AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆ. 1ರಿಂದ ಒಟಿಪಿ ಬಂದ್? ಲಾಗಿನ್, ಬುಕಿಂಗ್, ಡೆಲಿವರಿ ಆಗಲ್ಲವಾ? ಟ್ರಾಯ್ ಪರಿಷ್ಕೃತ ನಿಯಮ ಇನ್ನೂ ಅಳವಡಿಸಿಲ್ಲ ಟೆಲಿಕಾಂ ಕಂಪನಿಗಳು

No bank OTPs from Sep 1st: ಸ್ಪ್ಯಾಮ್ ಮೆಸೇಜ್​ಗಳಿಗೆ ತಡೆ ಹಾಕಲು ಟ್ರಾಯ್ ತರುತ್ತಿರುವ ನಿಯಮ ಈಗ ತಾತ್ಕಾಲಿಕವಾಗಿ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ತೊಂದರೆ ತರಬಹುದು. ಟ್ರಾಯ್ ಪರಿಷ್ಕೃತ ಸ್ಪ್ಯಾಮ್ ನೀತಿಯನ್ನು ಟೆಲಿಕಾಂ ಕಂಪನಿಗಳು ಇನ್ನೂ ಅಳವಡಿಸಿಕೊಂಡಿಲ್ಲ. ಆ. 31ಕ್ಕೆ ಡೆಡ್​ಲೈನ್ ಇದೆ. ಅದಾದ ಬಳಿಕ ಒಟಿಪಿಗಳು ಬರುವುದು ನಿಂತು ಹೋಗಬಹುದು. ಈ ಬಗ್ಗೆ ಒಂದು ವರದಿ...

ಸೆ. 1ರಿಂದ ಒಟಿಪಿ ಬಂದ್? ಲಾಗಿನ್, ಬುಕಿಂಗ್, ಡೆಲಿವರಿ ಆಗಲ್ಲವಾ? ಟ್ರಾಯ್ ಪರಿಷ್ಕೃತ ನಿಯಮ ಇನ್ನೂ ಅಳವಡಿಸಿಲ್ಲ ಟೆಲಿಕಾಂ ಕಂಪನಿಗಳು
ಒಟಿಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 29, 2024 | 12:55 PM

Share

ನವದೆಹಲಿ, ಆಗಸ್ಟ್ 29: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯಾದ ಟ್ರಾಯ್ ಜಾರಿಗೆ ತಂದಿರುವ ಪರಿಷ್ಕೃತ ಸ್ಪ್ಯಾಮ್ ನೀತಿ ಈಗ ಕೋಟ್ಯಂತರ ಮೊಬೈಲ್ ಬಳಕೆದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜನರಿಗೆ ಸ್ಪ್ಯಾಮ್ ಕಿರಿಕಿರಿ ತಪ್ಪಿಸಲು ಟ್ರಾಯ್ ರೂಪಿಸಿರುವ ಹೊಸ ನೀತಿಯನ್ನು ಟೆಲಿಕಾಂ ಕಂಪನಿಗಳು ಇನ್ನೂ ಅಳವಡಿಸಿಲ್ಲ. ಆಗಸ್ಟ್ 31ಕ್ಕೆ ಟ್ರಾಯ್ ಡೆಡ್​ಲೈನ್ ನೀಡಿದೆ. ಹೀಗಾಗಿ, ಸೆ. 1ರಿಂದ ಮೊಬೈಲ್​ಗಳಿಗೆ ಒಟಿಪಿಗಳು ಬರುವುದು ಅನುಮಾನವಾಗಿದೆ. ಒಟಿಪಿಗಳಿಲ್ಲದೆ ಅನೇಕ ಸೇವೆಗಳಿಗೆ ಲಾಗಿನ್ ಆಗಲು ಸಾಧ್ಯವಾಗದೇ ಹೋಗಬಹುದು.

ಟ್ರಾಯ್ ಪರಿಷ್ಕೃತ ಸ್ಪ್ಯಾಮ್ ನೀತಿ ಏನಿದೆ?

ಜನರ ಮೊಬೈಲ್ ನಂಬರ್​ಗಳಿಗೆ ಸ್ಪ್ಯಾಮ್ ಮೆಸೇಜ್​ಗಳು ಬರುತ್ತಿರುತ್ತವೆ. ಇವು ಎನ್​ಕ್ರಿಪ್ಟ್ ಆಗಿರುವ ಯುಆರ್​ಎಲ್​ಗಳು, ಎಪಿಕೆ ಫೈಲ್​ಗಳನ್ನು ಒಳಗೊಂಡಿರಬಹುದು. ಇವು ಮಾಲ್​ವೇರ್​ಗಳಾಗಿರಬಹುದು. ಇಂಥ ಲಿಂಕ್​ಗಳನ್ನು ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್​ನ ಅಕ್ಸೆಸ್ ಅನ್ನು ದುರುಳರು ಪಡೆದುಕೊಳ್ಳಬಹುದು. ಹಣ ವರ್ಗಾವಣೆ ಮಾಡಿಕೊಳ್ಳುವುದು, ಡಾಟಾ ಕದಿಯುವುದು ಇತ್ಯಾದಿ ಆಗಬಹುದು.

ಇದನ್ನೂ ಓದಿ: ತಿಂಗಳಿಗೆ 2ರಿಂದ 8 ಲಕ್ಷ ರೂ ಗಳಿಸುವ ಸುವರ್ಣಾವಕಾಶ; ಫೇಸ್​ಬುಕ್, ಇನ್ಸ್​ಟಾ, ಯೂಟ್ಯೂಬ್​ಗಳಲ್ಲಿ ಸರ್ಕಾರಿ ಯೋಜನೆ ಪ್ರೊಮೋಟ್ ಮಾಡೋದು ಕೆಲಸ

ಇದನ್ನು ತಪ್ಪಿಸಲು ಟ್ರಾಯ್ ಹೊಸ ಸ್ಪ್ಯಾಮ್ ನೀತಿ ಜಾರಿಗೆ ತರುತ್ತಿದೆ. ಅದರ ಪ್ರಕಾರ ಟೆಲಿಕಾಂ ಕಂಪನಿಗಳು ಒಟಿಪಿ, ಎಸ್ಸೆಮ್ಮೆಸ್ ಕಳುಹಿಸುವ ಥರ್ಡ್ ಪಾರ್ಟಿ ಕಂಪನಿಗಳನ್ನು ನೊಂದಾಯಿಸಬೇಕು. ಸುಲಭವಾಗಿ ಓದಲು ಆಗುವಂತಹ ಮೆಸೇಜ್ ಫಾರ್ಮ್ಯಾಟ್ ಅನ್ನು ಒದಗಿಸಬೇಕು. ಆ ಮೆಸೇಜ್​ಗಳಲ್ಲಿ ಅಡಕವಾಗಲಿರುವ ಯುಆರ್​ಎಲ್​ಗಳ ಪಟ್ಟಿ ಪಡೆಯಬೇಕು. ಅವು ಅಪಾಯಕಾರಿ ಅಲ್ಲದ ಯುಆರ್​ಎಲ್​ಗಳೆಂದು ಖಾತ್ರಿಪಡಿಸಿಕೊಂಡು ವೈಟ್​ಲಿಸ್ಟ್​ಗೆ ಸೇರಿಸಲಾಗುತ್ತದೆ.

ಟೆಲಿಕಾಂ ಕಂಪನಿಗಳಲ್ಲಿ ನೊಂದಾಯಿತವಾದ ಥರ್ಡ್ ಪಾರ್ಟಿ ಸಂಸ್ಥೆಗಳು ಮಾತ್ರವೇ ಎಸ್ಸೆಮ್ಮೆಸ್ ಮತ್ತು ಒಟಿಪಿ ಕಳುಹಿಸಬಹುದು. ಈ ಪ್ರತಿಯೊಂದು ಮೆಸೇಜ್​ಗಳನ್ನು ತಂತ್ರಜ್ಞಾನ ಸಹಾಯದಿಂದ ಸ್ಕ್ಯಾನ್ ಮಾಡಲಾಗುತ್ತದೆ. ಒಂದು ವೇಳೆ ವೈಟ್​ಲಿಸ್ಟ್​ನಲ್ಲಿ ಇಲ್ಲದ ಯುಆರ್​ಎಲ್​ಗಳನ್ನು ಅದು ಒಳಗೊಂಡಿದ್ದರೆ ಅಂಥದ್ದನ್ನು ಬ್ಲಾಕ್ ಮಾಡಲಾಗುತ್ತದೆ. ಇದು ಟ್ರಾಯ್ ರೂಪಿಸಿರುವ ಪರಿಷ್ಕೃತ ನೀತಿ.

ಟ್ರಾಯ್ ಸೂಚಿಸಿರುವ ಕ್ರಮವನ್ನು ಟೆಲಿಕಾಂ ಕಂಪನಿಗಳು ಇನ್ನೂ ಅಳವಡಿಸಿಲ್ಲ. ಇನ್ನಷ್ಟು ಸಮಯಾವಕಾಶಕ್ಕೆ ಈ ಕಂಪನಿಗಳು ಕೋರಿರುವುದು ತಿಳಿದುಬಂದಿದೆ. ಟ್ರಾಯ್ ಈ ಡೆಡ್​ಲೈನ್ ವಿಸ್ತರಿಸುವುದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: 18 ವರ್ಷದೊಳಗಿನ ವಯಸ್ಸಿನ ಹೆಣ್ಮಕ್ಕಳಿಗೆ ಅಸಾಂಪ್ರದಾಯಿಕ ಕೆಲಸಗಳಿಗೆ ತರಬೇತಿ: ಸರ್ಕಾರದಿಂದ ಸದ್ಯದಲ್ಲೇ ಹೊಸ ಸ್ಕೀಮ್

ಮೊಬೈಲ್ ಬಳಕೆದಾರನಿಗೆ ಏನು ತೊಂದರೆ?

ಒಂದು ವೇಳೆ ಒಟಿಪಿಗಳು ಬರದೇ ಹೋದರೆ ಬಹಳಷ್ಟು ಹಣಕಾಸು ವಹಿವಾಟು ಮತ್ತು ಇಕಾಮರ್ಸ್ ವ್ಯವಹಾರಗಳಿಗೆ ಅಡ್ಡಿಯಾಗಬಹುದು. ಇನ್ಕಮ್ ಟ್ಯಾಕ್ಸ್ ಪೋರ್ಟಲ್, ಆಧಾರ್ ಪೋರ್ಟಲ್, ಬ್ಯಾಂಕ್ ಅಪ್ಲಿಕೇಶನ್ ಇತ್ಯಾದಿಗೆ ಲಾಗಿನ್ ಆಗಲು ಒಂದಕ್ಕಿಂತ ಹೆಚ್ಚು ಎಳೆಯ ಸೆಕ್ಯೂರಿಟಿ ಇರುತ್ತದೆ. ಪಾಸ್​ವರ್ಡ್ ಜೊತೆಗೆ ಒಟಿಪಿ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಒಂದು ವೇಳೆ ಒಟಿಪಿ ಬರದೇ ಹೋದರೆ ಲಾಗಿನ್ ಆಗಲು ಕಷ್ಟವಾಗಬಹುದು.

ಇನ್ನು, ಆನ್​ಲೈನ್​ನಲ್ಲಿ ಬುಕಿಂಗ್ ಮಾಡಿದ ವಸ್ತುಗಳ ಡೆಲಿವರಿ ಪಡೆಯಲು ಒಟಿಪಿ ನೀಡಬೇಕಾಗುತ್ತದೆ. ಕ್ಯಾಬ್ ಬುಕಿಂಗ್, ಆಟೊ ಬುಕಿಂಗ್ ಇತ್ಯಾದಿ ಹಲವು ಕಾರ್ಯಗಳಿಗೆ ಒಟಿಪಿ ಅಗತ್ಯ. ಹೀಗಾಗಿ, ಬಹಳ ಜನರಿಗೆ ತೊಂದರೆ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ