ರಿಸಲ್ಟ್ ಬರುವ ಮುನ್ನವೇ ಉಬ್ಬಿ ನಿಂತ ಷೇರುಪೇಟೆ; ನಿಫ್ಟಿ, ಸೆನ್ಸೆಕ್ಸ್ ಸೇರಿ ಪ್ರಮುಖ ಸೂಚ್ಯಂಕಗಳು ಮೇಲಕ್ಕೆ

Stock market latest updates: ಶನಿವಾರ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳು ಎನ್​ಡಿಎ ಮೈತ್ರಿಕೂಟದ ಗೆಲುವನ್ನು ಸೂಚಿಸುತ್ತಿವೆ. ಇದರ ಬೆನ್ನಲ್ಲೇ ಇಂದು ಸೋಮವಾರ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಬಹುತೇಕ ಪ್ರಮುಖ ಷೇರುಗಳು ಉತ್ತಮ ಬೇಡಿಕೆ ಪಡೆದಿವೆ. ಎಲ್ಲಾ ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ. ಬೆರಳೆಣಿಕೆಯ ಷೇರುಗಳು ಮಾತ್ರವೇ ನಷ್ಟ ತರುತ್ತಿವೆ.

ರಿಸಲ್ಟ್ ಬರುವ ಮುನ್ನವೇ ಉಬ್ಬಿ ನಿಂತ ಷೇರುಪೇಟೆ; ನಿಫ್ಟಿ, ಸೆನ್ಸೆಕ್ಸ್ ಸೇರಿ ಪ್ರಮುಖ ಸೂಚ್ಯಂಕಗಳು ಮೇಲಕ್ಕೆ
ಷೇರು ಮಾರುಕಟ್ಟೆ

Updated on: Jun 03, 2024 | 11:19 AM

ನವದೆಹಲಿ, ಜೂನ್ 3: ಭಾರತದ ಷೇರು ಮಾರುಕಟ್ಟೆಯ (stock market) ಪ್ರಮುಖ ಸೂಚ್ಯಂಕಗಳೆಲ್ಲವೂ ಸೋಮವಾರ ವಿಜೃಂಬಿಸುತ್ತಿವೆ. ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ ದಾಖಲೆಯ ಮಟ್ಟಕ್ಕೆ ಏರಿವೆ. ಬಿಎಸ್​ಇಯ 30 ಷೇರುಗಳ ಸೆನ್ಸೆಕ್ಸ್ (sensex) ಶೇ. 3.5ರವರೆಗೆ ಏರಿ 76,583 ಅಂಕಗಳ ಮಟ್ಟ ತಲುಪಿತ್ತು. ಇದು ಬಿಎಸ್​ಇ ಇತಿಹಾಸದಲ್ಲೇ ಸೆನ್ಸೆಕ್ಸ್ ಸೂಚ್ಯಂಕ ತಲುಪಿದ ಗರಿಷ್ಠ ಎತ್ತರ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ 50 ಷೇರುಗಳ ನಿಫ್ಟಿ50 ಸೂಚ್ಯಂಕ (Nifty) ಕೂಡ 807 ಅಂಕಗಳಷ್ಟು ಏರಿ 23,337 ಮಟ್ಟ ತಲುಪಿದೆ. ಷೇರು ಮಾರುಕಟ್ಟೆ ಈ ಪರಿ ಗರಿಗೆದರಲು ಎಕ್ಸಿಟ್ ಪೋಲ್ ಫಲಿತಾಂಶ ಕಾರಣ ಇರಬಹುದು. ಇದರೊಂದಿಗೆ ಎನ್​ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರುವ ಇರಾದೆಯಲ್ಲಿ ಮಾರುಕಟ್ಟೆ ಇದೆ ಎನ್ನುವಂತಿದೆ.

ಮೊನ್ನೆ ಶನಿವಾರ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದವು. ಹೆಚ್ಚಿನ ಸಮೀಕ್ಷೆಗಳು ಎನ್​ಡಿಎಗೆ ಬಹುಮತ ಬರಬಹುದು ಎನ್ನುವ ಸುಳಿವು ನೀಡಿವೆ. ಅದಕ್ಕೂ ಹಿಂದಿನ ಒಂದೆರಡು ವಾರಗಳಿಂದ ಷೇರು ಮಾರುಕಟ್ಟೆ ತುಮುಲದ ಸ್ಥಿತಿಯಲ್ಲಿತ್ತು. ಎನ್​ಡಿಎ ಮೈತ್ರಿಕೂಟ 300 ಸೀಟುಗಳ ಒಳಗೆ ಗೆಲ್ಲಬಹುದು ಎನ್ನುವ ವದಂತಿಗಳಿದ್ದವು. ಈ ಕಾರಣಕ್ಕೆ ಷೇರು ಮಾರುಕಟ್ಟೆ ನಕಾರಾತ್ಮಕವಾಗಿ ವರ್ತಿಸುತ್ತಿದೆ ಎಂಬುದು ವಿಶ್ಲೇಷಕರ ಅನಿಸಿಕೆ. ಈಗ ಎಕ್ಸಿಟ್ ಪೋಲ್​​ಗಳು ಎನ್​ಡಿಎಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆಯನ್ನು ತೋರಿಸಿವೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ವರ್ತಿಸುತ್ತಿರಬಹುದು ಎಂದೆನ್ನಲಾಗುತ್ತಿದೆ.

ಇದನ್ನೂ ಓದಿ: ಅಮುಲ್ ದರ ಏರಿಕೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

ಇವತ್ತು ಏರಿಕೆಯಾದ ಪ್ರಮುಖ ಸ್ಟಾಕುಗಳಲ್ಲಿ ಪವರ್ ಗ್ರಿಡ್, ಎಲ್ ಅಂಡ್ ಟಿ, ಎನ್​ಟಿಪಿಸಿ, ಎಸ್​ಬಿಐ, ಎಕ್ಸಿಸ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ, ಐಸಿಐಸಿಐ ಬ್ಯಾಂಕ್ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಉತ್ತಮ ಬೆಲೆ ಪಡೆದುಕೊಂಡಿವೆ.

ಏಷ್ಯನ್ ಪೇಂಟ್ಸ್, ಏಚರ್ ಮೋಟಾರ್ಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಬಯೋಕಾನ್, ಫೋರ್ಟಿಸ್ ಹೆಲ್ತ್, ಗ್ಲ್ಯಾಂಡ್, ಎಲ್ ಅಂಡ್ ಟಿ ಟೆಕ್ನಾಲಜಿ ಹೀಗೆ ಬೆರಳಣಿಕೆಯಷ್ಟು ಸ್ಟಾಕುಗಳು ಮಾತ್ರ ನಷ್ಟ ಕಂಡಿವೆ. ಉಳಿದಂತೆ ಬಹುತೇಕ ಷೇರುಗಳು ಬೇಡಿಕೆ ಪಡೆದಿರುವುದು ಗಮನಾರ್ಹವೆನಿಸಿದೆ. ಕಳೆದ ವಾರ ಕಂಡ ಇಳಿಕೆಯನ್ನು ಮೀರಿಸಿ ಇಂದು ಸೋಮವಾರ ಷೇರುಗಳು ಓಡಿವೆ.

ನಾಳೆ, ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಎನ್​ಡಿಎ ಮೈತ್ರಿಕೂಟವೇ ಮತ್ತೆ ಸರ್ಕಾರ ರಚನೆ ಮಾಡುವಂತಾದರೆ ಷೇರು ಮಾರುಕಟ್ಟೆ ಇನ್ನಷ್ಟು ಏರಬಹುದು. ಬಜೆಟ್​ನಲ್ಲಿ ನಡೆಯುವ ಘೋಷಣೆಗಳು ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಬಹುದು.

ಇದನ್ನೂ ಓದಿ: ಎಲ್ಲಾ ಹೆದ್ದಾರಿಗಳ ಟೋಲ್​ ಶುಲ್ಕ ಶೇ.5ರಷ್ಟು ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಒಂದು ವೇಳೆ ಎನ್​ಡಿಎ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಆಗದೇ ಹೋದರೂ ಷೇರು ಮಾರುಕಟ್ಟೆ ದೀರ್ಘಾವಧಿಯಲ್ಲಿ ಕುಸಿತ ಕಾಣುವುದು ಅನುಮಾನ. ಕೆಲ ದಿನ ಮಾತ್ರವೇ ನಕಾರಾತ್ಮಕವಾಗಿ ವರ್ತಿಸಿ, ಬಳಿಕ ಮತ್ತೆ ಲಯ ಪಡೆದುಕೊಳ್ಳುತ್ತದೆ ಎಂಬುದು ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Mon, 3 June 24