AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank working hours: ಕೋವಿಡ್- 19 ಎರಡನೇ ಅಲೆ ಪ್ರಭಾವದಿಂದ ಬ್ಯಾಂಕ್​ಗಳ ಕಾರ್ಯ ನಿರ್ವಹಣೆ ಅವಧಿಯಲ್ಲಿ ಬದಲಾವಣೆ

ಕೋವಿಡ್- 19 ಎರಡನೇ ಅಲೆಯ ಕಾರಣಕ್ಕೆ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್​ಗಳ ಕಾರ್ಯ ನಿರ್ವಹಿಸುವ ಅವಧಿ ಮೊಟಕಾಗಿದೆ. ಅಂದ ಹಾಗೆ ನೀವು ವ್ಯವಹರಿಸುವ ಬ್ಯಾಂಕ್​ನ ಕಾರ್ಯ ನಿರ್ವಹಣೆ ಅವಧಿಯನ್ನು ಚೆಕ್ ಮಾಡಿದ್ರಾ?​

Bank working hours: ಕೋವಿಡ್- 19 ಎರಡನೇ ಅಲೆ ಪ್ರಭಾವದಿಂದ ಬ್ಯಾಂಕ್​ಗಳ ಕಾರ್ಯ ನಿರ್ವಹಣೆ ಅವಧಿಯಲ್ಲಿ ಬದಲಾವಣೆ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: May 20, 2021 | 4:41 PM

Share

ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಂಕ್ ಒಕ್ಕೂಟವು (IBA) ಬ್ಯಾಂಕ್​ಗಳಿಗೆ ಸಲಹೆ ಮಾಡಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ಮಧ್ಯೆ ಕಾರ್ಯ ನಿರ್ವಹಿಸುವಂತೆ ತಿಳಿಸಿದೆ. ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ (SLBC) ಕನ್ವೀನರ್​ಗಳಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ರೂಪಾಂತರಿ ವೈರಸ್ ಮರುಕಳಿಸಿರುವುದರಿಂದ ನಾವು ಸವಾಲಿನ ಸನ್ನಿವೇಶ ಎದುರಿಸುತ್ತಿದ್ದೇವೆ. ಹಲವು ರಾಜ್ಯಗಳಲ್ಲಿ ಪ್ರತಿ ದಿನ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಆರ್ಥಿಕ ಚಟುವಟಿಕೆಗಳಿಗೆ ಗಂಭೀರವಾದ ಆತಂಕ ಎದುರಾಗಿದೆ ಎಂದು ತಿಳಿಸಿದ್ದರು. ಈ ಆದೇಶದ ನಂತರ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್​ಗಳು ಬ್ಯಾಂಕಿಂಗ್ ಕಾರ್ಯ ನಿರ್ವಹಣೆ ಅವಧಿಯನ್ನು ಕಡಿಮೆ ಮಾಡಿದ್ದವು. ಆದರೆ ರಾಜ್ಯ ಮಟ್ಟದ ಕನ್ವೀನರ್​ಗಳಿಗೆ ಒಂದು ಗೊಂದಲ ಇತ್ತು. ಕೋವಿಡ್​-19 ಗಮನದಲ್ಲಿ ಇಟ್ಟುಕೊಂಡು ಈ ನಿಯಮವನ್ನು ತಮ್ಮ ಪ್ರದೇಶದಲ್ಲಿ ಜಾರಿಗೆ ತರಬೇಕಾ ಅಥವಾ ಬೇಡವಾ? ಎಂಬ ಪ್ರಶ್ನೆ ಅದು.

ಆ ಕಾರಣದಿಂದಲೇ ನಿಮಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಬಹುತೇಕ ಬ್ಯಾಂಕ್​ಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ತನಕ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಈಗ ನಡೆಯುತ್ತಿರುವ ಅವಧಿಯು ಮೇ 31, 2021ರ ತನಕ ಜಾರಿಯಲ್ಲಿ ಇರುತ್ತದೆ. ಠೇವಣಿ ಸಂಗ್ರಹ, ನಗದು ವಿಥ್​ಡ್ರಾ, ಹಣ ವರ್ಗಾವಣೆ ಮತ್ತು ಸರ್ಕಾರದ ವ್ಯವಹಾರಗಳನ್ನು ಕಡ್ಡಾಯವಾಗಿ ಮಾಡುವಂತೆ ಸೂಚಿಸಲಾಗಿದೆ. ತಮ್ಮ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಹೇಗಿದೆ ಅಂತ ಆಯಾ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ ಪರಿಶೀಲನೆ ಮಾಡುತ್ತದೆ. ಆ ನಂತರ ಹೆಚ್ಚುವರಿ ಸೇವೆ ಏನು ಒದಗಿಸಬಹುದು ಅಂತ ತೀರ್ಮಾನಿಸುತ್ತದೆ ಎಂದು ಐಬಿಎ ಪತ್ರದಲ್ಲೇ ತಿಳಿಸಲಾಗಿತ್ತು.

ಉದ್ಯೋಗಿಗಳನ್ನು ಪಾಳಿಯ ಆಧಾರದಲ್ಲಿ ಕೆಲಸಕ್ಕೆ ಕರೆಯಬಹುದು. ಅಥವಾ ಯಾವ ರೀತಿಯ ಕೆಲಸ, ಹುದ್ದೆ ಮತ್ತು ಆ ಸಂಸ್ಥೆಯ ಗಾತ್ರ ಏನು ಎಂಬ ಆಧಾರದಲ್ಲಿ ಆ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಮಾಡುವುದಕ್ಕೆ ಕೂಡ ಅವಕಾಶ ನೀಡಬಹುದು. ಒಟ್ಟಾರೆ ಶೇ 50ರಷ್ಟು ಸಿಬ್ಬಂದಿಯನ್ನು ಮಾತ್ರ ಕಚೇರಿಗೆ ಬರುವಂತೆ ಹೇಳಬುಹುದು ಹಾಗೂ ಅದು ಕೂಡ ಪಾಳಿ ಆಧಾರದಲ್ಲಿ ಎಂದು ಹೇಳಲಾಗಿದೆ. ಇನ್ನು ದೇಶದ ಅತಿ ದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ತಮ್ಮ ಶಾಖೆಗಳಲ್ಲಿ ಹೊಸ ಸಮಯ ಹಾಗೂ ನಿಯಮವನ್ನು ಪರಿಚಯಿಸಲಾಗಿದೆ. ಫೋನ್ ಬ್ಯಾಂಕಿಂಗ್ ಮತ್ತು ಇಂಟರ್​ನೆಟ್ ಬ್ಯಾಂಕಿಂಗ್ ಅನ್ನು ಪ್ರೋತ್ಸಾಹಿಸಲಾಗುತ್ತಿದೆ.

ಹಣ ವರ್ಗಾವಣೆ, ಡೆಪಾಸಿಟ್ ಮಾಡುವುದಕ್ಕೆ, ನಿರ್ವಹಣೆಗೆ, ಬಿಲ್ ಪಾವತಿಗೆ, ಎಟಿಎಂ ಕಾರ್ಡ್ ಅಪ್ಲೈ ಮಾಡುವಂತಿದ್ದರೆ, ಚೆಕ್ ಬುಕ್​ಗಳಿಗೆ, ಯುಪಿಐ ಎನೇಬಲ್ ಅಥವಾ ಡಿಸೇಬಲ್ ಮಾಡಲು ಹಾಗೂ ಬ್ಯಾಂಕ್ ಸ್ಟೇಟ್​ಮೆಂಟ್​ಗಳನ್ನು ಡೌನ್​ಲೋಡ್ ಮಾಡುವುದಕ್ಕೆ ಇಂಟರ್​ನೆಟ್ ಬ್ಯಾಂಕಿಂಗ್ ಬಳಸುವಂತೆ ಸೂಚಿಸಲಾಗಿದೆ. ಖಾಸಗಿ ಬ್ಯಾಂಕ್​ಗಳಿಂದ ಕೂಡ ಬ್ಯಾಂಕ್​ ವ್ಯವಹಾರದ ಅವಧಿಯನ್ನು ಬದಲಿಸಲಾಗಿದೆ.

ಇದನ್ನೂ ಓದಿ: SBI KYC: ಆನ್​ಲೈನ್​ನಲ್ಲಿ ಎಸ್​ಬಿಐ ಕೆವೈಸಿ ಅಪ್​ಡೇಟ್​ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?

(Due to corona virus second wave changes in banking working hours. Time has been reduced. Here is the details)