ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ಇಷ್ಟಬಂದಂತಿರುವಂತಿಲ್ಲ; 9 ಸ್ಟ್ಯಾಂಡರ್ಡ್ ಸೈಜ್ ನಿಗದಿ ಮಾಡಿದ ಸರ್ಕಾರ

Cooking Oil Standard Packaging Rules: ಕೇಂದ್ರ ಸರ್ಕಾರವು ಅಡುಗೆ ಎಣ್ಣೆ ಪ್ಯಾಕೇಜಿಂಗ್‌ಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ, ಕಂಪನಿಗಳು 9 ನಿರ್ದಿಷ್ಟ ಅಳತೆಗಳಲ್ಲಿ ಮಾತ್ರ ಎಣ್ಣೆಯನ್ನು ಮಾರಾಟ ಮಾಡಬೇಕು. ಪ್ಯಾಕೆಟ್ ಮೇಲೆ ಎಣ್ಣೆಯ ಪರಿಮಾಣ (ಲೀಟರ್/ಮಿಲಿಲೀಟರ್) ಹಾಗೂ ತೂಕ (ಕಿಲೋಗ್ರಾಂ/ಗ್ರಾಮ್) ಎರಡನ್ನೂ ಕಡ್ಡಾಯವಾಗಿ ನಮೂದಿಸಬೇಕು. ಇದು ಗ್ರಾಹಕರ ಗೊಂದಲ ನಿವಾರಿಸಿ, ಪಾರದರ್ಶಕತೆ ಹೆಚ್ಚಿಸಲು ಸಹಕಾರಿಯಾಗಿದೆ. ಕಂಪನಿಗಳಿಗೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ.

ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ಇಷ್ಟಬಂದಂತಿರುವಂತಿಲ್ಲ; 9 ಸ್ಟ್ಯಾಂಡರ್ಡ್ ಸೈಜ್ ನಿಗದಿ ಮಾಡಿದ ಸರ್ಕಾರ
ಅಡುಗೆ ಎಣ್ಣೆ
Image Credit source: Shutterstock

Updated on: Jun 07, 2026 | 3:23 PM

ನವದೆಹಲಿ, ಜೂನ್ 7: ಇನ್ಮುಂದೆ ಕಂಪನಿಗಳು ತಮಗೆ ಇಷ್ಟಬಂದ ಅಳತೆಯಲ್ಲಿ ಎಣ್ಣೆ ಪ್ಯಾಕೆಟ್ ತಯಾರಿಸುವಂತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ 9 ನಿರ್ದಿಷ್ಟ ಅಳತೆಗಳಲ್ಲಿ ಮಾತ್ರ ಅಡುಗೆ ಎಣ್ಣೆಯನ್ನು ಮಾರಾಟ ಮಾಡಬೇಕಾಗುತ್ತದೆ. ಪ್ಯಾಕೆಟ್‌ನ ಮೇಲೆ ಎಣ್ಣೆಯ ಪ್ರಮಾಣವನ್ನು ಲೀಟರ್ ಅಥವಾ ಮಿಲಿಲೀಟರ್‌ಗಳಲ್ಲಿ (Volume) ನಮೂದಿಸಿದರೆ, ಅದರ ಜೊತೆಗೆ ಕಡ್ಡಾಯವಾಗಿ ಅದಕ್ಕೆ ಸಮಾನವಾದ ಕಿಲೋಗ್ರಾಂ ಅಥವಾ ಗ್ರಾಮ್ (Weight) ತೂಕವನ್ನೂ ಮುದ್ರಿಸಬೇಕಾಗುತ್ತದೆ. ಗ್ರಾಹಕರು ಅಡುಗೆ ಎಣ್ಣೆ (Cooking Oil) ಖರೀದಿಸುವಾಗ ಎದುರಿಸುತ್ತಿದ್ದ ಗೊಂದಲವನ್ನು ನಿವಾರಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ‘ಲೀಗಲ್ ಮೆಟ್ರೋಲಜಿ’ (Legal Metrology) ನಿಯಮಾವಳಿಗಳ ಅಡಿಯಲ್ಲಿ ಹೊಸ ಕಡ್ಡಾಯ ನಿಯಮಗಳನ್ನು ಜಾರಿಗೆ ತರುತ್ತಿದೆ. ಅಡುಗೆ ಎಣ್ಣೆ ಕಂಪನಿಗಳಿಗೆ ಈ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರ 3 ತಿಂಗಳ ಕಾಲಾವಕಾಶ (Transition Period) ನೀಡಿದೆ.

ಗ್ರಾಹಕರಿಗೆ ಇದ್ದ ಗೊಂದಲವೇನು?

ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಗಳು 650g, 700g, 810g, 850g, 870g 970g ಇತ್ಯಾದಿ ವಿಚಿತ್ರ ಅಳತೆಗಳ ಪ್ಯಾಕೆಟ್‌ಗಳಲ್ಲಿ ಲಭ್ಯವಿವೆ. ಇವು ನೋಡಲು ಒಂದೇ ತರಹ ಕಂಡರೂ ತೂಕದಲ್ಲಿ ವ್ಯತ್ಯಾಸ ಇರುತ್ತದೆ. ಇದರಿಂದಾಗಿ ಗ್ರಾಹಕರಿಗೆ ಎರಡು ವಿಭಿನ್ನ ಬ್ರ್ಯಾಂಡ್‌ಗಳ ಬೆಲೆಯನ್ನು ಹೋಲಿಕೆ ಮಾಡಿ, ಯಾವುದು ಅಗ್ಗ ಮತ್ತು ಯಾವುದು ದುಬಾರಿ ಎಂದು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಕಂಪನಿಗಳು ಬೆಲೆ ಕಡಿಮೆ ಇರುವಂತೆ ತೋರಿಸಲು ಪ್ಯಾಕೆಟ್‌ನ ತೂಕವನ್ನು ಗುಟ್ಟಾಗಿ ಕಡಿಮೆ ಮಾಡುತ್ತಿದ್ದವು (ಇದನ್ನು ‘ಶ್ರಿಂಕ್‌ಫ್ಲೇಷನ್’ ಎನ್ನಲಾಗುತ್ತದೆ). ಮಹಾಭಾರತದಲ್ಲಿ ಧರ್ಮರಾಯ ದ್ರೋಣನಿಗೆ ‘ಅಶ್ವತ್ಥಾಮ ಹತಃ ನರಃ ವಾ ಕುಂಜರಃ’ (ಅಶ್ವತ್ಥಾಮ ಎನ್ನುವ ಮನುಷ್ಯನೋ ಅಥವಾ ಆನೆಯೋ ಕೊಲಲ್ಪಟ್ಟಿದೆ) ಎಂದು ಹೇಳುವಾಗ ಶ್ರೀಕೃಷ್ಣನು ‘ನರಃ’ ಪದ ಕೇಳಿಸದಂತೆ ಶಂಖ ಊದುತ್ತಾನೆ. ಆ ರೀತಿಯ ಕಂಡೂ ಕಾಣದ ಸತ್ಯವನ್ನು ಅಡುಗೆ ಎಣ್ಣೆಯ ಪ್ಯಾಕೆಟ್​ಗಳಲ್ಲಿ ಹಾಕಲಾಗುತ್ತದೆ.

ಇದನ್ನೂ ಓದಿ: ಸ್ಪೇಸ್​ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್

ನಿಗದಿಪಡಿಸಲಾದ 9 ಸ್ಟ್ಯಾಂಡರ್ಡ್ ಸೈಜ್‌ಗಳು

ಹೊಸ ನಿಯಮದ ಪ್ರಕಾರ, ಪ್ರಮುಖ ಅಡುಗೆ ಎಣ್ಣೆಗಳಾದ ಪಾಮ್ ಆಯಿಲ್, ಸೂರ್ಯಕಾಂತಿ (Sunflower), ಸಾಸಿವೆ (Mustard), ಸೋಯಾಬೀನ್, ಶೇಂಗಾ (Groundnut), ಎಳ್ಳೆಣ್ಣೆ, ತೌಡು ಎಣ್ಣೆ (Rice Bran), ಹತ್ತಿಬೀಜದ ಎಣ್ಣೆ ಮತ್ತು ಜೋಳದ ಎಣ್ಣೆಗಳನ್ನು ಈ ಕೆಳಗಿನ ಸೈಜ್‌ಗಳಲ್ಲಿ ಮಾತ್ರ ಪ್ಯಾಕ್ ಮಾಡಬೇಕು:

ಸಣ್ಣ ಮತ್ತು ಮಧ್ಯಮ ಪ್ಯಾಕ್: 200 ml/g, 500 ml/g, 1 ಲೀಟರ್/kg, 2 ಲೀಟರ್/kg, 3 ಲೀಟರ್/kg, 4 ಲೀಟರ್/kg, 5 ಲೀಟರ್/kg.

ಬಲ್ಕ್ (ದೊಡ್ಡ) ಪ್ಯಾಕ್: 15 ಲೀಟರ್/kg ಮತ್ತು 20 ಲೀಟರ್/kg.

ಬಜೆಟ್ ಪ್ಯಾಕ್​ಗಳಿಗೆ ವಿನಾಯಿತಿ

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸುಲಭ ಬೆಲೆಯಲ್ಲಿ ಸಿಗುವ 200 ಮಿಲಿಲೀಟರ್ ಅಥವಾ 200 ಗ್ರಾಮ್‌ಗಿಂತ ಕಡಿಮೆ ಇರುವ ಸಣ್ಣ ಸ್ಯಾಚೆಟ್‌ಗಳಿಗೆ (Sachets) ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ ಬಾದಾಮಿ ಎಣ್ಣೆ, ಆಲಿವ್ ಆಯಿಲ್, ಅಕ್ರೋಟ್ (Walnut) ಎಣ್ಣೆಯಂತಹ ಮೈನರ್/ನಿಶ್ (Minor/Niche) ತೈಲಗಳಿಗೂ ಇದರಿಂದ ವಿನಾಯಿತಿ ಇದೆ.

ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?

ತೂಕ ಮತ್ತು ಲೀಟರ್ ಲೆಕ್ಕ ಕಡ್ಡಾಯ

ತಾಪಮಾನಕ್ಕೆ ಅನುಗುಣವಾಗಿ ಎಣ್ಣೆಯ ಸಾಂದ್ರತೆ (Density) ಬದಲಾಗುತ್ತದೆ. ಉದಾಹರಣೆಗೆ, 1 ಲೀಟರ್ ಅಡುಗೆ ಎಣ್ಣೆಯ ತೂಕ ಸಾಮಾನ್ಯವಾಗಿ ಸುಮಾರು 910 ಗ್ರಾಮ್ ಇರುತ್ತದೆ. ಈ ವ್ಯತ್ಯಾಸದಿಂದ ಗ್ರಾಹಕರು ಮೋಸ ಹೋಗಬಾರದು ಎಂಬ ಕಾರಣಕ್ಕೆ ಲೀಟರ್ ಜೊತೆಗೆ ಅದರ ನಿಖರ ತೂಕವನ್ನೂ (ಗ್ರಾಮ್/ಕೆಜಿ ಯಲ್ಲಿ) ಕಡ್ಡಾಯವಾಗಿ ಮುದ್ರಿಸಲು ಸೂಚಿಸಲಾಗಿದೆ.

ಕಂಪನಿಗಳು ತಮ್ಮ ಹಳೆಯ ಪ್ಯಾಕೇಜಿಂಗ್ ಸ್ಟಾಕ್ ಅನ್ನು ಖಾಲಿ ಮಾಡಲು 3 ತಿಂಗಳ ಸಮಯಾವಕಾಶ ನೀಡಲಾಗಿದ್ದು, ಇಲಾಖೆಯ ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಬರಲಿದೆ ಮತ್ತು ಗ್ರಾಹಕರು ಸುಲಭವಾಗಿ ಬೆಲೆಗಳನ್ನು ಹೋಲಿಕೆ ಮಾಡಿ ಖರೀದಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us