ನವದೆಹಲಿ, ಸೆಪ್ಟೆಂಬರ್ 28: ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ 2023ರ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ (CAD- Current Account Deficit) 9.2 ಬಿಲಿಯನ್ ಡಾಲರ್ಗೆ ಹಿಗ್ಗಿದೆ. ಅಂದರೆ ಸುಮಾರು 76,000 ಕೋಟಿ ರೂನಷ್ಟು ಕೊರತೆ ಇದೆ. ಆರ್ಬಿಐ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಚಾಲ್ತಿ ಖಾತೆ ಕೊರತೆ ದೇಶದ ಜಿಡಿಪಿಯ ಶೇ. 1.1ರಷ್ಟಿದೆ. ಹಿಂದಿನ ಕ್ವಾರ್ಟರ್ಗೆ ಹೋಲಿಸಿದರೆ ಕೊರತೆ ಸಾಕಷ್ಟು ಹಿಗ್ಗಿದೆ. ಆದರೆ, ವರ್ಷದ ಹಿಂದಿನ ಇದೇ ಕ್ವಾರ್ಟರ್ಗೆ ಹೋಲಿಸಿದರೆ ಕರೆಂಟ್ ಅಕೌಂಟ್ ಡೆಫಿಸಿಟ್ ಬಹಳಷ್ಟು ತಗ್ಗಿದೆ.
ಹಿಂದಿನ ತ್ರೈಮಾಸಿಕವಾದ 2023ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಚಾಲ್ತಿ ಖಾತೆ ಕೊರತೆ ಅಥವಾ ಸಿಎಡಿ ಕೇವಲ 1.3 ಬಿಲಿಯನ್ ಡಾಲರ್ ಇತ್ತು. ಅಂದರೆ ಕೊರತೆಯು ಜಿಡಿಪಿಯ ಶೇ. 1.1ರಷ್ಟಿತ್ತು. ಈ ಕ್ವಾರ್ಟರ್ನಲ್ಲಿ ಇದು ಏಳು ಪಟ್ಟು ಹೆಚ್ಚಾಗಿದೆ. ಇನ್ನು, ವರ್ಷದ ಹಿಂದಿನ ಇದೇ ಅವಧಿಯಲ್ಲಿ, ಅಂದರೆ 2022ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಸಿಎಡಿ ಬರೋಬ್ಬರಿ 17.9 ಬಿಲಿಯನ್ನಷ್ಟಿತ್ತು. ಇದು ಜಿಡಿಪಿಯ ಶೇ. 2.1ರಷ್ಟಾಗಿತ್ತು.
ಇದನ್ನೂ ಓದಿ: ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಮನೆ ಬಾಗಿಲಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಪಡೆಯಿರಿ: ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ
ಈ ಬಾರಿ ಸಿಎಡಿ ಹೆಚ್ಚಲು ಕಾರಣವಾಗಿದ್ದು, ಸರಕು ವಹಿವಾಟಿನಲ್ಲಿನ ಅಂತರದಲ್ಲಿ ಹೆಚ್ಚಳ. ಹಾಗೆಯೇ, ಸರ್ವಿಸ್ ವಹಿವಾಟಿನಲ್ಲಿ ಹೆಚ್ಚಳ ಪ್ರಮಾಣ ತಗ್ಗಿದ್ದು ಮತ್ತು ಖಾಸಗಿ ಟ್ರಾನ್ಸ್ಫರ್ ರಿಸಿಪ್ಟ್ನಲ್ಲಿ ಇಳಿಕೆಯಾಗಿದ್ದೂ ಕೂಡ ಚಾಲ್ತಿ ಖಾತೆ ಕೊರತೆ ಹೆಚ್ಚಲು ಕಾರಣವಾಗಿದೆ.
ಸರಕು ವ್ಯಾಪಾರ ಕೊರತೆ 63.1 ಬಿಲಿಯನ್ ಡಾಲರ್ ಇದ್ದದ್ದು 56.6 ಬಿಲಿಯನ್ ಡಾಲರ್ಗೆ ಇಳಿದಿದೆ. ಆದರೂ ಕೂಡ ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಇದ್ದ 52.6 ಬಿಲಿಯನ್ ಡಾಲರ್ಗೆ ಹೋಲಿಸಿದರೆ ಅದರ ಕೊರತೆ ತುಸು ಹೆಚ್ಚಳವಾಗಿದೆ.
ಇನ್ನು, ಭಾರತದ ಪ್ರಮುಖ ರಫ್ತು ಎನಿಸಿರುವ ಸೇವಾ ಕ್ಷೇತ್ರದಲ್ಲಿ ತುಸು ಇಳಿಮುಖವಾಗಿದೆ. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಸರ್ವಿಸ್ ಸೆಕ್ಟರ್ನ ವ್ಯಾಪಾರ ಹೆಚ್ಚುವರಿ ಮೊತ್ತ 39.1 ಬಿಲಿಯನ್ ಡಾಲರ್ ಇತ್ತು. ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ ಇದು 35.1 ಬಿಲಿಯನ್ ಡಾಲರ್ಗೆ ಇಳಿದಿದೆ. ಹೀಗಾಗಿ, ಒಟ್ಟಾರೆಯಾಗಿ ಚಾಲ್ತಿ ಖಾತೆ ಕೊರತೆ ತುಸು ಏರಿಕೆಯಾಗಿದೆ.
ಒಂದು ದೇಶದ ಚಾಲ್ತಿ ಖಾತೆ ಕೊರತೆ ಎಂದರೆ ಅದರ ಒಟ್ಟಾರೆ ಸರಕು ಮತ್ತು ಸೇವೆಗಳ ಆಮದು ಹಾಗೂ ರಫ್ತಿನ ನಡುವೆ ಇರುವ ಅಂತರ. ರಫ್ತಿಗಿಂತ ಆಮದು ಹೆಚ್ಚಾಗಿದ್ದರೆ ಆಗ ಚಾಲ್ತಿ ಖಾತೆ ಕೊರತೆ ಎನಿಸುತ್ತದೆ. ಅದೇ ಆಮದಿಗಿಂತ ರಫ್ತು ಹೆಚ್ಚಾಗಿದ್ದರೆ ಆಗ ಚಾಲ್ತಿ ಖಾತೆ ಹೆಚ್ಚುವರಿ (Current Account Surplus) ಎನಿಸುತ್ತದೆ.
ಅತಿಹೆಚ್ಚು ಚಾಲ್ತಿ ಖಾತೆ ಕೊರತೆ ಇರುವ ದೇಶಗಳಲ್ಲಿ ಅಮೆರಿಕ, ಬ್ರಿಟನ್, ಭಾರತ, ಫ್ರಾನ್ಸ್, ಬ್ರೆಜಿಲ್ ಮೊದಲಾದವುಗಳಿವೆ. ಇನ್ನು, ಕರೆಂಟ್ ಅಕೌಂಟ್ ಸರ್ಪ್ಲಸ್ ಇರುವ ದೇಶಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ರಷ್ಯಾ, ನಾರ್ವೆ, ಜರ್ಮನಿ, ಸೌದಿ ಅರೇಬಿಯಾ, ಜಪಾನ್ ಮೊದಲಾದವುಗಳೂ ಈ ಪಟ್ಟಿಯಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ