G20 Meeting: ನಾಳೆಯಿಂದ ಬೆಂಗಳೂರಿನಲ್ಲಿ ಜಿ20 ಸಭೆ; ಕೇಂದ್ರೀಯ ಬ್ಯಾಂಕ್, ಹಣಕಾಸು ನಿಯೋಗಿಗಳು ಭಾಗಿ

| Updated By: Ganapathi Sharma

Updated on: Dec 12, 2022 | 5:35 PM

ಜಿ20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವಾಲಯದ ನಿಯೋಗಿಗಳು, ಕೇಂದ್ರೀಯ ಬ್ಯಾಂಕ್​ಗಳ ನಿಯೋಗಿಗಳು ಆರ್ಥಿಕ ಮತ್ತು ಹಣಕಾಸು ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.

G20 Meeting: ನಾಳೆಯಿಂದ ಬೆಂಗಳೂರಿನಲ್ಲಿ ಜಿ20 ಸಭೆ; ಕೇಂದ್ರೀಯ ಬ್ಯಾಂಕ್, ಹಣಕಾಸು ನಿಯೋಗಿಗಳು ಭಾಗಿ
ಜಿ20 ಲೋಗೋ
Follow us on

ಬೆಂಗಳೂರು: ಭಾರತವು ಜಿ20 ಅಧ್ಯಕ್ಷತೆ (G20 Presidency) ವಹಿಸಿಕೊಂಡ ಬಳಿಕದ ಮೊದಲ ಸಭೆ ಬೆಂಗಳೂರಿನಲ್ಲಿ ಮಂಗಳವಾರದಿಂದ ನಡೆಯಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಕೇಂದ್ರೀಯ ಬ್ಯಾಂಕ್​ಗಳ ನಿಯೋಗಿಗಳು (FCBD), ಹಣಕಾಸು ನಿಯೋಗಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ‘ಜಿ20 ಫೈನಾನ್ಸ್ ಟ್ರಾಕ್​ (ಜಿ20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು, ಕೇಂದ್ರೀಯ ಬ್ಯಾಂಕ್​ಗಳ ಗವರ್ನರ್​ಗಳ ನಿಯೋಗ)’ ಅಜೆಂಡಾಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಹಣಕಾಸು ಸಚಿವಾಲಯ (Ministry of Finance) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಂಟಿಯಾಗಿ ಸಭೆ ಆಯೋಜಿಸಿವೆ.

ಜಿ20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವಾಲಯದ ನಿಯೋಗಿಗಳು, ಕೇಂದ್ರೀಯ ಬ್ಯಾಂಕ್​ಗಳ ನಿಯೋಗಿಗಳು ಆರ್ಥಿಕ ಮತ್ತು ಹಣಕಾಸು ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಇದು ಜಾಗತಿಕ ಆರ್ಥಿಕ ಸಂವಾದ ಮತ್ತು ನೀತಿ ಸಮನ್ವಯಕ್ಕೆ ಪರಿಣಾಮಕಾರಿ ವೇದಿಕೆಯನ್ನು ಒದಗಿಸಲಿದೆ ಎನ್ನಲಾಗಿದೆ. 2023ರ ಫೆಬ್ರವರಿ 23ರಿಂದ 25ರ ವರೆಗೆ ಬೆಂಗಳೂರಿನಲ್ಲಿ ಜಿ20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರ ಮತ್ತು ಕೇಂದ್ರೀಯ ಬ್ಯಾಂಕ್​ ಗವರ್ನರ್​ಗಳ ಸಭೆಯೂ ನಡೆಯಲಿದೆ.

ಇದನ್ನೂ ಓದಿ: Bangalore G20 Meet: ಡಿ. 13 ರಿಂದ ಜಿ20 ಶೃಂಗಸಭೆ; ಡಾಂಬರು ಕಂಡ ಬೆಂಗಳೂರಿನ ಕೆಲ ರಸ್ತೆಗಳು

ಕೇಂದ್ರೀಯ ಬ್ಯಾಂಕ್, ಹಣಕಾಸು ನಿಯೋಗಿಗಳ ಸಭೆಯ ಅಧ್ಯಕ್ಷತೆಯನ್ನು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಹಾಗೂ ಆರ್​ಬಿಐ ಡೆಪ್ಯುಟಿ ಗವರ್ನರ್ ಡಾ. ಮೈಕೆಲ್ ಡಿ. ಪಾತ್ರ ವಹಿಸಲಿದ್ದಾರೆ. ಜಿ20 ಸದಸ್ಯರ ರಾಷ್ಟ್ರಗಳ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಗಳು, ಕೇಂದ್ರೀಯ ಬ್ಯಾಂಕ್​ಗಳ ಡೆಪ್ಯುಟಿ ಗವರ್ನರ್​ಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ದೇವನಹಳ್ಳಿ ಬಳಿಯ ಪ್ರೆಸ್ಟಿಜ್ ಗಾಲ್ಪ್ ಶೈರ್ ಹೋಟೆಲ್​ನಲ್ಲಿ ಸಭೆ ನಡೆಯಲಿದೆ. ಡಿಸೆಂಬರ್​ನಲ್ಲಿ ನಡೆಯುವ ಸಭೆ ಮಾತ್ರವಲ್ಲದೆ, ಮುಂಬರುವ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಜಿ20 ಸರಣಿ ಸಭೆಗಳನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ಜಿ20 ದೇಶಗಳ ಮೊದಲ ಆರೋಗ್ಯ ಮತ್ತು ಹಣಕಾಸು ಕಾರ್ಯಪಡೆ ಸಭೆ ಡಿಸೆಂಬರ್ 19ರಂದು ವರ್ಚುವಲ್ ಆಗಿ ನಡೆಯಲಿದೆ ಎನ್ನಲಾಗಿದೆ.

ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದ್ದ ಜಿ20 17ನೇ ಶೃಂಗಸಭೆಯಲ್ಲಿ ನವೆಂಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಜಿ20 ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತದ ಅಧ್ಯಕ್ಷ ಸ್ಥಾನವು 2022ರ ಡಿಸೆಂಬರ್ 1 ರಿಂದ ಅಸ್ತಿತ್ವಕ್ಕೆ ಬಂದಿದ್ದು ಒಂದು ವರ್ಷದವರೆಗೆ ಇರಲಿದೆ. ಮುಂದಿನ ವರ್ಷ ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಿ20 18ನೇ ಶೃಂಗಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಜಿ20 ರಾಷ್ಟ್ರಗಳ ನಾಯಕರ ಸಭೆಯ ನೇತೃತ್ವ ವಹಿಸಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ