ಸ್ಪೇಸ್‌ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್
Google-SpaceX AI Deal: ಗೂಗಲ್ ತನ್ನ ಜೆಮಿನಿ ಎಂಟರ್‌ಪ್ರೈಸ್ AI ಪ್ಲಾಟ್‌ಫಾರ್ಮ್‌ನ ಹೆಚ್ಚಿದ ಬೇಡಿಕೆ ಪೂರೈಸಲು ಸ್ಪೇಸ್‌ಎಕ್ಸ್‌ನ ಎಐ ಕಂಪ್ಯೂಟಿಂಗ್ ಸೌಲಭ್ಯಗಳನ್ನು ಬಳಸಿಕೊಳ್ಳಲು ಬೃಹತ್ ಒಪ್ಪಂದ ಮಾಡಿಕೊಂಡಿದೆ. ಗೂಗಲ್ ಪ್ರತಿ ತಿಂಗಳು $920 ಮಿಲಿಯನ್ (ಸುಮಾರು 8700 ಕೋಟಿ ರೂ.) ಸ್ಪೇಸ್‌ಎಕ್ಸ್‌ಗೆ ಪಾವತಿಸಲಿದೆ. ಈ 32 ತಿಂಗಳ ಒಪ್ಪಂದದಡಿ, ಗೂಗಲ್ ಸ್ಪೇಸ್‌ಎಕ್ಸ್‌ನ 1.1 ಲಕ್ಷ ಎನ್‌ವಿಡಿಯಾ GPU ಗಳನ್ನು ಬಳಸಿಕೊಳ್ಳಲಿದ್ದು, ಸ್ಪೇಸ್‌ಎಕ್ಸ್‌ಗೆ IPO ಮುನ್ನ ದೊಡ್ಡ ಲಾಭ ಸಿಕ್ಕಿದೆ.

ಕ್ಯಾಲಿಫೋರ್ನಿಯಾ, ಜೂನ್ 7: ಗೂಗಲ್ ಮತ್ತು ಸ್ಪೇಸ್‌ಎಕ್ಸ್ (SpaceX) ನಡುವೆ ಒಂದು ಬೃಹತ್ ಒಪ್ಪಂದ ನಡೆದಿದೆ. ಸ್ಪೇಸ್‌ಎಕ್ಸ್‌ನ ಎಐ ಕಂಪ್ಯೂಟಿಂಗ್ ಸೌಲಭ್ಯ ಬಳಸಲು ಗೂಗಲ್ ಈ ಡೀಲ್ ಮಅಡಿಕೊಂಡಿದೆ. ಅದರಂತೆ, ಗೂಗಲ್ ಸಂಸ್ಥೆಯು ಸ್ಪೇಸ್‌ಎಕ್ಸ್‌ಗೆ ಪ್ರತಿ ತಿಂಗಳು $920 ಮಿಲಿಯನ್ (ಸುಮಾರು 8,700 ಕೋಟಿ ರುಪಾಯಿ) ಹಣವನ್ನು ಪಾವತಿಸಲಿದೆ. ಈ ಒಪ್ಪಂದವು ಒಟ್ಟು 32 ತಿಂಗಳುಗಳ ಕಾಲ (ಈ ವರ್ಷದ ಅಕ್ಟೋಬರ್‌ನಿಂದ ಜೂನ್ 2029 ರವರೆಗೆ) ಚಾಲ್ತಿಯಲ್ಲಿರಲಿದೆ. ಇಲಾನ್ ಮಸ್ಕ್ (Elon Musk) ಅವರ AI ಕಂಪನಿಯಾದ xAI ಡೇಟಾ ಸೆಂಟರ್‌ಗಳಲ್ಲಿನ ಕೃತಕ ಬುದ್ಧಿಮತ್ತೆ (AI) ಕಂಪ್ಯೂಟಿಂಗ್ ಸೌಲಭ್ಯವನ್ನು (Compute Capacity) ಬಾಡಿಗೆಗೆ ಪಡೆಯಲು ಗೂಗಲ್ ಈ ಒಪ್ಪಂದ ಮಾಡಿಕೊಂಡಿದೆ.
ಗೂಗಲ್ ಏಕೆ ಈ ಒಪ್ಪಂದ ಮಾಡಿಕೊಂಡಿದೆ?
ಗೂಗಲ್ ತನ್ನ ದೊಡ್ಡ ಉದ್ಯಮ ಗ್ರಾಹಕರಿಗಾಗಿ ಪರಿಚಯಿಸಿರುವ ‘ಜೆಮಿನಿ ಎಂಟರ್‌ಪ್ರೈಸ್’ (Gemini Enterprise) ಎಂಬ AI ಪ್ಲಾಟ್‌ಫಾರ್ಮ್‌ಗೆ ಜಾಗತಿಕವಾಗಿ ನಿರೀಕ್ಷೆಗಿಂತಲೂ ಹೆಚ್ಚಿನ ಬೇಡಿಕೆ ಬಂದಿದೆ. ಈ ಗ್ರಾಹಕರ ಬೇಡಿಕೆಯನ್ನು ತಕ್ಷಣವೇ ಪೂರೈಸಲು ಗೂಗಲ್‌ಗೆ ಬೃಹತ್ ಮಟ್ಟದ ತಾಂತ್ರಿಕ ಮೂಲಸೌಕರ್ಯದ (Infrastructure) ಅಗತ್ಯವಿತ್ತು. ಅದಕ್ಕಾಗಿ ಸ್ಪೇಸ್‌ಎಕ್ಸ್‌ನ ಡೇಟಾ ಸೆಂಟರ್‌ಗಳನ್ನು ಬಳಸಿಕೊಳ್ಳಲು ಗೂಗಲ್ ನಿರ್ಧರಿಸಿದೆ.
ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?
ಗೂಗಲ್ ಏನನ್ನು ಬಳಸಿಕೊಳ್ಳಲಿದೆ?
ಈ ಒಪ್ಪಂದದ ಪ್ರಕಾರ, ಸ್ಪೇಸ್‌ಎಕ್ಸ್‌ನ ಡೇಟಾ ಸೆಂಟರ್‌ಗಳಲ್ಲಿರುವ ಸುಮಾರು 1,10,000 ಎನ್‌ವಿಡಿಯಾ (Nvidia) ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್‌ಗಳನ್ನು (GPUs) ಹಾಗೂ ಇತರ ಸೆಂಟ್ರಲ್ ಪ್ರೊಸೆಸರ್‌ಗಳು ಮತ್ತು ಮೆಮೊರಿ ಘಟಕಗಳನ್ನು ಗೂಗಲ್ ಬಳಸಿಕೊಳ್ಳಲಿದೆ. ಸೆಪ್ಟೆಂಬರ್ 30, 2026 ರೊಳಗೆ ಸ್ಪೇಸ್‌ಎಕ್ಸ್ ಈ ಭರವಸೆ ನೀಡಿದಷ್ಟು ಜಿಪಿಯು (GPU) ಸಾಮರ್ಥ್ಯವನ್ನು ಒದಗಿಸಲು ವಿಫಲವಾದರೆ, ಗೂಗಲ್ ಈ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸುವ ಹಕ್ಕನ್ನು ಹೊಂದಿದೆ.
ಸ್ಪೇಸ್‌ಎಕ್ಸ್‌ಗೆ ಇದರಿಂದ ಏನು ಲಾಭ?
ಸ್ಪೇಸ್‌ಎಕ್ಸ್ ಸಂಸ್ಥೆಯು ಮುಂದಿನ ವಾರವಷ್ಟೇ ಷೇರು ಮಾರುಕಟ್ಟೆಯಲ್ಲಿ ತನ್ನ ಐಪಿಒ (IPO – Initial Public Offering) ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಕಂಪನಿಯು ಸಾರ್ವಜನಿಕವಾಗಿ ಲಿಸ್ಟ್ ಆಗುವ ಮುನ್ನವೇ ಇಂತಹ ಬೃಹತ್ ಒಪ್ಪಂದ ಮಾಡಿಕೊಂಡಿರುವುದು ಹೂಡಿಕೆದಾರರಲ್ಲಿ ಭಾರಿ ನಂಬಿಕೆ ಮೂಡಿಸಿದೆ. ಅಲ್ಲದೆ, ಫೆಬ್ರವರಿಯಲ್ಲಿ ಇಲಾನ್ ಮಸ್ಕ್ ಅವರ AI ಸ್ಟಾರ್ಟ್‌ಅಪ್ ‘xAI’ ಅನ್ನು ಸ್ಪೇಸ್‌ಎಕ್ಸ್‌ನೊಂದಿಗೆ ವಿಲೀನಗೊಳಿಸಲಾಗಿತ್ತು. ಆ ಡೇಟಾ ಸೆಂಟರ್‌ಗಳಿಂದ ಆದಾಯ ಗಳಿಸಲು ಸ್ಪೇಸ್‌ಎಕ್ಸ್‌ಗೆ ಈ ಒಪ್ಪಂದ ದೊಡ್ಡ ನೆರವಾಗಿದೆ. ಗೂಗಲ್‌ಗಿಂತ ಮುಂಚೆ, ಮೇ ತಿಂಗಳಲ್ಲಿ ‘ಆಂಥ್ರೋಪಿಕ್’ (Anthropic) ಕಂಪನಿಯೂ ಸಹ ಸ್ಪೇಸ್‌ಎಕ್ಸ್ ಜೊತೆ ಇಂತಹುದೇ ಒಪ್ಪಂದ ಮಾಡಿಕೊಂಡಿತ್ತು.
ಇದನ್ನೂ ಓದಿ: ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು
ಗೂಗಲ್ ಮತ್ತು ಇಲಾನ್ ಮಸ್ಕ್ ಸಂಬಂಧ
ವಿಶೇಷವೆಂದರೆ, ಗೂಗಲ್‌ನ ಪೋಷಕ ಸಂಸ್ಥೆಯಾದ ಆಲ್ಫಾಬೆಟ್ (Alphabet), 2015 ರಲ್ಲೇ ಸ್ಪೇಸ್‌ಎಕ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಿತ್ತು. ಆಗ ಸ್ಪೇಸ್‌ಎಕ್ಸ್ ಮೌಲ್ಯ ಕೇವಲ $12 ಬಿಲಿಯನ್ ಆಗಿತ್ತು. ಆದರೆ ಮುಂದಿನ ವಾರ ಐಪಿಒ ಬರಲಿರುವ ಸ್ಪೇಸ್‌ಎಕ್ಸ್ ಕಂಪನಿಯ ಒಟ್ಟು ಮೌಲ್ಯ ಈಗ $1.75 ಟ್ರಿಲಿಯನ್ (165 ಲಕ್ಷ ಕೋಟಿ ರೂ) ದಾಟುವ ನಿರೀಕ್ಷೆಯಿದೆ. ಇದರಿಂದಾಗಿ ಗೂಗಲ್‌ಗೆ ಹಳೆಯ ಹೂಡಿಕೆಯಿಂದಲೂ ಭಾರಿ ಲಾಭ ಸಿಕ್ಕಂತಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್, ಓಪನ್ಎಐ ಮತ್ತು ಮೆಟಾ ಕಂಪನಿಗಳಿಗೆ ತೀವ್ರ ಪೈಪೋಟಿ ನೀಡಲು ಗೂಗಲ್ ತನ್ನ AI ತಂತ್ರಜ್ಞಾನದ ಮೇಲಿನ ವೆಚ್ಚವನ್ನು ಈ ವರ್ಷ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




