FASTag: ಫಾಸ್ಟ್ಯಾಗ್ ಕೆವೈಸಿ ಅಪ್ಡೇಟ್ ಮಾಡಲು ಫೆ. 29 ಡೆಡ್ಲೈನ್; ಇನ್ನೊಂದೇ ದಿನ ಬಾಕಿ; ಆನ್ಲೈನ್ನಲ್ಲಿ ಸುಲಭವಾಗಿ ಅಪ್ಡೇಟ್ ಮಾಡಿ
KYC update: ಫಾಸ್ಟ್ಯಾಗ್ ಅಕೌಂಟ್ಗಳಿಗೆ ಕೆವೈಸಿ ಅಪ್ಡೇಟ್ ಮಾಡಲು 2024ರ ಫೆಬ್ರುವರಿ 29 ಅನ್ನು ಡೆಡ್ಲೈನ್ ಎಂದು ನಿಗದಿ ಮಾಡಲಾಗಿದೆ. ಒಂದೇ ವಾಹನಕ್ಕೆ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ವಿತರಿಸಿರುವುದು ಮತ್ತು ಕೆವೈಸಿ ಪಡೆಯದೆಯೇ ಫಾಸ್ಟ್ಯಾಗ್ ನೀಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ಖಾತೆಗಳಿಗೂ ಕೆವೈಸಿ ಅಪ್ಡೇಟ್ ಮಾಡಿಸಲಾಗುತ್ತಿದೆ.
ನವದೆಹಲಿ, ಫೆಬ್ರುವರಿ 28: ಫಾಸ್ಟ್ಯಾಗ್ನ ಕೆವೈಸಿ ಅಪ್ಡೇಟ್ ಮಾಡಲು ಫೆಬ್ರುವರಿ 29 ಡೆಡ್ಲೈನ್ ಆಗಿದೆ. ಒಂದೇ ವಾಹನಕ್ಕೆ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ವಿತರಣೆ ಆಗಿರುವುದು, ಕೆವೈಸಿ (KYC) ದಾಖಲೆಗಳಿಲ್ಲದೇ ಫಾಸ್ಟ್ಯಾಗ್ಗಳು ವಿತರಣೆ ಆಗಿರುವುದು ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೆವೈಸಿ ಅಪ್ಡೇಟ್ ಮಾಡಿಸಲಾಗುತ್ತಿದೆ. ಒಂದು ವೇಳೆ ನಿಮ್ಮ ವಾಹನದ ಫಾಸ್ಟ್ಯಾಗ್ (FASTag) ಕೆವೈಸಿ ಅನ್ನು ನಾಳೆ ಗುರುವಾರದೊಳಗೆ ಅಪ್ಡೇಟ್ ಮಾಡದೇ ಹೋದರೆ ಆ ಅಕೌಂಟ್ ಅನ್ನು ಡೀ ಆಕ್ಟಿವೇಟ್ ಮಾಡುವ ಸಾಧ್ಯತೆ ಇರುತ್ತದೆ.
ಕೆವೈಸಿ ಎಂದರೆ ಏನು?
ಕೆವೈಸಿ ಎಂದರೆ ನೋ ಯುವರ್ ಕಸ್ಟಮರ್ ಎಂದು. ಯಾವುದೇ ಸಾರ್ವಜನಿಕ ಸೇವೆ ನೀಡುವ ಸಂಸ್ಥೆ ತನ್ನ ಗ್ರಾಹಕರ ದಾಖಲೆಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಆಧಾರ್ ಇತ್ಯಾದಿ ವ್ಯಕ್ತಿ ಗುರುತು ಮತ್ತು ವಿಳಾಸ ಸಾಕ್ಷ್ಯ ದಾಖಲೆಗಳನ್ನು ಪಡೆಯಬೇಕು ಎಂಬ ನಿಯಮ ಇದೆ. ಗ್ಯಾಸ್ ಏಜೆನ್ಸಿ ಇರಬಹುದು, ಸಿಮ್ ಕಾರ್ಡ್ ವಿತರಿಸುವ ಏಜೆನ್ಸಿ ಇರಬಹುದು, ಅಥವಾ ಸರ್ಕಾರಿ ಯೋಜನೆಯೇ ಆಗಿರಬಹುದು, ಯಾವುದಕ್ಕಾದರೂ ಕೆವೈಸಿ ಪಡೆಯಲೇ ಬೇಕು.
ಈ ರೀತಿ ಕೆವೈಸಿ ಪಡೆಯದೇ ಸೇವೆ ನೀಡುವ ಸಂಸ್ಥೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಇತ್ತೀಚಿನ ಒಂದು ನಿದರ್ಶನ ಮಾತ್ರ.
ಇದನ್ನೂ ಓದಿ: ಕೆಲಸ ಬಿಟ್ಟುಹೋದ ಉದ್ಯೋಗಿಯ ಪಿಎಫ್ ಹಣ ಹಿಂಪಡೆಯುವ ಅಧಿಕಾರ ಸಂಸ್ಥೆಗೆ ಇದೆಯೇ? ಇಲ್ಲಿದೆ ಉತ್ತರ
ಆನ್ಲೈನ್ನಲ್ಲಿ ಫಾಸ್ಟ್ಯಾಗ್ ಕೆವೈಸಿ ಅಪ್ಡೇಟ್ ಮಾಡುವ ಕ್ರಮ ಹೀಗೆ
ಫಾಸ್ಟ್ಯಾಗ್ ಅನ್ನು ಹೆದ್ದಾರಿ ಪ್ರಾಧಿಕಾರದ ಇಂಡಿಯನ್ ಹೈವೇ ಮ್ಯಾನೇಜ್ಮೆಂಟ್ ಕಂಪನಿ ನಿರ್ವಹಿಸುತ್ತದೆ. ಅದರ ವೆಬ್ಸೈಟ್ನಲ್ಲಿ ಫಾಸ್ಟ್ಯಾಗ್ ಪೋರ್ಟಲ್ಗೆ ಹೋಗಿ ಅಪ್ಡೇಟ್ ಮಾಡಬಹುದು. ಅದರ ಯುಆರ್ಎಲ್ ಹೀಗಿದೆ: fastag.ihmcl.com
- ಈ ಪೋರ್ಟಲ್ನಲ್ಲಿ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಅಥವಾ ಒಟಿಪಿ ಮೂಲಕ ದೃಢೀಕರಣ ಪಡೆದು ಲಾಗಿನ್ ಆಗಬಹುದು.
- ಲಾಗಿನ್ ಆದ ಬಳಿಕ ಡ್ಯಾಶ್ಬೋರ್ಡ್ ಮೆನುನ ಎಡಬದಿಯಲ್ಲಿ ‘ಮೈ ಪ್ರೊಫೈಲ್’ ಆಯ್ಕೆ ಕಾಣಬಹುದು.
- ಇದರಲ್ಲಿ ನೀವು ಈ ಹಿಂದೆ ನೊಂದಣಿ ವೇಳೆ ಸಲ್ಲಿಸಿದ ಕೆವೈಸಿ ದಾಖಲೆ ಇದ್ದರೆ ಕಾಣುತ್ತದೆ.
- ಪ್ರೊಫೈಲ್ ಸಬ್ ಸೆಕ್ಷನ್ ಪಕ್ಕದಲ್ಲಿರುವ ಕೆವೈಸಿ ಸಬ್ ಸೆಕ್ಷನ್ ಕ್ಲಿಕ್ ಮಾಡಿ.
- ಕೆವೈಸಿ ಸಬ್ಸೆಕ್ಷನ್ನಲ್ಲಿ ‘ಕಸ್ಟಮರ್ ಟೈಪ್’ ಅನ್ನು ಆಯ್ದುಕೊಳ್ಳಿ.
- ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಸಲ್ಲಿಸಬೇಕು. ಪಾಸ್ಪೋರ್ಟ್ ಗಾತ್ರದ ಫೋಟೋ ಲಗತ್ತಿಸಬೇಕು. ಅಡ್ರೆಸ್ ಪ್ರೂಫ್ ದಾಖಲೆಯಲ್ಲಿರುವ ವಿಳಾಸವನ್ನು ಭರ್ತಿ ಮಾಡಬೇಕು.
ಇವೆಲ್ಲಾ ಆಗಿ ಸಬ್ಮಿಟ್ ಮಾಡಿದರೆ ಫಾಸ್ಟ್ಯಾಗ್ ಕೆವೈಸಿ ಅಪ್ಡೇಟ್ ಆಗುತ್ತದೆ. ನೀವು ಸಲ್ಲಿಸಿದ ಏಳು ಕಾರ್ಯ ದಿನದೊಳಗೆ ಅಪ್ಡೇಟ್ ಆಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ