರೆದು ಹಣ ವಾಪಸ್ ಪಡೆದಿರುವ ಬಗ್ಗೆ, ಉದ್ಯಮಿ ಅನಿಲ್ ಅಂಬಾನಿ ವಿದೇಶಗಳಲ್ಲಿ 1.3 ಶತಕೋಟಿ ರೂಪಾಯಿಯಷ್ಟು ಹಣ ಹೂಡಿಕೆ ಮಾಡಿದ್ದಾರೆ ಎಂದು ಪ್ಯಾಂಡೋರಾ ಪೇಪರ್ಸ್ ಹೇಳಿದೆ. ಬಯೊಟೆಕ್ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರ ಪತಿ ಜಾನ್ ಷಾ ಸಹ ವಿದೇಶಗಳಲ್ಲಿ ರಹಸ್ಯ ಹೂಡಿಕೆ ಮಾಡಿದ್ದಾರೆ. ನಟ ಜಾಕಿ ಶ್ರಾಫ್ ತನ್ನ ಅತ್ತೆ ಮತ್ತು ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ಸಿಬಿಡಿಟಿ ಇದೀಗ ತನಿಖೆ ನಡೆಸಲಿದೆ.
ಏನಿದು ಪಂಡೋರಾ ಪೇಪರ್ಸ್ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (International Council of Investigative Journalism – ICIJ) ಭಾನುವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ವಿವಿಧ ದೇಶಗಳ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆ ಆಗಿವೆ.
‘ಪಂಡೋರಾ ಪೇಪರ್ಸ್’ (Pandora Papers) ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಈ ತನಿಖೆಯು ಪ್ರಪಂಚದಾದ್ಯಂತದ 14 ವಿವಿಧ ಹಣಕಾಸು ಸೇವಾ ಕಂಪನಿಗಳಿಂದ ಸುಮಾರು 1.2 ಕೋಟಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.
(Pandora Papers Govt of India Decides to Investigate from CBDT let Multi Agency Team)
ಇದನ್ನೂ ಓದಿ: Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್? ಇದನ್ನೂ ಓದಿ: Pandora Papers – ಪಂಡೋರಾ ಪೇಪರ್ಸ್: 300 ಭಾರತೀಯರು, ಜಗತ್ತಿನ ಗಣ್ಯರು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳ ಹೂಡಿಕೆ ದಾಖಲೆಗಳು ಸೋರಿಕೆ