PF- Aadhaar Linking: ಆಧಾರ್- ಪಿಎಫ್ ಜೋಡಣೆ ಗಡುವು ಡಿಸೆಂಬರ್ 31, 2021ಕ್ಕೆ ವಿಸ್ತರಿಸಿದ ಕೋರ್ಟ್

| Updated By: Srinivas Mata

Updated on: Sep 25, 2021 | 4:56 PM

ಉದ್ಯೋಗಿಗಳ ಪಿಎಫ್​ ಖಾತೆಯನ್ನು ಯುಎಎನ್​ ಜತೆಗೆ ಜೋಡಣೆ ಮಾಡುವ ಕಾಲಾವಧಿಯನ್ನು ಕೋರ್ಟ್​ನಿಂದ ವಿಸ್ತರಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

PF- Aadhaar Linking: ಆಧಾರ್- ಪಿಎಫ್ ಜೋಡಣೆ ಗಡುವು ಡಿಸೆಂಬರ್ 31, 2021ಕ್ಕೆ ವಿಸ್ತರಿಸಿದ ಕೋರ್ಟ್
ಸಾಂದರ್ಭಿಕ ಚಿತ್ರ
Follow us on

ಆಧಾರ್ ಸಂಖ್ಯೆಯನ್ನು ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಜತೆಗೆ ಜೋಡಣೆ ಮಾಡುವ ಗಡುವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಿಸ್ತರಣೆ ಮಾಡಿದೆ. ಈಗ ಹೊಸದಾಗಿ ಡಿಸೆಂಬರ್ 31, 2021ರ ತನಕ ವಿಸ್ತರಣೆ ಆಗಿದೆ. ಮತ್ತು ಈ ಅವಧಿಯೊಳಗೆ ಜೋಡಣೆ/ಪರಿಶೀಲನೆಯನ್ನು ಕೈಗೊಳ್ಳಬೇಕು. ಹಾಗೆ ಮಾಡದಿದ್ದರೆ ಉದ್ಯೋಗದಾತರ ಕೊಡುಗೆಯನ್ನು ಉದ್ಯೋಗಿಯ ಖಾತೆಗೆ ಜಮೆ ಮಾಡಲು ಆಗುವುದಿಲ್ಲ. ಇದನ್ನು ಮಾಡದಿದ್ದರೆ ಇಪಿಎಫ್​ನ ಇತರ ಪ್ರಯೋಜನಗಳನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಇತರ ಪ್ರಯೋಜನಗಳು ಅಂದರೆ, ಕೊವಿಡ್ -19 ಮುಂಗಡ, ವಿಮೆ ಹೀಗೆ. ತಮ್ಮ ತೀರ್ಪಿನಲ್ಲಿ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್, ಗಡುವು ಮುಗಿಯುವವರೆಗೆ ಆಧಾರ್-ಯುಎಎನ್ ಜೋಡಣೆ ಪೂರ್ಣಗೊಳಿಸದ ಉದ್ಯೋಗಿಗಳಿಗೆ ಸಹ ಭವಿಷ್ಯ ನಿಧಿಯನ್ನು ಠೇವಣಿ ಮಾಡಲು ಅನುಮತಿಸಲಾಗುವುದು ಎಂದು ಹೇಳಿದ್ದಾರೆ. ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಒಬ್ಬರ ಆಧಾರ್ ಅನ್ನು ದೃಢೀಕರಿಸಲು ಅಥವಾ ಪರಿಶೀಲಿಸಲು ವಿಫಲವಾದ ಕಾರಣ, ಕಡ್ಡಾಯವಾಗಿ ಜೋಡಣೆ ಕಾನೂನುಬದ್ಧವಾಗಿ ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವವರೆಗೆ ಕಾಯ್ದೆಯ ಅಡಿಯಲ್ಲಿ ಉದ್ಯೋಗಿಗೆ ಯಾವುದೇ ಪ್ರಯೋಜನಗಳನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. PTI ವರದಿಯ ಪ್ರಕಾರ, ಇದನ್ನು ಸೆಪ್ಟೆಂಬರ್ 17, 2021 ರಂದು ಹಿಂದಿನ ಆದೇಶದಲ್ಲಿ ಹೇಳಲಾಗಿದೆ.

ಕೈಗಾರಿಕೆಗಳು ಮತ್ತು ಸಂಸ್ಥೆಗಳ ಒಕ್ಕೂಟದ ಅರ್ಜಿಯನ್ನು ಕೋರ್ಟ್​ನಿಂದ ಪರಿಗಣಿಸಲಾಗಿದೆ. ನೌಕರರ ಭವಿಷ್ಯನಿಧಿ ಸಂಸ್ಥೆ (EPFO)ಯಿಂದ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಿಸಲಾಗಿದೆ. ಈ ಅಧಿಕಾರಿಯನ್ನು ಅರ್ಜಿದಾರರ ಸದಸ್ಯರು ಅಥವಾ ಇತರ ಯಾವುದಾದರೂ ಉದ್ಯೋಗದಾತರು ಭೇಟಿ ಮಾಡಬಹುದು. ಠೇವಣಿ ತಡವಾಗಿಲ್ಲ ಎಂಬುದನ್ನು ಖಾತ್ರಿಪಡಿಸಬೇಕು. ಮತ್ತೊಂದೆಡೆ, ಈಗಾಗಲೇ EPFO​​ಗೆ ತಮ್ಮ ಆಧಾರ್ ಸಲ್ಲಿಸಿರುವ ಉದ್ಯೋಗಿಗಳಿಗೆ ಭವಿಷ್ಯ ನಿಧಿಯನ್ನು ತಕ್ಷಣವೇ ಜಮಾ ಮಾಡಬಹುದು ಹಾಗೂ ಪರಿಶೀಲನೆ ಪ್ರಕ್ರಿಯೆಗಾಗಿ ಕಾಯುತ್ತಿರುವಾಗ UIDAIನಿಂದ ಹೆಚ್ಚುವರಿ ಪರಿಶೀಲನೆ ಅಗತ್ಯವಿಲ್ಲ.

ಕೋರ್ಟ್ ಮೆಟ್ಟಿಲೇರಿದ್ದರು
ಜೂನ್ 1, 2021 ರಂದು ಹೊರಡಿಸಿದ ಇಪಿಎಫ್‌ಒ ಸುತ್ತೋಲೆಯ ವಿರುದ್ಧ ವಿವಿಧ ಸಂಸ್ಥೆಗಳು ಮತ್ತು ಕೈಗಾರಿಕೆ/ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಸಂಸ್ಥೆಗಳಲ್ಲಿ ಉದ್ಯೋಗ ನಿರ್ವಹಿಸುವವರು ಹೊಸ ಬದಲಾವಣೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದರು. ಆ ಹಿನ್ನೆಲೆಯಲ್ಲಿ ಈ ತೀರ್ಪು ಬಂದಿದೆ. ಈ ಹಿಂದಿನ ಸುತ್ತೋಲೆಯು ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಇತರೆ ಪ್ರಾವಿಷನ್ಸ್ ಕಾಯ್ದೆ, 1952ರ ಅಡಿಯಲ್ಲಿ ಆಧಾರ್ ಅನ್ನು UANಗೆ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿತು. ಇದರ ನಂತರ, ಕೇಂದ್ರ ಸರ್ಕಾರವು ಗಡುವುವನ್ನು ಸೆಪ್ಟೆಂಬರ್ 1ಕ್ಕೆ ವಿಸ್ತರಿಸಿತು.

ಆಧಾರ್ ಡೇಟಾಬೇಸ್ ಮತ್ತು ಇಪಿಎಫ್‌ಒನ ಡೇಟಾಬೇಸ್ ಮಧ್ಯೆ ಹೊಂದಾಣಿಕೆ ಆಗದಿರುವ ಸಂದರ್ಭಗಳಿವೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಅನೇಕ ಉದ್ಯೋಗದಾತರು ಸರಿಯಾದ ಆಧಾರ್ ಕಾರ್ಡ್ ಹೊಂದಿಲ್ಲದ ಉದ್ಯೋಗಿಗಳನ್ನು ನೇಮಿಸಿಕೊಳ್ಳದಂತೆ ಒತ್ತಾಯಿಸಲಾಯಿತು. ಅರ್ಜಿದಾರರು ಇದನ್ನು ಇಪಿಎಫ್‌ಒ ಆದೇಶದ ಪರಿಣಾಮವಾಗಿ ಉಂಟಾದ ‘ಅಪಾರ ಪೂರ್ವಗ್ರಹ’ ಎಂದು ಪಿಟಿಐ ವರದಿ ಹೇಳಿದೆ. ಕೊರೊನಾ ಪರಿಣಾಮವಾಗಿ ಈ ಹಿಂದೆ ಪ್ರಮುಖ ನಗರಗಳಿಂದ ಮತ್ತು ತಮ್ಮ ಊರುಗಳಿಗೆ ತೆರಳಿದ್ದ ಅನೇಕ ವಲಸೆ ಕಾರ್ಮಿಕರು ಹಿಂತಿರುಗಿದ ನಂತರ ತಮ್ಮ ಉದ್ಯೋಗದಾತರೊಂದಿಗೆ ಸೇರಲು ಪ್ರಯತ್ನಿಸಿದರು. ಆದರೆ ಯುಎಎನ್‌ಗೆ ಆಧಾರ್ ಅನ್ನು ಜೋಡಣೆ ಅನುಮತಿಸುವ ಪೂರಕ ದಾಖಲೆಗಳನ್ನು ವ್ಯವಸ್ಥೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ.

ರಾಷ್ಟ್ರೀಯ ಡೇಟಾಬೇಸ್ ಸಜ್ಜುಗೊಳಿಸುವ ಪ್ರಯತ್ನ
ಗಡುವು ವಿಸ್ತರಣೆಯ ಕುರಿತು ಮಾತನಾಡುತ್ತಾ “ಇಂಡಸ್ ಲಾ”ದ ಪಾಲುದಾರರಾದ ವೈಭವ್ ಭಾರದ್ವಾಜ್, “ಇದು ಪ್ರಗತಿಪರ ಹೆಜ್ಜೆಯಾಗಿದೆ. ಏಕೆಂದರೆ ಇದು ಉದ್ಯೋಗದಾತರ ಕಾರ್ಯವಿಧಾನ ಮತ್ತು ನಿಯಮಾವಳಿಗಳ ಅಗತ್ಯಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಉದ್ಯೋಗಿಗಳು ತಮ್ಮ ಖಾತೆಗಳಿಗೆ ಮಾಸಿಕ ಆಧಾರದ ಮೇಲೆ ಸಲ್ಲಿಸುವ ಕೊಡುಗೆಗಳ ಸಹಜ ಸಮಯದ ನವೀಕರಣವನ್ನು ಸಹ ಪಡೆಯುತ್ತಾರೆ. ಆದರೆ ಹಿಂಪಡೆಯುವಿಕೆ, ವರ್ಗಾವಣೆ ಮತ್ತು ಬಡ್ಡಿ ಕ್ರೆಡಿಟ್‌ಗಳ ಪ್ರಕ್ರಿಯೆಯು ಸುಲಭವಾಗುತ್ತದೆ. ಈ ಕ್ರಮವು ಅಸಂಘಟಿತ ಕಾರ್ಮಿಕರಿಗಾಗಿ ರಾಷ್ಟ್ರೀಯ ಡೇಟಾಬೇಸ್ ಅನ್ನು ಸಜ್ಜುಗೊಳಿಸುವ ಸರ್ಕಾರದ ಇತ್ತೀಚಿನ ಪ್ರಯತ್ನಕ್ಕೆ ಅನುಗುಣವಾಗಿದೆ ಮತ್ತು ಲಕ್ಷಾಂತರ ಹಿಂದುಳಿದ ಕಾರ್ಮಿಕರಿಗೆ ವಿವಿಧ ಕಲ್ಯಾಣ ಯೋಜನೆಗಳ ಲಾಭವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ,” ಎಂದು ಭಾರದ್ವಾಜ್ ಹೇಳಿದ್ದಾರೆ.

ಭಾರತದ ಈಶಾನ್ಯ ಪ್ರದೇಶಗಳು ಮತ್ತು ಕೆಲವು ವರ್ಗಗಳ ಸಂಸ್ಥೆಗಳಿಗಾಗಿ ಇಪಿಎಫ್‌ಒ ಡಿಸೆಂಬರ್ 31ರ ಗಡುವು ನೀಡಿರುವುದನ್ನು ಸಹ ಗಮನಿಸಬೇಕು. ಆದರೂ ಆಧಾರ್ ಇಲ್ಲದ ಉದ್ಯೋಗಿಗಳಿಗೆ ಸಾಮಾನ್ಯ ಸಂದರ್ಭದಲ್ಲಿ ಹೆಚ್ಚಿನ ವಿಸ್ತರಣೆಗಳನ್ನು ನೀಡಲಾಗಿಲ್ಲ. ಅಕ್ಟೋಬರ್ 2017ರಲ್ಲಿ ಆರಂಭಿಕ ಅಧಿಸೂಚನೆಯಿಂದ ‘ಸಮರ್ಪಕ ಸಮಯ’ ಕಳೆದಿದೆ ಎಂದು ಇಪಿಎಫ್‌ಒ ಹೇಳಿಕೊಂಡ ಹಿನ್ನಲೆಯಲ್ಲಿ ಇದು ಬಂದಿತು. ಪಿಟಿಐ ವರದಿಯ ಪ್ರಕಾರ, ಆಧಾರ್ ಜೋಡಣೆ ಮತ್ತು ಪರಿಶೀಲನೆಯನ್ನು ಮಾಡಬೇಕಿರುವ ಒಟ್ಟು ಉದ್ಯೋಗಿಗಳ ಸಂಖ್ಯೆ 29,26,479 ಎಂದು ಕೋರ್ಟ್ ಗಮನಕ್ಕೆ ಬಂದಿದೆ.

ಇದನ್ನೂ ಓದಿ: PF Withdrawal: 5 ವರ್ಷಕ್ಕಿಂತ ಮುಂಚೆ ಪಿಎಫ್​ ವಿಥ್​ ಡ್ರಾ ಮಾಡುತ್ತಿದ್ದೀರಾ? ಯಾವಾಗ ತೆರಿಗೆ ಬೀಳಲ್ಲ ಎಂಬ ಮಾಹಿತಿ ಇಲ್ಲಿದೆ

(Employee PF Account Link With UAN Deadline Extended Till December 31 2021 By High Court)

Published On - 4:54 pm, Sat, 25 September 21