AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

Get Free Life Insurance Up To ₹7 Lakhs With EDLI: ಇಪಿಎಫ್ ಖಾತೆದಾರರಿಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ₹7 ಲಕ್ಷದವರೆಗೆ ಉಚಿತ ಜೀವ ವಿಮೆ (EDLI) ಸೌಲಭ್ಯವಿದೆ. ಹೆಚ್ಚಿನ ಉದ್ಯೋಗಿಗಳಿಗೆ ಇದರ ಅರಿವಿಲ್ಲ. ಉದ್ಯೋಗಿ ಮೃತಪಟ್ಟಾಗ ನಾಮಿನಿ ಹಣ ಪಡೆಯಲು ಇ-ನಾಮಿನೇಷನ್ ಕಡ್ಡಾಯ. ಅರ್ಹತೆ, ಲೆಕ್ಕಾಚಾರ ಮತ್ತು ಕ್ಲೈಮ್ ಪ್ರಕ್ರಿಯೆ ಬಗ್ಗೆ ತಿಳಿಯಿರಿ. ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಈಗಲೇ ನಾಮಿನೇಷನ್ ಮಾಡಿ.

ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?
ವಿಮೆImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2026 | 3:38 PM

Share

ಹೆಚ್ಚಿನ ಜನರಿಗೆ ಗೊತ್ತಿಲ್ಲದ ಸಂಗತಿ ಇದು. ಇಪಿಎಫ್ (EPF) ಅಥವಾ ನೌಕರರ ಭವಿಷ್ಯ ನಿಧಿ ಖಾತೆ ಹೊಂದಿರುವವರಿಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ₹7 ಲಕ್ಷದವರೆಗೆ ಉಚಿತ ಜೀವ ವಿಮೆ (Life Insurance) ಸೌಲಭ್ಯ ಸಿಗುತ್ತದೆ. ಇದನ್ನು ‘ಇಡಿಎಲ್‌ಐ’ (Employees’ Deposit Linked Insurance Scheme – EDLI) ಯೋಜನೆ ಎಂದು ಕರೆಯಲಾಗುತ್ತದೆ. ಇಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಗೂ ಈ ವಿಮಾ ರಕ್ಷಣೆ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಈ ವಿಮಾ ಸೌಲಭ್ಯದ ಬಗ್ಗೆ ಇಪಿಎಫ್ ಖಾತೆದಾರರಲ್ಲೇ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಕೆಲಸ ಮಾಡುವ ಸಂಸ್ಥೆಗಳೂ ಕೂಡ ಉದ್ಯೋಗಿಗಳಿಗೆ ಈ ವಿಮೆಯ ಬಗ್ಗೆ ಮಾಹಿತಿ ನೀಡುವ ಗೋಜಿಗೆ ಹೋಗುವುದಿಲ್ಲ.

ಇಪಿಎಫ್ ಖಾತೆದಾರರಿಗೆ ಸಿಗುವ ಈ ವಿಮೆಗಾಗಿ ಉದ್ಯೋಗಿ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ ಅಥವಾ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿಲ್ಲ. ಕಂಪನಿಯು (Employer) ನಿಮ್ಮ ಇಪಿಎಫ್ ಖಾತೆಗೆ ಕೊಡುಗೆ ನೀಡುವಾಗ, ಅದರ ಜೊತೆಗೆ ಉದ್ಯೋಗಿಯ ಮೂಲ ವೇತನದ ಶೇ. 0.5 ರಷ್ಟು (ಗರಿಷ್ಠ ₹75) ಹಣವನ್ನು ಈ ಇಡಿಎಲ್‌ಐ ಯೋಜನೆಗೆ ಜಮಾ ಮಾಡುತ್ತದೆ.

ಅರ್ಹತೆ ಮತ್ತು ಹಣದ ಲೆಕ್ಕಾಚಾರ ಹೇಗೆ?

ಇಪಿಎಫ್ ಸದಸ್ಯರಿಗೆ ಏಳು ಲಕ್ಷ ರೂವರೆಗೆ ಜೀವ ವಿಮಾ ಕವರೇಜ್ ಇರುತ್ತದೆ. ಆದರೆ, ಕನಿಷ್ಠ 12 ತಿಂಗಳು ಅವರ ಇಪಿಎಫ್ ಅಕೌಂಟ್ ಸಕ್ರಿಯವಾಗಿರಬೇಕು. ಖಾತೆದಾರರು ಮೃತಪಟ್ಟಾಗ ಅವರ ಇಪಿಎಫ್ ಅಕೌಂಟ್ ಚಾಲ್ತಿಯಲ್ಲಿರಬೇಕು. ಯಾವುದೇ ಇಪಿಎಫ್ ಸದಸ್ಯರು ಉದ್ಯೋಗದಲ್ಲಿರುವಾಗ (In service) ಮರಣ ಹೊಂದಿದರೆ ಮಾತ್ರ ವಿಮಾ ರಕ್ಷಣೆ ಸಿಗುವುದು. ಅವರ ನಾಮಿನಿ (Nominee) ಅಥವಾ ಕಾನೂನುಬದ್ಧ ವಾರಸುದಾರರು ಈ ವಿಮಾ ಹಣವನ್ನು ಕ್ಲೈಮ್ ಮಾಡಬಹುದು.

ಇದನ್ನೂ ಓದಿ: ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ

₹7 ಲಕ್ಷ ವಿಮಾ ಕವರೇಜ್ ಲೆಕ್ಕಾಚಾರ

ಕಳೆದ 12 ತಿಂಗಳ ಸರಾಸರಿ ವೇತನ ಮತ್ತು ಪಿಎಫ್ ಬ್ಯಾಲೆನ್ಸ್ ಆಧಾರದ ಮೇಲೆ ಇದನ್ನು ಲೆಕ್ಕ ಹಾಕಲಾಗುತ್ತದೆ. ಉದ್ಯೋಗಿಯ ಮೂಲ ವೇತನ (Basic Salary) ಕಳೆದ 12 ತಿಂಗಳುಗಳಿಂದ ₹15,000 ಕ್ಕಿಂತ ಹೆಚ್ಚಾಗಿದ್ದು, ಅವರ ಒಟ್ಟು ಇಪಿಎಫ್ ಬ್ಯಾಲೆನ್ಸ್ ಸರಾಸರಿ ₹3.5 ಲಕ್ಷಕ್ಕಿಂತ ಹೆಚ್ಚಿದ್ದರೆ ಗರಿಷ್ಠ ₹7 ಲಕ್ಷ ಪೂರ್ಣ ಮೊತ್ತ ಸಿಗುತ್ತದೆ.

ಇದಕ್ಕೆ ಎರಡು ಅಂಶಗಳಿವೆ. ಕಳೆದ 12 ತಿಂಗಳ ಸರಾಸರಿ ಮಾಸಿಕ ವೇತನದ (ಗರಿಷ್ಠ ₹15,000) 35 ಪಟ್ಟು ಹಣ ಸಿಗುತ್ತದೆ. ಅಂದರೆ, ₹5.25 ಲಕ್ಷದವರೆಗೆ ಸಿಗಬಹುದು. ಎರಡನೇ ಅಂಶವು ಬೋನಸ್. ಇದು ಕಳೆದ 12 ತಿಂಗಳ ಸರಾಸರಿ ಪಿಎಫ್ ಬ್ಯಾಲನ್ಸ್​ನ ಶೇ. 50ರಷ್ಟು ಎಂದಿದೆ. ಇದನ್ನು ₹1.75 ಲಕ್ಷಕ್ಕೆ ಮಿತಿಗೊಳಿಸಲಾಗಿರುತ್ತದೆ. ಅಂದರೆ, 12 ತಿಂಗಳಲ್ಲಿ ಸರಾಸರಿ ಪಿಎಫ್ ಬ್ಯಾಲನ್ಸ್ 3.5 ಲಕ್ಷ ರೂ ಇದ್ದಾಗ ಪೂರ್ಣ 7 ಲಕ್ಷ ರೂ ವಿಮಾ ಕವರೇಜ್ ಸಿಗುತ್ತದೆ.

ಕನಿಷ್ಠ ವಿಮಾ ಮೊತ್ತ: ₹2.5 ಲಕ್ಷ

ಕಳೆದ ವರ್ಷ (2025) ಮಾಡಿದ ತಿದ್ದುಪಡಿಯ ಬಳಿಕ ಕನಿಷ್ಠ ಇಡಿಎಲ್​ಐ ಬೆನಿಫಿಟ್ ₹2.5 ಲಕ್ಷ ಇದೆ. ಒಂದು ವೇಳೆ, ಉದ್ಯೋಗಿಯ ಪಿಎಫ್ ಬ್ಯಾಲೆನ್ಸ್ ₹50,000 ಕ್ಕಿಂತ ಕಡಿಮೆ ಇದ್ದರೂ ಕನಿಷ್ಠ ₹50,000 ಸಿಗುವ ಭರವಸೆ ಇರುತ್ತದೆ.

ಕ್ಲೈಮ್ (Claim) ಮಾಡುವುದು ಹೇಗೆ?

ದುರದೃಷ್ಟವಶಾತ್ ಇಪಿಎಫ್ ಸದಸ್ಯರು ಮರಣ ಹೊಂದಿದರೆ, ಅವರ ಕುಟುಂಬದವರು ಈ ಕೆಳಗಿನ ಹಂತಗಳ ಮೂಲಕ ಹಣವನ್ನು ಪಡೆಯಬಹುದು:

  • ಫಾರ್ಮ್ 5 ಐಎಫ್ (Form 5 IF), ನಾಮಿನಿಯಾದವರು ಇಪಿಎಫ್ಒಗೆ ಈ ನಿಗದಿತ ಫಾರ್ಮ್ ಅನ್ನು ಸಲ್ಲಿಸಬೇಕು.
  • ಉದ್ಯೋಗಿಯ ಮರಣ ಪ್ರಮಾಣಪತ್ರ (Death Certificate), ನಾಮಿನಿಯ ಕೆವೈಸಿ (ಆಧಾರ್, ಪಾನ್ ಕಾರ್ಡ್), ಬ್ಯಾಂಕ್ ಪಾಸ್‌ಬುಕ್ ಪ್ರತಿ ಮತ್ತು ವಾರಸುದಾರರ ಪ್ರಮಾಣಪತ್ರಗಳನ್ನು ಲಗತ್ತಿಸಬೇಕು.
  • ಈ ಅರ್ಜಿಯನ್ನು ಉದ್ಯೋಗಿ ಕೆಲಸ ಮಾಡುತ್ತಿದ್ದ ಕಂಪನಿಯ ಮೂಲಕ ಅಥವಾ ನೇರವಾಗಿ ಇಪಿಎಫ್ಒ ಕಚೇರಿಗೆ ಸಲ್ಲಿಸಬಹುದು.

ಇದನ್ನೂ ಓದಿ: ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್​ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

ವಿಮೆ ಸರಿಯಾಗಿ ದಕ್ಕಬೇಕಾದರೆ ಇಪಿಎಫ್ ಸದಸ್ಯರು ಈ ಕೆಲಸ ಮಾಡಬೇಕು

  • ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಇಪಿಎಫ್ ಖಾತೆಗೆ ‘ಇ-ನಾಮಿನೇಷನ್’ (e-Nomination) ಮಾಡಿರದಿದ್ದರೆ, ತತ್​ಕ್ಷಣವೇ ಆ ಕೆಲಸ ಮಾಡಿ.
  • ತಮ್ಮ ಯುಎಎನ್ ಹಾಗೂ ಇಪಿಎಫ್ ಖಾತೆಗಳ ವಿವರವನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳಬೇಕು.
  • ನಾಮಿನಿ ವಿವರಗಳು ಅಪ್‌ಡೇಟ್ ಆಗಿದ್ದರೆ ಮಾತ್ರ ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ಅಡೆತಡೆಯಿಲ್ಲದೆ ವಿಮಾ ಹಣ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More