G20: ಭಾರತದ ಜಿ20 ನಾಯಕತ್ವವನ್ನು ಶ್ಲಾಘಿಸಿದ ಅಮೆರಿಕದ ಹಣಕಾಸು ಸಚಿವೆ ಜೆನೆಟ್ ಯೆಲೆನ್
Nirmala Sitharaman, Janet Yellen Joint Press Meet: ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕದ ಹಣಕಾಸು ಸಚಿವೆ ಜೆನೆಟ್ ಯೆಲೆನ್ ಅವರು 3ನೇ ಜಿ20 ಎಫ್ಎಂಸಿಬಿಜಿ ಸಭೆಗೆ ಮುನ್ನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಗಾಂಧಿನಗರ, ಜುಲೈ 17: ಇಂದು ಮತ್ತು ನಾಳೆ ನಡೆಯಲಿರುವ 3ನೇ ಜಿ20 ಹಣಕಾಸು ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ಸಭೆಗೆ (G20 FMCBG) ಮುನ್ನ ಭಾರತ ಮತ್ತು ಅಮೆರಿಕದ ಹಣಕಾಸು ಸಚಿವರು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕದ ಹಣಕಾಸು ಸಚಿವೆ ಜೆನೆಟ್ ಯೆಲೆನ್ (Janet Yellen) ಅವರು ಎರಡೂ ದೇಶಗಳ ನಡುವಿನ ಪ್ರಜಾತಾಂತ್ರಿಕ ಮೌಲ್ಯ, ಬಹುತ್ವ, ನಿಯಮ ಆಧಾರಿತ ಜಾಗತಿಕ ಕ್ರಮಾಂಕಕ್ಕೆ (Rules-based World Order) ಇರುವ ಬದ್ಧತೆಯನ್ನು ಉಲ್ಲೇಖಿಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭಾರತ ಮತ್ತು ಅಮೆರಿಕ ರಚನಾತ್ಮಕ ಸಂವಾದದಲ್ಲಿ ತೊಡಗಿದ್ದು, ಸಹಭಾಗಿತ್ವದ ಮೂಲಕ ಪ್ರಗತಿ ಮತ್ತು ಸಮೃದ್ಧಿ ಸಾಧಿಸಲು ಎರಡೂ ದೇಶಗಳು ಬದ್ಧವಾಗಿವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಅಮೆರಿಕಕ್ಕೆ ಹೋಗಿ ಅಲ್ಲಿನ ಅಧ್ಯಕ್ಷರನ್ನು ಭೇಟಿ ಮಾಡಿದ್ದು ಎರಡೂ ದೇಶಗಳ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಎಡೆ ಮಾಡಿದೆ. ಇಂದು ನಾವು ನಡೆಸಿದ ಚರ್ಚೆಗಳು ಜಿ20 ಅಜೆಂಡಾವನ್ನು ಮುಂದುವರಿಸುವ ಕುರಿತದ್ದಾಗಿತ್ತು. ಅಭಿವೃದ್ಧಿ ಬ್ಯಾಂಕುಗಳನ್ನು ಬಲಪಡಿಸುವುದು, ವ್ಯವಸ್ಥಿತ ಹವಾಮಾನ ಕ್ರಮ ತೆಗೆದುಕೊಳ್ಳುವುದರ ಮೂಲಕ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು.
ಇದನ್ನೂ ಓದಿ: China: ಚೀನಾದಲ್ಲಿ ಜಿಡಿಪಿ ದರ ನಿರೀಕ್ಷೆಗಿಂತ ಕಡಿಮೆ; ನಿರುದ್ಯೋಗ ದಾಖಲೆ ಮಟ್ಟಕ್ಕೆ ಏರಿಕೆ
ಅಮೆರಿಕ ಹಣಕಾಸು ಸಚಿವೆ ಜೆನೆಟ್ ಯೆಲೆನ್ ಹೇಳಿಕೆ
ಅಮೆರಿಕದ ಸೆಕ್ರೆಟಿರಿ ಆಫ್ ಟ್ರೆಷರಿ ಜೆನೆಟ್ ಯೆಲೆನ್ ಮಾತನಾಡಿ, ಈ ಬಾರಿಯ ಜಿ20 ಸಭೆಯ ಭಾರತದ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳಿಂದ ಉದ್ಘವಿಸಿದ ಸ್ಥಿತಿ ಇತ್ಯಾದಿ ಪ್ರಮುಖ ಸವಾಲುಗಳ ಮಧ್ಯೆ ಬೆಳವಣಿಗೆ ಸಾಧಿಸಲು ನೋಡುತ್ತಿರುವ ಇಡೀ ವಿಶ್ವವು ಜಿ20 ಗುಂಪನ್ನು ಗಮನಿಸುತ್ತಿದೆ.
ಏಷ್ಯಾದಿಂದ ಹೊರಗೆ ಅತಿಹೆಚ್ಚು ಭಾರತೀಯರು ಅಮೆರಿಕದಲ್ಲಿ ಇದ್ದಾರೆ. ಅಮೆರಿಕವು ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯೂ ಆಗಿದೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಕಳೆದ ವರ್ಷ ಗರಿಷ್ಠ ಮಟ್ಟಕ್ಕೆ ಹೋಗಿದೆ. ಮುಂದಿನ ವರ್ಷಗಳಲ್ಲಿ ಇದು ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂದು ಜೆನೆಟ್ ಯೆಲೆನ್ ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಜಿ20 ಶೃಂಗಸಭೆ
ಜಿ20 ಎಂಬುದು ಅತಿದೊಡ್ಡ ಆರ್ಥಿಕತೆಯ 20 ದೇಶಗಳ ಗುಂಪು. ಇದರಲ್ಲಿ ವಿವಿಧ ಯೂರೋಪ್ ದೇಶಗಳನ್ನು ಒಳಗೊಂಡ ಐರೋಪ್ಯ ಒಕ್ಕೂಟವೂ ಇದೆ. ನಿಯಮಿತವಾಗಿ ಜಿ20 ಶೃಂಗಸಭೆ ನಡೆಯುತ್ತಿರುತ್ತದೆ. ಈ ಬಾರಿ ಭಾರತದ ಅಧ್ಯಕ್ಷತೆಯಲ್ಲಿ ಜಿ20 ಸಭೆ ನಡೆಯುತ್ತಿದೆ. ಸೆಪ್ಟಂಬರ್ ತಿಂಗಳಲ್ಲಿ ಶೃಂಗಸಭೆ ನಡೆಯಲಿದ್ದು, ಅದರ ನಿಮಿತ್ತವಾಗಿ ಅಥವಾ ಭಾಗವಾಗಿ ಹಲವು ತಿಂಗಳುಗಳಿಂದಲೂ ವಿವಿಧ ವಿಚಾರ ಮತ್ತು ಸ್ತರಗಳಲ್ಲಿ ಪೂರಕ ಸಭೆ, ಚರ್ಚೆ, ವಿಚಾರಗೋಷ್ಠಿ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ.
ಜಿ20 ದೇಶಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳ ಸಭೆಯೂ ಇದೇ ನಿಮಿತ್ತವಾಗಿ ನಡೆಯುತ್ತಿದೆ. ಇದು 3ನೇ ಹಾಗು ಅಂತಿಮ ಎಫ್ಎಂಸಿಬಿಜಿ ಸಭೆಯಾಗಿದೆ. ಹಿಂದಿನ ಎರಡು ಸಭೆಗಳಲ್ಲಿ ಚರ್ಚಿಸಿದ ವಿಚಾರಗಳಲ್ಲಿ ಒಮ್ಮತಕ್ಕೆ ಬರುವುದು ಈ ಮೂರನೇ ಸಭೆಯ ಅಜೆಂಡಾ.
ಭಾರತವಲ್ಲದೇ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಚೀನಾ, ಅರ್ಜೆಂಟೀನಾ, ಫ್ರಾನ್ಸ್, ಇಟಲಿ, ಜಪಾನ್, ಮೆಕ್ಸಿಕೋ, ಕೊರಿಯಾ, ರಷ್ಯಾ, ಸೌದಿ ಅರೇಬಿಯಾ, ಅಮೆರಿಕ, ಯೂರೋಪಿಯನ್ ಯೂನಿಯನ್ ಈ ಜಿ20 ಗುಂಪಿನಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ