Bangalore G20 Meet: ಡಿ. 13 ರಿಂದ ಜಿ20 ಶೃಂಗಸಭೆ; ಡಾಂಬರು ಕಂಡ ಬೆಂಗಳೂರಿನ ಕೆಲ ರಸ್ತೆಗಳು
ಜಿ20 ಮೊದಲ ಎರಡು ಸಭೆಗಳು ಬೆಂಗಳೂರಲ್ಲಿ ಆಯೋಜಿಸಿದ ಹಿನ್ನೆಲೆ ನಗರದ ದೇವನಹಳ್ಳಿಯ ರಾಣಿಕ್ರಾಸ್ನಿಂದ ಕೋಡಗುರ್ಕಿಯ ಹೋಟೆಲ್ವರಗೂ ಡಾಂಬರು ಮಾಡಲಾಗುತ್ತಿದೆ.
ಬೆಂಗಳೂರು: ಭಾರತವು ಜಿ20 (G20) ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಸ್ವೀಕರಿಸಿದ ನಂತರ ಡಿಸೆಂಬರ್ನಲ್ಲಿ ಮೊದಲ ಸಭೆಗಳು ನಡೆಯಲಿವೆ. ಡಿ. 13ರಿಂದ ಜಿ20 ಶೃಂಗಸಭೆಯ ಮೊದಲ ಎರಡು ಸಭೆಗಳು ಬೆಂಗಳೂರಿನಲ್ಲಿ (Bengaluru) ನಡೆಯಲಿವೆ. ಈ ಹಿನ್ನೆಲೆ ನಗರದ ರಸ್ತೆಗಳಿಗೆ ಡಾಂಬರ ಭಾಗ್ಯ ಪ್ರಾಪ್ತಿಯಾಗಿದೆ. ದೇವನಹಳ್ಳಿಯ ನಂದಿಬೆಟ್ಟಕ್ಕೆ ಜಿಟಿ ಜಿಟಿ ಮಳೆ ನಡುವೆಯೇ ಸಿಬ್ಬಂದಿ ಡಾಂಬರ ಹಾಕುತ್ತಿದ್ದಾರೆ.
ಜಿ20 ಶೃಂಗ ಸಭೆ ದೇವನಹಳ್ಳಿ ಬಳಿಯ ಪ್ರೆಸ್ಟಿಜ್ ಗಾಲ್ಪ್ ಶೈರ್ ಹೋಟೆಲ್ನಲ್ಲಿ ನಡೆಯುವುದರಿಂದ ದೇವನಹಳ್ಳಿಯ ರಾಣಿಕ್ರಾಸ್ನಿಂದ ಕೋಡಗುರ್ಕಿಯ ಹೋಟೆಲ್ವರಗೂ ಡಾಂಬರ ಮಾಡಲಾಗುತ್ತಿದೆ. ಶೃಂಗ ಸಭೆಗೆ ವಿವಿಧ ದೇಶಗಳ ಗಣ್ಯರು ಆಗಮಿಸಲಿರುವ ಹಿನ್ನೆಲೆ ತರಾತುರಿಯಲ್ಲಿ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: ಬಾಲಿಯಲ್ಲಿ ಜಿ20 ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಸ್ವೀಕರಿಸಿದ ಪ್ರಧಾನಿ ಮೋದಿ
ಡಿಸೆಂಬರ್ನಲ್ಲಿ ಜಿ20 ಸಭೆ
ಡಿಸೆಂಬರ್ 13ರಿಂದ 15ರ ವರೆಗೆ ಮೊದಲ ಸಭೆ ನಡೆಯಲಿದೆ. ನಂತರ ಜಿ20 ಚೌಕಟ್ಟು ರೂಪಿಸುವ ಕಾರ್ಯಕಾರಿ ಸಮಿತಿ ಸಭೆ ಡಿಸೆಂಬರ್ 16 ಮತ್ತು 17ರಂದು ನಡೆಯಲಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದ್ದ ಜಿ20 17ನೇ ಶೃಂಗಸಭೆಯಲ್ಲಿ ನವೆಂಬರ್ 16ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತದ ಅಧ್ಯಕ್ಷ ಸ್ಥಾನವು ಡಿಸೆಂಬರ್ 1, 2022 ರಿಂದ ಒಂದು ವರ್ಷದವರೆಗೆ ಇರಲಿದೆ.
ರಾಜ್ಯ ರಾಜಧಾನಿಗೆ ಬರಲಿದ್ದಾರೆ ಜಾಗತಿಕ ಗಣ್ಯರು
ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಜಿ20 ದೇಶಗಳ ಪ್ರತಿನಿಧಿಗಳು ಮಾತ್ರವಲ್ಲದೆ ಇತರ ಜಾಗತಿಕ ನಾಯಕರೂ ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ಆರ್ಥಿಕ ಸಹಕಾರ ಕಾರ್ಯಾಚರಣೆ ಮತ್ತು ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಜಿ20 ಸರಣಿ ಸಭೆಗಳು
ಡಿಸೆಂಬರ್ನಲ್ಲಿ ನಡೆಯುವ ಎರಡು ಸಭೆಗಳು ಮಾತ್ರವಲ್ಲದೆ, ಮುಂಬರುವ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಜಿ20 ಸರಣಿ ಸಭೆಗಳನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಯಾವುದೇ ದೇಗುಲದಲ್ಲಿ ಆರತಿ ಸ್ಥಗಿತವಾಗಲ್ಲ, ಹೆಸರು ಮಾತ್ರ ಬದಲಾಗುತ್ತೆ: ಸಚಿವ ಶಶಿಕಲಾ ಜೊಲ್ಲೆ
ಜಿ20 ದೇಶಗಳ ಅಭಿವೃದ್ಧಿ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಡಿಸೆಂಬರ್ 13ರಿಂದ 16ರ ವರೆಗೆ ಮುಂಬೈಯಲ್ಲಿ ನಡೆಯಲಿದೆ. ಮೊದಲ ಆರೋಗ್ಯ ಮತ್ತು ಹಣಕಾಸು ಕಾರ್ಯಪಡೆ ಸಭೆ ಡಿಸೆಂಬರ್ 19ರಂದು ವರ್ಚುವಲ್ ಆಗಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Sat, 10 December 22