ಲಕ್ನೋ, ಆಗಸ್ಟ್ 29: ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರೊಮೋಟ್ ಮಾಡಿ ತಿಂಗಳಿಗೆ 2ರಿಂದ 8 ಲಕ್ಷ ರೂ ಹಣ ಗಳಿಸುವ ಸುವರ್ಣಾವಕಾಶವನ್ನು ಉತ್ತರಪ್ರದೇಶ ಸರ್ಕಾರ ಕಲ್ಪಿಸಿರುವುದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಇದು ಸುಗ್ಗಿ ಕಾಲ ಆಗಬಹುದು. ಸಾಮಾನ್ಯ ಜನರೂ ಕೂಡ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಣ ಸಂಪಾದಿಸುವ ಅವಕಾಶ ಇನ್ನಷ್ಟು ಹೆಚ್ಚಿದಂತಾಗಿದೆ. ಫೇಸ್ಬುಕ್, ಎಕ್ಸ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಇತ್ಯಾದಿ ಸೋಷಿಯಲ್ ಮೀಡಿಯಾದಲ್ಲಿ ಜನರು ಯುಪಿ ಸರ್ಕಾರದ ಯೋಜನೆಗಳ ಬಗ್ಗೆ ಪೋಸ್ಟ್ ಹಾಕಿ ಹಣ ಗಳಿಸಬಹುದಾಗಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹೊಸ ಡಿಜಿಟಲ್ ಮೀಡಿಯಾ ನೀತಿಯನ್ನು ರೂಪಿಸಿದ್ದು, ಅದರ ಕರಡು ಸಿದ್ಧವಾಗಿದೆ. ಅದರ ಪ್ರಕಾರ ಸೋಷಿಯಲ್ ಮೀಡಿಯಾ ಪ್ರಭಾವಿಯೊಬ್ಬರು (ಇನ್ಫ್ಲುಯೆನ್ಸರ್) ಸರ್ಕಾರಿ ಯೋಜನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದರೆ ತಿಂಗಳಿಗೆ 8 ಲಕ್ಷ ರೂವರೆಗೂ ಹಣ ಗಳಿಸುವ ಅವಕಾಶ ಮಾಡಿಕೊಡಲಾಗುತ್ತದೆ. ಹಾಗೆಯೇ, ಯಾರಾದರೂ ಕೂಡ ಸ್ಕೀಮ್ ಪ್ರಚಾರದ ನೆವದಲ್ಲಿ ಆಕ್ಷೇಪಾರ್ಹ ಸಂಗತಿಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದನ್ನೂ ಓದಿ: 18 ವರ್ಷದೊಳಗಿನ ವಯಸ್ಸಿನ ಹೆಣ್ಮಕ್ಕಳಿಗೆ ಅಸಾಂಪ್ರದಾಯಿಕ ಕೆಲಸಗಳಿಗೆ ತರಬೇತಿ: ಸರ್ಕಾರದಿಂದ ಸದ್ಯದಲ್ಲೇ ಹೊಸ ಸ್ಕೀಮ್
ಎಕ್ಸ್ (ಮಾಜಿ ಟ್ವಿಟ್ಟರ್), ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ಗಳಲ್ಲಿನ ಇನ್ಫ್ಲುಯನ್ಸರ್ಗಳ ಖಾತೆಗಳನ್ನು ಸಬ್ಸ್ಕ್ರೈಬರ್ಸ್ ಮತ್ತು ಫಾಲೋಯರ್ಸ್ ಆಧಾರದ ಮೇಲೆ ನಾಲ್ಕು ಕೆಟಗರಿಗಳಾಗಿ ವರ್ಗೀಕರಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಹಣ ಪಾವತಿ ಮಾಡಲಾಗುತ್ತದೆ ಎಂಬುದು ತಿಳಿದುಬಂದಿದೆ.
ಯಾವುದೇ ಸರ್ಕಾರವಾದರೂ ಬಹಳಷ್ಟು ಜನೋಪಯೋಗಿ ಯೋಜನೆಗಳನ್ನು ನಡೆಸುತ್ತಿರುತ್ತದೆ. ಎಷ್ಟೋ ಸಂದರ್ಭದಲ್ಲಿ ಅದರ ಮಾಹಿತಿಯು ಉದ್ದೇಶಿತ ವ್ಯಕ್ತಿಗಳಿಗೆ ಗೊತ್ತೇ ಆಗುವುದಿಲ್ಲ. ಸರ್ಕಾರದಿಂದ ಇಂತಹದ್ದೊಂದು ಸ್ಕೀಮ್ ಇದೆ ಎನ್ನುವ ಮಾಹಿತಿ ಹೆಚ್ಚಿನ ಜನರಿಗೆ ತಿಳಿಯದೇ ಹೋದರೆ ಆ ಯೋಜನೆಯ ಉದ್ದೇಶವೇ ಈಡೇರುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ಬಜೆಟ್ನಲ್ಲಿ ನೀಡಲಾದ ಅನುದಾನ ಸರಿಯಾಗಿ ಬಳಕೆಯಾಗದೇ ಹಾಗೇ ಉಳಿದುಬಿಡುವುದುಂಟು. ಆ ಸ್ಕೀಮ್ ಉದ್ದೇಶಿತ ಫಲಾನುಭವಿಗಳಿಗೆ ಸರಿಯಾಗಿ ತಲುಪದೇ ಇರುವುದು ಅದಕ್ಕೆ ಕಾರಣ.
ಇದನ್ನೂ ಓದಿ: ಈ ಮೂರು ಸಮಯದಲ್ಲಿ ಹಣ ಖರ್ಚು ಮಾಡಬೇಡಿ, ಯಾಕೆ ಗೊತ್ತಾ!?
ಈ ಕಾರಣಕ್ಕೆ ಉತ್ತರಪ್ರದೇಶ ಸರ್ಕಾರ ತನ್ನ ಯೋಜನೆಗಳನ್ನು ಪ್ರಚುರಪಡಿಸಲು ಸೋಷಿಯಲ್ ಮೀಡಿಯಾ ಹಾಗೂ ಇನ್ಫ್ಲುಯೆನ್ಸರ್ಗಳನ್ನು ಬಳಸಿಕೊಳ್ಳಲು ನಿರ್ಧರಿಸಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ