Twitter: ಟ್ವಿಟರ್ಗೆ ಕಂಟೆಂಟ್ ಮಾಡರೇಷನ್ ಕೌನ್ಸಿಲ್ ಘೋಷಿಸಿದ ಎಲಾನ್ ಮಸ್ಕ್, ಏನಿದು?
ಟ್ವಿಟರ್ಗೆ ‘ಕಂಟೆಂಟ್ ಮಾಡರೇಷನ್ ಕೌನ್ಸಿಲ್’ ಸ್ಥಾಪಿಸುವುದಾಗಿ ಮೈಕ್ರೋಬ್ಲಾಗಿಂಗ್ ತಾಣದ ನೂತನ ಮಾಲೀಕರಾಗಿರುವ ಉದ್ಯಮಿ ಎಲಾನ್ ಮಸ್ಕ್ ತಿಳಿಸಿದ್ದಾರೆ.
ನ್ಯೂಯಾರ್ಕ್: ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ನ (Twitter) ನೂತನ ಮಾಲೀಕರಾಗಿರುವ ಉದ್ಯಮಿ ಎಲಾನ್ ಮಸ್ಕ್ (Elon Musk) ಹೊಸದೊಂದು ಘೋಷಣೆ ಮಾಡಿದ್ದಾರೆ. ಟ್ವಿಟರ್ಗೆ ‘ಕಂಟೆಂಟ್ ಮಾಡರೇಷನ್ ಕೌನ್ಸಿಲ್’ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಈ ಮಂಡಳಿಯು ಪ್ರಮುಖ ಕಂಟೆಂಟ್ಗಳು ಮತ್ತು ಖಾತೆ ಮರುಸ್ಥಾಪನೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿ ಖರೀದಿಸುವ 44 ಶತಕೋಟಿ ಡಾಲರ್ ಒಪ್ಪಂದ ಪೂರ್ಣಗೊಂಡ ಬೆನ್ನಲ್ಲೇ ಮಸ್ಕ್ ಅವರಿಂದ ಈ ಹೇಳಿಕೆ ಮೂಡಿಬಂದಿದೆ.
ವೈವಿಧ್ಯಮಯ ದೃಷ್ಟಿಕೋನದೊಂದಿಗೆ ಕಂಟೆಂಟ್ ಮಾಡರೇಷನ್ ಕೌನ್ಸಿಲ್ ಅನ್ನು ಟ್ವಿಟರ್ ಸ್ಥಾಪಿಸಲಿದೆ. ಈ ಹಿಂದೆ ಕಂಟೆಂಟ್ ಬಗ್ಗೆ ನಿರ್ಧಾರ ಕೈಗೊಳ್ಳಲು ಟ್ವಿಟರ್ನಲ್ಲಿ ವ್ಯವಸ್ಥೆ ಇರಲಿಲ್ಲ ಎಂದು ಅವರು ಶುಕ್ರವಾರ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಟ್ವಿಟರ್ ಕಂಟೆಂಟ್ ವಿಚಾರಕ್ಕೆ ಸಂಬಂಧಿಸಿ ಹಲವು ಊಹಾಪೋಹಗಳು ಹರಿದಾಡಿದ್ದವು. ಇದಕ್ಕೆ ಸ್ಪಷ್ಟನೆ ನೀಡಿ ಶನಿವಾರ ಟ್ವೀಟ್ ಮಾಡಿರುವ ಮಸ್ಕ್, ಒಂದು ವಿಚಾರ ಸ್ಪಷ್ಟಪಡಿಸುತ್ತೇನೆ, ನಾವಿನ್ನೂ ಟ್ವಿಟರ್ನ ಕಂಟೆಂಟ್ ಮಾಡರೇಷನ್ ನಿಯಮಗಳಲ್ಲಿ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
To be super clear, we have not yet made any changes to Twitter’s content moderation policies https://t.co/k4guTsXOIu
— Elon Musk (@elonmusk) October 29, 2022
‘ಕಂಟೆಂಟ್ ಮಾಡರೇಷನ್ ಕೌನ್ಸಿಲ್’ ಹೇಗಿರಲಿದೆ? ಯಾವ ರೀತಿಯಲ್ಲಿ ಕಾರ್ಯಾಚರಿಸಲಿದೆ ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ಮಸ್ಕ್ ಅವರು ಇನ್ನೂ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಟ್ವಿಟರ್ನಿಂದ ವಜಾಗೊಂಡ ಪರಾಗ್ ಅಗರ್ವಾಲ್ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ
ಲಾನ್ ಮಸ್ಕ್ ಅವರು ಸುಮಾರು 44 ಶತಕೋಟಿ ಡಾಲರ್ಗೆ ಟ್ವಿಟರ್ ಅನ್ನು ಖರೀದಿ ಮಾಡಿರುವುದು ಶುಕ್ರವಾರ ಬೆಳಿಗ್ಗೆ ಅಧಿಕೃತಗೊಂಡಿತ್ತು. ಖರೀದಿ ಪ್ರಕ್ರಿಯೆ ಅಧಿಕೃತಗೊಂಡ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡಿದ್ದ ಮಸ್ಕ್, ‘ಬರ್ಡ್ ಈಸ್ ಫ್ರೀಡ್’ ಎಂದು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ, ಸಿಇಒ ಪರಾಗ್ ಅಗರ್ವಾಲ್, ಟ್ವಿಟರ್ನ ಸಿಎಫ್ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ಮಸ್ಕ್ ವಜಾ ಮಾಡಿದ್ದರು.
ಟ್ವಿಟರ್ನಿಂದ ವಜಾಗೊಂಡಿರುವ ಪರಾಗ್ ಅಗರ್ವಾಲ್ ಅಂದಾಜು 42 ದಶಲಕ್ಷ ಡಾಲರ್, ಅಂದರೆ ಸುಮಾರು 346 ಕೋಟಿ ರೂ. ಪರಿಹಾರವಾಗಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ವಜಾಗೊಳಿಸಿರುವ ಮೂವರು ಉನ್ನತ ಉದ್ಯೋಗಿಗಳಿಗೆ ಟ್ವಿಟರ್ ನಿರ್ಗಮನ ಮೊತ್ತವಾಗಿ ಒಟ್ಟು ಅಂದಾಜು 800 ಕೋಟಿ ರೂ. ನೀಡಬೇಕಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ