Petrol and Diesel Tax Collection: 3 ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆಯ 8.02 ಲಕ್ಷ ಕೋಟಿ ರೂ. ಸಂಗ್ರಹ
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಮೂಲಕ ಕೇಂದ್ರ ಸರ್ಕಾರವು ಕಳೆದ ಮೂರು ಹಣಕಾಸು ವರ್ಷದಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದ ಕೇಂದ್ರವು ಸುಮಾರು 8.02 ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಿದೆ. ಅದರಲ್ಲಿ 3.71 ಲಕ್ಷ ಕೋಟಿ ರೂಪಾಯಿಗಳನ್ನು FY21ರಲ್ಲೇ ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ಗೆ ತಿಳಿಸಿದರು. ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮತ್ತು ಈ ಇಂಧನಗಳ ಮೇಲಿನ ವಿವಿಧ ತೆರಿಗೆಗಳ ಮೂಲಕ ಗಳಿಸಿದ ಆದಾಯದ ವಿವರಗಳ ಕುರಿತು ಪ್ರಶ್ನೆಗಳಿಗೆ ಸಚಿವರು ಪ್ರತಿಕ್ರಿಯಿಸಿದರು.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ಅಕ್ಟೋಬರ್ 5, 2018ರಂದು ಲೀಟರ್‌ಗೆ ರೂ. 19.48 ರಿಂದ ನವೆಂಬರ್ 4, 2021ಕ್ಕೆ ರೂ. 27.90ಕ್ಕೆ ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಡೀಸೆಲ್ ಮೇಲಿನ ಸುಂಕವು ಲೀಟರ್‌ಗೆ ರೂ. 15.33ರಿಂದ ರೂ. 21.80ಕ್ಕೆ ಏರಿದೆ ಎಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಸೀತಾರಾಮನ್ ಹೇಳಿದ್ದಾರೆ. ಈ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ಅಕ್ಟೋಬರ್ 5, 2018ರಂತೆ ಪ್ರತಿ ಲೀಟರ್‌ಗೆ ರೂ. 19.48ರಿಂದ ಜುಲೈ 6, 2019ಕ್ಕೆ ರೂ. 17.98ಕ್ಕೆ ಇಳಿದಿದೆ; ಅದೇ ಅವಧಿಯಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕ 15.33 ರೂಪಾಯಿಯಿಂದ 13.83 ರೂಪಾಯಿಗೆ ಇಳಿಕೆಯಾಗಿದೆ.
ಫೆಬ್ರವರಿ 2, 2021ರ ವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳು ಕ್ರಮವಾಗಿ ರೂ. 32.98 ಮತ್ತು ರೂ. 31.83ಕ್ಕೆ ಏರುವ ಹಾದಿಯಲ್ಲಿತ್ತು. ಸ್ವಲ್ಪ ಇಳಿಯುವ ಮೊದಲು ಮತ್ತು ನಂತರ ನವೆಂಬರ್ 4, 2021ಕ್ಕೆ ರೂ. 27.90 (ಪೆಟ್ರೋಲ್) ಮತ್ತು ರೂ. 21.80 (ಡೀಸೆಲ್)ಗೆ ಇಳಿಯಿತು.
”ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಸಂಗ್ರಹಿಸಲಾದ ಸೆಸ್‌ಗಳು ಸೇರಿ ಕೇಂದ್ರ ಅಬಕಾರಿ ಸುಂಕಗಳು: 2018-19ರಲ್ಲಿ 2,10,282 ಕೋಟಿ ರೂ.; 2019-20ರಲ್ಲಿ ರೂ. 2,19,750 ಕೋಟಿ ಮತ್ತು 2020-21ರಲ್ಲಿ ರೂ 3,71,908 ಕೋಟಿ,” ಎಂದು ಸೀತಾರಾಮನ್ ಹೇಳಿದ್ದಾರೆ. ಈ ವರ್ಷದ ದೀಪಾವಳಿಯ ಮೊದಲು ನವೆಂಬರ್ 4ರಂದು ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ಲೀಟರ್‌ಗೆ 5 ರೂ. ಮತ್ತು 10 ರೂ. ಇಳಿಕೆ ಮಾಡಿತು. ಇದರ ನಂತರ ಹಲವಾರು ರಾಜ್ಯಗಳು ಎರಡೂ ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯಲ್ಲಿ ಕಡಿತವನ್ನು ಘೋಷಿಸಿದವು.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕದಿಂದ FY21ರಲ್ಲಿ ಕೇಂದ್ರಕ್ಕೆ 3.7 ಲಕ್ಷ ಕೋಟಿ ರೂ., ರಾಜ್ಯಗಳಿಗೆ 20 ಸಾವಿರ ಕೋಟಿ ಸಂಗ್ರಹ
Published On - 8:49 pm, Tue, 14 December 21