ಅಧಿಕಾರ ಗೌತಮ್ ಅದಾನಿ ಮಕ್ಕಳಿಗೋ, ಸೋದರನ ಮಕ್ಕಳಿಗೋ? ಆರು ವರ್ಷದಲ್ಲಿ ಆಗಲಿದೆ ಅಧಿಕಾರ ಹಸ್ತಾಂತರ
Adani group news: ಕೆಲವೇ ವರ್ಷಗಳಲ್ಲಿ ಮಿಂಚಿನಂತೆ ಬಿಸಿನೆಸ್ ಸಾಮ್ರಾಜ್ಯ ವೃದ್ಧಿಸಿರುವ 62 ವರ್ಷದ ಗೌತಮ್ ಅದಾನಿ 70 ವರ್ಷದೊಳಗೆ ಆಡಳಿತದ ಹೊಣೆ ಇಳಿಸಿಕೊಳ್ಳಲು ನಿರ್ಧರಿಸಿದ್ದಾರೆ. 2030ರೊಳಗೆ ಅದಾನಿ ಗ್ರೂಪ್ನ ಚುಕ್ಕಾಣಿ ಯಾರು ಹಿಡಿಯಬೇಕು ಎಂದು ಈಗಲೇ ಯೋಜಿಸಲಾಗುತ್ತಿದೆ. ಗೌತಮ್ ಅದಾನಿ ಅವರ ಇಬ್ಬರು ಮಕ್ಕಳು, ಮತ್ತು ಅವರ ಅಣ್ಣಂದಿರ ಇಬ್ಬರು ಮಕ್ಕಳು ಅದಾನಿ ಗ್ರೂಪ್ಗೆ ವಾರಸುದಾರರೆಂದು ಪರಿಗಣಿಸಲಾಗಿದೆ.
ನವದೆಹಲಿ, ಆಗಸ್ಟ್ 6: ಅದಾನಿ ಗ್ರೂಪ್ ಸಾಮ್ರಾಜ್ಯವನ್ನು ಬಹುತೇಕ ಏಕಾಂಗಿಯಾಗಿ ಕಟ್ಟಿ ಬೆಳೆಸಿದ ಗುಜರಾತ್ ಮೂಲದ ಅದಾನಿ ಕುಟುಂಬ ಈಗ ಮಹತ್ವದ ಘಟ್ಟದಲ್ಲಿದೆ. ಅದಾನಿ ಗ್ರೂಪ್ಗೆ ಇಷ್ಟು ವರ್ಷ ಸೂತ್ರಧಾರನಾಗಿ ನಿಂತಿದ್ದ ಗೌತಮ್ ಅದಾನಿ 2030ರಷ್ಟರಲ್ಲಿ ಬಿಸಿನೆಸ್ ಸಾಮ್ರಾಜ್ಯ ಮುಂದುವರಿಕೆಗೆ ಮುಂದಿನ ತಲೆಮಾರಿಗೆ ಜವಾಬ್ದಾರಿ ಕೊಡಲು ನಿರ್ಧರಿಸಿದ್ದಾರೆ. ಗ್ರೂಪ್ನ ಛೇರ್ಮನ್ ಆಗಿರುವ ಗೌತಮ್ ಅದಾನಿ ಅವರ ವಯಸ್ಸು ಈಗ 62 ವರ್ಷ. 70 ವರ್ಷದೊಳಗೆ ಈ ಹಿರಿಯ ಸ್ಥಾನದಿಂದ ಕೆಳಗಿಳಿದು ಮುಂದಿನ ಪೀಳಿಗೆಗೆ ಅಧಿಕಾರ ವಹಿಸುವುದು ಅವರ ನಿರ್ಧಾರ. ಈ ಬಗ್ಗೆ ಅವರು ಬ್ಲೂಮ್ಬರ್ಗ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಗೌತಮ್ ಅದಾನಿ ಅವರ ಅದಾನಿ ಗ್ರೂಪ್ನ ಬೃಹತ್ ಬಿಸಿನೆಸ್ ಸಾಮ್ರಾಜ್ಯಕ್ಕೆ ಅರ್ಹ ವಾರಸುದಾರರು ನಾಲ್ವರಿದ್ದಾರೆ. ಕರಣ್ ಅದಾನಿ, ಜೀತ್ ಅದಾನಿ, ಪ್ರಣವ್ ಅದಾನಿ ಮತ್ತು ಸಾಗರ್ ಅದಾನಿ. ಅವರಲ್ಲಿ ಕರಣ್ ಮತ್ತು ಜೀತ್ ಅವರು ಗೌತಮ್ ಅದಾನಿಯ ಮಕ್ಕಳಾದರೆ, ಪ್ರಣವ್ ಮತ್ತು ಸಾಗರ್ ಅವರು ಅಣ್ಣಂದಿರ ಮಕ್ಕಳಾಗಿದ್ದಾರೆ.
ಈಗಾಗಲೇ ಈ ನಾಲ್ವರು ಅದಾನಿ ಗ್ರೂಪ್ನ ವಿವಿಧ ಸಂಸ್ಥೆಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲರೂ ಕೂಡ ಸಮರ್ಥ ಆಡಳಿತಗಾರರೆಂದು ರುಜುವಾತು ಮಾಡಿದ್ದಾರೆ. ವರದಿಗಳ ಪ್ರಕಾರ, ಈ ನಾಲ್ವರು ಕೂಡ ಅದಾನಿ ಫ್ಯಾಮಿಲಿ ಟ್ರಸ್ಟ್ನ ಸಮ ಫಲಾನುಭವಿಗಳಾಗಲಿದ್ದಾರೆ.
ಇದನ್ನೂ ಓದಿ: ಜಪಾನೀ ನಿಕ್ಕೇ ಸೂಚಿಯ ಐತಿಹಾಸಿಕ ಕುಸಿತಕ್ಕೆ ಕಾರಣವಾದ ಕ್ಯಾರಿ ಟ್ರೇಡ್ ಅಂದರೆ ಏನು?
ಈ ನಾಲ್ವರ ಪೈಕಿ ಗೌತಮ್ ಅದಾನಿ ಅವರ ಮಗ ಕರಣ್ ಅದಾನಿ ಮತ್ತು ಅವರ ಅಣ್ಣ ವಿನೋದ್ ಅದಾನಿಯ ಮಗ ಪ್ರಣವ್ ಅದಾನಿ ಅವರಲ್ಲಿ ಒಬ್ಬರು ಅದಾನಿ ಗ್ರೂಪ್ನ ಚುಕ್ಕಾಣಿ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಸದ್ಯ, ಗೌತಮ್ ಅದಾನಿಯ ಹಿರಿಯ ಮಗನಾದ ಕರಣ್ ಅದಾನಿ ಅವರು ಅದಾನಿ ಪೋರ್ಟ್ಸ್ನ ಎಂಡಿಯಾಗಿದ್ದಾರೆ. ಕಿರಿಯ ಮಗ ಜೀತ್ ಅವರು ಅದಾನಿ ಏರ್ಪೋರ್ಟ್ಸ್ನ ನಿರ್ದೇಶಕರಾಗಿದ್ದಾರೆ.
ಪ್ರಣವ್ ಅದಾನಿ ಅವರು ಅದಾನಿ ಎಂಟರ್ಪ್ರೈಸಸ್ನ ಡೈರೆಕ್ಟರ್ ಆಗಿದ್ದರೆ, ಸಾಗರ್ ಅವರು ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ.
ಗೌತಮ್ ಅದಾನಿ ಫ್ಯಾಮಿಲಿ ಟ್ರೀ ನೋಡಿ….
ಶಾಂತಿಲಾಲ್ ಅದಾನಿ ಮತ್ತು ಶಾಂತಾಬೆನ್ ದಂಪತಿಗೆ ಏಳು ಜನ ಮಕ್ಕಳು. ಇವರ ಪೈಕಿ ಒಬ್ಬರು ಮಾತ್ರ ಮಗಳು. ಕೊನೆಯ ಮಗ ಗೌತಮ್ ಅದಾನಿ. ಮೊದಲನೆಯವರು ಮನಸುಖ್ ಅದಾನಿ, ಎರಡನೆಯವರು ವಿನೋದ್ ಅದಾನಿ. ಆರನೆಯವರು ರಾಜೇಶ್ ಅದಾನಿ.
ವಿನೋದ್ ಅದಾನಿಗೆ ಕೃಪಾ ಅದಾನಿ ಮತ್ತು ಪ್ರಣವ್ ಅದಾನಿ ಎಂಬಿಬ್ಬರು ಮಕ್ಕಳು. ಇವರಲ್ಲಿ ಪ್ರಣವ್ ಅವರು ಅದಾನಿ ಗ್ರೂಪ್ ವಾರಸುದಾರರ ಪೈಕಿ ಒಬ್ಬರೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಫಾಸ್ಟ್ಟ್ಯಾಗ್ ಹೊಸ ನಿಯಮ: ನೀವು ಮಾಡಬೇಕಾದ್ದೇನು, ಅಂತಿಮ ದಿನಾಂಕ ಯಾವಾಗ? ಇಲ್ಲಿದೆ ವಿವರ
ಆರನೇ ಮಗನಾದ ರಾಜೇಶ್ ಅದಾನಿಗೆ ಸಾಗರ್ ಅದಾನಿ ಮತ್ತು ಶೆಲಿನ್ ಅದಾನಿ ಎಂಬ ಮಕ್ಕಳಿದ್ದಾರೆ. ಈ ಸಾಗರ್ ಅದಾನಿ ನಾಲ್ವರು ವಾರಸುದಾರರಲ್ಲಿ ಒಬ್ಬರು.
ಇನ್ನು, ಗೌತಮ್ ಅದಾನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕರಣ್ ಮತ್ತು ಜೀತ್ ಅದಾನಿ. ಇವರಿಬ್ಬರೂ ಕೂಡ ಅದಾನಿ ಗ್ರೂಪ್ಗೆ ವಾರಸುದಾರರು.
ಗೌತಮ್ ಅದಾನಿಯ ಸೋದರಿಯ ಹೆಸರು ಇತ್ಯಾದಿ ಯಾವುದೇ ಮಾಹಿತಿ ಸಾರ್ವಜನಿಕವಾಗಿ ಲಭ್ಯ ಇಲ್ಲ ಎನ್ನುವುದು ಕುತೂಹಲ. ಹಾಗೆಯೇ, ಹಿರಿಯ ಮಗ ಮನಸುಖ್ ಅದಾನಿ ಅವರಿಗೆ ಒಬ್ಬರು ಹೆಣ್ಮಗಳಿದ್ದು, ಅವರ ವಂಶ ಹೇಗೆ ಬೆಳೆದಿದೆ ಎನ್ನುವುದು ಗೊತ್ತಿಲ್ಲ. ನಾಲ್ಕನೇ ಮಗ ವಸಂತ್ ಅದಾನಿಗೂ ಒಬ್ಬರು ಹೆಣ್ಮಗಳು. ಇಲ್ಲಿ ಅದಾನಿ ಕುಟುಂಬದ ಗಂಡು ವಾರಸುದಾರರನ್ನು ಮಾತ್ರವೇ ವಾರಸುದಾರಿಕೆಗೆ ಪರಿಗಣಿಸಲಾಗಿರುವುದು ಸ್ಪಷ್ಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ