Coal supply: 2021ರ ಏಪ್ರಿಲ್ನಿಂದ ಡಿಸೆಂಬರ್ ಮಧ್ಯೆ ಶೇ 25ರಷ್ಟು ಕಲ್ಲಿದ್ದಲು ಪೂರೈಕೆ ಹೆಚ್ಚಳ
2021ನೇ ಇಸವಿಯ ಏಪ್ರಿಲ್ನಿಂದ ಡಿಸೆಂಬರ್ ಮಧ್ಯೆ ಭಾರತದಲ್ಲಿ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಪೂರೈಕೆ ಶೇ 25ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರವು ಗುರುವಾರ ಹೇಳಿರುವ ಪ್ರಕಾರ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಯಾವುದೇ ಕೊರತೆ ಇಲ್ಲ. ಮತ್ತು ಈ ಘಟಕಗಳಲ್ಲಿ 430.6 ಮಿಲಿಯನ್ ಟನ್ಗಳ ಕಲ್ಲಿದ್ದಲು ಪೂರೈಕೆ 2021ರ ಏಪ್ರಿಲ್ನಿಂದ ಡಿಸೆಂಬರ್ ಮಧ್ಯೆ ಆಗಿದೆ. ಅಂದರೆ ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಶೇ 25ರಷ್ಟು ಹೆಚ್ಚಿನ ಕಲ್ಲಿದ್ದಲಿನ ಪೂರೈಕೆ (Coal Supply) ಇದೆ. “ಸದ್ಯಕ್ಕೆ ದೇಶದ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಇಲ್ಲ,” ಎಂದು ಗುರುವಾರದಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ಆರ್.ಕೆ. ಸಿಂಗ್ ಹೇಳಿದ್ದಾರೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮತ್ತು ಸಿಂಗರೇಣಿ ಕಾಲೀಯರೀಸ್ ಕಂಪೆನಿ ಲಿಮಿಟೆಡ್ (ಎಸ್‌ಸಿಸಿಎಲ್)ನಿಂದ 2021ರ ಏಪ್ರಿಲ್ನಿಂದ ಡಿಸೆಂಬರ್ ಅವಧಿಯಲ್ಲಿ ವಿದ್ಯುತ್ ವಲಯಕ್ಕೆ ರವಾನೆ ಆದ ಕಲ್ಲಿದ್ದಲಿನ ಒಟ್ಟು ಪ್ರಮಾಣವು ಸುಮಾರು 430.6 ಮಿಲಿಯನ್ ಟನ್‌ಗಳಷ್ಟಿದೆ (ಎಂಟಿ). ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಸುಮಾರು 344.2 ಎಂಟಿ ಆಗಿತ್ತು.
ರವಾನೆಯ ವಿಚಾರಕ್ಕೆ ಬಂದರೆ ಹಿಂದಿನ ವರ್ಷಕ್ಕೆ ಸಂಬಂಧಿಸಿದಂತೆ ಸುಮಾರು ಶೇ 25ರಷ್ಟು ಮತ್ತು 2019-20ಕ್ಕೆ ಸುಮಾರು ಶೇ 15ರಷ್ಟು ಬೆಳವಣಿಗೆಯನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ. ಕಲ್ಲಿದ್ದಲು ಆಮದು 2021-22ರ (ಏಪ್ರಿಲ್-ಡಿಸೆಂಬರ್) ಅವಧಿಯಲ್ಲಿ 21.4 ಎಂಟಿಗೆ ಕಡಿಮೆಯಾಗಿದೆ. 2020-21ರ ಇದೇ ಅವಧಿಯಲ್ಲಿ 35.1 ಎಂಟಿ ಮತ್ತು 2019-20 ರ ಇದೇ ಅವಧಿಯಲ್ಲಿ 52.5 ಎಂಟಿ ಇತ್ತು. ಆಮದು ಮಾಡಿಕೊಂಡ ಕಲ್ಲಿದ್ದಲಿನ ಕೊರತೆಯನ್ನು ದೇಶೀಯ ಕಲ್ಲಿದ್ದಲಿನ ಪೂರೈಕೆಯಿಂದ ಸರಿದೂಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮೇಲಿನ ಕ್ರಮಗಳ ಪರಿಣಾಮವಾಗಿ ವಿದ್ಯುತ್ ಸ್ಥಾವರಗಳಲ್ಲಿ ಲಭ್ಯ ಇರುವ ಕಲ್ಲಿದ್ದಲು ದಾಸ್ತಾನು ಅಕ್ಟೋಬರ್ 8, 2021ಕ್ಕೆ 7.2 ಎಂಟಿಯಿಂದ ಜನವರಿ 26, 2022ಕ್ಕೆ ಸುಮಾರು 25 ಎಂಟಿಗೆ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ವಿದ್ಯುತ್ ವಲಯದಲ್ಲಿನ ಕಲ್ಲಿದ್ದಲು ಪೂರೈಕೆ ಸಮಸ್ಯೆಗಳನ್ನು ಪರಿಹರಿಸಲು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಲು ಮತ್ತು ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅನಿಶ್ಚಿತ ಸಂದರ್ಭಗಳನ್ನು ಪೂರೈಸುವುದಕ್ಕೆ ವಿದ್ಯುತ್ ಸ್ಥಾವರಗಳಲ್ಲಿನ ನಿರ್ಣಾಯಕ ಕಲ್ಲಿದ್ದಲು ದಾಸ್ತಾನು ಸ್ಥಿತಿಯನ್ನು ನಿವಾರಿಸುವುದು ಸೇರಿದಂತೆ ವಿವಿಧ ಕಾರ್ಯಾಚರಣೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಂತರ-ಸಚಿವಾಲಯದ ಉಪ-ಗುಂಪು ನಿಯಮಿತವಾಗಿ ಸಭೆ ಸೇರುತ್ತದೆ.
ಇದನ್ನೂ ಓದಿ: Coal Mines: 40 ಹೊಸ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭಿಸಿದ ಕೇಂದ್ರ ಸರ್ಕಾರ