AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲೆಕ್ಟ್ರಿಕ್ ಮೊಬಿಲಿಟಿ ಪ್ರಬಲಗೊಳಿಸುವ ಬಗೆ ಹೇಗೆ? ದೆಹಲಿಯಲ್ಲಿ ‘EVolve’ ಕಾರ್ಯಕ್ರಮದಲ್ಲಿ ವ್ಯಾಪಕ ಚರ್ಚೆ

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸಿಪಿಆರ್‌ಜಿ ವತಿಯಿಂದ 'ಇವಾಲ್ವ್: ಎಲೆಕ್ಟ್ರಿಕ್ ಮೊಬಿಲಿಟಿ ಕಾನ್‌ಕ್ಲೇವ್' ಆಯೋಜಿಸಲಾಗಿತ್ತು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಾರಿಗೆ ವ್ಯವಸ್ಥೆ, ಹಸಿರು ಹೂಡಿಕೆ, ನೀತಿ ನಿಯಮಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ಪ್ರಮುಖ ನಾಯಕರು ಚರ್ಚೆ ನಡೆಸಿದರು. ವಿವಿಧ ವಿಷಯಗಳಾಧಾರಿತವಾದ ಗೋಷ್ಠಿಗಳೂ ಈ ಕಾರ್ಯಕ್ರಮದಲ್ಲಿ ನಡೆದವು.

ಎಲೆಕ್ಟ್ರಿಕ್ ಮೊಬಿಲಿಟಿ ಪ್ರಬಲಗೊಳಿಸುವ ಬಗೆ ಹೇಗೆ? ದೆಹಲಿಯಲ್ಲಿ ‘EVolve’ ಕಾರ್ಯಕ್ರಮದಲ್ಲಿ ವ್ಯಾಪಕ ಚರ್ಚೆ
ದೆಹಲಿ ಲೆಫ್ಟಿನೆಂಟ್ ಗವರ್ನರ್ ಸರ್ದಾರ್ ತರಂಜೀತ್ ಸಿಂಗ್ ಸಂಧುImage Credit source: Press Release
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2026 | 11:55 AM

Share

ನವದೆಹಲಿ, ಅಕ್ಟೋಬರ್ 1: “ಹಸಿರು ಇಂಧನದಿಂದ ಚಾಲಿತವಾಗುವ ಸ್ವಚ್ಛ ಸಾರಿಗೆ ವ್ಯವಸ್ಥೆಯು ಹವಾಮಾನ ವೈಪರೀತ್ಯವನ್ನು ಎದುರಿಸಲು ಇರುವ ಅತ್ಯಂತ ಶಕ್ತಿಯುತ ಅಸ್ತ್ರವಾಗಿದೆ” ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಸರ್ದಾರ್ ತರಂಜೀತ್ ಸಿಂಗ್ ಸಂಧು ಅವರು ಅಭಿಪ್ರಾಯಪಟ್ಟಿದ್ದಾರೆ. ಸೆಂಟರ್ ಆಫ್ ಪಾಲಿಸಿ ರಿಸರ್ಚ್ ಅಂಡ್ ಗವರ್ನೆನ್ಸ್ (CPRG) ಸಂಸ್ಥೆಯು ದೆಹಲಿಯ ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್‌ನ (IHC) ಗುಲ್ಮೋಹರ್ ಹಾಲ್‌ನಲ್ಲಿ ಆಯೋಜಿಸಿದ್ದ “ಇವಾಲ್ವ್: ಕಾನ್‌ಕ್ಲೇವ್ ಆನ್ ಎಲೆಕ್ಟ್ರಿಕ್ ಮೊಬಿಲಿಟಿ” (EVolve) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

“ಈ ಬದಲಾವಣೆಯು ನಾಗರಿಕ ಕೇಂದ್ರಿತವಾಗಿರಬೇಕು. ರಸ್ತೆಯಲ್ಲಿರುವ ಇವಿ ವಾಹನಗಳ ಸಂಖ್ಯೆಯಿಂದ ಮಾತ್ರ ಇದರ ಯಶಸ್ಸನ್ನು ಅಳೆಯಬಾರದು, ಬದಲಿಗೆ ಅನುಕೂಲಕರ ಚಾರ್ಜಿಂಗ್ ಮೂಲಸೌಕರ್ಯಗಳೊಂದಿಗೆ ನಾಗರಿಕರಿಗೆ ನಗರದಲ್ಲಿ ಸಂಚರಿಸಲು ಪರಿಣಾಮಕಾರಿ ಮತ್ತು ಸ್ವಚ್ಛ ಮಾರ್ಗಗಳು ಸಿಗುತ್ತಿವೆಯೇ ಎಂಬುದನ್ನು ನೋಡಬೇಕು” ಎಂದು ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: LPG Cylinder Price Hike: ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಹೆಚ್ಚಿದ ಹೊರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಭಾರೀ ಹೆಚ್ಚಳ

ಆಡಳಿತದಲ್ಲಿ ಹೆಚ್ಚು ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಉತ್ತೇಜನ: ಸಿಪಿಆರ್​ಜಿ ನಿರ್ದೇಶಕ ರಮಾನಂದ್

ಸಿಪಿಆರ್‌ಜಿ ನಿರ್ದೇಶಕ ಡಾ. ರಮಾನಂದ್ ಅವರು ಇದಕ್ಕೂ ಮುನ್ನ ಮಾತನಾಡಿ, “ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು ಮಾತ್ರವಲ್ಲದೆ, ಆಡಳಿತದಲ್ಲಿ ವ್ಯಾಪಕ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಇವಾಲ್ವ್ ಕಾನ್‌ಕ್ಲೇವ್ ಎಲೆಕ್ಟ್ರಿಕ್ ಮೊಬಿಲಿಟಿ ಕುರಿತು ವಿವಿಧ ದೃಷ್ಟಿಕೋನಗಳನ್ನು ಒಂದೇ ವೇದಿಕೆಗೆ ತರುವುದು ಇಂತಹದೊಂದು ಪ್ರಯತ್ನವಾಗಿದೆ” ಎಂದರು.

CPRG hosts EVolve electric mobility conclave in Delhi Brings Together multi stakeholders

ಸಿಪಿಆರ್​ಜಿ ನಿರ್ದೇಶಕ ರಮಾನಂದ್ ಹಾಗು ಅಭಯ್ ಖರಂದಿಕರ್

ಇನ್ನು, ಗೌರವಾನ್ವಿತ ಅತಿಥಿಯಾಗಿ ಮಾತನಾಡಿದ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಶ್ರೀ ಬರ್ಜಿಸ್ ದೇಸಾಯಿ, “ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ನಾವೀನ್ಯತೆಯನ್ನು ತರಲು ನವೋದ್ಯಮಗಳು (Startups) ಪ್ರಮುಖವಾಗಿವೆ. ಅವರಿಗೆ ಕೇವಲ ಬಂಡವಾಳ ಮಾತ್ರವಲ್ಲ, ಪಾಲುದಾರರ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ಎಲೆಕ್ಟ್ರಿಕ್ ಸಾರಿಗೆಯನ್ನು ವಿಸ್ತರಿಸಲು ಅಗತ್ಯವಿರುವ ಆರ್ಥಿಕ ತಂತ್ರಗಳು, ಹಸಿರು ಧನಸಹಾಯ (Green Finance), ನಿಯಂತ್ರಣ ಚೌಕಟ್ಟುಗಳು ಮತ್ತು ಕೈಗಾರಿಕಾ ಬದಲಾವಣೆಗಳ ಕುರಿತು ಚರ್ಚಿಸಲು ಹಿರಿಯ ಸರ್ಕಾರಿ ಅಧಿಕಾರಿಗಳು, ನಿಯಂತ್ರಕರು, ಉದ್ಯಮದ ಗಣ್ಯರು, ಶೈಕ್ಷಣಿಕ ತಜ್ಞರು ಮತ್ತು ನೀತಿ ಸಂಶೋಧಕರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಅ. 1ರಿಂದ ಹಣಕಾಸು ಬದಲಾವಣೆಗಳು: ಎಟಿಎಂ, ಎಫ್‌ಡಿ, ಕ್ರೆಡಿಟ್ ಕಾರ್ಡ್, ಎಲ್​ಪಿಜಿ, ಮ್ಯೂಚುವಲ್ ಫಂಡ್ ಹೊಸ ನಿಯಮಗಳು

ಇವಾಲ್ವ್ ಸಮಾವೇಶದಲ್ಲಿ ಹಲವು ವಿಷಯಾಧಾರಿತ ಗೋಷ್ಠಿಗಳು ನಡೆದವು. ಎಲೆಕ್ಟ್ರಿಕ್ ಮೊಬಿಲಿಟಿಗೆ ಆರ್ಥಿಕ ತಂತ್ರಜ್ಞಾನ; ಗ್ರೀನ್ ಫಂಡಿಂಗ್ ಮತ್ತು ಸಹಭಾಗಿತ್ವ; ಉದ್ಯಮ, ಇಂಧನ ಮತ್ತು ಭವಿಷ್ಯದ ಬದಲಾವಣೆ ಇತ್ಯಾದಿ ವಿಷಯಗಳ ಮೇಲೆ ಚರ್ಚಾ ಗೋಷ್ಠಿಗಳು ನಡೆದವು. ಉದ್ಯಮ ಮುಖಂಡರು, ಆಂಟ್ರಪ್ರನ್ಯೂರ್​ಗಳು, ತಜ್ಞರು ಈ ಗೋಷ್ಠಿಗಳಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮ ಆಯೋಜಿಸಿದ ಸೆಂಟರ್ ಆಫ್ ಪಾಲಿಸಿ ರಿಸರ್ಚ್ ಅಂಡ್ ಗವರ್ನೆನ್ಸ್ (CPRG) ಎಂಬುದು ನೀತಿ ಸಂಶೋಧನಾ ಸಂಸ್ಥೆಯಾಗಿದೆ (Think Tank). ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿಯಿಂದ (ICSSR) ಮಾನ್ಯತೆ ಪಡೆದಿದೆ. ಇದು ತಂತ್ರಜ್ಞಾನ ನೀತಿಯಲ್ಲಿ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದ್ದು, ಎಲೆಕ್ಟ್ರಿಕ್ ವಾಹನ (EV) ನೀತಿಯಲ್ಲಿ ದೆಹಲಿ ಸರ್ಕಾರಕ್ಕೆ ಜ್ಞಾನ ಪಾಲುದಾರನಾಗಿಯೂ (Knowledge Partner) ಕಾರ್ಯನಿರ್ವಹಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More