ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ನ ಅಂಗ ಸಂಸ್ಥೆಯಾದ ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಲಿಸ್ಟಿಂಗ್ ಶುಕ್ರವಾರ ಆಗಿದೆ. ಆದರೆ ಅಷ್ಟೇನೂ ಉತ್ತಮವಾಗಿಲ್ಲ. ಬಿಎಸ್ಇಯಲ್ಲಿ ಶೇ 4ರ ಪ್ರೀಮಿಯಂನಲ್ಲಿ 751 ರೂಪಾಯಿಗೆ ಲಿಸ್ಟಿಂಗ್ ಆಗಿದೆ. ಈ ಷೇರನ್ನು 720 ರೂಪಾಯಿಗೆ ವಿತರಿಸಲಾಗಿತ್ತು. ಎನ್ಎಸ್ಇಯಲ್ಲಿ 750 ರೂಪಾಯಿಗೆ ಲಿಸ್ಟಿಂಗ್ ಆಯಿತು. ದಿನದ ಗರಿಷ್ಠ ಮಟ್ಟವಾಗಿ ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಬಿಎಸ್ಇಯಲ್ಲಿ 766.30 ರೂಪಾಯಿ ಮತ್ತು ಎನ್ಎಸ್ಇಯಲ್ಲಿ 766 ರೂಪಾಯಿ ತಲುಪಿತು. 1513 ಕೋಟಿ ರೂಪಾಯಿಯ ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಜುಲೈ 27ರಿಂದ 29ರ ತನಕ ಸಬ್ಸ್ಕ್ರಿಪ್ಷನ್ಗೆ ಲಭ್ಯವಿತ್ತು. ಈ ಪೈಕಿ 1060 ಕೋಟಿ ರೂಪಾಯಿ ಹೊಸದಾಗಿ ಹಾಗೂ 453.60 ಕೋಟಿ ರೂಪಾಯಿ ಆಫರ್ ಫಾರ್ ಸೇಲ್ ಮೂಲಕ ಷೇರು ವಿತರಣೆ ಮಾಡಲಾಯಿತು. ಆಫರ್ ಮಾಡಿದ್ದಕ್ಕಿಂತ 44.17 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು.
ಹೊಸದಾಗಿ ಷೇರು ವಿತರಣೆ ಮೂಲಕ ಸಂಗ್ರಹ ಆಗುವ ಮೊತ್ತವನ್ನು ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ನಿಂದ ಪ್ರವರ್ತಕರ ಎಪಿಐ ಬಿಜಿನೆಸ್ಗೆ ಮತ್ತು ಕ್ಯಾಪಿಟಲ್ ಎಕ್ಸ್ಪೆಂಡಿಚರ್ (ಬಂಡವಾಳ ವೆಚ್ಚ) ಅಗತ್ಯಕ್ಕೆ ಬಳಸಲಾಗುತ್ತದೆ. ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಕಂಪೆನಿ 2011ರಲ್ಲಿ ಇನ್ಕಾರ್ಪೊರೇಟ್ ಆಗಿದೆ. ಇದು ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯ ಎಪಿಐ (ಆ್ಯಕ್ಟಿವ್ ಫಾರ್ಮಸ್ಯುಟಿಕಲ್ ಇಂಗ್ರೆಡಿಯೆಂಟ್ಸ್) ಅಂಗಸಂಸ್ಥೆ. ಇದರ 120ಕ್ಕೂ ಹೆಚ್ಚು ಉತ್ಪನ್ನಗಳು ಪೋರ್ಟ್ಫೋಲಿಯೋಗಳಿವೆ ಮತ್ತು ಯುರೋಪ್, ಉತ್ತರ ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕಾ ಹಲವು ದೇಶಗಳಿಗೆ ಎಪಿಐಗಳ ರಫ್ತು ಮಾಡುತ್ತದೆ.
ಅಂದ ಹಾಗೆ ಈ ಕಂಪೆನಿಯ ಐಪಿಒಗೆ ಕೊಟಕ್ ಮಹೀಂದ್ರಾ ಕ್ಯಾಪಿಟಲ್, BofA ಸೆಕ್ಯೂರಿಟೀಸ್, ಗೋಲ್ಡ್ಮ್ಯಾನ್ ಸ್ಯಾಚ್ಸ್, ಡಿಎಎಂ ಕ್ಯಾಪಿಟಲ್, ಎಸ್ಬಿಐ ಕ್ಯಾಪಿಟಲ್ ಮತ್ತು BoB ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಬ್ಯಾಂಕರ್ಸ್ ಆಗಿದ್ದವು. KFintech ಈ ಇಶ್ಯೂವಿನ ರಿಜಿಸ್ಟ್ರಾರ್ ಆಗಿತ್ತು. ಶುಕ್ರವಾರ ದಿನದ ಕೊನೆಗೆ ಸೆನ್ಸೆಕ್ಸ್ 215.12 ಪಾಯಿಂಟ್ಸ್ ಇಳಿದು, 54,277.72 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 56.40 ಪಾಯಿಂಟ್ಸ್ ಕುಸಿದು, 16,238.20 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಗಿಸಿದೆ.
ಇದನ್ನೂ ಓದಿ: Investments In IPO: ಬ್ಯಾಂಕ್ಗಳಿಂದ ಐಪಿಒಗಳ ಮೇಲಿನ ಹೂಡಿಕೆ 4 ವರ್ಷಗಳ ಗರಿಷ್ಠ ಮಟ್ಟಕ್ಕೆ
(Glenmark Life Sciences Listing With 4 Percent Premium On August 6th 2021)