ಭಾರತದ ಫಾರೆಕ್ಸ್ ರಿಸರ್ವ್ಸ್ 670 ಬಿಲಿಯನ್ ಡಾಲರ್ಗೆ ಇಳಿಕೆ; ಜಾಗತಿಕ ತುಮುಲಗಳ ನಡುವೆಯೂ ಉತ್ತಮ ಸಂಗ್ರಹ
Forex Reserves of India on August 9th: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಆಗಸ್ಟ್ 9ಕ್ಕೆ ಅಂತ್ಯಗೊಂಡ ವಾರದಲ್ಲಿ 4.8 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿ 670.119 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ಇದರಲ್ಲಿ ವಿದೇಶೀ ಕರೆನ್ಸಿಗಳ ಸಂಗ್ರಹವೇ 4.1 ಬಿಲಿಯನ್ ಡಾಲರ್ನಷ್ಟು ಇಳಿಕೆ ಆಗಿದೆ. ಭಾರತದ ಉತ್ತಮ ಹಣಕಾಸು ನೀತಿಗಳಿಂದಾಗಿ, ಜಾಗತಿಕ ತುಮುಲಗಳ ನಡುವೆಯೂ ಫಾರೆಕ್ಸ್ ಸಂಪತ್ತು ಸಾಕಷ್ಟು ಶೇಖರಣೆ ಆಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ನವದೆಹಲಿ, ಆಗಸ್ಟ್ 18: ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ ಮೊತ್ತ ಇತ್ತೀಚಿನ ವಾರದಲ್ಲಿ 4.8 ಬಿಲಿಯನ್ ಡಾಲರ್ನಷ್ಟು ಇಳಿಕೆಯಾಗಿದೆ. ಆರ್ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫಾರೆಕ್ಸ್ ರಿಸರ್ವ್ಸ್ ಆಗಸ್ಟ್ 9ಕ್ಕೆ 670.119 ಬಿಲಿಯನ್ ಡಾಲರ್ನಷ್ಟಿದೆ. ಹಿಂದಿನ ವಾರದಲ್ಲಿ, ಅಂದರೆ ಆಗಸ್ಟ್ 2ಕ್ಕೆ ಅಂತ್ಯಗೊಂಡ ವಾರದಲ್ಲಿ 7.533 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿ 674.919 ಬಿಲಿಯನ್ ಡಾಲರ್ನ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತ್ತು.
ಆಗಸ್ಟ್ 9ರಂದು ಅಂತ್ಯಗೊಂಡ ವಾರದಲ್ಲಿ ಇಳಿಕೆಯಾದ 4.8 ಬಿಲಿಯನ್ ಡಾಲರ್ನಲ್ಲಿ ವಿದೇಶೀ ಕರೆನ್ಸಿ ಆಸ್ತಿಯದ್ದೇ ಸಿಂಹಪಾಲು. ಇದು 4.079 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಅಮೆರಿಕದ್ದಲ್ಲದ ಯೂರೋ, ಪೌಂಡ್, ಯೆನ್ ಇತ್ಯಾದಿ ಕರೆ ಕರೆನ್ಸಿಗಳ ಆಸ್ತಿಯು ಫಾರೀನ್ ಕರೆನ್ಸಿ ಅಸೆಟ್ ಎಂದು ವರ್ಗೀಕರಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಮೊದಲ ಲಿಥಿಯಂ ಗಣಿಗಾರಿಕೆ ಆರಂಭ; ಈ ಬಿಳಿ ಚಿನ್ನದ ಬೆಲೆ ಬಲು ದುಬಾರಿ
ಗೋಲ್ಡ್ ರಿಸರ್ವ್ಸ್ ಕೂಡ 860 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಆದರೆ, ಎಸ್ಡಿಆರ್ ಮತ್ತು ಐಎಂಎಫ್ನಲ್ಲಿನ ನಿಧಿಯಲ್ಲಿ ಹೆಚ್ಚಳವಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ಗಳು 121 ಮಿಲಿಯನ್ ಡಾಲರ್ನಷ್ಟು ಹೆಚ್ಚಾದರೆ, ಐಎಂಎಫ್ನಲ್ಲಿನ ನಿಧಿ 18 ಮಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿರುವುದು ತಿಳಿದುಬಂದಿದೆ.
ಆಗಸ್ಟ್ 9ಕ್ಕೆ ಭಾರತದ ಫಾರೆಕ್ಸ್ ರಿಸರ್ವ್ಸ್
ಒಟ್ಟು ಫಾರೆಕ್ಸ್ ರಿಸರ್ವ್ಸ್: 670.119 ಬಿಲಿಯನ್ ಡಾಲರ್
- ವಿದೇಶೀ ಕರೆನ್ಸಿ ಸಂಪತ್ತು: 587.96 ಬಿಲಿಯನ್ ಡಾಲರ್
- ಗೋಲ್ಡ್ ರಿಸರ್ವ್ಸ್: 59.239 ಬಿಲಿಯನ್ ಡಾಲರ್
- ಎಸ್ಡಿಆರ್: 18.282 ಬಿಲಿಯನ್ ಡಾಲರ್
- ಐಎಂಎಫ್ನಲ್ಲಿನ ಮೀಸಲು ನಿಧಿ: 4.638 ಬಿಲಿಯನ್ ಡಾಲರ್.
ಜಾಗತಿಕ ಆರ್ಥಿಕ ಮತ್ತು ರಾಜಕೀಯ ತುಮುಲ ಪರಿಸ್ಥಿತಿ ಮಧ್ಯೆ ಭಾರತ ವಿಚಲಿತಗೊಳ್ಳದೆ ಸ್ಥಿರವಾಗಿ ಬೆಳವಣಿಗೆ ಹೊಂದುತ್ತಿದೆ. ಸರಿಯಾದ ಆರ್ಥಿಕ ಮತ್ತು ಹಣಕಾಸು ನೀತಿಯಿಂದಾಗಿ ಭಾರತದ ಫಾರೆಕ್ಸ್ ಸಂಪತ್ತು 670 ಬಿಲಿಯನ್ ಡಾಲರ್ ಗಡಿ ದಾಟಲು ಸಾಧ್ಯವಾಗಿದೆ ಎಂದು ಪಿಎಚ್ಡಿ ವಾಣಿಜ್ಯ ಮತ್ತು ಔದ್ಯಮಿಕ ಮಂಡಳಿ ಅಧ್ಯಕ್ಷ ಸಂಜೀವ್ ಅಗರ್ವಾಲ್ ಹೇಳುತ್ತಾರೆ.
ಇದನ್ನೂ ಓದಿ: ಭಾರತೀಯ ತಳಿಯ ಮಾವಿನಹಣ್ಣು ಬೆಳೆದು ಭಾರತಕ್ಕಿಂತಲೂ ಹೆಚ್ಚು ರಫ್ತು ಮಾಡುತ್ತಿದೆ ಚೀನಾ
ಭಾರತದ ಫಾರೆಕ್ಸ್ ರಿಸರ್ವ್ಸ್ ಇತ್ತೀಚಿನ ವಾರದಲ್ಲಿ ತುಸು ಇಳಿಕೆಯಾದರೂ ಒಟ್ಟಾರೆ ಈ ಮೀಸಲು ಸಂಪತ್ತು ಉತ್ತಮ ಮಟ್ಟದಲ್ಲಿದೆ. ಸಂಜೀವ್ ಅಗರ್ವಾಲ್ ಪ್ರಕಾರ ಈ ವಿದೇಶೀ ವಿನಿಮಯ ಮೀಸಲು ನಿಧಿಯು ವಿದೇಶೀ ಹೂಡಿಕೆಗಳನ್ನು ಆಕರ್ಷಿಸಲು ಸಹಾಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




