HDFC Bank: ಎಚ್ಡಿಎಫ್ಸಿ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ ದರಗಳ ಪರಿಷ್ಕರಣೆ; ಸಂಪೂರ್ಣ ವಿವರ ಇಲ್ಲಿದೆ
ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್ಡಿಎಫ್ಸಿ ಬ್ಯಾಂಕ್ನಿಂದ ಉಳಿತಾಯ ಬ್ಯಾಂಕ್ ಖಾತೆಯ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಸಕಾರಾತ್ಮಕ ಟ್ರೆಂಡ್ ಮತ್ತೆ ಕಾಣಿಸಿಕೊಂಡಿದ್ದು, ವಿವಿಧ ಠೇವಣಿಗಳ ಮೇಲೆ ಬಡ್ಡಿ ದರಗಳು ಹೆಚ್ಚಳ ಮಾಡಲಾಗುತ್ತಿದೆ. ಎಚ್ಡಿಎಫ್ಸಿ ಬ್ಯಾಂಕ್ನಿಂದ (HDFC Bank) ಗ್ರಾಹಕರ ಉಳಿತಾಯ ಖಾತೆಗಳ ಬಡ್ಡಿ ದರಗಳ ಪರಿಷ್ಕರಣೆ ಮಾಡಲಾಗಿದೆ. ಭಾರತದಲ್ಲೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್ಡಿಎಫ್ಸಿ ಬ್ಯಾಂಕ್ನಿಂದ ಉಳಿತಾಯ ಖಾತೆಯಲ್ಲಿನ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. ಈ ಬೆಳವಣಿಗೆ ಬಗ್ಗೆ ಎಚ್ಡಿಎಫ್ಸಿ ಬ್ಯಾಂಕ್ ವೆಬ್ಸೈಟ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. “ಫೆಬ್ರವರಿ 2, 2022ರಿಂದ ಅನ್ವಯ ಆಗುವಂತೆ ಬ್ಯಾಂಕ್ ಉಳಿತಾಯ ಠೇವಣಿ ಖಾತೆಯ ಬಡ್ಡಿ ದರದ ಪರಿಷ್ಕರಣೆ ಈ ಕೆಳಗಿನಂತೆ ಆಗಿದೆ,” ಎಂದು ವೆಬ್ಸೈಟ್ನಲ್ಲಿ ವಿವರ ಹಾಕಲಾಗಿದೆ. ಇದರ ಪ್ರಕಾರ, 50 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಇರುವ ಉಳಿತಾಯ ಖಾತೆಗಳಿಗೆ ಶೇ 3ರ ವಾರ್ಷಿಕ ಬಡ್ಡಿ ದರ ಇದೆ. 50 ಲಕ್ಷ ರೂಪಾಯಿ ಮೇಲ್ಪಟ್ಟು ಹಾಗೂ 1000 ಕೋಟಿ ರೂಪಾಯಿಗಿಂತ ಕಡಿಮೆ ಬಾಕಿಗೆ ಶೇ 3.50ರಷ್ಟು ಬಡ್ಡಿ ದರ ಇದೆ. 1000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಉಳಿತಾಯ ಖಾತೆ ಬಾಕಿಗೆ ಶೇ 4.50ರ ಬಡ್ಡಿ ಇದೆ.
ಎಚ್ಡಿಎಫ್ಸಿ ಬ್ಯಾಂಕ್ ಉಳಿತಾಯ ಖಾತೆ ಪರಿಷ್ಕೃತ ಬಡ್ಡಿ ದರಗಳು:
– ಉಳಿತಾಯ ಖಾತೆ ಬ್ಯಾಲೆನ್ಸ್ 50 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ- ಶೇ 3ರ ವಾರ್ಷಿಕ ಬಡ್ಡಿ ದರ
– ಉಳಿತಾಯ ಖಾತೆ ಬ್ಯಾಲೆನ್ಸ್ 50 ಲಕ್ಷ ಮೇಲ್ಪಟ್ಟು 1000 ಕೋಟಿ ರೂಪಾಯಿಯೊಳಗೆ ಇದ್ದಲ್ಲಿ- ಶೇ 3.50ರ ವಾರ್ಷಿಕ ಬಡ್ಡಿ ದರ
– ಉಳಿತಾಯ ಖಾತೆ ಬ್ಯಾಲೆನ್ಸ್ 1000 ಕೋಟಿ ರೂಪಾಯಿ ಮೇಲ್ಪಟ್ಟು- ಶೇ 4ರ ವಾರ್ಷಿಕ ಬಡ್ಡಿ ದರ
ಪರಿಷ್ಕೃತ ದರವು ದೇಶೀಯ, ಎನ್ಆರ್ಒ ಮತ್ತು ಎನ್ಆರ್ಇ ಉಳಿತಾಯ ಖಾತೆಗಳಿಗೆ ಪರಿಷ್ಕೃತ ದರಗಳು ಅನ್ವಯ ಆಗುತ್ತವೆ, ಎಂದು ಬ್ಯಾಂಕ್ ವೆಬ್ಸೈಟ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. “ಉಳಿತಾಯ ಬ್ಯಾಂಕ್ ಬಡ್ಡಿ ದರವನ್ನು ನಿಮ್ಮ ಖಾತೆಯಲ್ಲಿ ನಿರ್ವಹಣೆ ಮಾಡುವ ದಿನದ ಬ್ಯಾಲೆನ್ಸ್ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ,” ಎಂದು ತಿಳಿಸಲಾಗಿದೆ. ಉಳಿತಾಯ ಬ್ಯಾಂಕ್ ಬಡ್ಡಿ ದರವನ್ನು ತ್ರೈಮಾಸಿಕವಾಗಿ ಪಾವತಿಸಲಾಗುತ್ತದೆ, ಎಂದು ಇನ್ನಷ್ಟು ವಿವರ ನೀಡಿದೆ.
ಹಲವು ವರ್ಷಗಳಲ್ಲಿ ಉಳಿತಾಯ ಖಾತೆಯ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದ ಮೊದಲಿಗ ಬ್ಯಾಂಕ್ ಆಗಿದೆ ಎಚ್ಡಿಎಫ್ಸಿ ಬ್ಯಾಂಕ್. ಕೊನೆಯದಾಗಿ ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ 2020ರಲ್ಲಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿತು. ಅದೇ ವರ್ಷ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಸಹ ಪರಿಷ್ಕರಣೆ ಮಾಡಿತ್ತು. ಎಚ್ಡಿಎಫ್ಸಿ ಬ್ಯಾಂಕ್ನಿಂದ ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸೆಡ್ ಡೆಪಾಸಿಟ್ಗಳು ಮತ್ತು ರೆಕರಿಂಗ್ ಡೆಪಾಸಿಟ್ಗಳ ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡಿದ ಕೆಲ ದಿನಗಳಿಗೆ ಈ ಬೆಳವಣಿಗೆ ಆಗಿದೆ.
ಅಪ್ಡೇಟ್ ಅನುಸಾರವಾಗಿ, ಠೇವಣಿಯ ಅವಧಿ 7ರಿಂದ 14 ದಿನಗಳಿಗೆ ಮಾಮೂಲಿ ಬಡ್ಡಿ ದರ ವಾರ್ಷಿಕ ಶೇ 2.50 ಇದ್ದರೆ, ಹಿರಿಯ ನಾಗರಿಕರಿಗೆ ಶೇ 3ರ ಬಡ್ಡಿ ದರ ದೊರೆಯುತ್ತದೆ. 15ರಿಂದ 29 ದಿನದ ಅವಧಿಗೆ ಇದೇ ಬಡ್ಡಿ ಸಿಗುತ್ತದೆ. ಠೇವಣಿದಾರರಿಗೆ ಬಹುತೇಕ ಬ್ಯಾಂಕ್ಗಳ ಬಡ್ಡಿ ದರದ ಏರಿಕೆಯು ಶುಭ ಸುದ್ದಿಯಂತೆ ಬಂದಿದೆ. ಕಳೆದ ಕೆಲ ಸಮಯದಿಂದ ಬಡ್ಡಿ ದರ ಹತ್ತಿರಹತ್ತಿರ 20 ವರ್ಷಗಳ ಕನಿಷ್ಠ ಮಟ್ಟಕ್ಕಿಳಿದಿತ್ತು. ಒಂದು ವೇಳೆ ಬೇಸ್ ದರ ಇನ್ನಷ್ಟು ಹೆಚ್ಚಾದಲ್ಲಿ ಬಡ್ಡಿ ದರಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: IPPB- HDFC Bank Partnership: ಗೃಹ ಸಾಲ ವಿತರಣೆಗಾಗಿ ಐಪಿಪಿಬಿ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ಒಪ್ಪಂದ