ಆಟೊ ಪೇಮೆಂಟ್ ಗಡುವು ವಿಸ್ತರಿಸಿದ ರಿಸರ್ವ್ ಬ್ಯಾಂಕ್: ಕ್ರೆಡಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್ ಕಂಪನಿಗಳು ಸದ್ಯಕ್ಕೆ ನಿರಾಳ
credit card auto-payment: ಗ್ರಾಹಕರಿಗೆ ಮುಂಚಿತವಾಗಿ ತಿಳಿಸದೇ, ಸಮ್ಮತಿ ಪಡೆದುಕೊಳ್ಳದೇ ಅವರ ಖಾತೆಯಿಂದ ತೆಗೆದುಕೊಳ್ಳಲು ಬ್ಯಾಂಕ್/ವ್ಯಾಲೆಟ್ಗಳಿಗೆ ಅಧಿಕಾರ ಇಲ್ಲ. ಯಾವುದೇ ಸಂದರ್ಭದಲ್ಲಿ ಗ್ರಾಹಕರಿಗೆ ನಿರ್ದಿಷ್ಟ ಸೇವೆಯಿಂದ ಹೊರನಡೆಯಲು ಅವಕಾಶ ಸಿಗಬೇಕು ಎಂದು ಆರ್ಬಿಐ ಹೇಳಿತ್ತು.
ಮುಂಬೈ: ವಿವಿಧ ಬ್ಯಾಂಕ್ಗಳ ಡೆಬಿಟ್-ಕ್ರೆಡಿಟ್ ಕಾರ್ಡ್ಗಳು, ಯುಪಿಐ ವ್ಯವಸ್ಥೆ (Unified Payments Interface – UPI) ಮತ್ತು ಪ್ರೀಪೇಯ್ಡ್ ಪೇಮೆಂಟ್ ಸೂಚನೆಗಳ (prepaid payment instruments – PPI) ಮೂಲಕ ಸ್ವಯಂಚಾಲಿತ ಬಿಲ್ ಪಾವತಿ ವ್ಯವಸ್ಥೆ (Auto Payment) ಆಯ್ಕೆ ಮಾಡಿಕೊಂಡ ಗ್ರಾಹಕರ ಬ್ಯಾಂಕ್ ಮತ್ತು ಮೊಬೈಲ್ ವ್ಯಾಲೆಟ್ ಖಾತೆಗಳಿಗೆ ನೀಡುತ್ತಿರುವ ಭದ್ರತೆಯನ್ನು ಹೆಚ್ಚಿಸಲು ನೀಡಿದ್ದ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ನಿರ್ಧರಿಸಿದೆ. ಈ ಹಿಂದಿನ ಸೂಚನೆಯಿಂದ ನಾಳೆಯಿಂದಲೇ (ಏಪ್ರಿಲ್ 1, 2021) ಈ ವ್ಯವಸ್ಥೆ ಜಾರಿಯಾಗಬೇಕಿತ್ತು. ಆದರೆ ಇಂಥದ್ದೊಂದು ಸುರಕ್ಷಾ ವ್ಯವಸ್ಥೆ ರೂಪಿಸಲು ಸಮಯ ಬೇಕೆಂಬ ಬ್ಯಾಂಕ್ಗಳ ಮನವಿಗೆ ಒಪ್ಪಿಕೊಂಡಿರುವ ರಿಸರ್ವ್ ಬ್ಯಾಂಕ್ 6 ತಿಂಗಳ ಹೆಚ್ಚುವರಿ ಸಮಯ ನೀಡಲು ಒಪ್ಪಿಕೊಂಡಿದೆ.
ರಿಸರ್ವ್ ಬ್ಯಾಂಕ್ನ ಈ ಕ್ರಮದಿಂದ ಸದ್ಯದ ಮಟ್ಟಿಗೆ ಬ್ಯಾಂಕ್ ಮತ್ತು ಮೊಬೈಲ್ ವ್ಯಾಲೆಟ್ ಕಂಪನಿಗಳು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಆಗಿದೆ. ಆರು ತಿಂಗಳ ನಂತರವಾದರೂ ಗ್ರಾಹಕರ ಖಾತೆಗೆ ಸಿಗಬೇಕಾದ ಭದ್ರತೆಯನ್ನು ಹಣಕಾಸು ಸಂಸ್ಥೆಗಳು ಮೇಲ್ದರ್ಜೆಗೆ ಏರಿಸಲೇಬೇಕಾಗುತ್ತದೆ. ‘ಗ್ರಾಹಕರ ಹಿತವನ್ನು ಕಡೆಗಣಿಸುವ ಹಣಕಾಸು ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ರಿಸರ್ವ್ ಬ್ಯಾಂಕ್ ಎಚ್ಚರಿಕೆಯನ್ನೂ ನೀಡಿರುವುದು ಗಮನಾರ್ಹ ಸಂಗತಿ.
ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಈಚಿನ ದಿನಗಳಲ್ಲಿ ಹೆಚ್ಚು ಮೋಸದ ಪ್ರಕರಣಗಳು ವರದಿಯಾಗುತ್ತಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಸ್ವಯಂಚಾಲಿತ ಪಾವತಿ ಆಯ್ಕೆ ಒಪ್ಪಿಕೊಂಡಿದ್ದ ಗ್ರಾಹಕರಿಗೆ ಹೆಚ್ಚು ಸುರಕ್ಷೆ ಒದಗಿಸುವಂತೆ ಬ್ಯಾಂಕ್/ವ್ಯಾಲೆಟ್ ಕಂಪನಿಗಳಿಗೆ ತಾಕೀತು ಮಾಡಿತ್ತು. ಅಡಿಷನಲ್ ಫ್ಯಾಕ್ಟರ್ ಅಥೆಂಟಿಕೇಶನ್ (Additional Factor of Authentication – AFA) ಅಂದರೆ ಸ್ವಯಂಚಾಲಿತ ಪಾವತಿಗೆ ಒಪ್ಪಿಗೆ ಸೂಚಿಸಿದ್ದ ಗ್ರಾಹಕರೂ ಸಹ, ಪ್ರತಿಬಾರಿಯೂ ತಮ್ಮ ಖಾತೆಯಿಂದ ಹಣ ಕಡಿತಗೊಳ್ಳುವಾಗ ಸಮ್ಮತಿ ನೀಡಬೇಕಿತ್ತು. ಈ ವ್ಯವಸ್ಥೆಯನ್ನು ಏಪ್ರಿಲ್ 1, 2021ರಿಂದ ಜಾರಿಗೊಳಿಸುವಂತೆ ಈ ಹಿಂದೆ ರಿಸರ್ವ್ ಬ್ಯಾಂಕ್ ಆದೇಶಿಸಿತ್ತು.
ನಿಯಮಿತವಾಗಿ ಪಾವತಿಸುವ ಮೊಬೈಲ್, ವಿದ್ಯುತ್ ಮತ್ತು ಇತರ ಬಿಲ್ಗಳ ಪಾವತಿಗೆ ಗ್ರಾಹಕರು ಸಾಮಾನ್ಯವಾಗಿ ಆಟೊ ಪೇಮೆಂಟ್ ಆಯ್ಕೆಯನ್ನು ಬಳಸಿಕೊಳ್ಳುತ್ತಾರೆ. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಂ, ಡಿಸ್ನಿ+ ಹಾಟ್ಸ್ಟಾರ್, ಪತ್ರಿಕೆಗಳ ಇ-ಪೇಪರ್ ಸೇರಿದಂತೆ ಹಲವು ಮನರಂಜನೆ ಮತ್ತು ಅತ್ಯಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಸಹ ಆಟೊ ಪೇಮೆಂಟ್ ವ್ಯವಸ್ಥೆ ಬಳಸಿಕೊಳ್ಳುವಂತೆ ಗ್ರಾಹಕರನ್ನು ಉತ್ತೇಜಿಸುತ್ತಿದ್ದವು. ಇದರಿಂದಾಗಿ ಎಷ್ಟೋ ಸಲ ಗ್ರಾಹಕರು ಸೇವೆಯಲ್ಲಿ ಬಳಸಲಿ-ಬಿಡಲಿ ಬಿಲ್ ತೆರುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹಣ ಕಡಿತವಾದ ನಂತರವೇ ಅವರಿಗೆ ತಮ್ಮ ಖಾತೆಯಿಂದ ಹಣ ಹೊರಹೋಗಿರುವುದು ತಿಳಿದುಬರುತ್ತಿತ್ತು. ರಿಕರಿಂಗ್ ಬಿಲ್ ಪಾವತಿ ಆಯ್ಕೆಯಿಂದ ಹೊರಬರುವ ವ್ಯವಸ್ಥೆಯನ್ನೂ ಕೆಲ ಕಂಪನಿಗಳು ಮರೆಮಾಚುತ್ತಿದ್ದವು. ಇಂಥ ಕಳ್ಳಾಟಗಳಿಗೆ ಕಡಿವಾಣ ಹಾಕಲು ಆರ್ಬಿಐ ಮುಂದಾಗಿತ್ತು.
ಹೊಸ ನಿಯಮಗಳ ಪ್ರಕಾರಗಳು ಬ್ಯಾಂಕ್/ವ್ಯಾಲೆಟ್ ಕಂಪನಿಗಳು ರಿಕರಿಂಗ್ ಪೇಮೆಂಟ್ ಬಗ್ಗೆ ಕನಿಷ್ಠ 24 ಗಂಟೆ ಮುಂಚಿತವಾಗಿ ಗ್ರಾಹಕರಿಗೆ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ತಿಳಿಸಬೇಕಿತ್ತು. ಮೊದಲ ಬಾರಿಗೆ ರಿಕರಿಂಗ್ ಪೇಮೆಂಟ್ ವಹಿವಾಟು ನಡೆಸಲು ಗ್ರಾಹಕರಿಂದ ಪೂರ್ವ ನಿರ್ಧಾರಿತ ಕ್ರಮದಲ್ಲಿ ಅನುಮತಿ ಪಡೆಯುವುದನ್ನೂ ಆರ್ಬಿಐ ಕಡ್ಡಾಯಗೊಳಿಸಿತ್ತು. ನಂತರದ ಹಂತದಲ್ಲಿ ₹ 5000ಕ್ಕಿಂತಲೂ ಕಡಿಮೆ ಮೊತ್ತದ ವಹಿವಾಟು ನಡೆಸುವಂತಿದ್ದರೆ ಮಾತ್ರ ಆಟೊ ಡೆಬಿಟ್ ಆಯ್ಕೆ ಬಳಕೆಗೆ ಅವಕಾಶ ನೀಡಲು ಆರ್ಬಿಐ ನಿರ್ಧರಿಸಿತ್ತು.
ಅಂದರೆ ₹ 5000ಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಗ್ರಾಹಕರಿಗೆ ಮುಂಚಿತವಾಗಿ ತಿಳಿಸದೇ, ಅವರಿಂದ ಒಟಿಪಿ ಮೂಲಕ ಸಮ್ಮತಿ ಪಡೆದುಕೊಳ್ಳದೇ ಅವರ ಖಾತೆಯಿಂದ ತೆಗೆದುಕೊಳ್ಳಲು ಬ್ಯಾಂಕ್/ವ್ಯಾಲೆಟ್ಗಳಿಗೆ ಅಧಿಕಾರ ಇರುತ್ತಿರಲಿಲ್ಲ. ಯಾವುದೇ ಸಂದರ್ಭದಲ್ಲಿ ಗ್ರಾಹಕರಿಗೆ ನಿರ್ದಿಷ್ಟ ಸೇವೆಯಿಂದ ಹೊರನಡೆಯಲು ಅವಕಾಶ ಸಿಗಬೇಕಿತ್ತು. ಇಂಥ ರಿಕರಿಂಗ್ ಪೇಮೆಂಟ್ಗಳಿಂದ ಹೊರನಡೆಯುವ ಸ್ವಾತಂತ್ರ್ಯ ಗ್ರಾಹಕರಿಗೆ ಇದೆ. ಹೀಗೆ ಹೊರನಡೆಯಲು ನಿರ್ಧರಿಸಿದ ಗ್ರಾಹಕರಿಗೆ ದಂಡವಿಧಿಸುವ ಅಧಿಕಾರವೂ ಬ್ಯಾಂಕ್/ವ್ಯಾಲೆಟ್ ಕಂಪನಿಗಳಿಗೆ ಇಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿತ್ತು. ಗ್ರಾಹಕರ ಹಣಕ್ಕೆ ಸುರಕ್ಷೆ ಮತ್ತು ಡಿಜಿಟಲ್ ಪಾವತಿ ವೇಳೆ ಮೋಸದಾಟ ತಪ್ಪಿಸಲು ಈ ಕ್ರಮಗಳನ್ನು ರೂಪಿಸಲಾಗಿತ್ತು ಎಂದು ಆರ್ಬಿಐ ಹೇಳಿತ್ತು.
ರಿಕರಿಂಗ್ ಡಿಜಿಟಲ್ ಪಾವತಿಯಲ್ಲಿ ಗ್ರಾಹಕರ ಸುರಕ್ಷೆಗೆ ರೂಪಿಸಿರುವ ನಿಯಮಗಳನ್ನು ಜಾರಿಗೆ ತರಲು ಆರ್ಬಿಐ ಈ ಹಿಂದೆ ಡಿಸೆಂಬರ್ 2020ರ ಗಡುವು ವಿಧಿಸಿತ್ತು. ಆದರೆ ಬ್ಯಾಂಕ್ಗಳು ಇದಕ್ಕೆ ಪೂರಕ ವ್ಯವಸ್ಥೆಯನ್ನು ಸಕಾಲದಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಗದ ಕಾರಣ, ಭಾರತೀಯ ಬ್ಯಾಂಕ್ ಒಕ್ಕೂಟದ (Indian Banks’ Association – IBA) ಮನವಿ ಮೇರೆಗೆ ಗಡುವನ್ನು ಮಾರ್ಚ್ 31, 2021ಕ್ಕೆ ಮುಂದೂಡಿತ್ತು. ಇದೀಗ ಮತ್ತೊಮ್ಮೆ ಬ್ಯಾಂಕ್/ವ್ಯಾಲೆಟ್ ಕಂಪನಿಗಳ ಮನವಿಯ ಮೇರೆಗೆ ಈ ಗಡುವನ್ನು ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ಅಂದರೆ ಸೆಪ್ಟೆಂಬರ್ 30ರ ಒಳಗೆ ಈ ಸುರಕ್ಷಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಬ್ಯಾಂಕ್/ವ್ಯಾಲೆಟ್ ಕಂಪನಿಗಳಿಗೆ ಆರ್ಬಿಐ ತಾಕೀತು ಮಾಡಿದೆ.
‘ಗಡುವನ್ನು ಮತ್ತೊಮ್ಮೆ ವಿಸ್ತರಿಸುವ ಸಾಧ್ಯತೆ ಇಲ್ಲ. ನಿಗದಿತ ಅವಧಿಯೊಳಗೆ ಸುರಕ್ಷಾ ಕ್ರಮಗಳನ್ನು ಜಾರಿಗೆ ತರದಿದ್ದರೆ ಅಂಥ ಬ್ಯಾಂಕ್/ವ್ಯಾಲೆಟ್ ಕಂಪನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಅಂಥ ಪ್ರತಿ ಹಣಕಾಸು ಸಂಸ್ಥೆಯ ಲೋಪಗಳ ಬಗ್ಗೆ ಪ್ರತ್ಯೇಕವಾಗಿ ಪರಿಶೀಲಿಸಿ, ಶಿಸ್ತುಕ್ರಮ ಜರುಗಿಸಲಾಗುವುದು. ಬ್ಯಾಂಕ್/ವ್ಯಾಲೆಟ್ ಕಂಪನಿಗಳು ಗ್ರಾಹಕರ ಹಿತಕ್ಕೆ ಮೊದಲ ಆದ್ಯತೆ ನೀಡಬೇಕು. ಗ್ರಾಹಕರಿಗೆ ತೊಂದರೆಯಾಗುವುದನ್ನು ಸಹಿಸಲು ಆಗುವುದಿಲ್ಲ’ ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: Business loan: ಉದ್ಯಮಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಟಾಪ್ 10 ಬ್ಯಾಂಕ್ಗಳಿವು