HDFC Bank Q3 Results: ಎಚ್‌ಡಿಎಫ್‌ಸಿ ಬ್ಯಾಂಕ್ ಮೂರನೇ ತ್ರೈಮಾಸಿಕ ಲಾಭ 10342 ಕೋಟಿ ರೂಪಾಯಿ
ಎಚ್‌ಡಿಎಫ್‌ಸಿ ಬ್ಯಾಂಕ್ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶ ಘೋಷಣೆ ಮಾಡಿದ್ದು, ರೂ. 10342 ಕೋಟಿ ಲಾಭ ದಾಖಲಿಸಿದೆ.
ಹೆಚ್ಚಿನ ಸಾಲದ ಬೆಳವಣಿಗೆ ಮತ್ತು ಕಡಿಮೆ ಪ್ರಾವಿಷನ್ಗಳ ನೆರವಿನಿಂದ 2021ರ ಅಕ್ಟೋಬರ್ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ (Q3FY22) ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ನಿವ್ವಳ ಲಾಭದಲ್ಲಿ ಶೇಕಡಾ 18ರಷ್ಟು ಏರಿಕೆಯನ್ನು ಶನಿವಾರ ವರದಿ ಮಾಡಿದೆ. ಹಿಂದಿನ ಹಣಕಾಸು ವರ್ಷದ (FY21) ಇದೇ ತ್ರೈಮಾಸಿಕದಲ್ಲಿ 8,758.29 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, ಷೇರುಪೇಟೆಯ ಅಂದಾಜುಗಳಿಗೆ ಅನುಗುಣವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ನ ತೆರಿಗೆಯ ನಂತರದ ಲಾಭವು 10,342.2 ಕೋಟಿ ರೂಪಾಯಿ ಬಂದಿದೆ. ಬ್ಲೂಮ್‌ಬರ್ಗ್‌ನ ವಿಶ್ಲೇಷಕರು ರೂ. 10,136 ಕೋಟಿ ನಿವ್ವಳ ಲಾಭವನ್ನು ಅಂದಾಜಿಸಿದ್ದರು. ಬಡ್ಡಿಯ ಗಳಿಕೆಯಲ್ಲಿ ಬಡ್ಡಿಯ ವೆಚ್ಚವನ್ನು ಕಳೆದರೆ ಉಳಿಯುವುದು ನಿವ್ವಳ ಬಡ್ಡಿ ಆದಾಯ ಆಗುತ್ತದೆ. ಅದು Q3FY21ರ 16,317.6 ಕೋಟಿಗೆ ಹೋಲಿಸಿದರೆ Q3FY22ರಲ್ಲಿ 18,443.5 ಕೋಟಿಗೆ ಏರಿಕೆಯಾಗಿದೆ. ಅದಕ್ಕೆ ಬೆಂಬಲವಾಗಿ ಮುಂಗಡದಲ್ಲಿ ಶೇ 16.5ರಷ್ಟು ಬೆಳವಣಿಗೆ ಆಗಿದೆ. ನಿವ್ವಳ ಬಡ್ಡಿ ಮಾರ್ಜಿನ್, ಬ್ಯಾಂಕಿನ ಲಾಭದಾಯಕತೆಯ ಅಳತೆ, ವರದಿ ಮಾಡುವ ತ್ರೈಮಾಸಿಕದಲ್ಲಿ ಶೇಕಡಾ 4.1ರಷ್ಟಿದೆ.
ಶುಲ್ಕಗಳು ಮತ್ತು ಕಮಿಷನ್, ವಿದೇಶೀ ವಿನಿಮಯ ಮತ್ತು ಡೆರಿವೆಟಿವ್ ಆದಾಯ, ಹೂಡಿಕೆಗಳ ಮಾರಾಟದ ಲಾಭ ಮತ್ತು ವಿವಿಧ ಆದಾಯವನ್ನು ಒಳಗೊಂಡಿರುವ ಇತರ ಆದಾಯವು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಇದ್ದ 7,443.2 ಕೋಟಿ ರೂಪಾಯಿಗಳಿಂದ 8,1183.6 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಆದ್ದರಿಂದ ಬ್ಯಾಂಕ್ನ ನಿವ್ವಳ ಆದಾಯ, ನಿವ್ವಳ ಬಡ್ಡಿ ಆದಾಯ ಮತ್ತು ಇತರ ಆದಾಯದ ಒಟ್ಟು ಮೊತ್ತವು ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 12ರಷ್ಟು ಹೆಚ್ಚಳವಾಗಿ, 23,760.8 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ನ ಪ್ರಾವಿಷನ್ಸ್ ಈ ತ್ರೈಮಾಸಿಕದಲ್ಲಿ ಶೇಕಡಾ 12.3ರಷ್ಟು ಕಡಿಮೆಯಾಗಿ, 2,994 ಕೋಟಿ ರೂಪಾಯಿಗಳಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 3,414.1 ಕೋಟಿ ರೂಪಾಯಿ ಇತ್ತು. Q2FY22ರಲ್ಲಿ ಬ್ಯಾಂಕ್ 3,924.66 ಕೋಟಿ ರೂಪಾಯಿಗಳಿಗೆ ಪ್ರಾವಿಷನ್ ಮಾಡಿದೆ. ಬ್ಯಾಂಕ್ ಡಿಸೆಂಬರ್ 31, 2021ರಂತೆ ರೂ. 1,451 ಕೋಟಿಗಳ ಫ್ಲೋಟಿಂಗ್ ಪ್ರಾವಿಷನ್ ಮತ್ತು ರೂ. 8,636 ಕೋಟಿಗಳ ಕಂಟಿಂಜೆಂಟ್ ಪ್ರಾವಿಷನ್ ಮಾಡಿದೆ.
ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 1.35ಕ್ಕೆ ಹೋಲಿಸಿದರೆ Q3FY22ರಲ್ಲಿ ಶೇ 1.26ರ ಒಟ್ಟು ಅನುತ್ಪಾದಕ ಆಸ್ತಿಗಳ ಅನುಪಾತದೊಂದಿಗೆ (GNPAs) ಎಚ್‌ಡಿಎಫ್‌ಸಿ ಬ್ಯಾಂಕ್ ಆಸ್ತಿ ಗುಣಮಟ್ಟವು ಅನುಕ್ರಮವಾಗಿ ಸುಧಾರಿಸಿದೆ. ಅದೇ ರೀತಿ ನಿವ್ವಳ ಎನ್‌ಪಿಎ ಶೇ 0.37ಕ್ಕೆ ಸುಧಾರಿಸಿದೆ. ಬ್ಯಾಂಕ್ನ ಬಹಿರಂಗಪಡಿಸುವಿಕೆ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎರಡನೇ ಪುನರ್ರಚನೆ ವಿಂಡೋ ಅಡಿಯಲ್ಲಿ 18,019.85 ಕೋಟಿ ರೂಪಾಯಿ ಮೌಲ್ಯದ ಸಾಲಗಳನ್ನು ಪುನರ್ರಚಿಸಲಾಗಿದೆ. ಅದರಲ್ಲಿ 14,564 ಕೋಟಿ ರೂಪಾಯಿ ರೀಟೇಲ್ ಸಾಲಗಳು, 1,566 ಕೋಟಿ ರೂಪಾಯಿ ವೈಯಕ್ತಿಕ ಸಾಲಗಾರರಿಗೆ ವ್ಯಾಪಾರ ಸಾಲಗಳು ಮತ್ತು 1,889 ಕೋಟಿ ರೂಪಾಯಿ ಸಣ್ಣ ವ್ಯಾಪಾರ ಸಾಲಗಳಾಗಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಮುಂಗಡಗಳು ವರ್ಷದಿಂದ ವರ್ಷಕ್ಕೆ ಶೇ 16.5ರಷ್ಟು ಬೆಳೆದು ರೂ. 12.6 ಲಕ್ಷ ಕೋಟಿಗೆ ತಲುಪಿದೆ. ಇನ್ನು ರೀಟೇಲ್ ಸಾಲಗಳು ಶೇ 13.3ರಷ್ಟು, ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್ ಸಾಲಗಳು ಶೇಕಡಾ 29.4ರಷ್ಟು ಬೆಳೆಯುತ್ತಿವೆ. ಮತ್ತೊಂದೆಡೆ, ಕಾರ್ಪೊರೇಟ್ ಮತ್ತು ಸಗಟು ಸಾಲಗಳು ಶೇಕಡಾ 7.5 ರಷ್ಟು ಪ್ರಗತಿ ಸಾಧಿಸಿವೆ. ಡಿಸೆಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ ಒಟ್ಟು ಡೆಪಾಸಿಟ್ಗಳು ರೂ. 14.45 ಲಕ್ಷ ಕೋಟಿ ಆಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 13.8 ರಷ್ಟು ಹೆಚ್ಚಾಗಿದೆ. ಕಡಿಮೆ ವೆಚ್ಚದ ಠೇವಣಿಗಳು ಶೇ 24.6 ರಷ್ಟು ಏರಿಕೆಯಾಗಿದ್ದು, ಉಳಿತಾಯ ಖಾತೆ ಠೇವಣಿ 4.71 ಲಕ್ಷ ಕೋಟಿ ರೂಪಾಯಿ ಮತ್ತು ಚಾಲ್ತಿ ಖಾತೆ ಠೇವಣಿ 2.10 ಲಕ್ಷ ಕೋಟಿ ರೂಪಾಯಿ ಆಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಬೆಲೆ ಶುಕ್ರವಾರದಂದು ಬಿಎಸ್‌ಇಯಲ್ಲಿ ಶೇ 1ರಷ್ಟು ಏರಿಕೆಯಾಗಿ, 1,545 ರೂಪಾಯಿಗೆ ದಿನಾಂತ್ಯ ಕಂಡಿದೆ.