ಇಡಿ ದಾಳಿ ಮನಿ ಲ್ಯಾಂಡರಿಂಗ್ಗೆ ಸಂಬಂಧಿಸಿದ್ದಲ್ಲ: ಕಾಯಿನ್‌ಸ್ವಿಚ್ ಕುಬರ್ ಸಹಸಂಸ್ಥಾಪಕರ ಸ್ಪಷ್ಟನೆ
ಜಾರಿ ನಿರ್ದೇಶನಾಲಯದ ದಾಳಿ ಮನಿ ಲಾಂಡರಿಂಗ್ಗೆ ಸಂಬಂಧಿಸಿದ್ದಲ್ಲ ಎಂದು ಕಾಯಿನ್‌ಸ್ವಿಚ್ ಕುಬರ್ ಕಂಪನಿಯ ಸಹ ಸಂಸ್ಥಾಪಕ ಆಶಿಶ್ ಸಿಂಘಾಲ್ ಅವರು ಕಂಪನಿ ಮೇಲೆ ನಡೆದ ಜಾರಿ ನಿರ್ದೇಶನಾಲಯ (ED)ದ ದಾಳಿ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಜಾರಿ ನಿರ್ದೇಶನಾಲಯದ ದಾಳಿ ಮನಿ ಲಾಂಡರಿಂಗ್ಗೆ ಸಂಬಂಧಿಸಿದ್ದಲ್ಲ ಎಂದು ಕಾಯಿನ್‌ಸ್ವಿಚ್ ಕುಬರ್ ಕಂಪನಿಯ ಸಹ ಸಂಸ್ಥಾಪಕ ಆಶಿಶ್ ಸಿಂಘಾಲ್ ಅವರು ಕಂಪನಿ ಮೇಲೆ ನಡೆದ ಜಾರಿ ನಿರ್ದೇಶನಾಲಯ (ED)ದ ದಾಳಿ ಸಂಬಂಧ ಸ್ಪಷ್ಟನೆ ನೀಡಿದ್ದಾರೆ. ಕೆಲವು ಸುದ್ದಿ ಲೇಖನಗಳಲ್ಲಿ ವರದಿಯಾಗಿರುವಂತೆ ಕಂಪನಿ ಮೇಲೆ ನಡೆದ ಇಡಿ ದಾಳಿ ಮನಿ ಲ್ಯಾಂಡರಿಂಗ್ಗೆ ಸಂಬಂಧಿಸಿದ್ದಲ್ಲ. ಬದಲಾಗಿ ನಮ್ಮ ಕ್ರಿಪ್ಟೋ ಪ್ಲಾಟ್‌ಫಾರ್ಮ್‌ಗಳು ಅಥವಾ ವಿನಿಮಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮೊಂದಿಗೆ ತೊಡಗಿಸಿಕೊಂಡಿದೆ. ನಾವು ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇಡಿ ದಾಳಿ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಆಶಿಶ್ ಸಿಂಘಾಲ್, ಕ್ರಿಪ್ಟೋ ಒಂದು ಹೊಸ ಸ್ವತ್ತು ವರ್ಗವಾಗಿದೆ. ಆರಂಭಿಕ ಹಂತದಲ್ಲಿರುವುದರಿಂದ ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಕ್ರಿಪ್ಟೋಗಳನ್ನು ಇನ್ನೂ ಸ್ಪಷ್ಟವಾಗಿ ವರ್ಗೀಕರಿಸಲಾಗಿಲ್ಲ. ಈಗ ಕ್ರಿಪ್ಟೋ ‘ಸರಕು’,’ಭದ್ರತೆ”, ‘ಕರೆನ್ಸಿ” ಅಥವಾ ಹೊಸದೇನಾದರೂ ಆಗಿದೆಯೇ ಎಂದು ಕಾನೂನು (ಭಾರತದಲ್ಲಿ ಮತ್ತು ಇತರೆಡೆಗಳಲ್ಲಿ) ಇನ್ನೂ ನಿರ್ಣಯಿಸುತ್ತಿದೆ. ಇದು ಪ್ರಗತಿಯಲ್ಲಿದೆ” ಎಂದರು.
“ಕ್ರಿಪ್ಟೋಕರೆನ್ಸಿ ಒಂದು ಆಸ್ತಿ ವರ್ಗವಾಗಿ ನಿಯಂತ್ರಕ ಚೌಕಟ್ಟನ್ನು ಹೊಂದಿಲ್ಲ, ಹೂಡಿಕೆದಾರರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ. ಬಜೆಟ್‌ನಲ್ಲಿ, ಕ್ರಿಪ್ಟೋಕರೆನ್ಸಿಗಳ ಆದಾಯದ ಮೇಲೆ 30% ತೆರಿಗೆ ಇರುತ್ತದೆ” ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಏನಿದು ಪ್ರಕರಣ?
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆಗಾಗಿ ಜಾರಿ ನಿರ್ದೇಶನಾಲಯವು ಗುರುವಾರ ಕ್ರಿಪ್ಟೋಕರೆನ್ಸಿ ವಿನಿಮಯ ಕಾಯಿನ್‌ಸ್ವಿಚ್ ಕುಬರ್‌ನ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಕಾಯ್ದೆ ಉಲ್ಲಂಘನೆ ಸಂಬಂಧ ಸ್ಪಷ್ಟನೆ ನೀಡುವಂತೆ ಫೋನ್ ಮೂಲಕ ಸಂಪರ್ಕಿಸಿದಾಗಲೂ ಯಾವುದೇ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಅಲ್ಲದೆ ಕಂಪನಿಯಿಂದ ಸಾಕಷ್ಟು ಸಹಕಾರವನ್ನು ಸ್ವೀಕರಿಸದ ಹಿನ್ನೆಲೆ ಕಾಯಿನ್‌ಸ್ವಿಚ್ ಕುಬರ್‌ನ ಕಚೇರಿಗಳ ಮೇಲೆ ಬೆಂಗಳೂರಿನ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಭಾರತದ ವಿದೇಶಿ ವಿನಿಮಯ ನಿರ್ವಹಣ ಕಾಯ್ದೆ ಮತ್ತು ಅದರೊಂದಿಗೆ ಸಂಪರ್ಕ ಹೊಂದಿದ ಇತರ ಘಟಕಗಳ ಅಡಿಯಲ್ಲಿ ಅನೇಕ ಸಂಭವನೀಯ ಉಲ್ಲಂಘನೆಗಳನ್ನು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಹಾಗೂ ಹೆಚ್ಚಿನ ಮಾಹಿತಿ ನೀಡುವಂತೆ ಇಡಿ ಸೂಚಿಸಿದಾಗ ಕಂಪನಿ ಕಡೆಯಿಂದ ಸರಿಯಾದ ಸಹಾಕರ ಸಿಗದ ಕಾರಣ ಕಾಯಿನ್‌ಸ್ವಿಚ್ ಕುಬರ್‌ನ ನಿರ್ದೇಶಕರು, ಸಿಇಒ ಮತ್ತು ಅವರ ಅಧಿಕೃತ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿತ್ತು ಎಂದು ವರದಿಯಾಗಿತ್ತು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ