Adani Project: ವಿಶ್ವದ ಅತಿದೊಡ್ಡ ತಾಮ್ರ ಘಟಕ ಸ್ಥಾಪನೆಗೆ ಮುಂದಾದ ಗೌತಮ್ ಅದಾನಿ; ಭಾರತಕ್ಕೆ ಪೆಟ್ರೋಲ್ ಅವಲಂಬನೆ ತಪ್ಪಲು ಪ್ರಮುಖ ಹೆಜ್ಜೆ
World's Largest Copper Manufacturing Unit: ಅದಾನಿ ಗ್ರೂಪ್ ಗುಜರಾತ್ನ ಕಚ್ಛ್ ಜಿಲ್ಲೆಯಲ್ಲಿ ವಿಶ್ವದ ಅತಿದೊಡ್ಡ ಕಾಪರ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. ಗ್ರೀನ್ಫೀಲ್ಡ್ ಕಾಪರ್ ರಿಫೈನರಿ ಪ್ರಾಜೆಕ್ಟ್ಗೆ ಅದಾನಿ ಸಂಸ್ಥೆ 1.2 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಕಳೆದ ವರ್ಷ ನಡೆದ ವೈಬ್ರೆಂಟ್ ಗುಜರಾತ್ ಬಿಸಿನೆಸ್ ಸಮಿಟ್ನಲ್ಲಿ ಗೌತಮ್ ಅದಾನಿ ತಮ್ಮ ಕ್ಲೀನ್ ಎನರ್ಜಿ ಪ್ರಾಜೆಕ್ಟ್ ದೂರದ ಗಗನದಿಂದಲೂ ಕಾಣುವಷ್ಟು ವಿಶಾಲವಾಗಿರುತ್ತದೆ ಎಂದಿದ್ದರು.
ನವದೆಹಲಿ, ಫೆಬ್ರುವರಿ 5: ಕಳೆದ ವರ್ಷ ಗುಜರಾತ್ನಲ್ಲಿ ನಡೆದಿದ್ದ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ (Gautam Adani) ತಾನು ಗಗನದಿಂದಲೂ ಕಾಣಬಲ್ಲಂತಹ ವಿಶ್ವದ ಅತಿದೊಡ್ಡ ಕ್ಲೀನ್ ಎನರ್ಜಿ ಪ್ರಾಜೆಕ್ಟ್ (Clean energy project) ಸ್ಥಾಪಿಸುವುದಾಗಿ ಘೋಷಿಸಿದ್ದರು. ಗುಜರಾತ್ನಲ್ಲಿ ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ ಮಾಡುವುದಾಗಿಯೂ ಹೇಳಿದ್ದರು. ಇದೀಗ ಅದಾನಿ ಗ್ರೂಪ್ ಗುಜರಾತ್ನಲ್ಲಿ ಬೃಹತ್ ಕಾಪರ್ ಉತ್ಪಾದನಾ ಘಟಕ ಸ್ಥಾಪಿಸುತ್ತಿದೆ. ಒಂದೇ ಸ್ಥಳದಲ್ಲಿ ನಿರ್ಮಿಸಲಾಗುವ ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದನಾ ಘಟಕ (World’s largest single location copper manufacturing plant) ಇದಾಗಿರಲಿದೆ ಎಂದು ವರದಿಗಳು ಹೇಳುತ್ತಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ಗುಜರಾತ್ನ ಕಚ್ಛ್ ಜಿಲ್ಲೆಯ ಮುಂದ್ರಾ ಬಂದರು ನಗರಿಯಲ್ಲಿ ಸ್ಥಾಪನೆಯಾಗಲಿರುವ ಕಾಪರ್ ತಯಾರಕಾ ಘಟಕಕ್ಕೆ 1.2 ಬಿಲಿಯನ್ ಡಾಲರ್ ಹೂಡಿಕೆ ಆಗುವ ನಿರೀಕ್ಷೆ ಇದೆ.
ಗುಜರಾತ್ನ ಕಚ್ಛ್ ಮರುಭೂಮಿಯಲ್ಲಿ ಅದಾನಿ ಗ್ರೂಪ್ 725 ಚದರ ಕಿಮೀ ವಿಸ್ತೀರ್ಣ ಪ್ರದೇಶದಲ್ಲಿ ಗ್ರೀನ್ ಎನರ್ಜಿ ಪಾರ್ಕ್ ನಿರ್ಮಿಸುತ್ತಿದೆ. ಇದು ವಿಶ್ವದ ಅತಿದೊಡ್ಡ ಗ್ರೀನ್ ಎನರ್ಜಿ ಪಾರ್ಕ್ ಎನಿಸಲಿದೆ. ಇದರಲ್ಲಿ ಸೌರಶಕ್ತಿಯಿಂದ 30 ಗೀಗಾ ವ್ಯಾಟ್ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ, ಸೌರಶಕ್ತಿ ಮತ್ತು ವಾಯುಶಕ್ತಿಯಿಂದ ಸಮಗ್ರ ಮರುಬಳಕೆ ಇಂಧದ ಉತ್ಪಾದನೆಯ ವ್ಯವಸ್ಥೆಯೂ ಇದರಲ್ಲಿ ಇರಲಿದೆ. ಸೋಲಾರ್ ಮಾಡ್ಯೂಲ್, ವಿಂಡ್ ಟರ್ಬೈನ್ ಮತ್ತು ಹೈಡ್ರೋಜನ್ ಎಲೆಕ್ಟ್ರೋಲೈಜರ್ಗಳ ತಯಾರಿಕೆಗೆ ಮೂರು ಗೀಗಾ ಫ್ಯಾಕ್ಟರಿಗಳನ್ನು ಗೌತಮ್ ಅದಾನಿಯವರ ಸಂಸ್ಥೆಗಳು ನಿರ್ಮಿಸಲಿವೆ.
ಇದನ್ನೂ ಓದಿ: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಜೇಯ್ ಲೀ ಆರೋಪಮುಕ್ತ; ಮತ್ತೆ ಜೈಲು ಸೇರುವ ಅಪಾಯದಿಂದ ಪಾರು
ಇವುಗಳ ಭಾಗವಾಗಿ ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದನಾ ಘಟಕವೂ ತಲೆ ಎತ್ತಲಿದೆ. ಎಲೆಕ್ಟ್ರಿಕ್ ವಾಹನಗಳು, ಎಲೆಕ್ಟ್ರಿಕ್ ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್, ಪಿವಿ ಸೆಲ್ಗಳು, ಬ್ಯಾಟರಿ ಇತ್ಯಾದಿ ಎಲ್ಲಕ್ಕೂ ತಾಮ್ರ ಅಥವಾ ಕಾಪರ್ ಅವಶ್ಯಕವಾಗಿದೆ. ಇದೇ ಕಾರಣಕ್ಕೆ ಚೀನಾ ಮೊದಲಾದ ಕೆಲ ದೇಶಗಳು ತಾಮ್ರದ ಉತ್ಪಾದನೆಗೆ ಗಮನ ಕೊಡುತ್ತಿವೆ.
ಅದಾನಿ ಗ್ರೂಪ್ಗೆ ಸೇರಿದ ಕಚ್ಛ್ ಕಾಪರ್ ಲಿ ಸಂಸ್ಥೆ ಮುಂದ್ರಾದಲ್ಲಿ ಸ್ಥಾಪಿಸಲಿರುವ ಗ್ರೀನ್ಫೀಲ್ಡ್ ಕಾಪರ್ ರಿಫೈನರಿ ಪ್ರಾಜೆಕ್ಟ್ನಲ್ಲಿ ವರ್ಷಕ್ಕೆ 10 ಲಕ್ಷ ಟನ್ ಕಾಪರ್ ಉತ್ಪಾದಿಸುವ ಸಾಮರ್ಥ್ಯದ ಗುರಿ ಇಡಲಾಗಿದೆ.
ಇದನ್ನೂ ಓದಿ: ಭಾರತದ ಷೇರುಮಾರುಕಟ್ಟೆಗೆ ಬರಲು ಹ್ಯೂಂಡಾಯ್ ಕಾರ್ ಕಂಪನಿ ಆಲೋಚನೆ; ಬಂದರೆ ಎಲ್ಲಾ ದಾಖಲೆ ಧೂಳೀಪಟವಾಗುವ ಸಾಧ್ಯತೆ
2030ರಷ್ಟರಲ್ಲಿ ಇದು ವಿಶ್ವದ ಅತಿದೊಡ್ಡ ಕಾಪರ್ ಸ್ಮೆಲ್ಟಿಂಗ್ ಕಾಂಪ್ಲೆಕ್ಸ್ ಆಗಬೇಕೆನ್ನುವುದು ಅದಾನಿ ಗ್ರೂಪ್ನ ಗುರಿ. ಇದೇನಾದರೂ ಸಾಧ್ಯವಾದರೆ ಭಾರತಕ್ಕೆ ಸಾಕಷ್ಟು ಕಾಪರ್ ಆಮದು ತಪ್ಪುತ್ತದೆ. ಇದರಿಂದ ಕಾಪರ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಚೀನಾ ಜೊತೆ ಭಾರತವೂ ನಾಗಾಲೋಟ ನಡೆಸಲು ಸಾಧ್ಯವಾಗುತ್ತದೆ. ಸ್ವಚ್ಛ ಶಕ್ತಿ ಉತ್ಪಾದನೆಯ ಕಾರ್ಯ ಭಾರತಕ್ಕೆ ಸುಗಮವಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ