ನವದೆಹಲಿ, ಜುಲೈ 18: ಪರಿಸರಕ್ಕೆ ಹಾನಿಕಾರಕವಾಗುವ ಕಲ್ಲಿದ್ದಲು ಇತ್ಯಾದಿ ಬಳಸಿ ತಯಾರಾಗುವ ಕಬ್ಬಿಣ, ಉಕ್ಕು ಇತ್ಯಾದಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವಾಗ ಕಾರ್ಬನ್ ಟ್ಯಾಕ್ಸ್ ವಿಧಿಸಲು ಐರೋಪ್ಯ ಒಕ್ಕೂಟ ನಿರ್ಧರಿಸಿದೆ. ಭಾರತ, ಚೀನಾ ಒಳಗೊಂಡಂತೆ ಅಭಿವೃದ್ದಿಶೀಲ ದೇಶಗಳಿಗೆ ತೆರಿಗೆ ಬರೆ ಬಿದ್ದಂತಾಗಲಿದೆ. ಉಕ್ಕು, ಕಬ್ಬಿಣ, ಸಿಮೆಂಟ್, ರಸಗೊಬ್ಬರ, ಅಲೂಮಿನಿಯಂ ಇತ್ಯಾದಿ ಉತ್ಪನ್ನಗಳ ತಯಾರಿಕೆಗೆ ಕಾರ್ಬನ್ ಬಳಕೆ ಮಾಡಿದರೆ ಅದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಅಂಥ ಉತ್ಪನ್ನಗಳಿಗೆ ಕಾರ್ಬಲ್ ಟ್ಯಾಕ್ಸ್ ವಿಧಿಸಲು ಐರೋಪ್ಯ ಒಕ್ಕೂಟವು ಸಿಬಿಎಎಂ (ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ) ವ್ಯವಸ್ಥೆ ಮಾಡಿದೆ.
ಈ ರೀತಿ ಐರೋಪ್ಯ ಒಕ್ಕೂಟವು ಕಾರ್ಬನ್ ಟ್ಯಾಕ್ಸ್ ವಿಧಿಸುವುದರಿಂದ ಭಾರತಕ್ಕೆ ಆಗುವ ನಷ್ಟವು ಅದರ ಜಿಡಿಪಿಯ ಶೇ. 0.05ರಷ್ಟಿದೆ ಎಂದು ಸ್ವತಂತ್ರ ಚಿಂತನೆ ಕೂಟವಾದ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಹೇಳಿದೆ. ಭಾರತದಿಂದಲೂ ಇದಕ್ಕೆ ಪ್ರತಿಯಾಗಿ ಐತಿಹಾಸಿಕ ಆಧಾರವಾಗಿ ಮುಂದುವರಿದ ದೇಶಗಳಿಗೆ ತೆರಿಗೆ ವಿಧಿಸಬೇಕು ಎಂದು ಇದೇ ಏಜೆನ್ಸಿ ಸಲಹೆ ನೀಡಿದೆ. ಭಾರತಕ್ಕೆ ಮಾತ್ರವಲ್ಲ, ಕಾರ್ಬನ್ ಟ್ಯಾಕ್ಸ್ ಎದುರಿಸುತ್ತಿರುವ ಚೀನಾ ಸೇರಿದಂತೆ ಎಲ್ಲಾ ಅಭಿವೃದ್ಧಿಶೀಲ ದೇಶಗಳಿಗೂ ಅದು ಈ ಸಲಹೆ ನೀಡಿದೆ.
ಇದನ್ನೂ ಓದಿ: ಬೈಸಿಕಲ್ನಿಂದ ಹಿಡಿದು ಬ್ರಹ್ಮೋಸ್ವರೆಗೆ, ಜಾಗತಿಕವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹವಾ ಹೇಗಿದೆ ನೋಡಿ
ಐತಿಹಾಸಿಕವಾಗಿ ಗಮನಿಸಿದಾಗ ಈಗ ಮುಂದುವರಿದಿರುವ ದೇಶಗಳು ಈ ಪರಿಸ್ಥಿತಿಗೆ ಬರಲು ಕಾರ್ಬನ್ ಇತ್ಯಾದಿ ಪಳೆಯುಳಿಕೆ ಇಂಧನಗಳನ್ನು ಯಥೇಚ್ಛವಾಗಿ ಬಳಸಿಕೊಂಡಿವೆ. 18 ಮತ್ತು 19ನೇ ಶತಮಾನದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯಲ್ಲಿ ಈ ಮುಂದುವರಿದ ದೇಶಗಳು ಕಾರ್ಬನ್ ಬಳಕೆಯ ಫಲಾನುಭವಿಗಳಾಗಿವೆ. ಅಭಿವೃದ್ಧಿಶೀಲ ದೇಶಗಳು ಈಗ ಈ ಫಾಸಿಲ್ ಇಂಧನವನ್ನು ಬಳಸಿ ಅದರ ಪ್ರಯೋಜನ ಪಡೆಯಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶ್ರೀಮಂತ ದೇಶಗಳು ಅಭಿವೃದ್ಧಿ ದೇಶಗಳ ಮೇಲೆ ಕಾರ್ಬನ್ ಟ್ಯಾಕ್ಸ್ ವಿಧಿಸುವುದು ಅನ್ಯಾಯ ಎಂಬುದು ಸಿಎಸ್ಇ ಅನಿಸಿಕೆ.
ಈ ಹಿಂದೆ ಪರಿಸರಕ್ಕೆ ಧಕ್ಕೆ ಮಾಡಿದ ಕಾರಣಕ್ಕೆ ಶ್ರೀಮಂತ ದೇಶಗಳೂ ಕೂಡ ದಂಡ ತೆರಬೇಕಾಗುತ್ತದೆ. ಅಭಿವೃದ್ಧಿ ದೇಶಗಳು ಈ ಸಿರಿವಂತ ದೇಶಗಳಿಗೆ ಪ್ರತಿತೆರಿಗೆ ಹಾಕಬೇಕು. ಆ ಹಣವನ್ನು ಕಾರ್ಬನ್ ಮುಕ್ತ ಉತ್ಪಾದನಾ ವ್ಯವಸ್ಥೆ ಸುಧಾರಿಸಲು ಬಳಸಬೇಕು ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಸಂಸ್ಥೆ ಹೇಳಿದೆ.
ವಿಶ್ವಸಂಸ್ಥೆ ಆದೇಶದ ಪ್ರಕಾರ ಇಡೀ ಜಗತ್ತು ಕಾರ್ಬನ್ ಮುಕ್ತವಾಗಬೇಕು ಎಂಬ ಗುರಿ ಇಡಲಾಗಿದೆ. ಆ ಗುರಿಸಾಧನೆಯ ಭಾಗವಾಗಿ ಕಾರ್ಬನ್ ಟ್ಯಾಕ್ಸ್ ಒಂದು ಕ್ರಮವಾಗಿದೆ. ಒಂದು ಉತ್ಪನ್ನದ ತಯಾರಿಕೆಗೆ ಎಷ್ಟು ಪರಿಸರ ಹಾನಿಯಾಗುತ್ತದೋ ಅಷ್ಟು ಪ್ರಮಾಣದ ತೆರಿಗೆ ಕಟ್ಟಬೇಕು ಎಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ