ಇ-ಹರಾಜು ಮೂಲಕ 18.09 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟ ಮಾಡಿದ ಕೇಂದ್ರ ಸರ್ಕಾರ
ಗೋಧಿಯ ಚಿಲ್ಲರೆ ದರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಸೆಪ್ಟೆಂಬರ್ 21ರವರೆಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ 13 ಇ-ಹರಾಜುಗಳು ಯಶಸ್ವಿಯಾಗಿವೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಹೇಳಿದೆ.
ಹೊಸದಿಲ್ಲಿ ಸೆಪ್ಟೆಂಬರ್ 22: ಗೋಧಿಯ ಚಿಲ್ಲರೆ ದರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಸೆಪ್ಟೆಂಬರ್ 21ರವರೆಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ 13 ಇ-ಹರಾಜು (E Auction) ಗಳು ಯಶಸ್ವಿಯಾಗಿವೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಹೇಳಿದೆ. ಓಎಂಎಸ್ಎಸ್ ಯೋಜನೆ ಅಡಿ ಒಟ್ಟು 18.09 ಲಕ್ಷ ಟನ್‌ಗಳಷ್ಟು (LMT) ಗೋಧಿಯನ್ನು ಮಾರಾಟ ಮಾಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಯೋಜನೆಯಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ 2,125 ಮೀಸಲು ಬೆಲೆಯಲ್ಲಿ ಸಾಪ್ತಾಹಿಕ ಇ-ಹರಾಜಿನ ಮೂಲಕ ಗೋಧಿಯನ್ನು ನೀಡಲಾಗುತ್ತದೆ. ಇದು ಪ್ರಸ್ತುತ ಗೋಧಿಯ ಕನಿಷ್ಠ ಬೆಂಬಲ ಬೆಲೆಗೆ ಸಮವಾಗಿದೆ. ಈ ಹರಾಜುಗಳನ್ನು ದೇಶಾದ್ಯಂತ ನಡೆಸಲಾಗುತ್ತಿದ್ದು, ಪ್ರತಿ ವಾರದ ಹರಾಜಿನಲ್ಲಿ 2.00 ಟನ್‌ಗಳಷ್ಟು ಗೋಧಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಬೆಳೆ ಸಮೀಕ್ಷೆಗೆ ಸರ್ಕಾರದಿಂದ ಪ್ರತ್ಯೇಕ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ
ಗೋಧಿಯ ತೂಕದ ಸರಾಸರಿ ಮಾರಾಟ ದರವು ಆಗಸ್ಟ್‌ನಲ್ಲಿ ಹೆಚ್ಚಳ ಕಂಡಿತ್ತು. ಪ್ರತಿ ಕ್ವಿಂಟಲ್‌ಗೆ 2,254.71 ರೂ. ಆದರೆ, ಇತ್ತೀಚೆಗೆ ಸೆಪ್ಟೆಂಬರ್ 20ರ ಇ-ಹರಾಜಿನಲ್ಲಿ ಪ್ರತಿ ಕ್ವಿಂಟಲ್‌ಗೆ 2,163.47 ರೂ.ಗೆ ಇಳಿಕೆಯಾಗಿದೆ. ಸರಾಸರಿ ಮಾರಾಟ ಬೆಲೆಯಲ್ಲಿನ ಈ ಇಳಿಕೆಯು ಮುಕ್ತ ಮಾರುಕಟ್ಟೆಯಲ್ಲಿ ಗೋಧಿಯ ಮಾರುಕಟ್ಟೆ ಬೆಲೆಗಳಲ್ಲಿ ಇಳಿಕೆ ಆಗಿರುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ: ಜೆಪಿ ಮಾರ್ಗನ್ನ ಗ್ಲೋಬಲ್ ಬಾಂಡ್ ಇಂಡೆಕ್ಸ್ನಲ್ಲಿ ಭಾರತವೂ ಸೇರ್ಪಡೆ; ಏನಿದರ ಅನುಕೂಲಗಳು?
ಈ ಇ-ಹರಾಜಿನ ಫಲಿತಾಂಶಗಳು ಮಾರಾಟವಾದ ಪ್ರಮಾಣವು ನೀಡಲಾದ ಪ್ರಮಾಣಕ್ಕಿಂತ 90 ಪ್ರತಿಶತವನ್ನು ಮೀರಿಲ್ಲ. ದೇಶಾದ್ಯಂತ ಸಾಕಷ್ಟು ಗೋಧಿ ಪೂರೈಕೆ ಇದೆ. ಓಎಂಎಸ್ಎಸ್ ನೀತಿಯ ಯಶಸ್ವಿ ಅನುಷ್ಠಾನವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಬೆಲೆಗಳನ್ನು ನಿಯಂತ್ರಣದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಕೇಂದ್ರೀಯ ಪೂಲ್‌ನಲ್ಲಿ ಸಾಕಷ್ಟು ಗೋಧಿ ಸಂಗ್ರಹವನ್ನು ಖಾತ್ರಿಪಡಿಸುತ್ತದೆ. ಇದು 2023-24ರ ಉಳಿದ ಅವಧಿಯಲ್ಲಿ ಓಎಂಎಸ್ಎಸ್ ನೀತಿಯ ಮುಂದುವರಿಕೆಯನ್ನು ಅನುಮತಿಸುತ್ತದೆ. ಇದು ಗ್ರಾಹಕರಿಗೆ ಸ್ಥಿರವಾದ ಗೋಧಿ ಬೆಲೆಗಳಿಗೆ ಕೊಡುಗೆ ನೀಡುತ್ತದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:26 pm, Fri, 22 September 23