
ನವದೆಹಲಿ, ಆಗಸ್ಟ್ 16: ಭಾರತ ಎಂದರೆ ಬಡವರ ನಾಡು ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ ಮೂಗು ಮುರಿಯುವವರು ಈಗಲೂ ಇದ್ದಾರೆ. ಆದರೆ, ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತದಲ್ಲಿ ಅತೀ ಬಡತನದಲ್ಲಿರುವ ಜನಸಂಖ್ಯೆ ಗಣನೀಯವಾಗಿ ತಗ್ಗಿದೆ. ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶವು ಅಚ್ಚರಿಯ ಸಂಗತಿಯೊಂದನ್ನು ತೋರಿಸಿದೆ. ಅದರ ಪ್ರಕಾರ 2040ರಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಒಳಗೊಂಡ ದಕ್ಷಿಣ ಏಷ್ಯಾದಲ್ಲಿ ಕಡುಬಡವರ ಸಂಖ್ಯೆಯು (People with extreme Poverty) ಉತ್ತರ ಅಮೆರಿಕ ಮತ್ತು ಯೂರೋಪ್ಗಳಲ್ಲಿರುವ ಕಡುಬಡವರಿಗಿಂತ ಕಡಿಮೆ ಇರಲಿದೆಯಂತೆ.
ವಿಶ್ವಬ್ಯಂಕ್ನ ಈ ವರದಿಯು ತೊಂಬತ್ತರ ದಶಕದಿಂದ ಒಳಗೊಂಡು, ವಿಶ್ವದ ವಿವಿಧ ಪ್ರದೇಶಗಳಲ್ಲಿ ಬಡುಬಡತನ ಹೇಗೆಲ್ಲಾ ವ್ಯತ್ಯಾಸ ಆಗುತ್ತಾ ಬಂದಿದೆ ಎಂಬುದನ್ನು ತೋರಿಸಿದೆ. ಹಾಗೆಯೇ, 2040ರವರೆಗೂ ಕಡುಬಡತನ ಹೇಗೆ ಬದಲಾಗುತ್ತದೆ ಎನ್ನುವ ಪ್ರೊಜೆಕ್ಷನ್ ಕೂಡ ನೀಡಿದೆ. ಈ ವರದಿಯು ವಿಶ್ವವನ್ನು ಏಳು ಭೂಪ್ರದೇಶಗಳಾಗಿ ವಿಂಗಡಿಸಿದೆ:
ಇದನ್ನೂ ಓದಿ: ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ; ಮಾನಿಟೈಸಿಂಗ್ ನಿಯಮಗಳಲ್ಲಿ ಆಗಿದೆ ಪ್ರಮುಖ ಬದಲಾವಣೆ
ವಿಶ್ವಬ್ಯಾಂಕ್ನ ಈ ಚಾರ್ಟ್ ಗಮನಿಸಿ…
2040ರಲ್ಲಿ ದಕ್ಷಿಣ ಏಷ್ಯದಲ್ಲಿ ಕಡುಬಡವರ ಸಂಖ್ಯೆ ಕೇವಲ 27 ಲಕ್ಷ ಇರಲಿದ್ದಾರೆ. ಉತ್ತರ ಅಮೆರಿಕನ್ ದೇಶಗಳಲ್ಲಿ 33 ಲಕ್ಷಕ್ಕೂ ಹೆಚ್ಚು ಕಡುಬಡವರಿರಲಿದ್ದಾರೆ. ಯೂರೋಪ್ ಮತ್ತು ಸೆಂಟ್ರಲ್ ಏಷ್ಯನ್ ದೇಶಗಳಲ್ಲೂ 29 ಲಕ್ಷದಷ್ಟು ಕಡುಬಡವರು ಇರಲಿದ್ದಾರೆ. 1990ರಲ್ಲಿ 50 ಕೋಟಿಗೂ ಅಧಿಕ ಕಡುಬಡವರನ್ನು ಹೊಂದಿದ್ದ ದಕ್ಷಿಣ ಏಷ್ಯಾದಲ್ಲಿ 2040ಕ್ಕೆ ಆ ಸಂಖ್ಯೆ ಕೇವಲ 27 ಲಕ್ಷಕ್ಕೆ ಇಳಿಯುತ್ತಾರೆ ಎನ್ನುವುದು ಸಾಮಾನ್ಯ ಸಂಗತಿಯಲ್ಲ.
1990ರ ದಶಕದಲ್ಲಿ ದಕ್ಷಿಣ ಏಷ್ಯಾದಲ್ಲಿ ಕೋಟ್ಯಂತರ ಜನರು ತೀವ್ರ ಬಡತನದಲ್ಲಿದ್ದರು (ದಿನಕ್ಕೆ $3 ಕ್ಕಿಂತ ಕಡಿಮೆ ಆದಾಯದಲ್ಲಿ ಜೀವಿಸುವುದು). ಆದರೆ ಕಳೆದ ಮೂರು ದಶಕಗಳ ಶರವೇಗದ ಆರ್ಥಿಕ ಬೆಳವಣಿಗೆ, ಡಿಜಿಟಲೀಕರಣ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಫಲವಾಗಿ ಈ ಸಂಖ್ಯೆ ಸತತವಾಗಿ ಇಳಿಕೆಯಾಗುತ್ತಾ ಬಂದಿದೆ. ಅದರಲ್ಲೂ 2014ರ ಬಳಿಕ ಭಾರತದಲ್ಲಿ ಡಿಜಿಟಲೀಕರಣದ ಅಪಾರ ಬೆಳವಣಿಗೆಯು ಬಡತನ ನಿವಾರಣೆಗೆ ಬಹಳ ಸಹಕಾರಿಯಾಗಿವೆ.
ದಕ್ಷಿಣ ಏಷ್ಯಾದಲ್ಲಿ ತೀವ್ರ ಬಡತನ ತಗ್ಗಲು ಭಾರತ ಕೈಗೊಂಡ ಕಲ್ಯಾಣ ಯೋಜನೆಗಳು, ಆರ್ಥಿಕ ಪ್ರಗತಿ ಮತ್ತು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲಕ್ಕೆತ್ತುವ ಕಾರ್ಯಕ್ರಮಗಳು ಪ್ರಮುಖ ಕಾರಣವಾಗಿವೆ ಎಂದು ವರದಿ ಬೆಟ್ಟುಮಾಡುತ್ತದೆ. ಈ ವಿಶ್ವಬ್ಯಾಂಕ್ ದತ್ತಾಂಶವು ದಕ್ಷಿಣ ಏಷ್ಯಾದ ಆರ್ಥಿಕ ಚೇತರಿಕೆ ಮತ್ತು ಕಳೆದ ಕೆಲವು ದಶಕಗಳಲ್ಲಿ ಕೈಗೊಂಡ ಬಡತನ ನಿರ್ಮೂಲನಾ ಕಾರ್ಯಕ್ರಮಗಳ ಯಶಸ್ಸನ್ನು ಎತ್ತಿಹಿಡಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Sun, 16 August 26